More

    ನರೇಗಾ ಯೋಜನೆ ಬಳಕೆ ಮಾಡಿಕೊಳ್ಳಿ

    ನಂಜನಗೂಡು: ನರೇಗಾ ಯೋಜನೆ ತಾಲೂಕಿನಲ್ಲಿ ಹಿಂದುಳಿದಿದ್ದು, ಗ್ರಾಮಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಗ್ರಾಪಂ ಅಧ್ಯಕ್ಷರು ಮತ್ತು ಅಧಿಕಾರಿಗಳು ನರೇಗಾ ಯೋಜನೆಯನ್ನು ಬಳಕೆಮಾಡಿಕೊಳ್ಳಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

    ಕೂಡ್ಲಾಪುರ ಗ್ರಾಮದಲ್ಲಿ ನರೇಗಾ ಯೋಜನೆಯಡಿ 16 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಅಧಿಕಾರ ವಿಕೇಂದ್ರೀಕರಣಗೊಳಿಸುವ ಮೂಲಕ ಗ್ರಾಮಗಳ ಅಭಿವೃದ್ಧಿಪಡಿಸಬೇಕು ಎಂಬ ಉದ್ದೇಶದಿಂದ ಪ್ರಧಾನಿ ರಾಜೀವ್ ಗಾಂಧಿ ಅವರು ಗ್ರಾಮ ಪಂಚಾಯಿತಿ ವ್ಯವಸ್ಥೆ ಸ್ಥಾಪಿಸಿದರು. ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಅವರು ಗ್ರಾಮೀಣ ಜನರು ಉದ್ಯೋಗಕ್ಕಾಗಿ ಗುಳೆ ಹೋಗಬಾರದೆಂಬ ಉದ್ದೇಶದಿಂದ ಮಹತ್ವಾಕಾಂಕ್ಷಿಯ ಮನರೇಗಾ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯಡಿ ಶಾಲಾ ಕಾಂಪೌಂಡ್, ಸ್ಮಶಾನ ಅಭಿವೃದ್ಧಿ, ರಸ್ತೆ, ಚರಂಡಿ ಅಭಿವೃದ್ಧಿ, ಶೌಚಗೃಹ, ನಾಲೆ ಕಾಮಗಾರಿ ಮತ್ತು ಅಂಗನವಾಡಿ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಗ್ರಾಮಸ್ಥರನ್ನು ಬಳಕೆ ಮಾಡಿಕೊಂಡು ಮಾಡಬಹುದು ಎಂದರು.

    ಕವಲಂದೆ ಭಾಗ ಬರಪೀಡಿತ ಪ್ರದೇಶವಾಗಿರುವ ಕಾರಣ ದೇವನೂರು ಗ್ರಾಮದ ಬಳಿ ಏತ ನಿರಾವರಿ ಯೋಜನೆ ಅನುಷ್ಠಾನಗೊಳಿಸಿ ಸುತ್ತಮುತ್ತಲ 25 ಗ್ರಾಮಗಳ ಕೆರೆಗಳ ಅಚ್ಚುಕಟ್ಟು ಪ್ರದೇಶಕ್ಕೆ ನೀರು ತುಂಬಿಸಲು ದೇವನೂರು ಏತ ನಿರಾವರಿ ಯೋಜನೆಗೆ ಜತೆಗೆ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರದ ಚಟುವಟಿಕೆ ಪ್ರೋತ್ಸಾಹಕ್ಕಾಗಿ ಬಜೆಟ್‌ನಲ್ಲಿ ಅನುಮೋದನೆ ಸಿಕ್ಕಿದೆ. ಈ ಯೋಜನೆ ಶೀಘ್ರದಲ್ಲೇ ಜಾರಿಯಾಗಲಿವೆ ಎಂದರು.

    ತಾಲೂಕಿನ ದೇಬೂರು ಗ್ರಾಮದಲ್ಲಿ ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಿರುವ ಕೂಸಿನ ಮನೆ ಶಿಶುಪಾಲನಾ ಕೇಂದ್ರವನ್ನು ಇದೇ ಸಂದರ್ಭ ಉದ್ಘಾಟಿಸಲಾಯಿತು.

    ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಜಿಪಂ ಮಾಜಿ ಸದಸ್ಯ ಕೆ.ಮಾರುತಿ, ಮುಖಂಡ ಹಂಡುವಿನಹಳ್ಳಿ ಪರಶಿವಮೂರ್ತಿ, ಕೂಡ್ಲಾಪುರರಾಜು, ಉಪ್ಪಿನಹಳ್ಳಿ ಶಿವಣ್ಣ, ಕಳಲೆರಾಜೇಶ್, ವಾಸುದೇವಮೂರ್ತಿ, ಗ್ರಾ.ಪಂ. ಅಧ್ಯಕ್ಷೆ ಸುಧಾಮಣಿ, ಉಪಾಧ್ಯಕ್ಷೆ ಶಿವನಾಗಮ್ಮ, ನಗರಸಭಾ ಸದಸ್ಯ ಕೆ.ಎಂ.ಬಸವರಾಜು, ಶಿವಕುಮಾರ್, ಲೆಕ್ಕಾಧಿಕಾರಿ ಶ್ರೀಕಂಠನಾಯಕ ಪಿಡಿಒ ವಿವೇಕ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts