More

    ಬೆಳಗಾವಿಗೆ ಆಗಮಿಸಿದ ಅರುಣಸಿಂಗ್

    ಬೆಳಗಾವಿ: ನಗರದ ಗಾಂಧಿಭವನದಲ್ಲಿ ಆಯೋಜಿಸಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಅವರು ಶುಕ್ರವಾರ ಮಧ್ಯಾಹ್ನವೇ ನಗರಕ್ಕೆ ಆಗಮಿಸಿದ್ದಾರೆ.
    ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಸೇರಿ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

    ಸಂಪುಟ ವಿಸ್ತರಣೆ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ದೆಹಲಿಗೆ ತೆರಳಿ ರಾಷ್ಟ್ರನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ. ಆದರೂ ಸಂಪುಟ ಸರ್ಜರಿ ಸರ್ಕಸ್ ಸುಖಾಂತ್ಯ ಕಂಡಿಲ್ಲ. ಬಿಎಸ್‌ವೈ ದೆಹಲಿ ಭೇಟಿ ವೇಳೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿರಲಿಲ್ಲ. ಇದೀಗ ಅರುಣ ಸಿಂಗ್ ಅವರು ಸಂಪುಟ ಸರ್ಜರಿ ಬಗ್ಗೆ ಹೈಕಮಾಂಡ್ ನೀಡುವ ಸಂದೇಶ ಹೊತ್ತು ದೆಹಲಿಯಿಂದ ಬೆಳಗಾವಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಹೈಕಮಾಂಡ್ ಸಂದೇಶದ ಬಗ್ಗೆ ಅರುಣ್ ಸಿಂಗ್ ಅವರು ಯಡಿಯೂರಪ್ಪ ಜತೆಗೆ ಚರ್ಚಿಸಲಿದ್ದಾರೆ.

    ಸಂಪುಟ ಸರ್ಜರಿಗೆ ಸಿಗಲಿದೆಯೇ ಅಂತ್ಯ?: ಅರುಣ್‌ಸಿಂಗ್ ಭೇಟಿಯಿಂದ ಸಂಪುಟ ಸೇರಲು ಉತ್ಸುಕರಾಗಿರುವವರು ಸೇರಿ ಮೂಲ ಬಿಜೆಪಿಗರಾದ ಉಮೇಶಕತ್ತಿ, ಅರವಿಂದ ಲಿಂಬಾವಳಿ, ಸಿ.ಪಿ.ಯೋಗೇಶ್ವರ ಸಂತಸಕ್ಕೆ ಕಾರಣವಾಗಿದೆ. ಸಂಪುಟ ಸರ್ಜರಿ ಸರ್ಕಸ್‌ಗೂ ತಾರ್ಕಿಕ ಅಂತ್ಯ ಸಿಗಬಹುದು ಎಂಬ ಲೆಕ್ಕಾಚಾರ ರಾಜ್ಯ ನಾಯಕರದ್ದಾಗಿದೆ.

    ಸಭೆಯಲ್ಲಿ ಪಾಲ್ಗೊಳ್ಳಲಿರುವ ಸದಸ್ಯರು: ರಾಜ್ಯ ಕಾರ್ಯಕಾರಿಣಿಯಲ್ಲಿ ಬಿಜೆಪಿ ಕೋರ್ ಕಮಿಟಿ 14 ಸದಸ್ಯರು, ಇಬ್ಬರು ರಾಷ್ಟ್ರೀಯ ಪದಾಧಿಕಾರಿಗಳು, ರಾಜ್ಯದ 29 ಪದಾಧಿಕಾರಿಗಳು, 20 ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, 49 ರಾಜ್ಯ ಪ್ರಕೋಷ್ಠಗಳ ಸಂಚಾಲಕರು, ಹಾಗೂ ಸಹ ಸಂಚಾಲಕರು, ವಿಭಾಗ ಪ್ರಭಾರಿಗಳು ಹಾಗೂ ಸಹ ಪ್ರಭಾರಿಗಳು 18, ವಿಭಾಗ ಸಂಘಟನಾ, ಸಹ ಸಂಘಟನಾ ಪ್ರಧಾನ ಕಾರ್ಯರ್ಶಿಗಳು 17 ನೇರವಾಗಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವೆಬೆಕ್ಸ್ ಮೂಲಕ ಕಾರ್ಯಕಾರಿಣಿ 69 ಸದಸ್ಯರು, ರಾಜ್ಯ ಕಾರ್ಯಕಾರಿಣಿ ವಿಶೇಷ ಆಹ್ವಾನಿತರು 26, ಲೋಕಸಭಾ ಸದಸ್ಯರು 25, ರಾಜ್ಯಸಭಾ ಸದಸ್ಯರು 5, ವಿಧಾನಸಭಾ ಸದಸ್ಯರು 119, ವಿಧಾನ ಪರಿಷತ್ ಸದಸ್ಯರು 31, ಜಿಲ್ಲಾಧ್ಯಕ್ಷರು 37, ಜಿಲ್ಲಾ ಪ್ರಭಾರಿ/ಸಹಪ್ರಭಾರಿ 51, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು 111 ಜನರು ಭಾಗವಹಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts