More

    ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ

    ಬಾಗಲಕೋಟೆ: ಕರೊನಾ ಎರಡನೇ ಅಲೆ ಹಳ್ಳಿಗಳಿಗೂ ಹರಡುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ತಾಲೂಕಿನ ಶಿರೂರ ಮತ್ತು ಮನ್ನಿಕಟ್ಟಿ ಗ್ರಾಮಗಳಿಗೆ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿಪಂ ಸಿಇಒ ಟಿ.ಭೂಬಾಲನ್ ಮಂಗಳವಾರ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ವಿಚಾರಿಸಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಿದರು.

    ಗ್ರಾಮಗಳಲ್ಲಿ ಸಂಚರಿಸಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. ಕೋವಿಡ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಕೋವಿಡ್ ಲಕ್ಷಣ ಹೊಂದಿದವರಿಗೆ ಔಷಧ ಕಿಟ್ ವಿತರಿಸಿದರು.

    ಶಾಸಕ ಚರಂತಿಮಠ ಮಾತನಾಡಿ, ಕೋವಿಡ್ ಹಳ್ಳಿಯ ಕಡೆಗೂ ಪಸರಿಸುತ್ತಿದ್ದು, ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಅನವಶ್ಯಕವಾಗಿ ಮನೆಯಿಂದ ಹೊರಗಡೆ ಬರಬೇಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

    ಪಾಸಿಟಿವ್ ಕೇಸ್‌ಗಳು ದೃಢಪಟ್ಟವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಸ್ಯಾಂಪಲ್ ತೆಗೆದುಕೊಂಡು ಪರೀಕ್ಷೆಗೆ ಕಳುಹಿಸುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಸೂಚಿಸಿದರು. ಕೆಮ್ಮು, ನೆಗಡಿ, ಜ್ವರ ಇದ್ದವರು ತಕ್ಷಣ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಗ್ರಾಮದ ಆರೋಗ್ಯದ ದೃಷ್ಟಿಯಿಂದ ಬಿವಿವಿ ಸಂಘದ ವೈದ್ಯಕೀಯ ಮಹಾವಿದ್ಯಾಲಯದಿಂದ 9 ಜನ ಎಂ.ಬಿ.ಬಿ.ಎಸ್. ವೈದ್ಯರನ್ನು ಶಿರೂರ ಮತ್ತು ಮನ್ನಿಕೇರಿ ಗ್ರಾಮಗಳಿಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

    ಎರಡು ಗ್ರಾಮಗಳಲ್ಲಿ ವೈದ್ಯರ ಜತೆ ಸ್ಥಳೀಯ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರನ್ನು ನೀಡಿ ತಂಡಗಳನ್ನು ರಚಿಸಿ ಆರೋಗ್ಯ ತಪಾಸಣೆ ಕೈಗೊಳ್ಳಲು ಕ್ರಮವಹಿಸುವಂತೆ ತಾಲೂಕು ವೈದ್ಯಾಧಿಕಾರಿ ಡಾ.ಅರವಿಂದ ಪಟ್ಟಣಶೆಟ್ಟಿ ಅವರಿಗೆ ಸೂಚಿಸಿದರು.

    ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ಕೋವಿಡ್ ನೋಡಲ್ ಅಧಿಕಾರಿ ಮಂಜುನಾಥ ಡೋಂಬರ, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ವಿನೋದ ಹಾದಿಮನಿ, ಗ್ರಾಮ ಲೆಕ್ಕಾಧಿಕಾರಿ ಆನಂದ ಅಳ್ಳಿಗಿಡದ, ಪಪಂ ಮುಖ್ಯಾಧಿಕಾರಿ ಐ.ಜಿ.ಕೊಣ್ಣೂರ ಇತರರು ಇದ್ದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts