More

    ನಾಪತ್ತೆಯಾಗಿದ್ದ ಮಗು 12ಗಂಟೆ ನಂತರ ಪತ್ತೆ!

    ಮಡಿಕೇರಿ: ಕೂಲಿ ಕೆಲಸ ಮಾಡುವಾಗ ಜೋಕಾಲಿಯಲ್ಲಿ ಮಲಗಿಸಿದ್ದ ಮಗು ಅಲ್ಲಿಂದ ತಪ್ಪಿಸಿಕೊಂಡು 12 ಗಂಟೆ ಬಳಿಕ ಪತ್ತೆಯಾದ ಪ್ರಸಂಗ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

    ವಿರಾಜಪೇಟೆ ತಾಲೂಕು ವೆಸ್ಟ್ ನೆಮ್ಮೆಲೆ ಗ್ರಾಮದ ಪೆಮ್ಮಂಡ ರಾಜು ಎಂಬವರ ಲೈನ್ ಮನೆಯಲ್ಲಿ ತಮಿಳುನಾಡು ಮೂಲದ ನಾಗರಾಜು ತನ್ನ ಪತ್ನಿ ಹಾಗೂ ಒಂದೂವರೆ ವರ್ಷದ ಮಗು ನಿತ್ಯಾಶ್ರೀ ಜತೆ ವಾಸವಿದ್ದರು.

    ಜ.5 ರಂದು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಮಗುವನ್ನು ಕಾಫಿ ಗಿಡಕ್ಕೆ ಸೀರೆಯಿಂದ ಜೋಕಾಲಿ ಕಟ್ಟಿ ಮಲಗಿಸಿದ್ದಾರೆ. ಕೆಲಸ ಮುಗಿಸಿ ಬಂದು ನೋಡಿದಾಗ ಮಗು ಅಲ್ಲಿರಲಿಲ್ಲ. ಸುತ್ತಮುತ್ತ ಹುಡುಕಿದರೂ ಸುಳಿವು ಸಿಗಲೇ ಇಲ್ಲ. ಹೀಗಾಗಿ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ನಾಗರಾಜು ದೂರು ದಾಖಲಿಸಿದ್ದರು. ಕತ್ತಲಾದ ಕಾರಣಕ್ಕೆ ನಿನ್ನೆ ರಾತ್ರಿ ಹುಡುಕಾಟ ನಿಲ್ಲಿಸಲಾಗಿತ್ತು.

    ಸೋಮವಾರ ಬೆಳಗ್ಗೆ ಹುಡುಕಾಟ ನಡೆಸಿದ ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿ ಮಗುವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ತೋಟದ ಎತ್ತರದ ಪ್ರದೇಶಕ್ಕೆ ನಡೆದು ಹೋಗಿದ್ದ ಮಗು ನಿತ್ರಾಣಗೊಂಡು ಬಿದ್ದಿತ್ತು.

    ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು, ಆರೋಗ್ಯವಾಗಿದೆ. ಇತ್ತ ನಿನ್ನೆಯಿಂದ ಮಗು ಕಾಣೆಯಾಗಿ ಕಣ್ಣೀರಲ್ಲಿ ಮುಳುಗಿದ್ದ ತಂದೆ ತಾಯಿ ನಿಟ್ಟುಸಿರು ಬಿಟ್ಟು ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts