More

    ಲೇಖಕರಿಗೆ ಜಾತಿ ಸಂಕೋಲೆ ಸಲ್ಲ: ಆನಂದ ಋಗ್ವೇದಿ ಅನಿಸಿಕೆ

    ದಾವಣಗೆರೆ: ಇಂದು ಹಲವು ಲೇಖಕರನ್ನು ಸಮುದಾಯಕ್ಕೆ ಸೀಮಿತರಾಗಿಸುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ ಎಂದು ಸಾಹಿತಿ ಆನಂದ ಋಗ್ವೇದಿ ಹೇಳಿದರು.

    ಪ್ರಗತಿಪರ ಸಾಹಿತ್ಯ ಪರಿಷತ್ ಮತ್ತು ಕಾವ್ಯ ಮಂಡಳ ಸಹಯೋಗದಲ್ಲಿ ನಗರದ ನಿರ್ವರ್ಣ ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕವಿ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಸಾಹಿತ್ಯ ಕೃತಿಗಳ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಬದುಕು ನಮ್ಮ ಆಯ್ಕೆಯೇ ಹೊರತಾಗಿ ಹುಟ್ಟು ಅಲ್ಲ. ಕುವೆಂಪು ಸೇರಿ ಹಲವು ಲೇಖಕರು ಒಂದು ಸಮುದಾಯ, ಜಾತಿ, ಧರ್ಮಕ್ಕೆ ಸೀಮಿತರಾಗಿ ಓದುತ್ತಿರಲಿಲ್ಲ. ಯಾವ ಲೇಖಕರೂ ಜಾತಿಗೆ ಸೀಮಿತರಾಗಿ ಗುರುತಿಸಿಕೊಂಡಿರಲಿಲ್ಲ. ಆದರೆ, ಇಂದು ಅದು ಹೆಚ್ಚಿರುವುದು ಆತಂಕದ ವಿಷಯ ಎಂದರು.

    ಒಬ್ಬ ಲೇಖಕ ಬದುಕಿನಲ್ಲಿ ಅನುಭವಿಸಿದ ಹಲವು ತಲ್ಲಣಗಳೇ ಕೃತಿಯಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ. ಫೈಜ್ನಟ್ರಾಜ್ ನಾಲ್ಕು ದಶಕಗಳಲ್ಲಿ ಅನುಭವಿಸಿದ ಸಂಘರ್ಷದ ಬದುಕನ್ನು ಅವಲೋಕಿಸುವ ಸಂದರ್ಭ ಇದಾಗಿದೆ ಎಂದು ಹೇಳಿದರು.

    ಕವಿ ಮಲ್ಲಿಕಾರ್ಜುನ ತೂಲಹಳ್ಳಿ ಮಾತನಾಡಿ, ವೇದಿಕೆ ಮತ್ತು ಮಾತು ತಮ್ಮ ಆಪ್ತತೆ ಕಳೆದುಕೊಂಡಿವೆ. ಅವು ಗುಂಪುಗಾರಿಕೆ, ಆತ್ಮರತಿ ಆಗುತ್ತಿರುವ ಕಾಲದಲ್ಲಿ ನಾವಿದ್ದೇವೆ. ಎಲ್ಲರ ಬದುಕಿಗೂ ಪ್ರೀತಿ ಅತ್ಯವಶ್ಯ. ಪ್ರೇಮ ಆಮ್ಲಜನಕದಷ್ಟೇ ಅಗತ್ಯ ಅನುಭವ ಎಂದರು.

    ಕಾತರ ಮತ್ತು ಭಯ ಇವುಗಳ ನಡುವಿನ ದ್ವಂದ್ವತೆಯೆ ಪ್ರೇಮ ಕವಿತೆಗೆ ಆಸರೆಯಾಗಿವೆ. ಗಜಲ್ ಕೂಡ ಪ್ರೇಮದ ನೋವಿನ ನಿವೇದನೆಯ ಮಾತುಗಳಾಗಿವೆ. ಪ್ರೇಮದ ತೀವ್ರತೆಯು ಆಧ್ಯಾತ್ಮದತ್ತ ಕರೆದೊಯ್ಯುತ್ತದೆ ಎಂದು ಹೇಳಿದರು.

    ಫೈಜ್ನಟ್ರಾಜ್ ಕತೆಗಳ ಕುರಿತು ಪ್ರಾಧ್ಯಾಪಕಿ ಡಾ.ಜಿ.ಕಾವ್ಯಶ್ರೀ ಮಾತನಾಡಿದರು. ಕವಿ ಸನಾವುಲ್ಲಾ ನವಿಲೇಹಾಳ್ ಪ್ರಾಸ್ತಾವಿಕ ಮಾತನಾಡಿದರು. ಅಂಜನಾದ್ರಿ ಕಾರ್ಯಕ್ರಮ ನಿರೂಪಿಸಿದರು. ಟಿ.ಎಸ್.ರಾಜೇಂದ್ರ ಪ್ರಸಾದ್ ತೇಕಲವಟ್ಟಿ ಸಂಯೋಜಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts