

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳ ಚಲನೆ ಹಾಗೂ ಅವುಗಳ ಸಂಯೋಗವು ಮಾನವನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದೀಗ ನವೆಂಬರ್ 30ರಂದು ಗ್ರಹಗಳ ಅಪರೂಪದ ಸಂಯೋಗದಿಂದ ಶಕ್ತಿಶಾಲಿ 'ಗಜಕೇಸರಿ ರಾಜಯೋಗ' ನಿರ್ಮಾಣವಾಗುತ್ತಿದ್ದು, ಕೆಲವು ರಾಶಿಯವರ ಬದುಕಿನಲ್ಲಿ ಅಕ್ಷರಶಃ ಹಣದ ಮಳೆಯನ್ನೇ ಸುರಿಸಲಿದೆ. ಅದೃಷ್ಟದ ಬಾಗಿಲು ತೆರೆದು ಆರ್ಥಿಕ ಪ್ರಗತಿ ಹಾಗೂ ಸಮಾಜದಲ್ಲಿ ಉನ್ನತ ಸ್ಥಾನಮಾನ ತಂದುಕೊಡಲಿರುವ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬ ಸಂಪೂರ್ಣ ವಿವರ ಇಲ್ಲಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಚಂದ್ರನನ್ನು ಮನಸ್ಸು, ಆಲೋಚನೆ ಹಾಗೂ ಭಾವನೆಗಳ ಕಾರಕ ಎಂದು ಪರಿಗಣಿಸಲಾಗುತ್ತದೆ. ನವಗ್ರಹಗಳಲ್ಲೇ ಅತ್ಯಂತ ವೇಗವಾಗಿ ರಾಶಿ ಬದಲಾಯಿಸುವ ಚಂದ್ರನು ಕಟಕ ರಾಶಿಯ ಅಧಿಪತಿಯಾಗಿದ್ದು, ಒಂದು ರಾಶಿಯಲ್ಲಿ ಕೇವಲ ಎರಡೂವರೆ ದಿನಗಳ ಕಾಲ ಮಾತ್ರ ಸಂಚರಿಸುತ್ತಾನೆ. ಅದರಂತೆ ಇದೇ ನವೆಂಬರ್ 30ರಂದು ಚಂದ್ರನು ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ಸಿಂಹ ರಾಶಿಯಲ್ಲಿ ಈಗಾಗಲೇ ದೇವಗುರು ಬೃಹಸ್ಪತಿ (ಗುರು) ಸಂಚರಿಸುತ್ತಿರುವುದರಿಂದ, ಗುರು ಮತ್ತು ಚಂದ್ರರ ಈ ಪವಿತ್ರ ಮಿಲನದಿಂದ ಅತ್ಯಂತ ಶಕ್ತಿಶಾಲಿ ಗಜಕೇಸರಿ ರಾಜಯೋಗ ಸೃಷ್ಟಿಯಾಗಲಿದೆ.
ಗಜಕೇಸರಿ ರಾಜಯೋಗದ ಪ್ರಭಾವವು ಎಲ್ಲಾ ದ್ವಾದಶ ರಾಶಿಗಳ ಮೇಲೂ ಕಂಡುಬಂದರೂ, ವಿಶೇಷವಾಗಿ ಕೆಲವು ರಾಶಿಯವರಿಗೆ ಇದು ಜೀವನದ ಅತ್ಯುನ್ನತ ಶುಭ ಫಲಗಳನ್ನು ಕರುಣಿಸಲಿದೆ. ಈ ರಾಜಯೋಗದ ಬಲದಿಂದಾಗಿ ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ, ಆರ್ಥಿಕ ಪ್ರಗತಿ, ಸಮಾಜದಲ್ಲಿ ಗೌರವ ಹಾಗೂ ವೃತ್ತಿಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ. ಹಾಗಾದರೆ ನವೆಂಬರ್ 30ರಿಂದ ಅದೃಷ್ಟದ ಶಿಖರಕ್ಕೇರಲಿರುವ ಆ ಮೂರು ಪ್ರಮುಖ ರಾಶಿಗಳು ಯಾವುವು ಎಂಬುದನ್ನು ನೋಡೋಣ.
ಸಿಂಹ ರಾಶಿಯ ಮೊದಲನೇ ಮನೆಯಲ್ಲಿ ಗುರು ಮತ್ತು ಚಂದ್ರರ ಸಂಯೋಗದಿಂದ ಗಜಕೇಸರಿ ರಾಜಯೋಗ ನಿರ್ಮಾಣವಾಗುತ್ತಿರುವುದು ಈ ರಾಶಿಯವರಿಗೆ ವರದಾನವಾಗಲಿದೆ. ಇದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಮತ್ತು ಕಾರ್ಯಕ್ಷಮತೆ ದುಪ್ಪಟ್ಟಾಗಲಿದೆ. ಬಹಳ ದಿನಗಳಿಂದ ಒಳ್ಳೆಯ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಉತ್ತಮ ಕೆಲಸ ಸಿಗುವ ಸಾಧ್ಯತೆ ಇದೆ. ವ್ಯಾಪಾರ ಮತ್ತು ವೃತ್ತಿಯಲ್ಲಿರುವವರಿಗೆ ಭಾರಿ ಆರ್ಥಿಕ ಲಾಭದ ಜತೆಗೆ ಹೊಸ ಒಪ್ಪಂದಗಳು ದೊರೆಯಲಿದ್ದು, ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ ಮತ್ತು ಕುಟುಂಬದಲ್ಲಿ ಸಂತಸ ನೆಲೆಸಲಿದೆ.
ಕಟಕ ರಾಶಿಯ ಎರಡನೇ ಮನೆಯಲ್ಲಿ ಗುರು ಮತ್ತು ಚಂದ್ರರ ಸಂಯೋಗ ಏರ್ಪಡುತ್ತಿದ್ದು, ಈ ರಾಶಿಯವರಿಗೆ ಗಜಕೇಸರಿ ರಾಜಯೋಗವು ಅದ್ಭುತ ಫಲಗಳನ್ನು ನೀಡಲಿದೆ. ಇದರಿಂದಾಗಿ ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಅಥವಾ ಬಾಕಿ ಉಳಿದಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಅದೃಷ್ಟದ ಸಂಪೂರ್ಣ ಬೆಂಬಲ ಸಿಗುವುದರಿಂದ ಧೈರ್ಯ ಮತ್ತು ಆತ್ಮಸ್ಥೈರ್ಯ ಹೆಚ್ಚಾಗಲಿದ್ದು, ಉದ್ಯೋಗಾಂಕ್ಷಿಗಳಿಗೆ ಉತ್ತಮ ಅವಕಾಶಗಳು ಒದಗಿಬರಲಿವೆ. ಕಚೇರಿಯಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರಶಂಸೆ ಸಿಗುವುದಲ್ಲದೆ, ಆರ್ಥಿಕ ಸ್ಥಿತಿ ಸುಧಾರಿಸಲಿದೆ; ಪ್ರೇಮ ಜೀವನ ಮಧುರವಾಗಿರಲಿದ್ದು, ಅವಿವಾಹಿತರಿಗೆ ಉತ್ತಮ ಸಂಗಾತಿ ದೊರೆಯುವ ಯೋಗವಿದೆ.
ಧನು ರಾಶಿಯ ಒಂಬತ್ತನೇ ಮನೆಯಲ್ಲಿ ಗುರು ಮತ್ತು ಚಂದ್ರರ ಸಂಯೋಗದಿಂದ ಗಜಕೇಸರಿ ರಾಜಯೋಗ ರೂಪುಗೊಳ್ಳುತ್ತಿದೆ. ಇದರ ಪರಿಣಾಮವಾಗಿ ಅರ್ಧಕ್ಕೆ ನಿಂತಿದ್ದ ಕೆಲಸಗಳು ಮತ್ತು ಯೋಜನೆಗಳಿಗೆ ಮತ್ತೆ ವೇಗ ಸಿಗಲಿದೆ. ಉದ್ಯೋಗಸ್ಥರಿಗೆ ವೃತ್ತಿಯಲ್ಲಿ ಬಡ್ತಿ ಅಥವಾ ಪ್ರಗತಿಗೆ ಹೊಸ ಅವಕಾಶಗಳು ಲಭ್ಯವಾಗಲಿದ್ದು, ಕಚೇರಿಯಲ್ಲಿ ಹೆಚ್ಚುವರಿ ಜವಾಬ್ದಾರಿಗಳು ಹೆಗಲೇರಲಿವೆ. ಒಟ್ಟಾರೆಯಾಗಿ ಕೈಗೊಂಡ ಎಲ್ಲಾ ಪ್ರಯತ್ನಗಳಲ್ಲೂ ಯಶಸ್ಸು ನಿಮ್ಮದಾಗಲಿದ್ದು, ಅನಿರೀಕ್ಷಿತ ಧನಾಗಮನದಿಂದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಲಗೊಳ್ಳಲಿದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.