More

    ಆಯುರ್ವೇದ ಔಷಧಿಗಳು ಹಾಳಾಗುವುದಿಲ್ಲವೇ?

    ಆಯುರ್ವೇದ ಔಷಧಿಗಳು ಹಾಳಾಗುವುದಿಲ್ಲವೇ?

    ಪ್ರತಿಯೊಂದು ಜೀವಿಗೂ ಹುಟ್ಟು, ಬದುಕು, ಸಾವು ಎಂಬುದು ಅನಿವಾರ್ಯ ಹಂತಗಳು. ನಿಜಾರ್ಥದಲ್ಲಿ ಹೇಳುವುದಾದರೆ ಹುಟ್ಟಿನೊಂದಿಗೇ ಬದುಕಿನ ಕ್ಷಣಗಣನೆ ಆರಂಭವಾಗುತ್ತದೆ. ಇದು ಮಾನವನ ಜೀವಿತಾವಧಿ ಕುರಿತಾದ ವಿಚಾರವಾದರೆ ಮಾನವ ನಿರ್ವಿುತ ಔಷಧಕ್ಕೆ ಕಾಲಮಿತಿ ಎಂಬುದಿಲ್ಲವೇ ಎಂಬ ಜಿಜ್ಞಾಸೆ ಮುನ್ನೆಲೆಗೆ ಬರುತ್ತದೆ. ಆಧುನಿಕ ವೈದ್ಯ ಪದ್ಧತಿಯ ರಾಸಾಯನಿಕ ಔಷಧಗಳಿಗೆ ಕಾಲಮಿತಿ ಇದೆಯೆಂಬುದು ಜನರಿಗೆಲ್ಲ ತಿಳಿದಿದೆ. ಅದೇ ಆಯುರ್ವೆದ ಔಷಧಗಳಾದರೆ ಎಷ್ಟೇ ಸಮಯ ದಾಟಿದರೂ ಹಾಳೇ ಆಗುವುದಿಲ್ಲ, ಹಳತಾದಷ್ಟೂ ಆಯುರ್ವೆದ ಔಷಧಗಳು ಹೆಚ್ಚು ಪರಿಣಾಮಕಾರಿ ಆಗುತ್ತಾ ಹೋಗುತ್ತದೆ ಎಂಬ ಸುದ್ದಿ ಅನೇಕರ ಕಿವಿಗೆ ಬಿದ್ದಿರುತ್ತದೆ.

    ವಾಸ್ತವ ಏನೆಂದರೆ, ಸರಿಸುಮಾರು ನೂರರಷ್ಟು ವಿಭಿನ್ನವಾದ ರೂಪದ ಆಧಾರದಲ್ಲಿ ಔಷಧ ವಿಧಗಳನ್ನು ವಿವರಿಸಿದ ಆಯುರ್ವೆದ ಪ್ರತಿಯೊಂದು ವಿಧಕ್ಕೂ ಬೇರೆಬೇರೆಯದೇ ಆದ ಕಾಲಮಿತಿಯನ್ನು ಹೇಳಿದೆ! ಔಷಧಗಳಿಗೆ ಮಾತ್ರವಲ್ಲ, ಕಚ್ಚಾ ಆಹಾರ ಧಾನ್ಯಗಳಿಗೆ ಹಾಗೂ ಸಿದ್ಧಪಡಿಸದ ಆಹಾರ ವಸ್ತು-ವ್ಯಂಜನಗಳಿಗೂ ಉಪಯೋಗಿಸಲು ಸಮಯ ಮಿತಿಯನ್ನು ಹೇಳಿದ ಹೆಗ್ಗಳಿಕೆಯೂ ಆಯುರ್ವೆದಕ್ಕೇ ಸಲ್ಲುತ್ತದೆ. ಸಹಸ್ರಾರು ವಸಂತಗಳ ಹಿಂದೆಯೇ ಭಾರತದ ವೈದ್ಯವಿಜ್ಞಾನಿಋಷಿಗಳಿಗೆ ಇಂತಹ ನಿಖರವಾದ ವೈಜ್ಞಾನಿಕ ಚಿಂತನೆ ಇತ್ತೆಂಬುದೇ ನಮಗೆಲ್ಲ ಹೆಮ್ಮೆಯ ವಿಷಯ. ಆಯುರ್ವೆದ ಔಷಧಗಳಲ್ಲಿ ಅಯಸ್ಕೃತಿ, ಆಸವ, ಅರಿಷ್ಟ, ಮಸಿ, ಲವಣಕಲ್ಪನಾ, ಪರ್ಪಟಿ, ಭಸ್ಮ, ಖನಿಜ ಸತ್ವ, ಮದ್ಯ ಕಲ್ಪನಾ, ಪೊಟ್ಟಲಿ, ರಸೌಷಧಗಳು ಹಳೆಯದಾದಷ್ಟು ಉತ್ತಮ. ಇವಿಷ್ಟು ಆಯುರ್ವೆದ ಔಷಧಗಳಿಗೆ ಕಾಲಮಿತಿ ಇಲ್ಲದಿರುವುದೇ ಔಷಧಗಳು ಹಾಳಾಗುವುದೇ ಇಲ್ಲ ಎಂಬ ಭಾವನೆ ಕೆಲವು ಜನರಲ್ಲಿ ಬೇರೂರಲು ಕಾರಣವಾಗಿರಬಹುದು. ಇಂದು ಗುಡ್ ಮ್ಯಾನುಫ್ಯಾಕ್ಚರಿಂಗ್ ಪ್ರಾಕ್ಟೀಸ್ (ಜಿಎಮ್) ಎಂಬ ಮಾನದಂಡಗಳನ್ನು ಆಯುರ್ವೆದ ಔಷಧ ತಯಾರಿಕಾ ಕ್ಷೇತ್ರದಲ್ಲಿ ಅಳವಡಿಸಿರುವುದರಿಂದ ಇವುಗಳಿಗೂ ಕಾಲಮಿತಿಯನ್ನು ಹಾಕಲಾಗಿದೆ. ಹಾಗಿದ್ದರೂ ಅನುಭವೀ ವೃದ್ಧರು ಆಯುರ್ವೆದ ಔಷಧಿ ಖರೀದಿಸುವಾಗ ತಮ್ಮ ಬುದ್ಧಿಮತ್ತೆಯನ್ನು ಚೆನ್ನಾಗಿ ಉಪಯೋಗಿಸುವುದಿದೆ. ಔಷಧಾಲಯದಲ್ಲಿ ಇರುವ ಅರಿಷ್ಟಗಳ ಶೀಷೆಗಳಲ್ಲಿ ಅತಿ ಹಳೆಯ ಲೇಬಲ್ ಕಾಣುವುದನ್ನೇ ಆರಿಸಿಕೊಳ್ಳುತ್ತಾರೆ!

    ಕಚ್ಚಾ ಔಷಧೀಯ ಸಸ್ಯಗಳು, ಹೂವು, ಎಲೆ, ಹಣ್ಣು, ಬೇರುಗಳನ್ನು ಒಂದು ವರ್ಷದೊಳಗೆ ಉಪಯೋಗಿಸಬೇಕು. ಕಾಂಡ, ತೊಗಟೆಗಳಿಗೆ ಎರಡು ವರ್ಷ, ಬೀಜ, ಸಾರಗಳಿಗೆ ಐದು ವರ್ಷ, ಸಸ್ಯವು ಸ್ರವಿಸುವ ಅಂಟು ನಿರ್ಯಾಸವು ಹತ್ತು ವರ್ಷಗಳ ತನಕ ಔಷಧೀಯ ಮೌಲ್ಯಗಳನ್ನು ಉಳಿಸಿಕೊಳ್ಳುತ್ತದೆ. ಕ್ಷಾರ ಸೂತ್ರ, ಕ್ಷಾರ ಕಲ್ಪನಾ ಮತ್ತು ಗುಗ್ಗುಲು ಕಲ್ಪನಗಳನ್ನು ಐದು ವರ್ಷಗಳ ಜೀವಿತಾವಧಿಯನ್ನು ಹೇಳಲಾಗಿದೆ. ಘನಸತ್ವ ಮತ್ತು ಕಾಷ್ಠೌಷಧ ಸತ್ವಗಳು ನಾಲ್ಕು ವರ್ಷಗಳ ತನಕ ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಸ್ನೇಹ ಕಲ್ಪನಾಗಳಿಗೆ ಹದಿನಾರು ತಿಂಗಳ ತನಕದ ಜೀವಿತಾವಧಿ ಹೇಳಲಾಗಿದೆ. ತುಪ್ಪಕ್ಕೆ ನೂರು ವರ್ಷವಾದರೆ ಕುಂಭ ಘೃತ ಎನಿಸಿಕೊಂಡು ವಿಶೇಷ ಗುಣಗಳನ್ನು ಪ್ರಾಪ್ತಿಸಿಕೊಳ್ಳುತ್ತದೆ. ಅಂಜನ, ವರ್ತಿ, ಅರ್ಕ, ರಸಕ್ರಿಯಾ, ವಟಿ, ಅವಲೇಹ, ಖಂಡಕಲ್ಪನಾ, ಗುಡಪಾಕ ಹಾಗೂ ಶರ್ಕರಾ ಒಂದು ವರ್ಷದ ಕ್ರಿಯಾಶೀಲ ಅವಧಿಯನ್ನು ಹೊಂದಿವೆ. ಆಧುನಿಕವಾದ ಪ್ಯಾಕೇಜಿಂಗ್ ಮಾದರಿಗಳಿಂದಾಗಿ, ಗಾಳಿ ಸೋಕದಂತೆ ಇಡುವ ಸೌಲಭ್ಯಗಳು ಇರುವುದರಿಂದಾಗಿ ಇವುಗಳ ಬಾಳುವಿಕೆಯ ಮಿತಿಯನ್ನು ಇಂದು ಹೆಚ್ಚಿಸಲಾಗಿದೆ. ಚೂರ್ಣ, ಧೂಪನ, ಧೂಮ್ರಪಾನ ಕಲ್ಪನಾ, ಆರನಾಲ, ಧಾನ್ಯಾಮ್ಲ, ಶುಕ್ತ, ಕಾಂಜಿಕಾ, ತುಷೋದಕಗಳನ್ನು ತಯಾರಿಸಿ ಆರು ತಿಂಗಳ ತನಕ ಉಪಯೋಗಿಸಬಹುದು. ಮಲಹರ, ಎರಡು ತಿಂಗಳು, ಸಕ್ತು ಒಂದು ತಿಂಗಳು, ಲಾಕ್ಷಾರಸ ಕಲ್ಪನಾಗಳು ಒಂದು ವಾರದ ಕಾಲಮಿತಿ ಹೊಂದಿವೆ. ಅನ್ನ ಕಲ್ಪನಾ, ಯವಾಗು, ಪಾನಕ, ಕ್ಷೀರಪಾಕ, ಮಂಥ, ಉದಕ, ತಕ್ರ, ಪೇಯ, ವಿಲೇಪಿ, ದಧಿಕಲ್ಪನಾ, ದಧಿಕೂರ್ಚಿಕಾ, ಲೇಪಗಳನ್ನು ತಯಾರಿಸಿ ಒಂದು ದಿನದಲ್ಲೇ ಪ್ರಯೋಗಿಸಬೇಕು. ಕ್ವಾಥ ಕಲ್ಪನಾಗಳನ್ನು ಹನ್ನೆರಡು ಘಂಟೆಗಳ ಒಳಗೆ, ಉಪನಾಹವನ್ನು ಬಿಸಿಯಾಗಿ ಇರುವ ತನಕ ಉಪಯೋಗಿಸಬಹುದು. ಸ್ವರಸ, ಕಲ್ಕ, ಹಿಮ, ಫಾಂಟ, ಮಂಡ, ತಂಡುಲೋದಕ, ಪ್ರಮಥ್ಯಾ, ಕೃಶರ, ಪೇಯ, ಕಾಂಬಲಿಕ, ರಾಗ, ಷಾಡವ, ವಾಟ್ಯೋದನ, ಸಿಕ್ತ, ವೇಶವಾರ, ಉದಶ್ವಿತ, ಮಥಿತ, ಕಟ್ಟರ, ಶಂಖದ್ರವ, ಆಶ್ಚೋತನ, ವಿಡಾಲಕ, ತರ್ಪಕ, ಪುಟಪಾಕ, ಕವಳ ಹಾಗೂ ಗಂಡೂಷಗಳನ್ನು ಸದ್ಯೋಸೇವನಾ ಅಂದರೆ ತುಸು ಹೊತ್ತಿನಲ್ಲೇ ಸೇವಿಸಬೇಕು. ನಸ್ಯ ಬಸ್ತಿ ಕಲ್ಪನಾವನ್ನು ತಯಾರಿಸಿದ ತಕ್ಷಣದಲ್ಲೇ ಪ್ರಯೋಗಿಸಬೇಕು. ಹೀಗೆ ಔಷಧದ ಗುಣಮೌಲ್ಯ ಉಳಿಸಿ ಬಳಸಲು ಕಾಲಮಿತಿಯನ್ನು ನಿಗದಿ ಪಡಿಸಿದ ಪ್ರಾಚೀನ ಭಾರತದ ಜ್ಞಾನಚಕ್ಷುವಿಗೆ ಹ್ಯಾಟ್ಸ್ ಆಫ್ ಎನ್ನಲೇಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts