More

    ಸಶಸ್ತ್ರ ಕ್ರಾಂತಿಯ ಪಿತಾಮಹ, ಆದ್ಯ ಕ್ರಾಂತಿಕಾರಿ ವಾಸುದೇವ ಫಡಕೆ

    ಸಶಸ್ತ್ರ ಕ್ರಾಂತಿಯ ಪಿತಾಮಹ, ಆದ್ಯ ಕ್ರಾಂತಿಕಾರಿ ವಾಸುದೇವ ಫಡಕೆ| ಆದರ್ಶ ಗೋಖಲೆ ಕಾರ್ಕಳ
    1857ರ ಸ್ವಾತಂತ್ರ್ಯ ಸಮರದ ಬಳಿಕ ದಾಸ್ಯಮುಕ್ತಿಯ ಯೋಚನೆಯನ್ನೇ ಮರೆತವರಂತೆ ಮಲಗಿದ್ದ ಭಾರತೀಯರನ್ನು ತನ್ನ ವೀರವಾಣಿಯಿಂದ ಬಡಿದೆಚ್ಚರಿಸಿದ ಆದ್ಯ ಕ್ರಾಂತಿಕಾರಿ ವಾಸುದೇವ ಫಡಕೆ ಮಹಾರಾಷ್ಟ್ರದ ಶಿರಡೋಣದ ಬಲವಂತ ರಾವ್ ಫಡಕೆ-ಸರಸ್ವತಿಬಾಯಿಯರ ಮಗನಾಗಿ 1845ರ ನವೆಂಬರ್ ನಾಲ್ಕರಂದು ಜನಿಸಿದ. ಸಶಸ್ತ್ರ ಕ್ರಾಂತಿಯ ಪಿತಾಮಹ ವಾಸುದೇವ ಫಡಕೆ, ಕಾಡುಮೇಡುಗಳಲ್ಲಿ ಅಲೆದು ಸೈನ್ಯನಿರ್ವಿುಸಿ ಸ್ವರಾಜ್ಯದ ದೀಕ್ಷೆತೊಟ್ಟ ರಾಷ್ಟ್ರಸಂತ.

    ಅನಾರೋಗ್ಯಕ್ಕೀಡಾದ ತಾಯಿಯ ಭೇಟಿಗೆ ರಜೆ ನೀಡದೆ ಸತಾಯಿಸಿದ ಅಧಿಕಾರಿಯನ್ನು ಧಿಕ್ಕರಿಸಿ ಕಷ್ಟಪಟ್ಟು ಊರು ಸೇರಿದ ಫಡಕೆ ಕಂಡದ್ದು ಅಮ್ಮನ ಬೂದಿಯನ್ನು. ಹೆತ್ತ ತಾಯಿಯ ಬಾಯಿಗೆ ಗುಟುಕು ಗಂಗಾಜಲವೀಯುವ ಅವಕಾಶ ಕಸಿದ ಬ್ರಿಟಿಷ್ ಆಧಿಪತ್ಯದ ಮರಣಶಾಸನ ಮುಹೂರ್ತ ಬರೆದು ಗೆಲುವಿನ ಪಾಂಚಜನ್ಯ ಮೊಳಗಿಸಿ ಊರೂರಿಗೆ ತೆರಳಿ ತಮಟೆ ಹಿಡಿದು ಜನಜಾಗೃತಿಗೈದ ಫಡಕೆಯ ಪ್ರಖರ ದೇಶಪ್ರೇಮದ ಮಾತುಗಳಿಗೆ ಜನರ ಕಿವಿ ನೆಟ್ಟಗಾಯಿತು. ಆಕಸ್ಮಿಕವಾಗಿ ಅಗಲಿದ ಪತ್ನಿಯ ಸಾವಿನ ನೋವು ಒಂದೆಡೆಯಾದರೆ, ಪುಟ್ಟ ಮಗುವಿನ ಲಾಲನೆಪಾಲನೆ, ಕಾಳಜಿಯ ಜವಾಬ್ದಾರಿ ಇನ್ನೊಂದೆಡೆ. ತುಂಬು ಮನೆತನದ ಗೋಪಿಕಾಬಾಯಿಯನ್ನು ವಿವಾಹವಾದ ಫಡಕೆಯವರ ಕ್ರಾಂತಿಸಸಿಗೆ ನೀರೆರೆದ ಪತ್ನಿ ತನ್ನ ಆಭರಣಗಳನ್ನು ಕ್ರಾಂತಿಕಾರ್ಯಕ್ಕೆ ಧಾರೆಯೆರೆದಳು.

    ಬಗ್ಗಿದರೆ ಗುದ್ದು ಜಾಸ್ತಿಯೆಂದರಿತು ಎದೆಯುಬ್ಬಿಸಿ ನಿಂತು ಹಿಮಾಲಯದಂತೆ ಗಂಭೀರರಾದ ವಾಸುದೇವ, ‘ಕಾನೂನಾತ್ಮಕವಾಗಿ ಬ್ರಿಟಿಷರ ಶಾಸನ, ನ್ಯಾಯಾಲಯಗಳನ್ನು ಮೀರಿ ನಿಲ್ಲುವುದು ಅಸಾಧ್ಯ. ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳದಿದ್ದರೆ ಆಂಗ್ಲರ ಅವಸಾನ ಕಷ್ಟಕರ. ಒಡಕು ಸೃಷ್ಟಿಸಿ ಕೆಡುಕು ಸಾಧಿಸುವ ದುರುಳರಿಗೆ ಅರ್ಥವಾಗುವುದು ಬಂದೂಕಿನ ಭಾಷೆಯೊಂದೇ’ ಎಂದು ಭಾವಿಸಿ ಸೈನ್ಯನಿರ್ವಣಕ್ಕೆ ಮುಂದಡಿಯಿಟ್ಟ.

    ಛತ್ರಪತಿ ಶಿವಾಜಿ, ಪೇಶ್ವಾ ಸಾಮ್ರಾಜ್ಯದಡಿ ಪ್ರಾಣ ಪಣಕ್ಕಿಟ್ಟು ಹೋರಾಡಿ ಬ್ರಿಟಿಷ್ ಸರ್ಕಾರದ ಅವಕೃಪೆಯಿಂದ ಕಾಡುಪಾಲಾದ ಆತ್ಮವಿಸ್ಮೃತ ರಾಮೋಶಿಗಳ ಸ್ನೇಹ ಸಂಪಾದಿಸಿ 1879ರಲ್ಲಿ ಪೂರ್ಣಪ್ರಮಾಣದ ರಾಷ್ಟ್ರಯೋಧಪಡೆ ನಿರ್ವಿುಸಿ ಗುಡ್ಡಗಾಡಿನಲ್ಲಿ ಯುದ್ಧತಂತ್ರ ತರಬೇತಿ ನೀಡಿ ಸ್ವತಂತ್ರ ಭಾರತದ ಕನಸು ಬಿತ್ತಿದ ಫಡಕೆ ಮಹಾಸಾಹಸಿಯೇ ಸರಿ. ಸೈನ್ಯ ಆರ್ಥಿಕ ಅಡಚಣೆಯಿಂದ ಕಂಗೆಟ್ಟಾಗ ಅದರಿಂದ ಹೊರಬರಲು ಆಂಗ್ಲನಿಷ್ಠ ಸಾಹುಕಾರರು, ಸರ್ಕಾರಿ ಕಚೇರಿಗಳನ್ನು ಕೊಳ್ಳೆಹೊಡೆದು ಕಟ್ಟಡಗಳಿಗೆ ಬೆಂಕಿಯಿತ್ತರು. 1857ರ ಕ್ರಾಂತಿಯನ್ನು ಬಗ್ಗುಬಡಿದೆವೆಂದು ಬೀಗಿದವರಿಗೆ ದಿನಕ್ಕೊಂದು ಕೃತ್ಯದಿಂದ ಬೆಚ್ಚಿಬೀಳಿಸಿದ ಫಡಕೆಯ ಕ್ರಾಂತಿಸಾಹಸ ಲಂಡನ್ನಿನಲ್ಲಿ ಮಾರ್ದನಿಸಿತಲ್ಲದೆ ಭಾರತ ಪ್ರಶಾಸನದ ಕೊನೆಯ ದಿನಗಳ ಎಣಿಕೆ ಆರಂಭವಾಯಿತು.

    ಊರೂರಿಗೂ ಹಬ್ಬಿದ ನವಕ್ರಾಂತಿಯ ಕಂಪು ಭಾರತೀಯರಲ್ಲಿ ಹೊಸ ವಿಶ್ವಾಸ, ಆಶಾವಾದ ಹಾಗೂ ನಾವೊಂದಾದರೆ ಬ್ರಿಟಿಷ್ ವ್ಯವಸ್ಥೆ ತಲೆಕೆಳಗಾಗಲು ಕ್ಷಣಹೊತ್ತು ಸಾಕೆಂಬ ಅದಮ್ಯ ನಂಬಿಕೆಯನ್ನು ಬೆಳೆಸಿತು. ಸಾಕ್ಷಾತ್ ಪ್ರಳಯರುದ್ರನಂತೆ ಕಂಪನಿ ಸರ್ಕಾರವನ್ನು ಕಾಡಿದ ಸಶಸ್ತ್ರ ಕ್ರಾಂತಿಯ ಹರಿಕಾರ ಫಡಕೆಯವರ ಸೇನಾಶಕ್ತಿಗೆ ಬೆದರಿದ ಬ್ರಿಟಿಷ್ ಸರ್ಕಾರ ಕ್ರಾಂತಿಯನ್ನು ಹತ್ತಿಕ್ಕಲು ಡೇನಿಯಲ್ ಎಂಬ ಅಧಿಕಾರಿಯನ್ನು ನೇಮಿಸಿತು. ‘ಫಡಕೆ ತಲೆಗೆ ಸಾವಿರ ರೂಪಾಯಿ’ ಎಂಬ ಸರ್ಕಾರದ ಘೊಷಣೆಗೆ ಪ್ರತಿಯಾಗಿ, ‘ಗವರ್ನರ್-ಕಲೆಕ್ಟರ್ ತಲೆಗೆ ಎರಡು ಸಾವಿರ ರೂಪಾಯಿ’ ಎಂದು ಫಡಕೆ ಘೊಷಿಸಿದ. ದಿಕ್ಕು ತೋಚದ ಡೇನಿಯಲ್ ವಿಶಾಲ ಸೇನೆಯೊಂದಿಗೆ ಸ್ವರಾಜ್ಯ ಸೇನೆಯ ಮೇಲೆರಗಿದ. ಹಿನ್ನಡೆಯಿಂದ ದುಃಖಿಸದೆ, ನಂಬಿಕಸ್ಥ ಸೇನಾಪತಿಯ ಸಾವಿನಿಂದ ಧೃತಿಗೆಡದೆ ಸೈನ್ಯವಿಸ್ತಾರಕ್ಕೆಂದು ಅನೇಕ ಕಡೆ ಓಡಾಡಿದ. ಹಣದಾಸೆಗೆ ಬಲಿಬಿದ್ದ ಮಹಿಳೆಯ ಮಾಹಿತಿಯಂತೆ, ವಿಶ್ರಾಂತಿ ಪಡೆಯುತ್ತಿದ್ದ ಫಡಕೆಯ ಮೇಲೆರಗಿ, ಕೈಕಟ್ಟಿ ಬಂಧಿಸಿದ ಅಧಿಕಾರಿಗೆ, ‘ಕೈಬಿಚ್ಚಿ ಹೋರಾಡು. ಗೆದ್ದು ಬಂಧಿಸು’ ಎಂದು ಸವಾಲೆಸೆದ. ಪುಕ್ಕಲು ಬ್ರಿಟಿಷರ ನ್ಯಾಯಾಲಯದ ವಿಚಾರಣೆಯ ನಾಟಕದಲ್ಲಿ ಜೀವಾವಧಿ ಶಿಕ್ಷೆ ಪ್ರಕಟವಾಯಿತು. ‘ಹೇ ಮಾತೃಭೂಮಿ, ನಿನ್ನ ದಾಸ್ಯಮುಕ್ತಿಗಾಗಿ ತ್ರಿಕರಣಪೂರ್ವಕ ಶ್ರಮಿಸಿದರೂ ಗುರಿ ತಲುಪಲಾಗಲಿಲ್ಲ. ಜೀವಂತ ಮರಳಿದರೆ ನಿನ್ನ ಸೇವೆಗೈವ ಶಕ್ತಿ ದಯಪಾಲಿಸು’ ಎಂದು ಪ್ರಾರ್ಥಿಸಿ ಹಿಡಿಮಣ್ಣನ್ನು ಹೊತ್ತು ಏಡನ್ ತಲುಪಿದ ಕ್ರಾಂತಿಜನಕ, ಯಮಯಾತನೆ ಅನುಭವಿಸಿದ. ಬದುಕಿದ್ದೂ ಸತ್ತಂತಿರುವ ಜೀವನಕ್ಕಿಂತ ಹೋರಾಟವೇ ಮೇಲೆಂದು ತಿಳಿದು ಸಮಯ ನೋಡಿ, ಜೈಲುಕಂಬಿಗಳನ್ನೇ ಕಿತ್ತು, ಮರುಭೂಮಿಯ ಬಿರುಬಿಸಿಲಿನಲ್ಲಿ ಮೈಲುಗಟ್ಟಲೆ ಓಡಿ ಪರಾರಿಯಾಗಲು ಪ್ರಯತ್ನಿಸಿ ಮತ್ತೆ ಬಂಧಿಯಾದ. ಆರೋಗ್ಯ ಹದಗೆಟ್ಟರೂ ಮತ್ತೆ ಭಾರತಕ್ಕೆ ಮರಳಿ ಸ್ವಾತಂತ್ರ್ಯದ ಹೊಸ ಮುಂಜಾವನ್ನು ಕಾಣುವ ಕನಸು ಕಾಣುತ್ತಲೇ 1883ರ ಫೆಬ್ರವರಿ 17ರಂದು ಅಮರನಾದ.

    (ಲೇಖಕರು ಯುವ ವಾಗ್ಮಿ, ಉಪನ್ಯಾಸಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts