More

    ಗ್ರಾಪಂ ಸದಸ್ಯರ ಮೇಲೆ ಹಲ್ಲೆ

    ಯಲ್ಲಾಪುರ: ತಾಲೂಕಿನ ಮದನೂರು ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿಷಯಕ್ಕೆ ಸಂಬಂಧಿಸಿ ಗ್ರಾಪಂನ ಮೂವರು ಸದಸ್ಯರು ಹಾಗೂ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ಕಲಘಟಗಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

    ಗ್ರಾಪಂ ಸದಸ್ಯರಾದ ವಿಠ್ಠು ಶೆಳಕೆ, ಲಕ್ಕು ಗಾವಡೆ, ಬಾಪು ತಾಟೆ ಹಾಗೂ ಸೋಮು ಜಂಗ್ಲೆ ಹಲ್ಲೆಗೊಳಗಾದವರು.

    ಮದನೂರು ಗ್ರಾಪಂನ ಎಲ್ಲ 13 ಸದಸ್ಯರು ಬಿಜೆಪಿ ಬೆಂಬಲಿತರಾಗಿದ್ದು, ಅವರಲ್ಲಿ 6 ಸದಸ್ಯರು ಗೌಳಿ ಸಮುದಾಯದವರಿದ್ದಾರೆ. ಅಧ್ಯಕ್ಷ ಸ್ಥಾನ ಅ ವರ್ಗದ ಮಹಿಳೆಗೆ ಮೀಸಲಾತಿ ಬಂದಿರುವುದರಿಂದ ತಮ್ಮ ಸಮುದಾಯದವರೇ ಅಧ್ಯಕ್ಷರಾಗಲಿ ಎಂಬ ಯೋಜನೆ ಅವರದಾಗಿತ್ತು. ಅದಕ್ಕಾಗಿ ಮರಾಠಿ ಸಮುದಾಯದ ಇನ್ನೊಬ್ಬ ಸದಸ್ಯನ ನೆರವಿನಿಂದ ಗೌಳಿ ಸಮುದಾಯದವರನ್ನೇ ಅಧ್ಯಕ್ಷರನ್ನಾಗಿ ಮಾಡುವ ನಿರ್ಣಯಕ್ಕೂ ಬರಲಾಗಿತ್ತು.

    ಸಚಿವರ ಆಪ್ತರೊಬ್ಬರ ಸಲಹೆಯಂತೆ ಬೇರೆಯವರನ್ನು ಅಧ್ಯಕ್ಷರನ್ನಾಗಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂಬ ವಿಷಯ ತಿಳಿದು ಸದಸ್ಯರಾದ ವಿಠ್ಠು ಬೊಮ್ಮು ಶೆಳಕೆ, ಲಕ್ಕು ಗಾವಡೆ, ಬಾಪು ತಾಟೆ ಅವರ ಮೇಲೆ ಒತ್ತಡ ಬರಬಾರದೆಂಬ ಹಿನ್ನೆಲೆಯಲ್ಲಿ ಕಾರ್ಯಕರ್ತ ಸೋನು ಜಂಗ್ಲೆ ಬೇರೆಡೆ ಕರೆದೊಯ್ಯುತ್ತಿದ್ದರು. ಈ ವೇಳೆ ಕಲಘಟಗಿ ಬಳಿ ಊಟ ಮಾಡುತ್ತಿದ್ದಾಗ ಕಿರವತ್ತಿ ಹಾಗೂ ಕಲಘಟಗಿಯ ಕೆಲವರು ಹಲ್ಲೆ ನಡೆಸಿದ್ದಾರೆ ಎಂದು ವಿಠ್ಠು ಶೆಳಕೆ ವಿಡಿಯೋ ಮೂಲಕ ಹೇಳಿಕೆ ನೀಡಿದ್ದಾರೆ.

    ವಿಠ್ಠು ಶೆಳಕೆ, ಬಾಪು ತಾಟೆ ಹಾಗೂ ಇವರನ್ನು ಕರೆದೊಯ್ಯುತ್ತಿದ್ದ ಕಾರ್ಯಕರ್ತ ಸೋಮು ಜಂಗ್ಲೆ ಗೆ ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಕ್ಕು ಗಾವಡೆ ಎಂಬಾತನಿಗೆ ಕೊಲೆ ಬೆದರಿಕೆ ಹಾಕಿ ಕಾರಿನಲ್ಲಿ ಕರೆದೊಯ್ದಿದ್ದಾರೆ ಎಂದು ಗೌಳಿಗರು ಆರೋಪಿಸುತ್ತಿದ್ದಾರೆ.

    ಕಿರವತ್ತಿಯಲ್ಲಿ ಪ್ರತಿಭಟನೆ: ಹಲ್ಲೆ ಖಂಡಿಸಿ ಕಿರವತ್ತಿಯಲ್ಲಿ ಗೌಳಿ ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಿದರು. ಮದನೂರು ಗ್ರಾ.ಪಂ. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಂದೂಡಬೇಕು. ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

    ಸಮುದಾಯದ ಮುಖಂಡರಾದ ದೋಂಡು ಪಾಟೀಲ, ವಿಠ್ಠಲ ಪಾಂಡ್ರಮೀಸೆ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕಾರ, ಪ್ರಧಾನ ಕಾರ್ಯದರ್ಶಿ ಪ್ರಸಾದ ಹೆಗಡೆ, ಉಪಾಧ್ಯಕ್ಷ ವೆಂಕಟ್ರಮಣ ಬೆಳ್ಳಿ, ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ಯಲ್ಲಾಪುರಕರ, ಪ.ಪಂ. ಸದಸ್ಯ ಸೋಮು ನಾಯ್ಕ, ಜಿ.ಪಂ. ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಇತರರು ಭಾಗವಹಿಸಿ ಬೆಂಬಲ ನೀಡಿದರು.

    ನಾನು ಸುರಕ್ಷಿತ; ಅಪಹರಣಕ್ಕೊಳಗಾಗಿದ್ದಾರೆ ಎನ್ನಲಾದ ಗ್ರಾ.ಪಂ. ಸದಸ್ಯ ಲಕ್ಕು ಗಾವಡೆ ವಿಡಿಯೋ ಮೂಲಕ ತಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಿದ್ದಾರೆ. ಪಕ್ಷದ ನಿರ್ಣಯಕ್ಕೆ ಬದ್ಧ ಎಂದು ಹೇಳಿದರೂ ಒತ್ತಾಯಪೂರ್ವಕವಾಗಿ ವಿಠ್ಠು ಶೆಳಕೆ ಹಾಗೂ ಇತರರು ಮನೆಗೆ ನುಗ್ಗಿ ನನ್ನನ್ನು ಎಳೆದೊಯ್ದಿದ್ದು, ಕಲಘಟಗಿಯಲ್ಲಿ ಹಲ್ಲೆ ಹಾಗೂ ಜಗಳ ನಡೆಯುತ್ತಿದ್ದ ವೇಳೆ ಸ್ಥಳೀಯರ ನೆರವಿನಿಂದ ಪಾರಾಗಿ ಬಂದಿದ್ದೇನೆ. ನನಗೇನೂ ಅಪಾಯವಾಗಿಲ್ಲ. ನಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾನೆ.

    ಎಂಎಲ್​ಸಿ ಖಂಡನೆ: ಗ್ರಾ.ಪಂ. ಸದಸ್ಯರ ಮೇಲಿನ ಹಲ್ಲೆಯನ್ನು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಖಂಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಹಲ್ಲೆ ನಡೆಸಿದ್ದು ಖಂಡನೀಯ. ತಪ್ಪಿತಸ್ಥರು ಯಾರೇ ಆದರೂ ಅವರ ವಿರುದ್ಧ ಕಾನೂನು ಕ್ರಮ ಆಗಬೇಕೆಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts