More

    ನೈಟ್ ಕರ್ಫ್ಯೂ ಜಾರಿಗೆ ಕ್ರಮವಹಿಸಿ

    ಬಾಗಲಕೋಟೆ: ಕೋವಿಡ್-19 ಮೂರನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ಸೇರಿ ಸರ್ಕಾರದ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲನೆಗೆ ಕ್ರಮವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ನೈಟ್ ಕರ್ಫ್ಯೂ ಸರಿಯಾಗಿ ಪಾಲನೆಯಾಗುತ್ತಿರುವ ಬಗ್ಗೆ ಆಯಾ ತಹಸೀಲ್ದಾರರು ಪರಿಶೀಲಿಸುವ ಕಾರ್ಯವಾಗಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

    ಜ.3 ರಿಂದ 15-18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿರುವ 15 ರಿಂದ 18 ವರ್ಷದ ಮಕ್ಕಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಸೇರಿ ತಯಾರಿಸಬೇಕು. ಲಸಿಕೆಯಿಂದ ಯಾರೂ ಬಿಟ್ಟುಹೋಗದಂತೆ ಕ್ರಮವಹಿಸಬೇಕು. ಆಯಾ ಶಾಲಾ ಹಂತದಲ್ಲಿನ ಮಕ್ಕಳಿಗೆ ಲಸಿಕೆ ಹಾಕಿದ ನಂತರ ಆನ್‌ಲೈನ್ ಕ್ಲಾಸ್ ಪಡೆಯುವವರಿಗೂ ಸಹ ಲಸಿಕೆ ಹಾಕಲು ಕ್ರಮವಹಿಸಲು ಸೂಚನೆ ನೀಡಿದರು.

    ಮಕ್ಕಳ ಲಸಿಕಾ ಅಭಿಯಾನದ ಬಗ್ಗೆ ಆಯಾ ತಹಸೀಲ್ದಾರರು ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಗ್ಗೆ ಚರ್ಚಿಸಿದರು. ಗ್ರಾಮ ಮಟ್ಟದಲ್ಲಿ ಪಂಚಾಯಿತಿ ಅಧ್ಯಕ್ಷರ ಸಹಕಾರ ಪಡೆದು ಗ್ರಾಪಂ ವ್ಯಾಪ್ತಿಯಲ್ಲಿನ ಎಲ್ಲ ಮಕ್ಕಳಿಗೂ ಲಸಿಕೆ ನೀಡಬೇಕು. ಕೋವಿಡ್ ಮೂರನೇ ಅಲೆ ತಡೆಗೆ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲು ಕ್ರಮವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಅವರಿಗೆ ನಿರ್ದೇಶನ ನೀಡಿದರು.

    ಜಿಪಂ ಸಿಇಒ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ, 50 ಹಾಸಿಗೆಗಳ ಹಿರಿಯ ವೈದ್ಯಾಧಿಕಾರಿ ಹಾಗೂ ಜಿಲ್ಲಾ ಲಸಿಕಾ ನೋಡಲ್ ಅಧಿಕಾರಿ ಜಯಶ್ರೀ ಎಮ್ಮಿ, ಕುಟುಂಬ ಕಲ್ಯಾಣಾಧಿಕಾರಿ ಅರವಿಂದ ಪಟ್ಟಣಶೆಟ್ಟಿ ಇತರರಿದ್ದರು.

    ಲಸಿಕೆಗೆ ಮೂರು ದಿನಗಳವರೆಗೆ ಸಮಸ್ಯೆ ಇರುವುದಿಲ್ಲ. 70 ಸಾವಿರ ಡೋಸ್ ಲಸಿಕೆಗೆ ಬೇಡಿಕೆ ಇಡಲಾಗಿದೆ. ಎಲ್ಲ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ಮಕ್ಕಳಿಗೆ ಲಸಿಕೆ ನೀಡಲು 250 ತಂಡಗಳನ್ನು ರಚಿಸಲಾಗಿದೆ. ಮೊದಲ ದಿನ 23 ಸಾವಿರ ಮಕ್ಕಳಿಗೆ ನೀಡಲಾಗಿದೆ.
    ಕೆ.ರಾಜೇಂದ್ರ ಜಿಲ್ಲಾಧಿಕಾರಿ

    
    
    ನೈಟ್ ಕರ್ಫ್ಯೂ ಜಾರಿಗೆ ಕ್ರಮವಹಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts