More

    ಸೋಂಕಿತರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಿ

    ಬಾದಾಮಿ: ತಾಲೂಕು ಸೇರಿ ಬಾಗಲಕೋಟೆ ಜಿಲ್ಲೆಯ ಎಲ್ಲ ಕೋವಿಡ್ ಸೋಂಕಿತರಿಗೆ ರೆಮ್‌ಡೆಸಿವಿರ್ ಮತ್ತು ಆಕ್ಸಿಜನ್ ಕೊರತೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ, ಶಾಸಕ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

    ಗುರುವಾರ ಜಿಲ್ಲೆಯ ಮತ್ತು ಬಾದಾಮಿ ತಾಲೂಕಿನ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಕೋವಿಡ್ ಎರಡನೇ ಅಲೆಯ ಸಂಪೂರ್ಣ ಮಾಹಿತಿ ಪಡೆದು ಮಾತನಾಡಿದರು.

    ಜಿಲ್ಲೆ ಮತ್ತು ಬಾದಾಮಿ ತಾಲೂಕಿನಲ್ಲಿ ಇಲ್ಲಿವರೆಗೆ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅವರಿಗೆ ಮಾಹಿತಿ ಕೇಳಿದಾಗ, ಜಿಲ್ಲೆಯಲ್ಲಿ ಇದುವರೆಗೂ 19,540 ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, 3287 ಸಕ್ರಿಯ ಪ್ರಕರಣಗಳಿವೆ. ಜಿಲ್ಲಾಸ್ಪತ್ರೆಯಲ್ಲಿ 437, ಖಾಸಗಿ ಆಸ್ಪತ್ರೆಯಲ್ಲಿ 813 ಬೆಡ್ ಸೌಲಭ್ಯವಿರುತ್ತದೆ. ಆದರೆ, ಆಕ್ಸಿಜನ್, ರೆಮ್‌ಡೆಸಿವಿರ್ ಕೊರತೆ ಕಂಡು ಬಂದಿದೆ. ಜಿಲ್ಲೆಯಲ್ಲಿ 171 ಐಸಿಯು, 93 ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ 30 ಜನರು ಮರಣ ಹೊಂದಿದ್ದಾರೆ. ಜಿಲ್ಲೆಗೆ ಪ್ರತಿ ದಿನ 15 ಕೆಎಲ್ ಆಕ್ಸಿಜನ್ ಅವಶ್ಯಕತೆ ಇದ್ದು, ಈಗ 7.5 ಕೆಎಲ್ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಬಾದಾಮಿ ತಾಲೂಕಿನಲ್ಲಿ ಇಲ್ಲಿವರೆಗೆ 2,528 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 545 ಸಕ್ರಿಯ ಪ್ರಕರಣಗಳಿವೆ. ಬಾದಾಮಿ ಪಟ್ಟಣದ ಎರಡು ಖಾಸಗಿ ಆಸ್ಪತ್ರೆಯಲ್ಲಿ 41 ರೋಗಿಗಳು ಆಕ್ಸಿಜನ್ ಘಟಕದಲ್ಲಿ ದಾಖಲಾಗಿದ್ದಾರೆ. ಬೇರೆ ನಗರಗಳಿಂದ ಗುಳೆ ಬಂದ 760 ಜನರಲ್ಲಿ 607 ಜನರಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, 12 ಜನರಿಗೆ ಕೋವಿಡ್ ರೋಗ ಬಂದಿದೆ. ಗುಳೆ ಬಂದವರನ್ನು ಗುರುತಿಸಿ ಸ್ಥಳೀಯ ಶಾಲೆಯಲ್ಲಿ ಕ್ವಾರಂಟೈನ್ ಮಾಡಲು ಯೋಜನೆ ಮಾಡಲಾಗಿದೆ. ಒಟ್ಟು ಬಾದಾಮಿಯಲ್ಲಿ 4 ಮತ್ತು ಗುಳೇದಗುಡ್ಡದಲ್ಲಿ 3 ಜನರು ಕೋವಿಡ್‌ನಿಂದ ಮರಣ ಹೊಂದಿದ್ದಾರೆ ಎಂದು ತಿಳಿಸಿದರು.

    ಬಾದಾಮಿ ತಾಲೂಕು ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಬೇಕು. ಇದಕ್ಕೆ ಸಂಬಂಧಿಸಿದ ಎಲ್ಲ ಮೂಲ ಸೌಕರ್ಯ ಒದಗಿಸಿ, ಅಗತ್ಯ ಕ್ರಮ ತೆಗೆದುಕೊಳ್ಳಲು ಡಿಸಿ ರಾಜೇಂದ್ರ ಅವರಿಗೆ, ಗುಳೆ ಬಂದವರಿಗೆ ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಬೇಕು ಎಂದು ಜಿಪಂ ಸಿಇಒ ಭೂಬಾಲನ್ ಅವರಿಗೆ ಸಿದ್ದರಾಮಯ್ಯ ಸೂಚಿಸಿದರು.

    ಸಭೆಯಲ್ಲಿ ಎಸ್‌ಪಿ ಲೋಕೇಶ ಜಗಲಾಸರ್, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ, ಸಿಪಿಐ ರಮೇಶ ಹಾನಾಪುರ, ಬಾದಾಮಿ ತಹಸೀಲ್ದಾರ್ ಸುಹಾಸ ಇಂಗಳೆ, ತಾಪಂ ಇಒ ಅರ್ಜುನ ಒಡೆಯರ, ಗುಳೇದಗುಡ್ಡ ತಹಸೀಲ್ದಾರ್ ಜಿ.ಎಂ.ಕುಲಕರ್ಣಿ, ತಾಪಂ ಇಒ ಸಿದ್ದಪ್ಪ ನಕ್ಕರಗುಂದಿ, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಬಿ. ಪಾಟೀಲ, ಬಿಇಒ ಎಂ.ಪಿ. ಮಾಗಿ, ಸಿಡಿಪಿಒ ಅನ್ನಪೂರ್ಣ ಕುಬಕಡ್ಡಿ, ಪಿಎಸ್‌ಐ ಪ್ರಕಾಶ ಬಣಕಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎ.ಎಂ.ನಾಗೂರ, ಜಿಪಂ ಎಇಇ ಕೆ.ಡಿ.ನಾಯಕ, ಕೆರೂರ ಪಪಂ ಮುಖ್ಯಾಧಿಕಾರಿ ಮಾರುತಿ ನಡುವಿನಕೆರೆ, ಬಾದಾಮಿ ಮುಖ್ಯಾಧಿಕಾರಿ ಜ್ಯೋತಿಗಿರೀಶ, ಡಾ.ಸುರೇಶ ಉಗಲವಾಟ, ಡಾ.ಬಿ.ಎಚ್.ರೇವಣಸಿದ್ದಪ್ಪ, ಆರ್.ಎಸ್.ಆದಾಪುರ, ಸುನೀಲ ಕಾರುಡಗಿಮಠ, ಸಂತೋಷ ಕುರಿ, ಎಸ್.ವೈ.ಮಡಿವಾಳರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

    ಕೋವಿಡ್ ಆಸ್ಪತ್ರೆ ತೆರೆಯಲು ಸಿದ್ಧತೆ
    ಬಾದಾಮಿ: ತಾಲೂಕು ಆಸ್ಪತ್ರೆಯಲ್ಲಿ 51, ಕಾರುಡಗಿಮಠ ಆಸ್ಪತ್ರೆಯಲ್ಲಿ 20, ವೆಂಕಟೇಶ್ವರ ಆಸ್ಪತ್ರೆಯಲ್ಲಿ 25 ಬೆಡ್‌ಗಳಿದ್ದು, ಕೋವಿಡ್ ರೋಗಿಗಳಿಗೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ತಹಸೀಲ್ದಾರ್ ಸುಹಾಸ ಇಂಗಳೆ ತಿಳಿಸಿದರು.

    ವಿಡಿಯೋ ಕಾನ್ಫರೆನ್ಸ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲು ಎಲ್ಲ ತಯಾರಿ ಮಾಡಲಾಗಿದೆ. ಕೋವಿಡ್ ಆಸ್ಪತ್ರೆಗೆ ಬೇಕಾಗುವ ಸಿಬ್ಬಂದಿ, ಮೂಲ ಸೌಕರ್ಯಗಳ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು. ತಾಲೂಕಿನಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಕಾರುಡಗಿಮಠ ಆಸ್ಪತ್ರೆಗೆ ಏಜೆನ್ಸಿಯಿಂದ ಆಕ್ಸಿಜನ್ ಸರಬರಾಜು ವಿಳಂಬವಾದ ಕಾರಣ ಸರ್ಕಾರದಿಂದ ಸರಬರಾಜು ಮಾಡಿಸಲಾಗಿದೆ. ತಾಲೂಕಿನ 852 ಕೋವಿಡ್ ರೋಗಿಗಳಿಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಕೋವಿಡ್ ಕಿಟ್ ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ವಲಸೆ ಬಂದ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಲು ಪಿಡಿಒ ಅವರಿಗೆ ಸೂಚಿಸಲಾಗಿದೆ. ತಾಲೂಕಿನ ಜಾಲಿಹಾಳ ಮತ್ತು ಚಿಕ್ಕಮುಚ್ಚಳಗುಡ್ಡ ವಸತಿ ನಿಲಯದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲಾಗಿದೆ ಎಂದು ತಿಳಿಸಿದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts