More

    ಸೂಕ್ತ ಪ್ರಶ್ನೆಗಳನ್ನು ಕೇಳುವುದೂ ಮುಖ್ಯ

    ಅಜ್ಜಂಪುರ: ಗೋಷ್ಠಿಯಲ್ಲಿ ಮಾತನಾಡುವುದೇ ಮುಖ್ಯವಲ್ಲ, ಮಾತುಗಳನ್ನು ಕೇಳಿ ಸೂಕ್ತ ಪ್ರಶ್ನೆಗಳನ್ನೂ ಕೇಳಬೇಕು ಎಂದು ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಸಾಣೇಹಳ್ಳಿ ಶಿವಕುಮಾರ ರಂಗಮಂದಿರದಲ್ಲಿ ಶಿವಕುಮಾರ ಹಿರಿಯ ಪ್ರಾಥಮಿಕ ಶಾಲೆ ಶುಕ್ರವಾರ ಆಯೋಜಿಸಿದ್ದ ತರಳಬಾಳು ಗುರು ಪರಂಪರೆ ಕುರಿತ ದಂದಣ ದತ್ತಣ ಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಸಿರಿಗೆರೆಯಲ್ಲಿ ದಂದಣ ದತ್ತಣ ಗೋಷ್ಠಿಯನ್ನು ಶ್ರೀ ಶಿವಕುಮಾರ ಶ್ರೀಗಳು ಪ್ರಾರಂಭಿಸಿದರು. ಆಗ ಅದರಲ್ಲಿ ನಾವೆಲ್ಲರೂ ಬಹಳ ಉತ್ಸಾಹದಿಂದ ಭಾಗವಹಿಸುತ್ತಿದ್ದೆವು ಎಂದರು.
    ರಾಜ್ಯದಲ್ಲಿ ಅನೇಕ ಮಠಗಳಿದ್ದರೂ ತರಳಬಾಳು ಮಠಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಇದಕ್ಕೆ ಕಾರಣ ಮಠ ಜನರ ನಡುವೆ ಬೆಳೆದು ಬಂದಿದ್ದು. ಮಠದ ಮೂಲಪುರುಷ ಮರುಳಸಿದ್ಧರು ಮಾದಿಗ ಜನಾಂಗದಲ್ಲಿ ಜನಿಸಿದರೂ ಸಾಮಾಜಿಕ ಕಳಕಳಿ, ಸಾರ್ವಜನಿಕ ಹಿತಾಸಕ್ತಿ, ಬೌದ್ಧಿಕ ಚಿಂತನೆಗಳ ಮೂಲಕ ವಿಶ್ವಬಂಧು ಎನ್ನುವ ಗೌರವಕ್ಕೆ ಪಾತ್ರರಾದರು ಎಂದು ತಿಳಿಸಿದರು.
    ಸಾಹಿತಿ ಚಂದ್ರಶೇಖರ ತಾಳ್ಯ ಮಾತನಾಡಿ, ಶಿವಕುಮಾರ ಸ್ವಾಮೀಜಿ ಮೊದಲ ಬಾರಿಗೆ ಸಿರಿಗೆರೆಯಲ್ಲಿ ದಂದಣ ದತ್ತಣ ಗೋಷ್ಠಿ ಆರಂಭಿಸಿದರು. ಅಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದ ನಾನೂ ಆ ಗೋಷ್ಠಿಯಿಂದಲೇ ಪ್ರೇರಣೆಗೊಂಡವನು. ಅವರಿಗೆ ಇಂಥ ಗೋಷ್ಠಿಯನ್ನು ಆರಂಭಿಸಲು ಪ್ರೇರಣೆಯಾಗಿದ್ದು ಬಸವಣ್ಣನವರ ಆಳಿಗೊಂಡಿಹನೆಂದು ಅಂಜಲದೇಕೆ ಎನ್ನುವ ವಚನ. ಅವರು ನಮ್ಮಂಥ ಯುವಜನರನ್ನು ಹುರಿದುಂಬಿಸುತ್ತಿದ್ದ ಪರಿ ಅನನ್ಯವಾದುದು ಎಂದರು.
    ಶಿವಕುಮಾರ ಸ್ವಾಮೀಜಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಸಿ.ಕೆ.ಸ್ವಾಮಿ ಮಾತನಾಡಿ, ಗೋಷ್ಠಿಯಲ್ಲಿ ಮಕ್ಕಳು ಭಾಗವಹಿಸುವುದರಿಂದ ಮಾತನಾಡುವ ಕಲೆ ಕರಗತ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
    ಎಂ.ಪ್ರತೀಕ್ಷಾ, ವಿ.ಧನುಶ್ರೀ, ಕೆ.ಚಂದನ, ಆರ್.ನೂತನ್, ಎಸ್.ಎಸ್.ಮಲ್ಲಿಕಾರ್ಜುನ, ನಿಖಿಲ್, ಪಿ.ಮಲ್ಲಿಕಾರ್ಜುನ ತರಳಬಾಳು ಗುರುಪರಂಪರೆ ಕುರಿತು ಸುದೀರ್ಘವಾಗಿ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts