ಪಂಚಭೂತಗಳೊಂದಿಗೆ ಮನುಷ್ಯನ ಬದುಕನ್ನು ಬೆಸೆಯುವುದೇ ವಾಸ್ತು

Published on: 

ವಾಸ್ತು ಎಂಬುದು ಒಂದು ತರ್ಕಬದ್ಧ ಶಾಸ್ತ್ರ. ವಾಸ್ತುಶಾಸ್ತ್ರವನ್ನು ವಾಸ್ತು ವಿಜ್ಞಾನ ಎಂತಲೂ ಕರೆಯುತ್ತಾರೆ. ಸಾಮಾನ್ಯವಾಗಿ ಆರ್ಕಿಟೆಕ್ಚರ್ ಎಂಬ ಇಂಗ್ಲಿಷ್ ಪದದ ಬಳಕೆಯಲ್ಲಿ ವಿಜ್ಞಾನ ಎಂಬ ಧ್ವನಿತಾರ್ಥ ಸೇರಿಕೊಂಡಂತಿದ್ದರೂ ವಾಸ್ತು ಎಂಬ ಶಬ್ದವನ್ನು ವಿಜ್ಞಾನ ಎಂಬುದರ ಬದಲಾಗಿ ಸಂಪ್ರದಾಯ, ಸಂಸ್ಕೃತಿ ಎಂದು ಸೀಮಿತ ಅರ್ಥದಲ್ಲಿ ಮೂಗು ಮುರಿಯುವವರೂ ಇದ್ದಾರೆ. ಆದರೆ ವಾಸ್ತವದಲ್ಲಿ ವಾಸ್ತು ಒಂದು ಪರಿಶುದ್ಧ ವಿಜ್ಞಾನ ಮಾತ್ರವಲ್ಲ, ಜಗತ್ತಿನ ಎಲ್ಲ ವಿಜ್ಞಾನಗಳಿಗೆ ಮೂಲ ವಾಗಿದ್ದು, ಇದನ್ನು ‘ಮದರ್ ಆಫ್ ಸೈನ್ಸ್’ ಎಂದು ಕರೆಯಬಹುದು.

ಇಂತಹ ವಾಸ್ತು ವಿನ್ಯಾಸದ ಸ್ವರೂಪ ಮನುಷ್ಯನ ಆಧುನಿಕತೆ ಅಥವಾ ನಾಗರಿಕತೆಯ ಜತೆ ಜತೆಗೆ ಆರಂಭವಾಗಿದೆ. ಆದಿ ಮಾನವರ ಕಾಲದಲ್ಲಿ ಕಾಡಿನಲ್ಲಿ ಜೀವಿಸುತ್ತಿದ್ದ ಮನುಷ್ಯ ತನ್ನ ಬುದ್ದಿ ಬೆಳೆಯಲು ಆರಂಭವಾಗುತ್ತಿದ್ದಂತೆ ತನಗೊಂದು ಆಶ್ರಯ ಬೇಕು, ಬಿಸಿಲು, ಮಳೆ, ಪ್ರಾಣಿ, ಶತ್ರುಗಳಿಂದ ರಕ್ಷಣೆ ಬೇಕು ಎಂಬ ಚಿಂತನೆಯೊಂದಿಗೆ ನೈಸರ್ಗಿಕ ಗುಹೆ, ಪ್ರತ್ಯೇಕ ವಾಸಸ್ಥಾನವನ್ನು ಕಂಡುಕೊಳ್ಳಲು ಆರಂಭಿಸಿದ. ಇಲ್ಲಿಂದಲೇ ವಾಸ್ತು ಬಳಕೆ ಆರಂಭವಾಯಿತು. ಅದರ ತೀವ್ರತರವಾದ ಮತ್ತು ತೀಕ್ಷ್ಣ ಬಳಕೆಯು ದಿನಗಳೆದಂತೆ ಹೆಚ್ಚುತ್ತಲೇ ಹೋಯಿತು.

ವಾಸ್ತುವಿನ್ಯಾಸ ಎಂಬುದು ಕೇವಲ ಒಂದು ಕಟ್ಟಡದ ನಕ್ಷೆಯಲ್ಲ. ಬದಲಾಗಿ ಪಂಚಭೂತಗಳೊಂದಿಗೆ ಮನುಷ್ಯನ ಬದುಕನ್ನು ಬೆಸೆಯುವ ಶ್ರೇಷ್ಠ ವಿದ್ಯೆ. ಪ್ರಕೃತಿ, ಮನುಷ್ಯ ಮತ್ತು ಕಟ್ಟಡ ಈ ಮೂರರ ನಡುವೆ ಇರುವ ಸಂಬಂಧವನ್ನು ಕ್ರಮಬದ್ಧವಾಗಿ ಕಟ್ಟಿಕೊಡುವ ಪ್ರಾಚೀನ ಪರಿಪಾಠವೇ ವಾಸ್ತುವಿನ್ಯಾಸ.

ವಾಸ್ತು ವಿನ್ಯಾಸದ ತಪು್ಪ ಕಲ್ಪನೆಗಳು: ಇತ್ತೀಚೆಗೆ ವಾಸ್ತು ತಜ್ಞರೆನಿಸಿಕೊಂಡಿರುವವರು ಕೇವಲ ಮನೆಯ ಸೌಂದರ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆಯೇ ಹೊರತು ನೈಜ ವಾಸ್ತು ಉಪಯೋಗಕ್ಕೆ ಅನುಗುಣವಾದ ವಿನ್ಯಾಸವನ್ನು ಮಾಡುವ ಪರಿಣತಿ ಹೊಂದಿಲ್ಲ. ಇದಕ್ಕೆ ಕಾರಣ ಇಂದಿನ ಶೈಕ್ಷಣಿಕ ವಿಧಾನವೂ ಇರಬಹುದು. ಉದಾಹರಣೆಗೆ ಯಾವುದೇ ಮನೆಯನ್ನು ನಿರ್ವಿುಸುವಾಗ ನಿಗದಿತವಾಗಿ ವಿನ್ಯಾಸಗೊಳಿಸಿ ಕಟ್ಟಡದಿಂದ ಕಟ್ಟಡಕ್ಕೆ ಕೇವಲ ಒಳಾಂಗಣ ಮತ್ತು ಹೊರಾಂಗಣ ಅಲಂಕಾರವನ್ನು ಮಾತ್ರ ಬದಲಿಸಿ ವಾಸ್ತು ವಿನ್ಯಾಸದಲ್ಲೂ ರೆಡಿಮೇಡ್ ಮಾದರಿ ಅನುಸರಿಸುತ್ತಿರುವುದರಿಂದ ವಾಸ್ತು ಉದ್ದೇಶ ಸಫಲವಾಗುತ್ತಿಲ್ಲ.

ವಾಸ್ತು ವಿನ್ಯಾಸವನ್ನು ತಾಂತ್ರಿಕ ವಿಷಯವೆಂಬಂತೆ ಪರಿಗಣಿಸುತ್ತಿದ್ದಾರೆ. ಎಷ್ಟೋ ಇಂಜಿನಿಯರ್​ಗಳು ಮನೆಯ ವಾಸ್ತು ವಿನ್ಯಾಸವನ್ನು ರಚಿಸಿಕೊಡುತ್ತಿದ್ದಾರೆ. ವಾಸ್ತು ಬಗ್ಗೆ ಯಾವುದೇ ಗಂಧ- ಗಾಳಿ ಇಲ್ಲದ ತಾಂತ್ರಿಕ ಶಿಕ್ಷಣವನ್ನಷ್ಟೇ ಪಡೆದ ವ್ಯಕ್ತಿಗಳು ವಾಸ್ತು ವಿನ್ಯಾಸ ಮಾಡುತ್ತಿರುವುದು; ಒಬ್ಬ ಪೊಲೀಸ್ ಅಧಿಕಾರಿ ರೋಗಿಯೋರ್ವನಿಗೆ ಶಸ್ತ್ರಚಿಕಿತ್ಸೆ ಮಾಡಿದರೆ ಯಾವ ಫಲಿತಾಂಶ ಬರಬಹುದೋ ಅದಕ್ಕಿಂತ ಭಿನ್ನವಲ್ಲ. ಇಂತಹ ಅಚಾತುರ್ಯದ ಕೆಲಸಕ್ಕೆ ಸರ್ಕಾರ ಕೂಡ ಅನುಮತಿ ನೀಡಿ, ಎಷ್ಟೋ ಸರ್ಕಾರಿ ಕಟ್ಟಡಗಳ ವಾಸ್ತು ವಿನ್ಯಾಸ ಮಾಡುವಂತೆ ಇಂಜಿನಿಯರ್​ಗಳಿಗೆ ಸೂಚನೆ ನೀಡುತ್ತಿರುವುದು ಬಹುದೊಡ್ಡ ತಪ್ಪು.

ಸರಿಯಾದ ವಾಸ್ತುಕ್ರಮದ ಅರಿವು ಅಗತ್ಯ: ವಾಸ್ತು ವಿನ್ಯಾಸದ ಅಳವಡಿಕೆಯಲ್ಲಿ ತಪ್ಪು ಕ್ರಮಗಳನ್ನು ಪರಿತ್ಯಜಿಸಿ ಪವಿತ್ರ ಮತ್ತು ಪರಿಶುದ್ಧ ವಿಧಾನಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ವಾಸಿಸುವ ವ್ಯಕ್ತಿಗಳ ಅಭ್ಯುದಯವನ್ನು ಕಾಣಲು ಸಾಧ್ಯ. ಪಂಚಮಹಾಭೂತಗಳನ್ನು ಆಧರಿಸಿ ಮನುಷ್ಯನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ನಿರ್ಣಯವಾಗುವುದರಿಂದ ಆ ಪಂಚ ಮಹಾಭೂತಗಳನ್ನು ಬಳಸಿಕೊಳ್ಳುವಲ್ಲಿ ವಾಸ್ತು ವಿನ್ಯಾಸವೇ ಪ್ರಮುಖವಾದುದು. ಒಂದು ಮನೆಯಲ್ಲಿನ ಸದಸ್ಯರ ರಜೋ, ತಮೋ ಮತ್ತು ಸತ್ವಗುಣಗಳಿಗೆ ಅನುಗುಣವಾದ ವಿನ್ಯಾಸವನ್ನು ಮಾಡಬೇಕು. ಮನೆಯ ಯಜಮಾನ, ಗೃಹಿಣಿ, ಮಕ್ಕಳು, ಕೆಲಸದವರು ಎಲ್ಲರಿಗೂ ಒಂದೇ ಶಕ್ತಿ ಸಂಚಯವನ್ನು ನಿರ್ಣಯಿಸಲು ಸಾಧ್ಯವಿಲ್ಲ. ಆದ್ದರಿಂದ ಅವರವರ ಜವಾಬ್ದಾರಿ ಮತ್ತು ಕಾರ್ಯಕ್ಕನುಗುಣವಾಗಿ ಕೋಣೆಗಳನ್ನು ವಿನ್ಯಾಸಗೊಳಿಸಬೇಕು.

ವಾಸ್ತು ವಿನ್ಯಾಸಕ್ಕೆ ಪ್ರಮುಖ ಆಧಾರ ದಿಕ್ಕುಗಳು. ಮನುಷ್ಯನ ಬದುಕಿಗೆ ಪ್ರಕೃತಿ ಆಧಾರ, ಪ್ರಕೃತಿಗೆ ಸೂರ್ಯ ಆಧಾರ. ಒಂದು ಖಾಲಿ ನಿವೇಶನಕ್ಕೆ ದಿಕ್ಕು ಪರಿಣಾಮಕಾರಿಯಾಗಿರುವುದಿಲ್ಲ. ಆದರೆ ಅದೇ ಸ್ಥಳದಲ್ಲಿ ಒಂದು ಕಟ್ಟಡ ನಿರ್ವಿುಸುವಾಗ ಅಲ್ಲಿ ದಿಕ್ಕು ಮುಖ್ಯವಾಗುತ್ತದೆ. ಆ ದಿಕ್ಕುಗಳನ್ನು ಆಧರಿಸಿ ವಾಸ್ತು ವಿನ್ಯಾಸ ರಚನೆಯಾಗುತ್ತದೆ. ವಾಸ್ತು ಪರಿಗಣನೆಗೆ ಉತ್ತರ ದಿಕ್ಕು ಮುಖ್ಯವಾದುದು. ಹೆಸರೇ ಹೇಳುವಂತೆ ಹಲವು ಪ್ರಶ್ನೆ, ಸಮಸ್ಯೆಗಳಿಗೆ ಇದು ಉತ್ತರವಾಗಿದೆ. ಉತ್ತರವನ್ನಾಧರಿಸಿ ವಿನ್ಯಾಸಗೊಳ್ಳುವ ವಾಸ್ತು ಸೂತ್ರವನ್ನು ವಿದೇಶಿಗರು ಇತ್ತೀಚೆಗೆ ಕಂಡುಕೊಂಡಿದ್ದಾರೆ. ಆದರೆ ಭಾರತೀಯರು ಬಹು ಪ್ರಾಚೀನ ಕಾಲದಲ್ಲಿಯೇ ಇದನ್ನು ಸಂಶೋಧಿಸಿ ಕೊಟ್ಟಿದ್ದಾರೆ.

4 ದಿಕ್ಕು ಹಾಗೂ ವಿಭಾಗಗಳಲ್ಲಿನ ಚೈತನ್ಯದ ಪ್ರಮಾಣ ವಿಭಿನ್ನವಾಗಿರುತ್ತದೆ. ಆಯಾ ಸ್ಥಳದಲ್ಲಿ ನಡೆಯುವ ಕಾರ್ಯಗಳಿಗೆ ಅನುಗುಣವಾಗಿ ವಾಸ್ತು ವಿನ್ಯಾಸಗೊಳಿಸಬೇಕು. ಉದಾಹರಣೆಗೆ ಮಕ್ಕಳ ಶಿಕ್ಷಣಕ್ಕಾಗಿ ಈಶಾನ್ಯದಿಂದ ಬರುವ ಚೈತನ್ಯಶಕ್ತಿಯು ಅವರ ಜ್ಞಾನವನ್ನು ವೃದ್ಧಿಸುತ್ತದೆ. ವಾಯುವ್ಯದ ಚೈತನ್ಯಶಕ್ತಿಯು ದೈಹಿಕ ಚಟುವಟಿಕೆಗೆ ಪರಿಣಾಮಕಾರಿಯಾಗಿದೆ. ಆದ್ದರಿಂದ ಆ ಮನೆಯ ಎಲ್ಲ ಕೋನಗಳಿಂದ ಬರುವ ಚೈತನ್ಯವನ್ನು ಅರ್ಥಮಾಡಿಕೊಂಡು ಅದಕ್ಕನುಗುಣವಾಗಿ ವಾಸ್ತು ವಿನ್ಯಾಸ ಮಾಡಿದರೆ; ಅದು ಪರಿಪೂರ್ಣಗೊಳ್ಳುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net