More

    ಅಸ್ತಮಾ -ಸೈನಸೈಟಿಸ್ ನಿವಾರಣೆ ಜಲನೇತಿಯಿಂದ ಸಾಧ್ಯ

    ಯೋಗಕ್ಷೇಮ ಜಲನೇತಿ ಎಲ್ಲರಿಗೂ ಪ್ರಯೋಜನವಾಗುವ ಸರಳಕ್ರಿಯೆ. ನೇತಿಯೆಂದರೆ ಶುದ್ಧೀಕರಿಸು. ನೀರಿನಿಂದ ಮೂಗಿನ ಹೊಳ್ಳೆಗಳ ಶುದ್ಧೀಕರಣ ಕ್ರಿಯೆಗೆ ಜಲನೇತಿ ಎಂದು ಹೆಸರು. ಇದು ಮೂಗಿನ ಮಾರ್ಗಗಳಲ್ಲಿರುವ ಶ್ಲೇಷ್ಮ ಮತ್ತು ಕಲ್ಮಶಗಳನ್ನು ನಿವಾರಿಸಿ ಯಾವುದೇ ಅಡಚಣೆಯಿಲ್ಲದಂತೆ ಗಾಳಿಯು ಪ್ರವಹಿಸುವುದಕ್ಕೆ ಅವಕಾಶ ಮಾಡಿಕೊಡುತ್ತದೆ.

    ಉಸಿರಾಟ ಮಾರ್ಗಕ್ಕೆ ಸಂಬಂಧಿಸಿದ ಅಸ್ತಮಾ, ನ್ಯೂಮೋನಿಯಾ, ಬ್ರಾಂಕೈಟೀಸ್ ಹಾಗೂ ಶ್ವಾಸಕೋಶದ ಕ್ಷಯರೋಗ ತಡೆಗಟ್ಟುತ್ತದೆ ಹಾಗೂ ಸುಧಾರಿಸುತ್ತದೆ. ಇದು ಅಲರ್ಜಿಗಳು, ಶೀತ ಮತ್ತು ಸೈನಸೈಟೀಸ್, ಕಿವಿ, ಕಣ್ಣು ಮತ್ತು ಗಂಟಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು, ದೃಷ್ಟಿ ಮಾಂದ್ಯ, ನೀರು ಸುರಿಯುವಿಕೆ, ಹೇಜ್ವರ, ಮಂದಗಿವಿ, ಗಲಗ್ರಂಥಿಗಳ ಊತ ಮೊದಲಾದುವನ್ನು ನಿವಾರಿಸುತ್ತದೆ. ಜಲನೇತಿಯನ್ನು ಅಭ್ಯಾಸ ಮಾಡಿಸುವುದರಿಂದ ಮಕ್ಕಳು ಬಾಯಲ್ಲಿ ಉಸಿರಾಡುವುದನ್ನು ತಗ್ಗಿಸಬಹುದು.

    ಇದು ಮೆದುಳಿನ ಮೇಲೆ ತಂಪಾದ, ಸಮಾಧಾನದ ಪ್ರಭಾವವನ್ನು ಬೀರುತ್ತದೆ. ಅರೆತಲೆನೋವಿನ ಸಮಸ್ಯೆಯ ಚಿಕಿತ್ಸೆಗೆ ಪ್ರಯೋಜನಕಾರಿ, ಆತಂಕ-ಕೋಪ ಖಿನ್ನತೆಗಳನ್ನು ದೂರಮಾಡುತ್ತದೆ. ತೂಕಡಿಕೆಯನ್ನು ಹೋಗಲಾಡಿಸಿ ತಲೆಯು ಹಗುರಾಗಿ, ಉಲ್ಲಾಸಕರವಾಗಿರುವಂತೆ ಮಾಡುತ್ತದೆ. ಜಲನೇತಿಯು ಮೂಗಿನಲ್ಲಿರುವ ನರಾಂತ್ಯಗಳನ್ನು ಉತ್ತೇಜಿಸುತ್ತದೆ.

    ಎಡ ಹಾಗೂ ಬಲಮೂಗಿನ ಹೊಳ್ಳೆಗಳ ನಡುವೆ ಮತ್ತು ಸಂವಾದಿಯಾದ ಎಡ ಮತ್ತು ಬಲ ಮಿದುಳಿನ ಗೋಳಾರ್ಧಗಳ ನಡುವೆ ಒಂದು ಸಮತೋಲನ ಉಂಟುಮಾಡಿ ಇಡೀ ದೇಹದಾದ್ಯಂತ ಹಾಗೂ ರಕ್ತ ಪರಿಚಲನೆ ಮತ್ತು ಜೀರ್ಣಕ್ರಿಯೆಯನ್ನು ನಿಯಂತ್ರಿಸು ವಂಥ ವ್ಯವಸ್ಥೆಗಳಲ್ಲಿ ಸಾಮರಸ್ಯ ಸ್ಥಿತಿಯನ್ನು ಹಾಗೂ ಸಮತೋಲನವನ್ನು ಉಂಟುಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಆಜ್ಞಾಚಕ್ರವನ್ನು ಜಾಗೃತಗೊಳಿಸಲು ಜಲನೇತಿಯು ನೆರವಾಗುತ್ತದೆ.

    ಪೂರ್ವ ಸಿದ್ಧತೆ: ವಿಶೇಷವಾದ ನೇತಿ ಲೋಟ- ಪಾತ್ರೆಯನ್ನು ಉಪಯೋಗಿಸಿ, ಉಗುರುಬೆಚ್ಚಗಿನ ಅರ್ಧಲೀಟರ್ ನೀರಿನ ಒಂದು ಟೀ ಚಮಚದಷ್ಟು ಉಪ್ಪನ್ನು ಬೆರೆಸಿ ಕಲಕಿ. ಉಪ್ಪನ್ನು ಸೇರಿಸುವುದರಿಂದ ನೀರಿನ ಸೂಕ್ಷಾ್ಮಭಿಸರಣ ಒತ್ತಡವು ಶರೀರದ ದ್ರವಗಳ ಒತ್ತಡಕ್ಕೆ ಸಮವಾಗುತ್ತದೆ. ಹೀಗಾಗಿ ಶ್ಲೇಷ್ಮಪೊರೆಗಳಿಗೆ ಹೆಚ್ಚಿನ ಉರಿ ಅಥವಾ ಕೆರಳಿಕೆ ಆಗುವುದಿಲ್ಲ.

    ಅಭ್ಯಾಸ ಕ್ರಮ: ತಯಾರಿಸಿಟ್ಟುಕೊಂಡ ಉಪ್ಪು ನೀರನ್ನು ನೇತಿಪಾತ್ರೆಗೆ ತುಂಬಿ. ಸರಿಯಾಗಿ ನಿಂತುಕೊಳ್ಳಿ, ಕಾಲುಗಳ ನಡುವೆ ಅಂತರವಿರಲಿ. ಶರೀರದ ಭಾರವು ಎರಡೂ ಪಾದಗಳ ಮೇಲರ ಸಮಾನವಾಗಿರಲಿ. ನಂತರ ಸ್ವಲ್ಪ ಮುಂದಕ್ಕೆ ಬಾಗಿ. ತಲೆಯನ್ನು ಒಂದು ಬದಿಗೆ ಮತ್ತು ಸ್ವಲ್ಪ ಹಿಂದಕ್ಕೆ ವಾಲಿಸಿ. ಬಾಯಿಯ ಮೂಲಕ ಉಸಿರಾಡಲು ಪ್ರಾರಂಭಿಸಿ. ಪಾತ್ರೆಯ ಮೂತಿಯನ್ನು ಮೃದುವಾಗಿ, ಮೇಲಿನ ಮೂಗಿನ ಹೊಳ್ಳೆಗೆ ಹಿತವಾಗಿ ತೂರಿಸಿ. ನೀರು, ಮುಖದಿಂದ ಕೆಳಕ್ಕಿಳಿಯದೆ ಮೂಗಿನ ಹೊಳ್ಳೆಯೊಳಗೆ ಸರಾಗವಾಗಿ ಹರಿಯುವಂತೆ ನೇತಿ ಪಾತ್ರೆಯನ್ನು ವಾಲಿಸಿ.
    ನೀರು ಮೂಗಿನ ಇನ್ನೊಂದು ಹೊಳ್ಳೆಯಿಂದ ಹೊರಬರುವಂತೆ ನೋಡಿಕೊಳ್ಳಿರಿ. ಮೂಗಿನಲ್ಲಿ ಏನಾದರೂ ಶ್ಲೇಷ್ಮವಿದ್ದರೆ ಅದನ್ನೂ ಮೃದುವಾಗಿ ಸೀದಿ ತೆಗೆಯಿರಿ. ತಲೆಯನ್ನು ಇನ್ನೊಂದು ದಿಕ್ಕಿಗೆ ವಾಲಿಸಿ. ನೇತಿ ಪಾತ್ರೆಯ ಮೂತಿಯನ್ನು ಇನ್ನೊಂದು ಕಡೆಯ ಹೊಳ್ಳೆಯೊಳಗಿಟ್ಟು ಕ್ರಿಯೆಯನ್ನು ಪುನರಾವರ್ತಿಸಿರಿ. ಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಮೂಗಿನ ಹೊಳ್ಳೆಗಳಲ್ಲಿ ಯಾವುದೇ ತೇವವಿಲ್ಲದಂತೆ ಚೆನ್ನಾಗಿ ಒಣಗಿಸಬೇಕು.

    ಅವಧಿ: ಈ ಕ್ರಿಯೆಗೆ ಸುಮಾರು 5 ನಿಮಿಷ ತೆಗೆದುಕೊಳ್ಳಬೇಕು. ಯೋಗ ಗುರುಗಳ ಪರಿಣಿತ ಮಾರ್ಗದರ್ಶನದಲ್ಲಿ ಕಲಿತು ಅಭ್ಯಾಸಮಾಡಬೇಕು.

    ನುಕ್ರಮಣಿಕೆ: ಜಲನೇತಿಯನ್ನು ಬೆಳಗಿನ ಹೊತ್ತು, ಯೋಗಾಸನ-ಪ್ರಾಣಾಯಾಮಗಳಿಗೆ ಮೊದಲು ಮಾಡುವುದು ಅತ್ಯಂತ ಸೂಕ್ತ.

    ಮುನ್ನೆಚ್ಚರಿಕೆ: ನೀರು ಮೂಗಿನ ಮೂಲಕ ಹರಿಯಬೇಕು. ನೀರು ಗಂಟಲು ಅಥವಾ ಬಾಯನ್ನೇನಾದರೂ ಪ್ರವೇಶಿಸಿದರೆ ತಲೆಯನ್ನು ಇಟ್ಟಿರುವ ಸ್ಥಿತಿ ಸರಿಯಾಗಿಲ್ಲ. ಅದನ್ನು ಸರಿಯಾಗಿ ಹೊಂದಿಸಿಕೊಳ್ಳಬೇಕು ಎಂದರ್ಥ.

    ವಿಧಿನಿಷೇಧ: ಮೂಗಿನ ರಕ್ತಸ್ರಾವವಿರುವವರು, ಮಾಡಬೇಡಿ.

    ಪ್ರಭೇದಗಳು: ಹಠಯೋಗಿಗಳು ನೀರಿನ ಬದಲಾಗಿ ಹಾಲು- ದುಗ್ಧನೇತಿ, ತುಪ್ಪ-ಘೃತನೇತಿ, ಅಮರೋಲಿ- ಸ್ವಮೂತ್ರನೇತಿ ಅಭ್ಯಾಸ ಮಾಡುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts