More

    ಸಮಸ್ಯೆ ಇತ್ಯರ್ಥಪಡಿಸಲು ಆದ್ಯತೆ

    ಬಾದಾಮಿ: ಪ್ರಸ್ತುತ ಹಾಗೂ ಭವಿಷ್ಯದ ಸಮಸ್ಯೆಗಳನ್ನು ಸರಿಪಡಿಸುವುದು ನಮ್ಮ ಆದ್ಯತೆಯಾಗಿದೆ. ಸರ್ಕಾರಿ ನೌಕರರ ಹಿತವನ್ನು ಕಾಪಾಡುವುದೇ ನಮ್ಮ ಗುರಿ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.

    ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಬಾದಾಮಿ ಮತ್ತು ಗುಳೇದಗುಡ್ಡ ವತಿಯಿಂದ ನಗರದ ಜೆ.ಎಸ್. ಮಮದಾಪುರ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರ್ಕಾರಿ ನೌಕರರು ಮತ್ತು ಶಿಕ್ಷಕರೊಂದಿಗೆ ಸಂವಾದ ಹಾಗೂ ಸರ್ವ ಸದಸ್ಯರ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದರು.

    ರಾಜ್ಯದಲ್ಲಿರುವ ಒಟ್ಟು 5,40,000 ನೌಕರರ ಯೋಗಕ್ಷೇಮವೇ ನಮ್ಮ ಸಂಘಟನೆ ಗುರಿಯಾಗಿದೆ. ಬರುವ ದಿನಗಳಲ್ಲಿ ಸಮಾನ ವೇತನ ಮತ್ತು ನೂತನ ಪಿಂಚಣಿ ಯೋಜನೆ ರದ್ದು ಮಾಡುವುದು ಆದ್ಯತೆಯಾಗಿದೆ. ಮೊದಲು ಸಂಘಟನೆ ಕೆಲವೇ ಜನರ ಮುಷ್ಟಿಯಲ್ಲಿತ್ತು. ಈಗ ಕಾಲ ಬದಲಾಗಿದ್ದು, ಎಲ್ಲರೂ ಸಮಸ್ಯೆ ಇತ್ಯರ್ಥ ಮಾಡುವ ಹೋರಾಟಕ್ಕೆ ಕೈಜೋಡಿಸಬೇಕು. ಆರೋಗ್ಯ ಯೋಜನೆ, ಸಮಾನ ವೇತನ ದೊರೆಯುವ ಜತೆಗೆ ಎನ್.ಪಿ.ಎಸ್ ರದ್ದು ಮಾಡಿಸುವ ಹೋರಾಟಕ್ಕೆ ಸಿದ್ಧರಾಗಬೇಕು. ಸಾಂದರ್ಭಿಕ ರಜೆ ಮಂಜೂರು, ದಸರಾ ರಜೆ, ವಿಶೇಷ ಸಾಂದರ್ಭಿಕ ರಜೆ ದೊರಕಿಸಲು ಸಮರ್ಪಕವಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

    ಬರುವ ದಿನಗಳಲ್ಲಿ ಸರ್ಕಾರಿ ನೌಕರರ ಸಂಘದ ಮಕ್ಕಳಿಗೆ ನಗದು ಪುರಸ್ಕಾರ, ಸರ್ಕಾರಿ ನೌಕರರ ದಿನಾಚರಣೆ, ಜಂಟಿ ಸಮಾಲೋಚನೆ ಸಭೆ, ಕ್ರೀಡಾಕೂಟ ಆಯೋಜನೆ, ಸಿಸಿಎ ನಿಯಮ, ಕೆಜಿಐಡಿ ಆನ್‌ಲೈನ್ ವ್ಯವಸ್ಥೆ ಮಾಡಿ ಒಂದು ವಾರದಲ್ಲಿ ಕೆಜಿಐಡಿ ಸಾಲ ಖಾತೆಗೆ ಜಮಾ ಆಗುವಂತೆ ಮಾಡಲಾಗುತ್ತಿದೆ. ನಗದುರಹಿತ ವೈದ್ಯಕೀಯ ಸೌಲಭ್ಯ, ನೌಕರರ ಕುಟುಂಬದ ಸದಸ್ಯರಿಗೆ ಎಲ್ಲ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಡ್ ಏಪ್ರಿಲ್‌ನಿಂದ ಜಾರಿಗೆಯಾಗಲಿದೆ ಎಂದು ಹೇಳಿದರು.

    ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಪಾಟೀಲ ಮಾತನಾಡಿದರು. ಜಿಲ್ಲಾಧ್ಯಕ್ಷ ಎಂ.ಬಿ. ಬಳ್ಳಾರಿ, ಎಸ್.ಬಿ. ಮಾಚಾ ಮಾತನಾಡಿದರು. ವೇದಿಕೆಯಲ್ಲಿ ರಮೇಶ ನಿಡೋಣಿ, ಡಿ.ವೈ. ಅಂಬಿಗೇರ, ಆರ್.ಜಿ. ಹೊತಗಿಗೌಡರ, ಸುಭಾಷ ಅವರಾದಿ ಹಾಜರಿದ್ದರು. ತಾಲೂಕಾಧ್ಯಕ್ಷ ರಮೇಶ ಅಥಣಿ ವರದಿ ವಾಚನ ಮಾಡಿದರು. ಜಗದೀಶ ಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪವಿತ್ರ ಜಕ್ಕಪ್ಪನವರ ಪ್ರಾರ್ಥನೆ ಮಾಡಿದರು. ಆರ್.ಟಿ. ಪಟ್ಟಣಶೆಟ್ಟಿ ಸ್ವಾಗತಿಸಿದರು. ಸಂತೋಷ ಪಟ್ಟಣಶೆಟ್ಟಿ ನಿರೂಪಿಸಿದರು. ಅವಿನಾಶ ಮೇಟಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts