More

    ತುಂಬಿದ ಬಾಗಳ ಕೆರೆ, ನಮ್ಮ ಊರು-ನಮ್ಮ ಕೆರೆ ಯೋಜನೆಯಡಿ ಕಾಮಗಾರಿ

    ಕುಂದಾಪುರ: ಏನಾದರೂ ಹೊಸತು ಮಾಡುವ ಮೂಲಕ ಲಾಕ್‌ಡೌನ್ ಸಮಯ ಸಾರ್ಥಕ ಮಾಡಿಕೊಂಡವರು ಹಲವರು. ಈ ಪೈಕಿ ಭಗೀರಥ ಪ್ರಯತ್ನದ ಮೂಲಕ ಭಾಗೀರತಿಯನ್ನೇ ಒಲಿಸಿಕೊಂಡ ಕಾವ್ರಾಡಿ ಗ್ರಾಮಸ್ಥರ ಪ್ರಯತ್ನ ಎಲ್ಲರಿಗೂ ಮಾದರಿ.

    ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಪಂ ವ್ಯಾಪ್ತಿ ಜನ ಜಾಗೃತಿ ವೇದಿಕೆ ನೇತೃತ್ವದಲ್ಲಿ ಬಾಗಳ ಕೆರೆ ಹೂಳೆತ್ತುವ ಮೂಲಕ ಕೆರೆಯಲ್ಲಿ ಜೀವಜಲ ತುಂಬಿದೆ. ನಮ್ಮ ಊರು ನಮ್ಮ ಕೆರೆ ಯೋಜನೆ ಮೂಲಕ 300 ಎಕರೆ ಪ್ರದೇಶಕ್ಕೆ ನೀರು ದೊರಕಿದೆ. 60ಕ್ಕೂ ಹೆಚ್ಚು ಮನೆಗಳಿಗೆ ನೀರುಣಿಸುವ ಪ್ರಯತ್ನ ಫಲ ಕೊಟ್ಟಿದೆ.

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಮ್ಮ ಊರು-ನಮ್ಮ ಕೆರೆ ಯೋಜನೆಯ 4 ಲಕ್ಷ ರೂ. ವೆಚ್ಚದಲ್ಲಿ ಬಾಗಳ ಕೆರೆ ಅಭಿವೃದ್ಧಿ ಕಂಡಿದೆ. ಕೆರೆ 86 ಸೆಂಟ್ಸ್ ವಿಸ್ತೀರ್ಣ ಹೊಂದಿದ್ದು, ಕಾವ್ರಾಡಿಗೆ ಜೀವಜಲ ನೀಡುತ್ತಿತ್ತು. ಸಾವಿರಾರು ಎಕರೆ ಪ್ರದೇಶಕ್ಕೆ ನೀರುಣಿಸುತ್ತಿತ್ತು. 32 ವರ್ಷಗಳ ಹಿಂದೆ ಪಂಚಾಯಿತಿ ಕೆರೆ ಹೂಳೆತ್ತುವ ಕೆಲಸ ಮಾಡಲಾಗಿತ್ತು.

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಗಣೇಶ್ ಬಿ., ತಾಲೂಕು ಯೋಜನಾಧಿಕಾರಿ ಮುರಳೀಧರ ಕೆ.ಶೆಟ್ಟಿ, ತಾಲೂಕು ಕೃಷಿ ಅಧಿಕಾರಿ ಚೇತನ್, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಆರ್.ನವೀನಚಂದ್ರ ಶೆಟ್ಟಿ, ಗ್ರಾಪಂ ಅಧ್ಯಕ್ಷೆ ಗೌರಿ ಶ್ರೀಯಾನ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ ಮೊಗವೀರ, ಸಮಿತಿ ಉಪಾಧ್ಯಕ್ಷ ದಿನಕರ ಆಚಾರ್ಯ, ಕೋಶಾಧಿಕಾರಿ ಉದಯ ಶೇರಿಗಾರ್ ವಿಶೇಷ ಮುತುವರ್ಜಿಯಿಂದ ಕೆರೆ ಪುನರುತ್ಥಾನಗೊಂಡಿದೆ.

    10 ಅಡಿ ಆಳ: ಮೇ ತಿಂಗಳಲ್ಲಿ ಕೆರೆ ಕಾಯಕಲ್ಪಕ್ಕೆ ಚಾಲನೆ ನೀಡಲಾಯಿತು. ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಕಾಮಗಾರಿ ಉದ್ಘಾಟಿಸಿದರು. ವೇದಿಕೆ ಅಧ್ಯಕ್ಷ ಆರ್.ನವೀನಚಂದ್ರ ಶೆಟ್ಟಿ ಚಾಲನೆ ನೀಡಿದ್ದರು. ಸಂಪೂರ್ಣ ಹೂಳುತುಂಬಿ ಭೂಮಟ್ಟಕ್ಕೆ ಬಂದಿದ್ದ ಕೆರೆ ಈಗ 86 ಸೆಂಟ್ಸ್ ವಿಸ್ತೀರ್ಣಕ್ಕೆ 10 ಅಡಿ ಆಳ ಮಾಡಲಾಗಿದೆ. ಕೆರೆಯನ್ನು ಸಂಪೂರ್ಣ ಹೂಳೆತ್ತಿ, ಆಳಗೊಳಿಸಲಾಗಿದ್ದು, ಶೀಘ್ರವೇ ಸ್ಥಳೀಯ ಗ್ರಾಪಂಗೆ ಹಸ್ತಾಂತರಿಸಲಾಗುತ್ತದೆ.

    ಸರ್ಕಾರ ಮಾಡುವಂತಹ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಆಗುತ್ತಿದೆ. ಪ್ರಾಚೀನ ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿ ಪಡಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಕೃಷಿ ಭೂಮಿಗೂ ಅನುಕೂಲ. ಮಣ್ಣಿನ ಸವಕಳಿ ಉಳಿಯುತ್ತದೆ. ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರು ಸಿಗುತ್ತದೆ.
    ಆರ್.ನವೀನಚಂದ್ರ ಶೆಟ್ಟಿ, ಅಧ್ಯಕ್ಷ, ಜನಜಾಗೃತಿ ವೇದಿಕೆ

    ಲಾಕ್‌ಡೌನ್ ಅವಧಿಯಲ್ಲಿ ಬಾಗಳ ಕೆರೆ ಅಭಿವೃದ್ಧಿ ಆಗಿದೆ. ಅಗಾಧ ಪ್ರಮಾಣದ ಹೂಳನ್ನು ಎತ್ತಲಾಗಿದೆ. ಕಾಮಗಾರಿ ಸಂದರ್ಭ ಸಾವಿರದಷ್ಟು ಲೋಡು ಮಣ್ಣಿನ ವಿಲೇವಾರಿ ಸವಾಲಾಗಿತ್ತು. ಸಮಿತಿಯವರ ಸೂಕ್ತ ಚಿಂತನೆಗಳು, ಯೋಜನೆ ಮಾರ್ಗದರ್ಶನದಿಂದ ಕಾಮಗಾರಿ ಪೂರ್ಣವಾಗುತ್ತಿದೆ.
    ಚೇತನ್ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts