More

    ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ

    ಬಾಗಲಕೋಟೆ: ಗ್ರಾಮದಲ್ಲಿ ಕೆಲವರ ವೈಯಕ್ತಿಕ ದ್ವೇಷದಿಂದ ಮೇಲಿಂದ ಮೇಲೆ ಮಾಡುತ್ತಿದ್ದ ಭ್ರಷ್ಟಾಚಾರದ ಆರೋಪದಿಂದ ಬೇಸತ್ತಿದ್ದ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಅಂಗವಿಕಲ ಯುವತಿಯೊಬ್ಬಳು ಪಂಚಾಯಿತಿಯಲ್ಲೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಳೇದಗುಡ್ಡ ತಾಲೂಕಿನ ಹಳದೂರ ಪಂಚಾಯಿತಿಯಲ್ಲಿ ಸೋಮವಾರ ನಡೆದಿದೆ.

    ಅನ್ನಪೂರ್ಣ ಪಾದಗಟ್ಟಿ (30) ಗ್ರಾಮ ಪಂಚಾಯಿತಿ ಕಚೇರಿಯಲ್ಲೆ ವಿಷ ಸೇವಿಸಿ ತೀವ್ರ ಅಸ್ತವ್ಯಸ್ತಗೊಂಡಿದ್ದರು. ಜಿಲ್ಲಾ ಆಸ್ಪತ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

    ಅನ್ನಪೂರ್ಣ ಅವರ ಆತ್ಮಹತ್ಯೆಗೆ ಗ್ರಾಮ ಪಂಚಾಯಿತಿ ಸದಸ್ಯ ಒಬ್ಬ ಹಾಗೂ ಗ್ರಾಮದ ಮೂರ್ನಾಲ್ಕು ಯುವಕರ ಕಿರುಕುಳ ಕಾರಣ ಎನ್ನುವುದು ಇದೀಗ ಯುವತಿ ಕುಟುಂಬ ಹಾಗೂ ಪಂಚಾಯಿತಿ ಸಿಬ್ಬಂದಿ ಆರೋಪಿಸಿದ್ದಾರೆ.

    ಹಳದೂರ ಪಂಚಾಯಿತಿ ವ್ಯಾಪ್ತಿಯ ಅಲ್ಲೂರ ಎಸ್ಪಿ ಗ್ರಾಮದಲ್ಲಿ ನರೇಗಾದಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ತನಿಖೆಗೆ ನಡೆಸಬೇಕು ಎಂದು ಆ ಯುವಕರು ದೂರು ನೀಡಿದ್ದರು. ತನಿಖೆಗೆ ಒತ್ತಾಯಿಸಿ, ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದರಂತೆ.

    ಸೋಮವಾರ ಅನ್ನಪೂರ್ಣ ಅವರ ಮೇಲಿನ ಆರೋಪದ ಬಗ್ಗೆ ತನಿಖೆ ನಡೆಸಲು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಹಾಗೂ ಇತರರು ತನಿಖೆಗೆ ಪಂಚಾಯಿತಿಗೆ ಆಗಮಿಸಿದ್ದರು. ಇದರಿಂದ ಹೆದರಿದ ಅನ್ನಪೂರ್ಣ ತನ್ನ ಕೊಠಡಿಯಲ್ಲಿ ವಿಷ ಸೇವಿಸಿದ್ದಾರೆ. ತಕ್ಷಣವೇ ಅಲ್ಲಿನ ಸಿಬ್ಬಂದಿ ಅವರನ್ನು ಗುಳೇದಗುಡ್ಡ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

    ಯುವಕರ ಬಂಧನಕ್ಕೆ ಆಗ್ರಹ
    ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಕಿರುಕುಳಕ್ಕೆ ಬೇಸತ್ತು ಸಾವನ್ನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆಯ ವಿವಿಧ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಸಂಜೆ ಹೊತ್ತಿಗೆ ಜಿಲ್ಲಾ ಆಸ್ಪತ್ರೆ ಬಳಿ ಜಮಾಯಿಸಿದ್ದರು. ಕಿರುಕುಳ ನೀಡಿದ್ದಾರೆ ಎನ್ನಲಾದ ಯುವಕರನ್ನು ತಕ್ಷಣವೇ ಬಂಧಿಸಬೇಕು. ಇಲ್ಲವಾದಲ್ಲಿ ಶವವನ್ನು ಜಿಲ್ಲಾ ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಲ್ಲ ಎಂದು ಆಸ್ಪತ್ರೆ ಆವರಣದಲ್ಲಿ ರಾತ್ರಿ ಬೀಡು ಬಿಟ್ಟಿದ್ದಾರೆ. ಬೆಳಗ್ಗೆ ಒಳಗಾಗಿ ಯಾವ ತೀರ್ಮಾನಕ್ಕೆ ಬರುತ್ತಾರೆ ನೋಡಬೇಕಿದೆ.

    ಮುಖ್ಯವಾಗಿ ಗ್ರಾಮದಲ್ಲಿ ಕೆಲವರು ಅನಗತ್ಯ ಆಡಳಿತದಲ್ಲಿ ಒತ್ತಡ ಹಾಕುತ್ತಾರೆ. ಅದಕ್ಕೆ ಮಣಿಯದಿದ್ದರೆ ಬೇಕಾಬಿಟ್ಟಿ ಆರೋಪಗಳನ್ನು ಮಾಡುತ್ತ ಸಿಬ್ಬಂದಿಗೆ ಮಾನಸಿಕ ಹಿಂಸೆ ಕೊಡುತ್ತಾರೆ. ಇದು ನಿಲ್ಲಬೇಕು. ಪಂಚಾಯಿತಿ ಸಿಬ್ಬಂದಿಗೆ ಭದ್ರತೆ ಬೇಕು ಎನ್ನುವುದು ಪಂಚಾಯಿತಿ ಸಿಬ್ಬಂದಿ ಆಗ್ರಹವಾಗಿದೆ. ಗುಳೇದಗುಡ್ಡ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲಿಸುತ್ತಿದ್ದಾರೆ. ತಡರಾತ್ರಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.

    ಪಂಚಾಯಿತಿಯಲ್ಲಿ ನಮಗೆ ಹಿರಿಯ ಅಧಿಕಾರಿಗಳಿಂದ ಯಾವುದೇ ಕಿರುಕುಳ ಇಲ್ಲ. ಆದರೆ, ಗ್ರಾಮದಲ್ಲಿ ಕೆಲವರು ಇನ್ನಿಲ್ಲದ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ಅನ್ನಪೂರ್ಣ ವಿಚಾರದಲ್ಲೂ ಹಾಗೆಯೇ ಆಗಿದೆ. ಆಕೆಗೆ ಸಂಬಂಧ ಇಲ್ಲದ ವಿಷಯ ಇದ್ದರೂ ಸಹ ಆಕೆಯ ಮೇಲೆಯೇ ಆರೋಪ ಮಾಡುತ್ತಿದ್ದರು. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
    ಸಾವಿತ್ರಿ ಮನಶಾಳ ಪಂಚಾಯಿತಿ ಪಿಡಿಒ

    ನನ್ನ ಸಹೋದರಿ ಆತ್ಮಹತ್ಯೆಗೆ ಕೆಲವರು ನೀಡಿರುವ ಕಿರುಕುಳ ಕಾರಣವಾಗಿದೆ. ಆರೋಪಿಗಳನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ಆಗಬೇಕು. ನನ್ನ ತಂಗಿಯ ಸಾವಿಗೆ ನ್ಯಾಯ ಸಿಗಬೇಕು. ಅಲ್ಲಿವರೆಗೂ ನಾವೂ ಆಸ್ಪತ್ರೆಯಿಂದ ಶವ ತೆಗೆದುಕೊಂಡು ಹೋಗಲ್ಲ.
    ಕನಕಪ್ಪ ಪಾದಗಟ್ಟಿ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ ಸಹೋದರ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts