More

    ಬೇಸಿಗೆ ಶಿಬಿರ ಮೋಜಿನ ಆಗರ; ರಜೆಯ ಬೇಸರಕ್ಕೆ ಶಿಬಿರದ ಮೋಜು

    -ಎನ್. ಗುರುನಾಗನಂದನ

    ಮಕ್ಕಳಿಗೆ ಪರೀಕ್ಷೆ ಮುಗಿದಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಬೇಸಿಗೆ ರಜೆಯೂ ಶುರುವಾಗಿದೆ. ಶಾಲೆಗೆ ಹೋಗುವಂತಿಲ್ಲ, ಹೋಂವರ್ಕ್ ಗೋಜಿಲ್ಲ, ಕೇವಲ ಮಜಾ ಮಾಡೋದಷ್ಟೇ. ಈ ಬೇಸಿಗೆ ರಜೆಯ ಮೋಜಿನಲ್ಲಿ ಜೀವನಕ್ಕೆ ಬೇಕಾದ ಕೌಶಲಗಳನ್ನು ಕಲಿಸಿ ಮಜವನ್ನು ಇಮ್ಮಡಿಗೊಳಿಸುವ ಅದ್ಭುತವಾದ ಮಾರ್ಗ ಬೇಸಿಗೆ ಶಿಬಿರ. ಸುಮ್ಮನೆ ಮನೆಯಲ್ಲಿ ಟಿವಿ, ಮೊಬೈಲ್ ಜತೆ ಕಾಲ ಕಳೆಯುವ ಬದಲು ಬಗೆಬಗೆಯ ಚಟುವಟಿಕೆಗಳಲ್ಲಿ ಮಗುವನ್ನು ತೊಡಗಿಸಲು ಬೇಸಿಗೆ ಶಿಬಿರ ಒಂದೊಳ್ಳೆ ಅವಕಾಶ.

    ಮಕ್ಕಳಿಗೆ ಬೇಸಿಗೆ ಶಿಬಿರ ವಿವಿಧ ಆಸಕ್ತಿಗಳನ್ನು ಹೆಚ್ಚಿಸಿಕೊಳ್ಳಲು ಅನುವು ಮಾಡಿ ಕ್ರಿಯಾಶೀಲತೆ ಹೆಚ್ಚಿಸುತ್ತದೆ. ಅಂದಹಾಗೆ ಬೇಸಿಗೆ ಶಿಬಿರ ಬಹಳ ವೈವಿಧ್ಯತೆಗಳಿಂದ ಕೂಡಿದ್ದು, ಸಂಗೀತ, ಜಾನಪದ ಕಲೆ, ಚಿತ್ರಕಲೆ, ಕಥೆ ಹೇಳುವುದು, ಪೇಪರ್ ಕ್ರಾಫ್ಟ್, ಅಭಿನಯ, ನಾಟಕ, ನೃತ್ಯ, ಟೆಕ್ನಾಲಜಿ ಮುಂತಾದ ಹಲವಾರು ವಿಷಯಗಳನ್ನು ಪರಿಚಯ ಮಾಡಿಸುತ್ತದೆ. ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಹತ್ತಾರು ಮಕ್ಕಳ ಜತೆ ಹೊಂದಿಕೊಂಡು ಒಂದು ತಂಡದದಂತೆ ಕೆಲಸ ಮಾಡುವ ಕೌಶಲವನ್ನು ಕಲಿಸುತ್ತದೆ. ಮಗುವಿನ ಆತ್ಮವಿಶ್ವಾಸ ಹೆಚ್ಚಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ಬೇಸಿಗೆ ಶಿಬಿರದ ವಾತಾವರಣ ಮೋಜಿನಿಂದ ತುಂಬಿರುತ್ತದೆ. ಆಟದ ಮೂಲಕ ಪಾಠ ಹೇಳುವುದೇ ಬೇಸಿಗೆ ಶಿಬಿರದ ಉದ್ದೇಶ. ಮಗುವಿಗೆ ಅನೇಕ ಹೊಸ ವಿಷಯಗಳ ಬಗ್ಗೆ ರುಚಿ ಹೆಚ್ಚಿಸಿಕೊಳ್ಳಲು ದಾರಿ ಮಾಡಿಕೊಡುತ್ತದೆ. ಹತ್ತಾರು ವಿಷಯಗಳ ಪರಿಚಯವಾಗುವುದರಿಂದ ಮಗುವಿಗೆ ಯಾವುದರಲ್ಲಿ ಹೆಚ್ಚಿನ ಆಸಕ್ತಿ ಇದೆಯೆಂದು ತಿಳಿಯುತ್ತದೆ. ಅದರಿಂದ ಯಾವ ಕ್ಷೇತ್ರದಲ್ಲಿ ಮಗುವಿಗೆ ಶಿಕ್ಷಣ ನೀಡಬೇಕೆಂದು ನಿರ್ಧರಿಸಲು ಸಹ ಸುಲಭವಾಗುತ್ತದೆ.

    • ಮಾನಸಿಕ ಬೆಳವಣಿಗೆಗೆ ಸಹಾಯಕಾರಿ

    ಮಗುವಿನ ಸಾಮಾಜಿಕ ನಡವಳಿಕೆ ರೂಪಿಸಲು ಬೇಸಿಗೆ ಶಿಬಿರ ಒಂದೊಳ್ಳೆ ಜಾಗ. ಶಿಬಿರದಲ್ಲಿ ಮಗು ಹತ್ತಾರು ಸಮಾನ ವಯಸ್ಕರ ಜತೆ ಬೆರೆಯುತ್ತದೆ. ಇದರಿಂದ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಶಿಬಿರದಲ್ಲಿನ ಚಟುವಟಿಕೆಗಳು ಜೀವನಕ್ಕೆ ಅತಿ ಅವಶ್ಯಕವಿರುವ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಿಸುತ್ತದೆ. ಹೊಸ ವಾತಾವರಣದಲ್ಲಿ ಅಪರಿಚಿತರ ಜತೆ ಕಾಲ ಕಳೆಯುವುದರಿಂದ ಮಗುವಿನ ಸೋಷಿಯಲೈಸೇಶನ್ ಮತ್ತು ಸಂಬಂಧ ಬೆಳೆಸಿಕೊಳ್ಳುವ ಕೌಶಲವನ್ನು ವೃದ್ಧಿ ಮಾಡುತ್ತದೆ. ಇದರೊಂದಿಗೆ ನಾಯಕತ್ವದ ಗುಣವನ್ನು ಬೆಳೆಸುವಲ್ಲಿ ಸಹಕಾರಿ. ಹತ್ತು ಜನರ ನಡುವೆ ತನ್ನನ್ನು ತಾನು ಹೇಗೆ ಗುರುತಿಸಿಕೊಳ್ಳಬೇಕೆಂದು ಶಿಬಿರ ಕಲಿಸುತ್ತದೆ.

    • ಆಯ್ಕೆ ಬಹಳ ಮುಖ್ಯ

    ಒಳ್ಳೆಯ ಬೇಸಿಗೆ ಶಿಬಿರ ಹುಡುಕುವುದು ಬಹಳ ಮುಖ್ಯ. ಮಗುವಿಗೆ ಇಷ್ಟವಿಲ್ಲದ, ಸಮಾನ ವಯಸ್ಕರಿಲ್ಲದ ಶಿಬಿರಕ್ಕೆ ಸೇರಿಸಿಸುವುದರಿಂದ ಪ್ರಯೋಜನವಿಲ್ಲ. ಮಗುವಿನ ವಯಸ್ಸಿಗೆ ಸರಿಯಾದ ಬೇಸಿಗೆ ಶಿಬಿರ ಆಯ್ಕೆ ಮಾಡಬೇಕು. ಮಗುವಿಗೆ ಯಾವ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿ ಇದೆಯೆಂದು ಗಮನಿಸಿ ಅದಕ್ಕೆ ಸಂಬಂಧ ಪಟ್ಟ ಶಿಬಿರಕ್ಕೆ ಕಳಿಸಬೇಕು. ಕೆಲವು ಬೇಸಿಗೆ ಶಿಬಿರಗಳು ಮಕ್ಕಳಿಗೆ ಒಗ್ಗುವುದಿಲ್ಲ. ಮಗುವಿನ ಆಸಕ್ತಿಗೆ ಅನುಗುಣವಾಗಿ ಶಿಬಿರವನ್ನು ಆಯ್ಕೆ ಮಾಡಬೇಕು. ಕಲೆ, ಟೆಕ್ನಾಲಜಿ, ಕ್ರೀಡೆ ಮುಂತಾದ ಹಲವಾರು ವಿಷಯಗಳ ಕುರಿತ ಬೇಸಿಗೆ ಶಿಬಿರಗಳಿವೆ. ಇದರೊಂದಿಗೆ ಬೆಲೆಯನ್ನು ಪರಿಗಣಿಸಿ ಆಯ್ಕೆ ಮಾಡಬೇಕು.

    • ಉಚಿತ ಶಿಬಿರ

    ಹಲವಾರು ಉಚಿತ ಬೇಸಿಗೆ ಶಿಬಿರ ಕೂಡ ಲಭ್ಯವಿದೆ. ಬೇಸಿಗೆ ಶಿಬಿರ ಹುಡುಕುವಾಗ ಗಮನ ನೀಡಬೇಕಾದ ಮತ್ತೊಂದು ಅಂಶವೆಂದರೆ ಮನೆಗೆ ಮತ್ತು ಶಿಬಿರ ನಡೆಯುವ ಸ್ಥಳಕ್ಕೆ ಇರುವ ಅಂತರ. ಏಕೆಂದರೆ ಪ್ರಯಾಣದಲ್ಲೇ ಹೆಚ್ಚಿನ ಸಮಯ ಕಳೆದುಹೋಗಬಾರದು. ಓಡಾಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಅವಶ್ಯಕ. ಇಲ್ಲದಿದ್ದರೆ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೇಸಿಗೆ ಶಿಬಿರ ಮಗುವಿನ ಬೆಳವಣಿಗೆಗೆ ಸಹಾಯ ಮಾಡಬೇಕು, ಖುಷಿ ಸಿಗಬೇಕು. ಬೇಸಿಗೆ ರಜೆ ಮೋಜಿನಿಂದ ಕೂಡಿರಬೇಕು ಆಗ ಮಾತ್ರ ಸಾರ್ಥಕವಾಗುತ್ತದೆ.

     

    ಸ್ಟಾರ್​ ನಟಿ ಪಟ್ಟ ಕಳೆದುಕೊಂಡ ಬಳಿಕ ಬದಲಾದ ಸಮಂತಾ: ತೆಲುಗು ನಿರ್ಮಾಪಕನ ಸ್ಪೋಟಕ ಹೇಳಿಕೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts