More

    ಶ್ರೀ ಮಾರಮ್ಮ ದೇವಿಗೆ ವಾರ್ಷಿಕ ಪೂಜಾ ಮಹೋತ್ಸವ

    ಕೆ.ಆರ್.ನಗರ: ಪಟ್ಟಣದ ಶ್ರೀರಾಮ ಬಡಾವಣೆಯ ಭೋವಿ ಸಮುದಾಯದ ಗ್ರಾಮದೇವತೆ ಶ್ರೀ ಮಾರಮ್ಮ ತಾಯಿಯ 9ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವವು ಸೋಮವಾರ ಅದ್ಧೂರಿಯಾಗಿ ಜರುಗಿತು.

    ಬೆಳಗ್ಗೆ 6 ಗಂಟೆ ಬ್ರಾಹ್ಮೀ ಮೂಹೂರ್ತದಲ್ಲಿ ದೇವರ ಉತ್ಸವ ಮೂರ್ತಿಗೆ ಪಟ್ಟಣದ ಹೊರವಲಯದ ಹಳೆ ಎಡತೊರೆಯ ಕಾವೇರಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಲಾಯಿತು. ನಂತರ ವಿವಿಧ ಒಡವೆ, ವಸ್ತ್ರ, ಹೂಗಳಿಂದ ಅಲಂಕರಿಸಿ ನದಿಯ ದಡದಲ್ಲಿ ಪೂಜೆ ಪುರಸ್ಕಾರಗಳನ್ನು ನೆರವೇರಿಸಿ ಕಳಸಗಳನ್ನು ಹೊತ್ತ ಮುತ್ತೈದೆಯರೊಂದಿಗೆ ತಮಟೆ, ಛತ್ರಿ, ಛಾಮರ ಮತ್ತು ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು.

    ಮೈಸೂರು-ಹಾಸನ ರಸ್ತೆಯ ಮಾರ್ಗವಾಗಿ ತಾಯಿ ಉತ್ಸವ ಮೂರ್ತಿಯನ್ನು ತಂದು ಶ್ರೀರಾಮ ಬಡಾವಣೆಯ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಆ ನಂತರ ಆಲಯ ಪ್ರವೇಶ ಮಾಡಿ ಮಾರಮ್ಮ ತಾಯಿಗೆ ಅಭಿಷೇಕ, ಪೂಜೆ, ಮಹಾ ಮಂಗಳಾರತಿಯನ್ನು ನೆರವೇರಿಸಿ ಭಕ್ತಿಯಿಂದ ಪೂಜಿಸಲಾಯಿತು.

    ಬಡಾವಣೆಯ ನಿವಾಸಿಗಳೆಲ್ಲಾ ಸರತಿ ಸಾಲಿನಲ್ಲಿ ನಿಂತು ದೇವಿಗೆ ಪೂಜೆ ಸಲ್ಲಿಸುವ ಮೂಲಕ ದೇವಿ ದರ್ಶನ ಪಡೆದರು. ನಂತರ ಬಂದ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಮಜ್ಜಿಗೆ, ಪಾನಕ ಮತ್ತು ಪ್ರಸಾದ ವಿನಿಯೋಗಿಸಲಾಯಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ದೊಡ್ಡಸ್ವಾಮೇಗೌಡ, ಕಾಂಗ್ರೆಸ್ ಮುಖಂಡ ಪುಟ್ಟರಾಜು ಭಾಗವಹಿಸಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭೋವಿ ಯುವಕರ ಸಂಘದ ತಾಲೂಕು ಅಧ್ಯಕ್ಷ ಶಿವು, ಪದಾಧಿಕಾರಿಗಳಾದ ಕೆ.ಎಸ್.ನಾಗೇಶ್, ಕುಮಾರ್, ದೇವರಾಜ್, ಏಸುರಾಜು, ರಾಜಶೇಖರ್, ಲಕ್ಷ್ಮೀನಾರಾಯಣ, ಮುಖಂಡರಾದ ಸತ್ಯಣ್ಣ, ಬಾಲಸುಬ್ರಮಣ್ಯ, ಸುಬ್ಬಣ್ಣ, ನಾಗರಾಜು, ಪುರುಷೋತ್ತಮ್, ಶ್ರೀನಿವಾಸ್, ಮಂಜುನಾಥ್ ಮತ್ತು ಮಹಿಳಾ ಸಂಘಟನೆ ಸದಸ್ಯರು ಮತ್ತು ಪಧಾಧಿಕಾರಿಗಳು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts