More

    ಗೋಣಿಕೊಪ್ಪಲಿನಲ್ಲಿ ಎನ್‌ಸಿಸಿ ಕೆಡೆಟ್‌ಗಳಿಗೆ ವಾರ್ಷಿಕ ತರಬೇತಿ ಶಿಬಿರ

    ಮಡಿಕೇರಿ: ೧೯ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ವಾರ್ಷಿಕ ತರಬೇತಿ ಶಿಬಿರ ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಸ್ಕೂಲ್‌ನಲ್ಲಿ ಇತ್ತೀಚೆಗೆ ನಡೆಯಿತು.


    ಹಿರಿಯ ವಿಭಾಗ(ಸೀನಿಯರ್ ವಿಂಗ್) ಎನ್‌ಸಿಸಿ ಕೆಡೆಟ್‌ಗಳು ಮತ್ತು ಜೂನಿಯರ್ ವಿಭಾಗ(ಜೂನಿಯರ್ ವಿಂಗ್) ಎನ್‌ಸಿಸಿ ಕೆಡೆಟ್‌ಗಳಿಗೆ ೧೦ ದಿನಗಳ ಶಿಬಿರವನ್ನು ಮಡಿಕೇರಿಯ ೧೯ ಕರ್ನಾಟಕ ಬಿಎನ್ ಎನ್‌ಸಿಸಿಯ ಕಮಾಂಡಿಂಗ್ ಆಫೀಸರ್ ಕರ್ನಲ್ ಜೆಫಿರಿನ್ ಗಿಲ್ಬರ್ಟ್ ಅರಾನ್ಹಾ, ಲೆಫ್ಟಿನೆಂಟ್ ಕರ್ನಲ್ ಚಾಕೋ ಹಾಗೂ ಹಲವಾರು ಎನ್‌ಸಿಸಿ ಮೇಲುಸ್ತುವಾರಿಗಳ ನೇತೃತ್ವದಲ್ಲಿ ನಡೆಸಲಾಯಿತು.


    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮತ್ತು ಸುಳ್ಯ ತಾಲೂಕುಗಳ ಜತೆಗೆ ಕೊಡಗು ಜಿಲ್ಲೆಯ ವಿವಿಧ ಸಂಸ್ಥೆಗಳಿಂದ ೫೨೦ ಕೆಡೆಟ್‌ಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ ನಾಯಕತ್ವದ ಗುಣ, ಶಿಸ್ತು, ಕರ್ತವ್ಯನಿಷ್ಠೆ, ಸಮಯಪಾಲನೆ, ಕ್ರಮಬದ್ಧತೆ, ನ್ಯಾಯಸಮ್ಮತ ಅಧಿಕಾರ, ಮೌಲ್ಯ, ಆತ್ಮ ವಿಶ್ವಾಸ ಮತ್ತು ಸ್ವಾವಲಂಬನೆಯ ಮಟ್ಟವನ್ನು ಹೆಚ್ಚಿಸುವ ಬಗ್ಗೆ ತರಬೇತಿ ನೀಡಲಾಯಿತು. ಎನ್‌ಸಿಸಿ ಕೆಡೆಟ್‌ಗಳಿಗೆ ಸಮಾಜ ಕಲ್ಯಾಣ, ಪರಿಸರ ಜಾಗೃತಿ, ಸಾಹಸ ಮತ್ತು ಮನರಂಜನಾ ಚಟುವಟಿಕೆಗಳಿಗೆ ಒತ್ತು ನೀಡುವ ಮೂಲಕ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಾಕಷ್ಟು ಅವಕಾಶವನ್ನು ಒದಗಿಸಲಾಗಿದೆ.


    ಮಡಿಕೇರಿಯ ೧೯ ಕರ್ನಾಟಕ ಬಿಎನ್ ಎನ್‌ಸಿಸಿಯ ಕಮಾಂಡಿಂಗ್ ಆಫೀಸರ್ ಕರ್ನಲ್ ಜೆಫಿರಿನ್ ಗಿಲ್ಬರ್ಟ್ ಅರಾನ್ಹಾ ಶಿಬಿರವನ್ನು ಉದ್ಘಾಟಿಸಿ, ಎನ್‌ಸಿಸಿಯ ಗುರಿ ಮತ್ತು ಧ್ಯೇಯವಾಕ್ಯಗಳ ಕುರಿತು ತಿಳಿಸಿದರು. ಶಿಬಿರದ ಅವಧಿಯಲ್ಲಿ ಕೆಡೆಟ್‌ಗಳು ಅನುಸರಿಸಬೇಕಾದ ಜವಾಬ್ದಾರಿಗಳು, ಶಿಬಿರದ ಶಿಸ್ತು, ವೈಯಕ್ತಿಕ ನೈರ್ಮಲ್ಯ ಮತ್ತು ಭದ್ರತೆ, ಶಸ್ತ್ರಾಸ್ತ್ರ ಬಳಕೆ ಕುರಿತು ತಿಳಿಸಲಾಯಿತು. ಅಲ್ಲದೆ ವಿಶೇಷ ಅವಧಿಯಲ್ಲಿ ಕೈಗೊಳ್ಳಬೇಕಾದ ಕರ್ತವ್ಯಗಳ ಕುರಿತು ಮಾಹಿತಿ ನೀಡಿದರು.


    ಗೋಣಿಕೊಪ್ಪಲಿನ ಅಗ್ನಿಶಾಮಕ ಠಾಣೆಯ ಪ್ರತಿನಿಧಿಗಳು ಬೆಂಕಿ ನಂದಿಸುವ ಕುರಿತು ಕೆಡೆಟ್‌ಗಳಿಗೆ ಪ್ರಾತ್ಯಕ್ಷಿಕೆ ನೀಡಿದರು. ಮೈಸೂರಿನ ಅಪೋಲೋ ಆಸ್ಪತ್ರೆ ಮತ್ತು ಗೋಣಿಕೊಪ್ಪಲಿನ ಲೋಪಾಮುದ್ರ ಆಸ್ಪತ್ರೆಯ ವೈದ್ಯರ ತಂಡದಿಂದ ಕಾರ್ಡಿಯಾಕ್ ಪಲ್ಮನರಿ ರೆಸಸಿಟೇಶನ್(ಸಿಪಿಆರ್) ಸೇರಿದಂತೆ ಸಂದಿಗ್ಧ ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಜೀವ ರಕ್ಷಣಾ ತಂತ್ರಗಳ ಕುರಿತು ತರಬೇತಿ ನೀಡಲಾಯಿತು.


    ಗೋಣಿಕೊಪ್ಪಲಿನ ತಾಲೂಕು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಉಪನ್ಯಾಸ ನೀಡಿದರು. ಘಟಕದಲ್ಲಿನ ಕ್ವಾರ್ಟರ್ ಗಾರ್ಡ್ ವಿನ್ಯಾಸ ಮತ್ತು ಕಾರ್ಯವಿಧಾನವನ್ನು ಕೆಡೆಟ್‌ಗಳಿಗೆ ಪ್ರದರ್ಶಿಸಲಾಯಿತು.
    ಶಿಬಿರದ ಸಮಾರೋಪ ಸಮಾರಂಭದಂದು ಕ್ಯಾಂಪ್ ಫೈರ್, ಕೆಡಿಟ್‌ಗಳಿಂದ ಡ್ರಿಲ್ ನಡೆಯಿತು. ಅತ್ಯುತ್ತಮ ಶೂಟರ್, ಅತ್ಯುತ್ತಮ ಡ್ರಿಲ್ ಹಾಗೂ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನ ಮತ್ತು ಪದಕಗಳನ್ನು ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts