More

    ಸ್ಥಳಾಂತರಕ್ಕೆ ಶೀಘ್ರವೇ ಚಾಲನೆ

    ಬಾಗಲಕೋಟೆ: ಜಿಲ್ಲೆಯ ಬಾದಾಮಿ, ಪಟ್ಟದಕಲ್ಲ ಹಾಗೂ ಐಹೊಳೆ ಪ್ರವಾಸಿ ತಾಣಗಳ ಸ್ಮಾರಕಗಳಿಗೆ ಹತ್ತಿರವಿರುವ ಮನೆಗಳನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುತ್ತಿದ್ದು, ಅದಕ್ಕೆ ಶೀಘ್ರವೇ ಚಾಲನೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

    ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ವಿವಿಧ ಐತಿಹಾಸಿಕ ತಾಣಗಳಲ್ಲಿನ ಸ್ಮಾರಕಗಳ ಸಂರಕ್ಷಣೆ ಕುರಿತು ಪುನರ್‌ವಸತಿ ಮತ್ತು ಪುನರ್‌ನಿರ್ಮಾಣ ಯೋಜನೆಯ ಎಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾತನಾಡಿದರು.

    ಬಾದಾಮಿ ಗುಹೆಯ ಹತ್ತಿರವಿರುವ 73 ಮತ್ತು 23 ಮನೆಗಳ ಕಟ್ಟಡಗಳ ಮೌಲ್ಯಮಾಪನ ಕಾರ್ಯವನ್ನು 15 ದಿನದೊಳಗಾಗಿ ಪೂರ್ಣಗೊಳಿಸುವಂತೆ ಬಾದಾಮಿ ಪುರಸಭೆ ಮುಖ್ಯಾಧಿಕಾರಿ ಸೂಚಿಸಿದ ಅವರು, ಈಗಾಗಲೇ 40 ಮನೆಗಳ ಸ್ಥಳಾಂತರಕ್ಕೆ ಒಪ್ಪಿಗೆ ಬಂದಿದೆ ಎಂದರು.

    ಪುನರ್ ವಸತಿ ಕಲ್ಪಿಸಲು ಸಕ್ಕರೆ ಕಾರ್ಖಾನೆ ಹತ್ತಿರ ಜಮೀನು ಖರೀದಿಸಲು ನಿರ್ಧರಿಸಲಾಗಿದ್ದು, ಉಪವಿಭಾಗಾಧಿಕಾರಿಗಳು ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಬಾದಾಮಿಯಲ್ಲಿ ಪಾರ್ಕಿಂಗ್ ಪ್ಲಾಜಾ ನಿರ್ಮಾಣಕ್ಕೆ ಬಾದಾಮಿ ಎಪಿಎಂಸಿ ವ್ಯಾಪ್ತಿಯ 17 ಎಕರೆ ಜಮೀನು ಲಭ್ಯವಿದ್ದು, ಈ ಬಗ್ಗೆ ಪ್ರವಾಸೋದ್ಯಮ ಸಚಿವರಿಗೆ ತಕ್ಷಣವೇ ಪ್ರಸ್ತಾವನೆ ಸಲ್ಲಿಸಬೇಕು. ಅದಕ್ಕೆ ಬೇಕಾದ ಅಗತ್ಯ ದಾಖಲೆ ಸಿದ್ಧಪಡಿಸಬೇಕು. ಬಾದಾಮಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ 5 ಕೋಟಿ ರೂ.ಗಳ ಅನುದಾನ ನೀಡಿದ್ದು, ತಕ್ಷಣವೇ ಡಿಪಿಆರ್ ತಯಾರಿಸುವಂತೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.

    ಪಟ್ಟದಕಲ್ಲು ಗ್ರಾಮದಲ್ಲಿರುವ ಐತಿಹಾಸಿಕ ಸ್ಮಾರಕಗಳ ಸುತ್ತಮುತ್ತಲಿನ 920 ಮನೆಗಳ ಕಟ್ಟಡಗಳನ್ನು ಸ್ಥಳಾಂತರಿಸಲು ಬಾಚಿನಗುಡ್ಡದಿಂದ ಶಂಕರಲಿಂಗ ಗುಡಿಯ ಹತ್ತಿರ ಹೋಗುವ ಮಾರ್ಗದಲ್ಲಿ ಒಟ್ಟು 115 ಎಕರೆ ಜಮೀನನ್ನು ಗುರುತಿಸಲಾಗಿದ್ದು, ಸ್ಥಳಾಂತಗೊಳ್ಳುವ ಮನೆಗಳ ಮಾಲೀಕರು ಹಾಗೂ ಜಮೀನು ನೀಡುವ ಮಾಲಿಕರ ಸಮಾಲೋಚನಾ ಸಭೆಯನ್ನು ಮಾ.27 ರಂದು ನಡೆಸಲು ಹಮ್ಮಿಕೊಳ್ಳಬೇಕು. ಈಗಾಗಲೇ ಪಟ್ಟದಕಲ್ಲು ಗ್ರಾಮದಲ್ಲಿರುವ ಶಾಲೆಯನ್ನು ಪುರಾತತ್ವ ಇಲಾಖೆಯನ್ನು ಸಂಪರ್ಕಿಸಿ ಮಾದರಿ ಶಾಲಾ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪನ್ವಾರ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಮೆಹಬೂಬಿ, ಪುರಾತತ್ವ ಇಲಾಖೆಯ ಅಧೀಕ್ಷಕ.ಎಂ. ಅನಿಲಕುಮಾರ, ಬಾದಾಮಿ ತಹಸೀಲ್ದಾರ ಎಸ್.ಎಸ್.ಇಂಗಳೆ, ಹುನಗುಂದ ತಹಸೀಲ್ದಾರ ಬಸವರಾಜ ನಾಗರಾಳ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಐಹೊಳೆ ಪ್ರವಾಸಿ ತಾಣಗಳಲ್ಲಿರುವ ಮನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಲು ಐಹೊಳೆಯಿಂದ ಸೂಳೇಭಾವಿಗೆ ಕಡೆ ಹೋಗುವ ಮದ್ಯೆ 137 ಎಕರೆ ಜಮೀನನ್ನು ಗುರುತಿಸಿ ಖರೀದಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ಹಾಗೂ ಅನುದಾನ ಬಂದ ನಂತರ ಕ್ರಮಕೈಕೊಳ್ಳಲಾಗುವುದು.
    ಕೆ.ರಾಜೇಂದ್ರ ಜಿಲ್ಲಾಧಿಕಾರಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts