More

    ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳು ನಿರ್ದೋಷಿಗಳು

    ನವದೆಹಲಿ: ಅಯೋಧ್ಯೆ ರಾಮ ಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡ ವಿವಾದ ಕಳೆದ ವರ್ಷ ಶಾಂತಿಯುತ ಅಂತ್ಯ ಕಂಡಿರುವ ಬೆನ್ನಲ್ಲೇ ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದ ತೀರ್ಪು ಬುಧವಾರ (ಸೆ.30) ಹೊರಬಿದ್ದಿದ್ದು, ನ್ಯಾಯಾಲಯವು ಎಲ್ಲ ಆರೋಪಿಗಳನ್ನು ಪ್ರಕರಣದಿಂದ ಖುಲಾಷೆಗೊಳಿಸಿದೆ.

    28 ವರ್ಷಗಳ ಬಳಿಕ ಲಖನೌದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ತೀರ್ಪು ಓದಿದ ನ್ಯಾಯಾಧೀಶ ಸುರೇಂದ್ರ ಕುಮಾರ್​ ಯಾದವ್,​ ಬಾಬ್ರಿ ಕಟ್ಟಡ ಧ್ವಂಸ ಪ್ರಕರಣ ಪೂರ್ವ ನಿಯೋಜಿತವಲ್ಲ. 1992 ಡಿಸೆಂಬರ್ 6ರಂದು ನಡೆದ ಘಟನೆ ಆಕಸ್ಮಿಕ. ಈ ಘಟನೆ ಹಿಂದೆ ಯಾವುದೇ ಕ್ರಿಮಿನಲ್​ ಸಂಚು ಇಲ್ಲ ಮತ್ತು ಸಾಬೀತು ಪಡಿಸಲು ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲವೆಂದು ಮಹತ್ವದ ತೀರ್ಪು ನೀಡಿದರು.

    ಬಿಜೆಪಿ ಪಾಲಿಗೆ ಇದು ಅತ್ಯಂತ ಮಹತ್ವದ ದಿನವಾಗಿದ್ದು, ಬಿಜೆಪಿ ಭೀಷ್ಮ ಎಂದೇ ಪ್ರಸಿದ್ಧರಾಗಿರುವ ಹಿರಿಯ ರಾಜಕಾರಣಿ ಎಲ್​.ಕೆ. ಅಡ್ವಾಣಿ ಅವರಿಗೆ ಬಿಗ್​ ರಿಲೀಫ್​ ಸಿಕ್ಕಂತಾಯಿತು. ಮನೆಯಲ್ಲೇ ಕುಳಿತು ಟಿವಿ ವೀಕ್ಷಿಸುವ ಮೂಲಕ ತೀರ್ಪು ತಿಳಿದುಕೊಂಡರು. ಇನ್ನು ನ್ಯಾಯಾಲಯದಲ್ಲಿ ತೀರ್ಪು ಓದುವ ವೇಳೆ ಕೋರ್ಟ್​ ಹಾಲ್​ನಲ್ಲಿ ವಕೀಲರು ಮತ್ತು 26 ಮಂದಿ ಆರೋಪಿಗಳನ್ನು ಬಿಟ್ಟು ಬೇರೆ ಯಾರಿಗೂ ಅವಕಾಶ ನೀಡಿರಲಿಲ್ಲ.

    ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾಭಾರತಿ, ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್, ಸಾಕ್ಷಿ ಮಹಾರಾಜ್ ಸೇರಿದಂತೆ 32 ಮಂದಿ ಹಾಜರು ಇರುವಂತೆ ಕೋರ್ಟ್ ಸೆ.16ರಂದು ಸೂಚನೆ ನೀಡಿತ್ತು. ಆದರೆ, ಉಮಾಭಾರತಿ ಅವರು ಕರೊನಾ ಪಾಸಿಟಿವ್​ ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೋರ್ಟ್​ನಿಂದ ವಿನಾಯಿತಿ ಕೋರಿದ್ದರು. ಅದೇ ವೇಳೆ ಎಲ್​.ಕೆ.ಅಡ್ವಾಣಿ ಹಾಗೂ ಮುರುಳಿ ಮನೋಹರ್ ಜೋಶಿ ಅವರು ತಮ್ಮ ವಯಸ್ಸಿನ ಆಧಾರದ ಮೇಲೆ ಕೋರ್ಟ್​ ಹಾಜರಿಯಿಂದ ವಿನಾಯಿತಿ ಕೇಳಿದ್ದಾರೆ.

    ಆರೋಪಿ ಪಟ್ಟಿಯಲ್ಲಿರುವ ಇತರ ಮುಖಂಡರಾದ ಸಾಧ್ವಿ ರಿತಂಬರ್​, ಸಾಕ್ಷಿ ಮಹಾರಾಜ್ ಮತ್ತು ಚಂಪತ್ ರಾಯ್ ಬನ್ಸಾಲ್ ಸೇರಿದಂತೆ 26 ಮಂದಿ ಆರೋಪಿಗಳು ಕೋರ್ಟ್​ಗೆ ಹಾಜರಾಗಿದ್ದರು.

    ಪ್ರಕರಣ ಸಂಬಂಧ ಸಿಬಿಐ 351 ಸಾಕ್ಷಿಗಳು ಮತ್ತು 600 ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಒಟ್ಟು 48 ಜನರ ವಿರುದ್ಧ ಆರೋಪಗಳನ್ನು ಹೊರಿಸಲಾಗಿದ್ದು, ಅದರಲ್ಲಿ 17 ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಸ್ಥಾಪಿಸಲಾಗಿರುವ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಬಿಜೆಪಿ ಮುಖಂಡ ವಿನಯ್ ಕಟಿಯಾರ್, ಸಾಧ್ವಿ ರಿತಂಬರಾ ಕೂಡ ಈ ಪ್ರಕರಣದ ಆರೋಪಿಗಳು.

    ಆರೋಪ ಏನು?
    ಅಯೋಧ್ಯೆ ರಾಮ ಜನ್ಮಭೂಮಿ ಪರಿಸರದಲ್ಲಿ 15ನೇ ಶತಮಾನದಲ್ಲಿ ನಿರ್ವಿುಸಲಾಗಿದ್ದ ಬಾಬ್ರಿ ಕಟ್ಟಡವನ್ನು 1992 ಡಿಸೆಂಬರ್ 6ರಂದು ಕೆಡವಲಾಗಿತ್ತು. ಆಡ್ವಾಣಿ, ಜೋಷಿ, ಉಮಾ ಭಾರತಿ ಇನ್ನಿತರ ಬಿಜೆಪಿ ನಾಯಕರು ಇದರ ಸಂಚು ರೂಪಿಸಿದ್ದರು ಎಂಬುದು ಆರೋಪ. ಈ ಘಟನೆ ಸಂದರ್ಭದಲ್ಲಿ ಉ.ಪ್ರದೇಶದಲ್ಲಿ ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಅವರ ಸರ್ಕಾರ ಪರೋಕ್ಷವಾಗಿ ನೆರವು ನೀಡಿತ್ತು ಎಂಬ ಆರೋಪವೂ ಕೇಳಿ ಬಂದಿತ್ತು. ಈ ವೇಳೆ ಉಂಟಾದ ಗಲಭೆಯಲ್ಲಿ ದೇಶಾದ್ಯಂತ ಸುಮಾರು 3 ಸಾವಿರ ಜನರು ಮೃತರಾಗಿದ್ದರು. ಬಳಿಕ ಕಲ್ಯಾಣ್ ಸಿಂಗ್ ಸರ್ಕಾರವೂ ಪತನವಾಗಿತ್ತು.

    ಇದನ್ನೂ ಓದಿ: ಬಾಬ್ರಿ ಮಸೀದಿ ಕೇಸ್​- ಕೋರ್ಟ್​ನತ್ತ ಮುಖಂಡರು: ವಿನಾಯಿತಿ ಕೋರಿದ ಮೂವರು, ಆರೋಪ ಸಾಬೀತಾದರೆ ಶಿಕ್ಷೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts