More

    ಬೆಳ್ಳಿ ಪಲ್ಲಕ್ಕಿ, ಸುತ್ತುಪೌಳಿಗೆ ತಾಮ್ರದ ಹೊದಿಕೆ, ಪುಷ್ಕರಣಿ ನವೀಕರಣ ಅಗಲ್ಪಾಡಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

    ಮಂಗಳೂರು: ಬದಿಯಡ್ಕ ಉಬ್ರಂಗಳ ಗ್ರಾಮದ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಇತ್ತೀಚೆಗೆ ಋಕ್ ಸಂಹಿತಾ ಯಾಗ, ಸಹಸ್ರ ಚಂಡಿಕಾಯಾಗ ಸಹಿತ ವಿವಿಧ ಧಾರ್ಮಿಕ ಕಾರ್ಯಗಳು ವಿಜೃಂಭಣೆಯಿಂದ ನಡೆದಿದ್ದು, ಮುಂದಿನ ಹಂತವಾಗಿ ದೇವಸ್ಥಾನದಲ್ಲಿ ಬೆಳ್ಳಿಯ ಪಲ್ಲಕ್ಕಿ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಆಡಳಿತ ಮಂಡಳಿ ನಿರ್ಧರಿಸಿದೆ.


    ಸುಮಾರು 30 ಲಕ್ಷ ರೂ. ಅಂದಾಜು ಮೊತ್ತದ ಬೆಳ್ಳಿಯ ಪಲ್ಲಕ್ಕಿ ನಿರ್ಮಾಣವಾಗಲಿದೆ. ಶ್ರೀ ಕ್ಷೇತ್ರದ ವತಿಯಿಂದ ಶಿಲ್ಪಿ ಪಾಜನಡ್ಕ ಸುದರ್ಶನ್ ಚಿಪ್ಲುಣ್‌ಕರ್ ಅವರು ಬೆಳ್ಳಿಯ ಪಲ್ಲಕ್ಕಿ ನಿರ್ಮಾಣದ ಕೆಲಸ ನಿರ್ವಹಿಸಲಿದ್ದು, ಅವರಿಗೆ ಬೆಳ್ಳಿಯ ಬಿಲ್ಲೆ ನೀಡುವ ಮೂಲಕ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ಈ ಶುಭ ಕಾರ್ಯಕ್ಕೆ ಬೆಳ್ಳಿ ನಾಣ್ಯವನ್ನು ನೀಡುವ ಮೂಲಕ ಬೆಳ್ಳಿಯ ಸಂಗ್ರಹಕ್ಕೆ ಚಾಲನೆ ನೀಡಿದರು. ಭಕ್ತಾಧಿಗಳು ಹಳೇ ಅಥವಾ ಹೊಸ ಬೆಳ್ಳಿಯ ವಸ್ತುಗಳನ್ನು ಶ್ರೀಕ್ಷೇತ್ರಕ್ಕೆ ನೀಡಿ ಬೆಳ್ಳಿ ಪಲ್ಲಕ್ಕಿ ನಿರ್ಮಾಣದಲ್ಲಿ ಕೈಜೋಡಿಸಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.


    ಇದೇ ವೇಳೆ ಸುಮಾರು 1.25 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ಸುತ್ತುಪೌಳಿಗೆ ತಾಮ್ರದ ಹೊದಿಕೆ ಕಾರ್ಯ ಹಾಗೂ ದೇವಸ್ಥಾನದ ಪುಷ್ಕರಣಿಯನ್ನು ವಿಸ್ತರಿಸಿ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸುವ ಕೆಲಸವೂ ನಡೆಯಲಿದೆ. ಅಲ್ಲದೆ ಭವಿಷ್ಯದಲ್ಲಿ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಶ್ರಯಧಾಮವೂ ನಿರ್ಮಾಣ ಮಾಡುವ ಯೋಜನೆ ಇದೆ.


    ಬೆಳ್ಳಿ ಪಲ್ಲಕ್ಕಿ, ಸುತ್ತು ಪೌಳಿಗೆ ತಾಮ್ರದ ಹೊದಿಕೆ ಸಹಿತ ಎಲ್ಲ ಅಭಿವೃದ್ಧಿ ಕಾರ್ಯಗಳು ಮುಂದಿನ ಮೂರು ವರ್ಷದೊಳಗೆ ಪೂರ್ಣಗೊಳ್ಳುವ ವಿಶ್ವಾಸವಿದ್ದು, ಮುಂದೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಸಂಕಲ್ಪ ಇದೆ. ಈ ಎಲ್ಲ ಕಾರ್ಯಗಳಿಗೆ ಭಕ್ತರು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಬೇಕು ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜಿ.ಶರ್ಮಾ ಕೋಳಿಕ್ಕಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಏ.21ರಂದು ಸ್ವಯಂ ಸೇವಕರಿಗೆ ಅಭಿನಂದನೆ

    ಇತ್ತೀಚೆಗೆ ಯಶಸ್ವಿಯಾಗಿ ನಡೆದ ಋಕ್ ಸಂಹಿತಾ ಯಾಗ, ಸಹಸ್ರ ಚಂಡಿಕಾಯಾಗ ಸಹಿತ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯರಾಗಿ ದುಡಿದ ಸ್ವಯಂ ಸೇವಕರಿಗೆ ದೇವಸ್ಥಾನದ ಆಡಳಿತ ಮಂಡಳಿ, ವೇದಮಾತಾ ಟ್ರಸ್ಟ್ ಹಾಗೂ ಯಾಗ ಸಮಿತಿ ವತಿಯಿಂದ ಅಭಿನಂದನಾ ಸಭೆ ಏ.21ರಂದು ಸಂಜೆ 5.30ಕ್ಕೆ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ರಾತ್ರಿ 7.30ರಿಂದ ಪ್ರಸಿದ್ಧ ಕಲಾವಿದರಿಂದ ಭಕ್ತಿಗಾನ ಮೇಳ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts