More

    ಕಾಂಗ್ರೆಸ್‌ನಿಂದ ಬೂಟಾಟಿಕೆ ಹೋರಾಟ

    ಬಾಗಲಕೋಟೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿತ ಮೂರು ಮಸೂದೆ ಹಾಗೂ ರಾಜ್ಯ ಸರ್ಕಾರದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಬಗ್ಗೆ ಕಾಂಗ್ರೆಸ್ ಪಕ್ಷ ಮುಗ್ಧ ರೈತರನ್ನು ದಿಕ್ಕು ತಪ್ಪಿಸುತ್ತಿದೆ. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬೂಟಾಟಿಕೆ ಹೋರಾಟ ನಡೆಸುತ್ತಿದೆ ಎಂದು ರೈತ ಮೋರ್ಚಾ ರಾಜ್ಯಾಧ್ಯಕ್ಷ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಕಾಯ್ದೆಗಳ ಬಗ್ಗೆ ಲೋಕಸಭೆ, ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕರು ಚರ್ಚೆ ನಡೆಸುತ್ತಿಲ್ಲ. ಬದಲಾಗಿ ಕಾಯ್ದೆಗಳ ಬಗ್ಗೆ ರೈತರಲ್ಲಿ ತಪ್ಪು ತಿಳಿವಳಿಕೆ ಮೂಡಿಸುತ್ತಿದ್ದಾರೆ. ಯಾವುದು ಸತ್ಯ, ಯಾವುದು ಮಿಥ್ಯ ಎನ್ನುವುದನ್ನು ಬಿಜೆಪಿ ಬಹಿರಂಗಗೊಳಿಸಲಿದೆ. ಗ್ರಾಮಮಟ್ಟದಲ್ಲಿ ಸಭೆ ನಡೆಸಿ ಕಾಯ್ದೆಯಿಂದ ರೈತರಿಗೆ ಆಗುವ ಉಪಯೋಗಗಳ ಬಗ್ಗೆ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕೇಂದ್ರ ಸರ್ಕಾರ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ), ರೈತರ (ಕಲ್ಯಾಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆ, ಅಗತ್ಯ ಸರಕುಗಳ ಮಸೂದೆಗಳಿಗೆ ತಿದ್ದುಪಡಿ ಮಾಡಿದೆ. ಈ ಮೂರು ಮಸೂದೆಗಳು ರೈತರಿಗೆ ಅನುಕೂಲವಾಗಲಿದೆ. ನೂತನ ಕೃಷಿ ಕಾಯ್ದೆಯಿಂದ ಎಪಿಎಂಸಿಗಳಿಗೆ ನಿಷೇಧವಿಲ್ಲ. ರೈತರು ತಮ್ಮ ಉತ್ಪನ್ನಗಳನ್ನು ಮುಕ್ತವಾಗಿ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು, ರಫ್ತಿಗೆ ಉತ್ತಮ ಅವಕಾಶವಿದೆ ಎಂದರು.

    ರೈತರ ಬೆಳೆಗಳಿಗೆ ಸ್ಪರ್ಧಾತ್ಮಕ ದರ ಸಿಗಬೇಕು ಎನ್ನುವುದು ಸರ್ಕಾರದ ಆಶಯ. ಮಸೂದೆಗಳು ಜಾರಿಯಾದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ 22 ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಹೀಗಾಗಿ ಬೆಂಬಲ ಬೆಲೆ ನಿಂತು ಹೋಗಲಿದೆ ಎನ್ನುವುದು ಶುದ್ಧ ಸುಳ್ಳು. ಕಾಂಗ್ರೆಸ್ ಅಪಪ್ರಚಾರ ಮಾಡುವುದು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

    ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದರು.
    ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಮಾಜಿ ಶಾಸಕ ಪಿ.ಎಚ್. ಪೂಜಾರ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ವಿ.ಪ. ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಸುದ್ದಿಗೋಷ್ಠಿಯಲ್ಲಿ ಇದ್ದರು.

    ನಾವೆಲ್ಲ ರೈಲ್ವೆ ಸಚಿವ ಸುರೇಶ ಅಂಗಡಿಯವರನ್ನು ಕಳೆದುಕೊಂಡ ಶೋಕದಲ್ಲಿ ಇದ್ದೇವೆ. ಇಂತಹ ಸಂದರ್ಭದಲ್ಲಿ ಬೆಳಗಾವಿ ಲೋಕಸಭೆ ಟಿಕೆಟ್ ಯಾರಿಗೆ ನೀಡಬೇಕು ಎನ್ನುವುದು ಮಾತನಾಡುವುದು ಸೂಕ್ತವಲ್ಲ. ಚುನಾವಣೆ ದಿನಾಂಕ ನಿಗದಿಯಾದ ಬಳಿಕ ಚರ್ಚೆ ನಡೆಸೋಣ.
    ಈರಣ್ಣ ಕಡಾಡಿ ,ರಾಜ್ಯಸಭೆ ಸದಸ್ಯ

    ಸಿಬಿಐ ಏಕಾಏಕಿ ದಾಳಿ ನಡೆಸಲ್ಲ
    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲಿನ ಸಿಬಿಐ ದಾಳಿಗೆ ಪ್ರತಿಕ್ರಿಯೆ ನೀಡಿದ ಈರಣ್ಣ ಕಡಾಡಿ, ಚುನಾವಣೆ ಸಂದರ್ಭದಲ್ಲಿ ದಾಳಿ ಮಾಡಿಸುತ್ತಾರೆ ಎಂದು ವಿಪಕ್ಷದ ಟೀಕೆಯನ್ನು ಒಪ್ಪುವುದಿಲ್ಲ. ಸಿಬಿಐನವರು ನಾಲ್ಕೈದು ತಿಂಗಳು ಮೊದಲೇ ಎಲ್ಲ ಮಾಹಿತಿ ಕಲೆ ಹಾಕಿರುತ್ತಾರೆ. ಏಕಾಏಕಿ ದಾಳಿ ನಡೆಸುವುದೂ ಇಲ್ಲ. ಈ ಹಿಂದೆಯೂ ದಾಳಿ ನಡೆಸಲಾಗಿದೆ. ಅಕ್ರಮ ಆಸ್ತಿ ಕುರಿತು ಮಾಹಿತಿ ಇದ್ದಾಗ ಸಿಬಿಐನವರು ದಾಳಿ ಮಾಡುತ್ತಾರೆ. ಕಾಂಗ್ರೆಸ್‌ನವರು ಅನುಕಂಪ ಗಿಟ್ಟಿಸಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದು ಶುದ್ಧ ಸುಳ್ಳು. ಅಕ್ರಮ ಆಸ್ತಿ ಮುಚ್ಚಿಡುವಂತಹದಲ್ಲ. ಜನ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts