More

    ಪೊದೆಯಲ್ಲಿ ನವಜಾತ ಹೆಣ್ಣು ಶಿಶು!: ಸುರಿವ ಮಳೆಯಲ್ಲೂ ಬಿಸಾಡಿ ಹೋದ ನಿರ್ದಯಿಗಳು

    ಚನ್ನಪಟ್ಟಣ: ನಗರದ ಕೆಎಚ್‌ಬಿ ಬಡಾವಣೆಯಲ್ಲಿನ ಪೊದೆಯೊಂದರಲ್ಲಿ ಮಂಗಳವಾರ ರಾತ್ರಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಸಾರ್ವಜನಿಕರು ಹಾಗೂ ಅಧಿಕಾರಿಗಳು ಮಗುವನ್ನು ರಕ್ಷಿಸಿದ್ದಾರೆ.ಬಡಾವಣೆಯ ಉದ್ಯಾನವನದ ಬಳಿಯ ಪೊದೆಯಲ್ಲಿ ಮಗುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಬಿಸಾಡಲಾಗಿದೆ. ಮಗು ಅಳುತ್ತಿರುವ ಶಬ್ದ ಕೇಳಿದ  ಅಕ್ಕಪಕ್ಕದ ನಿವಾಸಿಗಳು ಹುಡುಕಾಡಿದಾಗ ಪೊದೆಯಲ್ಲಿ ಮಗು ಪತ್ತೆಯಾಗಿದೆ.

    ಕೂಡಲೇ ಸ್ಥಳೀಯರು ವಿಚಾರವನ್ನು ಪೊಲೀಸರು ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕಾಗಮಿಸಿದ ಶಿಶು ಅಭಿವೃದ್ಧಿ ಇಲಾಖೆ ಪ್ರಥಮ ದರ್ಜೆ ಸಹಾಯಕ ಹರೀಶ್ ಕುವಾರ್, ಅಂಗನವಾಡಿ ಕಾರ್ಯಕರ್ತೆ ಮತ್ತು ಪೋಲೀಸರು ಮಗುವನ್ನು ರಕ್ಷಿಸಿ, ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಸರ್ಕಾರಿ ಆಸ್ಪತ್ರೆಗೆ ಕಳಿಸಲಾಗಿದೆ.

     

    ಶೀಘ್ರ ಶಿಶುಪಾಲನಾ ಕೇಂದ್ರಕ್ಕೆ ರವಾನೆ: ನವಜಾತ ಹೆಣ್ಣು ಶಿಶುವಾಗಿದ್ದು, ಕರುಳಬಳ್ಳಿ ಕತ್ತರಿಸುವ ಮೊದಲೇ ಚೀಲದಲ್ಲಿ ಸುತ್ತಿ ಬಿಟ್ಟು ಹೋಗಿದ್ದಾರೆ. ಮಗು ಆರೋಗ್ಯವಾಗಿದ್ದು, ಮಂಡ್ಯ ಸರ್ಕಾರಿ ಆಸ್ಪತ್ರೆಯ ನಿಗಾ ಟಕದಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿದ್ದು, ಮಗು ಆರೋಗ್ಯದ ಬಗ್ಗೆ ಖಾತರಿಯಾದ ಮೇಲೆ ಶಿಶುಪಾಲನಾ ಕೇಂದ್ರಕ್ಕೆ ರವಾನಿಸಲಾಗುವುದು ಎಂದು ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಎಂ.ಕೆ. ಸಿದ್ಧಲಿಂಗಯ್ಯ ಪತ್ರಿಕೆಗೆ ತಿಳಿಸಿದ್ದಾರೆ.

    ಸಾರ್ವಜನಿಕರ ಹಿಡಿಶಾಪ :  ಮುದ್ದಾದ ನವಜಾತ ಶಿಶುವನ್ನು ಸುರಿವ ಮಳೆ ಹಾಗೂ ಕಗ್ಗತ್ತಲ್ಲಿನಲ್ಲಿ ಪೊದೆಯಲ್ಲಿ ಬಿಸಾಡಿ ಹೋದವರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಾರ್ವಜನಿಕರು ಪೊಲೀಸರನ್ನು ಆಗ್ರಹಿಸಿದ್ದಾರೆ. ಗ್ರಾವಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೊಬೆಷನರಿ ಡಿವೈಎಸ್ಪಿ ಅನುಷಾರಾಣಿ ಅವರು ತನಿಖೆ ಕೈಗೊಂಡಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೂ ಇದೇ ಬಡಾವಣೆಯ ಪೊದೆಯೊಂದರಲ್ಲಿ ನಿರ್ದಯಿ ವ್ಯಕ್ತಿಗಳು ನವಜಾತ ಗಂಡು ಶಿಶುವನ್ನು ಸುರಿವ ಮಳೆಯಲ್ಲಿ ಎಸೆದು ಹೋಗಿದ್ದನ್ನು ಸ್ಮರಿಸಬಹುದು.

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts