More

    ಐವರು ಆರೋಪಿಗಳು ಪೊಲೀಸ್ ವಶಕ್ಕೆ

    ಮಂಗಳೂರು: ಕೊಡಗು ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಆರೋಪಿಗಳಲ್ಲೊಬ್ಬನಾಗಿದ್ದ ಸಂಪತ್ ಕುಮಾರ್‌ನನ್ನು ಗುರುವಾರ ಬೆಳಗ್ಗೆ ಸುಳ್ಯದ ಶಾಂತಿನಗರದಲ್ಲಿ ಹತ್ಯೆ ಮಾಡಿದ್ದ ಪ್ರಕರಣದ ಐವರು ಆರೋಪಿಗಳನ್ನು ಶನಿವಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಪೊಲೀಸರು ವಶಕ್ಕೆ ಪಡೆದಿರುವ ಮಾಹಿತಿ ಲಭಿಸಿದೆ.
    ಕಲ್ಲುಗುಂಡಿ ಪರಿಸರದ ನಾಲ್ವರು ಹಾಗೂ ಅಡ್ಕಾರ್‌ನ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಹತ್ಯೆ ಪ್ರಕರಣದ ಆರೋಪಿಗಳು ಯಾರೆಂಬುದನ್ನು ಖಚಿತಪಡಿಸಿಕೊಂಡ ಪೊಲೀಸರು ಸುಳ್ಯ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಎರಡು ತಂಡಗಳಲ್ಲಿ ಆರೋಪಿಗಳ ಪತ್ತೆಗೆ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸಿದ್ದರು. ಆರೋಪಿಗಳು ನಿಂತಲ್ಲಿ ನಿಲ್ಲದೆ ಜಾಗ ಬದಲಾಯಿಸುತ್ತಿದ್ದರು.
    ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಹಲವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ನಡೆಸಲು ಆರೋಪಿಗಳಿಗೆ ಕೋವಿ, ಹಣ ನೀಡಿದವರು ಯಾರು? ಕಾರಲ್ಲಿ ಕರೆದುಕೊಂಡು ಹೋದವರು ಯಾರೆಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಳಗಿ ಬಾಲಚಂದ್ರ ಅವರ ಮನೆಯವರೊಂದಿಗೂ ಈ ಪ್ರಕರಣದ ಬಗ್ಗೆ ವಿಚಾರಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

    ರಬ್ಬರ್ ತೋಟದಲ್ಲಿ ಕಾರು: ಕೃತ್ಯಕ್ಕೆ ಬಳಸಿದ ಹಸಿರು ಬಣ್ಣದ ಕ್ವಾಲೀಸ್ ಕಾರು ಶುಕ್ರವಾರ ಅರಂತೋಡು ಕಳುಬೈಲ್ ರಬ್ಬರ್ ತೋಟದಲ್ಲಿ ಪತ್ತೆಯಾಗಿದೆ. ಕಾರು ಚೊಕ್ಕಾಡಿಯ ಪದ್ಮನಾಭ ಎಂಬುವರಿಗೆ ಸೇರಿದ್ದಾಗಿದೆ. ಕೊಲೆ ನಡೆಯುವ ಮುನ್ನಾ ದಿನ ಶೂಟಿಂಗ್ ಇದೆ ಎಂದು ಮನು ಎಂಬಾತ ಕಾರನ್ನು ಬಾಡಿಗೆಗೆ ತೆಗೆದುಕೊಂಡು ಹೋಗಿದ್ದ ಎಂಬ ವಿಷಯ ವಿಚಾರಣೆಯಿಂದ ತಿಳಿದು ಬಂದಿದೆ. ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಜಾಗದ ತಕರಾರು ಕಾರಣ?: ಜಾಗದ ವಿಚಾರಕ್ಕೆ ಸಂಬಂಧಿಸಿ ಇದ್ದ ವೈಯಕ್ತಿಕ ದ್ವೇಷದಿಂದ ಕೊಲೆ ನಡೆದಿದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಬಾಲಚಂದ್ರ ಕಳಗಿ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎಂದು ಹೇಳುತ್ತಿದ್ದಾರೆ. ಪೊಲೀಸ್ ತನಿಖೆಯಿಂದ ಸ್ಪಷ್ಟ ಕಾರಣ ತಿಳಿದು ಬರಲಿದೆ. ಕಳಗಿ ಕೊಲೆಯಾಗುವ ಮುನ್ನ ಸಂಪತ್ ಮತ್ತು ಆರೋಪಿಗಳ ಪೈಕಿ ಓರ್ವ ಆತ್ಮೀಯರಾಗಿದ್ದರು. ಸಂಪತ್ ಜೈಲಿಗೆ ಹೋಗಿ ಬಂದ ಬಳಿಕ ಅವರ ನಡುವೆ ದ್ವೇಷ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತಿದೆ. ಸಂಪತ್‌ನನ್ನು ಗುರುವಾರ ಶಾಂತಿನಗರದಲ್ಲಿ ತಂಡವೊಂದು ಅಟ್ಟಾಡಿಸಿ ಕೋವಿಯಿಂದ ಗುಂಡು ಹಾರಿಸಿ, ತಲವಾರು, ಚೂರಿಯಿಂದ ದಾಳಿ ನಡೆಸಿ ಕೊಂದು ಹಾಕಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts