More

    ಅನುಭಾವದ ಬೆಳಗು| ತತ್ತ್ವದ ಘನರಹಸ್ಯ

    ರಮಪದದ ದರ್ಶನವು ಅನಿರ್ವಚನೀಯ. ಅದೊಂದು ವಿಶಿಷ್ಟ ಅನುಭೂತಿ. ಈ ಅನುಭೂತಿಯು ಸಾಧಕನನ್ನು ಎತ್ತರಕ್ಕೆ ಏರಿಸುತ್ತದೆ. ಮಹಲಿಂಗರಂಗನು ಇಂಥ ಪರಮಪದದ ಸೋಪಾನಕ್ಕೆ ಏರಿದವನೇ ಸರಿ. ಅವನು ‘ಪರಮಪದ’ದ ಸಮ್ಯಕ್​ದರ್ಶನ ನಮಗೆ ಕಾಣಿಸುವಾಗ ಅಪೂರ್ವವಾದ ದೃಷ್ಟಾಂತಗಳ ಮೂಲಕವೇ ಮಹಲಿಂಗರಂಗ ತಿಳಿಸುತ್ತಾನೆ. ಸೊಗಸಾದ ಈ ಪದ್ಯವನ್ನು ಕಣ್ಣಮುಂದೆ ತಂದುಕೊಳ್ಳಿ.

    ಸ್ಥಾಲಿಯೊಳಗಿದ್ದಗ್ನಿಪುರುಷನು

    ತೈಲಸಿಕ್ತದ ಬತ್ತಿಯೊಳು ಸ

    ಮ್ಮೇಳವಾಗಲು ಸಕಲ ವಸ್ತುವ ಬೆಳಗುವಂದದಲಿ |

    ಸ್ಥೂಲ ಸೂಕ್ಷ್ಮಗಳಾದ ತತ್ತ್ವಗ

    ಳೋಲಿಯೊಳಗಿಹ ಸ್ವಪ್ರಕಾಶದ

    ಹೇಳಲೇನದು ಪರಮಪದವೆಂದರಿತುಕೋ ಎಂದ || 7.17

    ಅನುಭಾವದ ಬೆಳಗು| ತತ್ತ್ವದ ಘನರಹಸ್ಯಮೊದಲು ಈ ಪದ್ಯದ ಸಾರಾರ್ಥವನ್ನು ತಿಳಿಯೋಣ: ‘‘ಹಣತೆಯಲ್ಲಿ ಬತ್ತಿ ಇದೆ, ಎಣ್ಣೆ ಇದೆ. ಅಲ್ಲಿ ಅಗ್ನಿಪುರುಷನೂ ಇದ್ದಾನೆ. ಬತ್ತಿ-ಎಣ್ಣೆ ಇವು ಬೆಳಗುತ್ತಿವೆ. ಇದರಂತೆಯೆ ಸ್ಥೂಲ-ಸೂಕ್ಷ್ಮತತ್ತ್ವಗಳಲ್ಲಿ ಅಡಗಿರುವ ಸ್ವಯಂಪ್ರಕಾಶ ಏನುಂಟೋ ಅದು ಪರಮಪದವೇ ಆಗಿದೆ.’’ ಈ ಪದ್ಯದ ಒಳಗೆ ತುಸು ಸೂಕ್ಷ್ಮವಾಗಿ ಪ್ರವೇಶಿಸೋಣ. ತೈಲಸಿಕ್ತದ ಎಣ್ಣೆಯೊಳಗೆ ಅದ್ದಿದ, ಈ ಸ್ವಪ್ರಕಾಶದ ತತ್ತ್ವಗಳೆಲ್ಲ ನಮಗೆ ತೋರುವವಷ್ಟೆ. ಹಾಗೆ ಕಾಣಿಸುವುದೇ ಪರಮಾತ್ಮನ ಸ್ವಪ್ರಕಾಶ. ಜಗತ್ತೆಂಬುದು ಉಂಟು. ಅದನ್ನು ‘ಆಸ್ತಿ’ ಎಂದು ಹೇಳುತ್ತೇವೆ. ಅದು ನಮಗೆ ತೋರುತ್ತದೆ. ಹಾಗಾಗಿ, ‘ಭಾತಿ’ ಎನ್ನುತ್ತೇವೆ. ಅದು ನಮಗೆ ಬೇಕೆನಿಸುವುದರಿಂದ ಅದು ‘ಪ್ರಿಯ.’ ಹೀಗಾಗಿ ಇದು ‘ನಾಮ’ ಮತ್ತು ‘ರೂಪ’ ಈ ಐದಂಶಗಳಿಂದ ಕೂಡಿದೆ. ಇವುಗಳಲ್ಲಿ ನಾಮರೂಪಗಳೆರಡೂ ಮಾಯೆಯ ಅಂಶಗಳಾಗಿವೆ. ಅಸ್ತಿಭಾತಿಪ್ರಿಯಗಳು ಸಚ್ಚಿದಾನಂದಸ್ವರೂಪನಾದ ಆತ್ಮನ ಅಂಶಗಳೆನಿಸಿವೆ. ಈ ಹಿನ್ನೆಲೆಯಲ್ಲಿ ಮೇಲಿನ ಪದ್ಯ ‘ಭಾತಿ’ ಎಂಬಂಶದ ಆತ್ಮಸ್ವರೂಪವನ್ನು ನಮಗೆ ತಿಳಿಸುತ್ತದೆ. ದೀಪಕ್ಕೆ ಹಣತೆ ಮತ್ತು ಬತ್ತಿಗಳು ಹೇಗೆ ಉಪಾಧಿಗಳೋ ಹಾಗೆ ಆತ್ಮನಿಗೆ ಸ್ಥೂಲ-ಸೂಕ್ಷ್ಮಗಳಾದ ತತ್ತ್ವಗಳು ಉಪಾಧಿಗಳು. ಈ ಸಂಗತಿಯನ್ನು ಸಾಧಕರು ಗಮನದಲ್ಲಿ ಇಟ್ಟುಕೊಳ್ಳಬೇಕು.

    ಜ್ಞಾನವೆಂಬ ಅಭಿಮಾನ ಇಲ್ಲದೆ ಹೋದರೆ ಅಜ್ಞಾನದ ಅರಿವು ಬರುವುದಿಲ್ಲವಷ್ಟೆ. ಸೂರ್ಯನಂತೆ ಜ್ಞಾನಸ್ವರೂಪನು ಧ್ಯಾನ, ಮೌನ, ಸಮಾಧಿ ಮೊದಲಾದ ಸಾಧನೆಗಳನ್ನೆಲ್ಲ ಬಿಟ್ಟಿರುವ ನಿಜಾನಂದದ ಏಕವಸ್ತುವೇ ಪರಮಾತ್ಮಪದ ಎನಿಸುತ್ತದೆ. ಧ್ಯಾನ, ಮೌನ, ಸಮಾಧಿಗಳು ‘ಸಿದ್ಧ’ ಆಗುವವರೆಗೂ ಬೇಕು. ಅನಂತರ ಬೇಕಾಗಿಲ್ಲವೆಂಬುದು ಮಹಲಿಂಗರಂಗನ ವಿವಕ್ಷೆ. ಅವನ ಮಾತು ಹೀಗಿದೆ:

    ಕರಣ ಮೊದಲಾಗಿರ್ಪಪಾಧಿಯ

    ಬೆರೆದುಕೊಂಡಿಹ ಜೀವನೇ ಸ

    ದ್ಗುರು ಕಟಾಕ್ಷವ ಪಡೆದು ತನ್ನ ನಿಜಸ್ವರೂಪವನು |

    ಅರಿದೊಡಪರೋಕ್ಷಾನುಭವ ಸು

    ಸ್ಥಿರವದಾಗಲು ತಾನೆ ಸಾಕ್ಷಾ

    ತ್ಕರಿಸಿಹುದು ಪರಮಾತ್ಮಪದವೆಂದರಿತುಕೋ ಎಂದ || 7.19

    ಈ ಪದ್ಯದ ಸಾರಾರ್ಥ ಹೀಗುಂಟು: ‘‘ಜೀವನಿಗೆ ಇಂದ್ರಿಯಗಳೇ ಮೊದಲಾದ ದೋಷಗಳು ಉಂಟು. ಈ ದೋಷಗಳನ್ನು ಸದ್ಗುರುವಿನ ದಯೆಯಿಂದ ನಿಜಸ್ವರೂಪವನ್ನು ಸಾಧಕನು ತಿಳಿದುಕೊಳ್ಳಬೇಕು. ಆಗ ಅಪರೋಕ್ಷಾನುಭವವು ಸ್ಥಿರವಾಗಿ ದೊರೆಯುತ್ತದೆ. ಹೀಗೆ ಸಾಕ್ಷಾತ್ಕಾರ ಆಗುವುದೇ ಪರಮಾತ್ಮಪದ. ಇದನ್ನು ತಿಳಿದುಕೊಳ್ಳಬೇಕು.’’ ಇಲ್ಲಿ ‘ಬೆರೆದುಕೊಂಡಿಹ’ – ಎಂಬ ಮಾತು ಬಂದಿದೆಯಷ್ಟೆ. ಕರಣ ಮೊದಲಾದವುಗಳೇ ತನ್ನ ಆತ್ಮವೆಂದು ತಿಳಿದುಕೊಂಡಿರುವ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಮೊದಲು + ಆಗಿರ್ಪ + ಉಪಾಧಿ ಎಂದು ಬಿಡಿಸಿಕೊಳ್ಳಬೇಕು.

    ಸಾಧಕನು ಪರಮಾತ್ಮಪದವನ್ನು ಕಾಣಬೇಕಾದರೆ ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕ ಎಂಬ ಮೂರು ಬಗೆಯ ಭೂತಗಳಿಂದ ಉಂಟಾಗುವ ಕೇಡುಗಳಿಂದ ಮುಕ್ತನಾಗಬೇಕು. ಅವನಿಗೆ ಪಾಪ-ಪುಣ್ಯಗಳ ಸಂಬಂಧ ಇಲ್ಲದಿರಬೇಕು. ಇಷ್ಟು ಮಾತ್ರವಲ್ಲ, ರೂಪ, ರಸ, ಗಂಧಾದಿ ವಿಷಯಗಳ ವ್ಯವಹಾರದಿಂದ ಮುಕ್ತವಾದ ದೀಪದಂತೆ ಮೂರು ಬಗೆಯ ಅವಸ್ಥೆಯನ್ನು ಹೋಗಲಾಡಿಸಿಕೊಳ್ಳಬೇಕು. ಆಗ ಐಕ್ಯವಾಗಿರುವ ಪರಂಜ್ಯೋತಿಯೇ ಪರಮಾತ್ಮಪದ. ಮಹಲಿಂಗರಂಗನ ಮುಂದಿನ ಮಾತು ಹೀಗಿದೆ:

    ತೋರುತಡಗುವ ಸಕಲದೊಳು ತಾ

    ತೋರದಡಗದೆ ಸಹಜವಾಗಿಯೆ

    ತೋರುತಿರುತಾವಾಗಲೊಂದೇ ಪರಿಯೊಳೆಲ್ಲವನು |

    ತೋರಿಸುವ ಸ್ವಪರಪ್ರಕಾಶನ

    ಪಾರ ನಿತ್ಯಾನಂದ ಸಂವಿ

    ತ್ಸಾರವೇ ಪರಮಾತ್ಮಪದವೆಂದರಿತುಕೋ ಎಂದ || 7.21

    ಈ ಪದ್ಯದ ಸಾರಾಂಶ ಇಷ್ಟು: ‘‘ಕೆಲವು ತೋರಿ ಮರೆಯಾಗುತ್ತವೆ. ಮತ್ತೂ ಕೆಲವು ವಸ್ತುವಿನಲ್ಲಿ ತೋರದೆ, ಅಡಗದೆ ಸಹಜವಾಗಿರುತ್ತವೆ. ಆದರೆ, ಒಂದೇ ರೀತಿಯಲ್ಲಿ ಎಲ್ಲವನ್ನೂ ತೋರಿಸುತ್ತ, ತಾನೂ ಬೆಳಗುತ್ತ ಬೇರೆಯವುಗಳನ್ನು ಸದಾ ಬೆಳಗಿಸುವ ಅಪಾರ ಮತ್ತು ನಿತ್ಯಾನಂದ ರೀತಿಯೇ ಪರಮಪದ.’’ ಈ ಪದ್ಯದಲ್ಲಿ ‘ತೋರದಡಗದೆ’ ಎಂಬ ಮಾತು ಬಂದಿದೆ. ಹುಟ್ಟಿ ತೋರುವುದು ನಾಶವಾಗಿ ತೋರದೆ ಹೋಗುವುದು, ವಿಕಾರವಿಲ್ಲದೆ ಇರುವುದೆಂದು ಇದಕ್ಕೆ ಅರ್ಥ. ಪದ್ಯದ ಪೂರ್ವಾರ್ಧದಲ್ಲಿ, ತೋರುತ + ಇರುತ + ಅವಾಗಲು + ಒಂದೇ ಪರಿ, ಎಂದು ಓದುಗರು ಬಿಡಿಸಿ ಓದಿಕೊಳ್ಳಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts