ಟ್ರಂಪ್​ ಮಾಧ್ಯಮ: ಹೊಸ ವಿವಾದ ಸೃಷ್ಟಿಸಿದ ಅಮೆರಿಕ ಅಧ್ಯಕ್ಷ

ಅಮೆರಿಕದ ಪ್ರಮುಖ ಮಾಧ್ಯಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ತಿರುಗಿಬಿದ್ದಿದ್ದು, ಟ್ರಂಪ್ ಕೂಡ ಮಾಧ್ಯಮಗಳಿಗೆ ಸೆಡ್ಡು ಹೊಡೆಯುವ ಪ್ರಯತ್ನ ನಡೆಸಿದ್ದಾರೆ. ಪ್ರಮುಖ ಟಿವಿ ವಾಹಿನಿಗಳು ಟ್ರಂಪ್ ಕಾರ್ಯಕ್ರಮಗಳ ನೇರ ಪ್ರಸಾರವನ್ನು ಸ್ಥಗಿತಗೊಳಿಸಿವೆ. ಸಿಎನ್​ಎನ್, ಎಂಎಸ್ ನೌ ಮತ್ತು ಪೊಲಿಟಿಕೊ ಸಂಸ್ಥೆಯ ಪತ್ರಕರ್ತರ ಮೇಲೆ ಶ್ವೇತಭವನವು ನಿಷೇಧ ಹೇರಿದ ಬೆನ್ನಲ್ಲೇ ಈ ತೀರ್ಮಾನ ಕೈಗೊಳ್ಳಲಾಗಿದೆ.
Donald Trump
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on

ಅಮೆರಿಕದ ಪ್ರಮುಖ ಮಾಧ್ಯಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ತಿರುಗಿಬಿದ್ದಿದ್ದು, ಟ್ರಂಪ್ ಕೂಡ ಮಾಧ್ಯಮಗಳಿಗೆ ಸೆಡ್ಡು ಹೊಡೆಯುವ ಪ್ರಯತ್ನ ನಡೆಸಿದ್ದಾರೆ. ಪ್ರಮುಖ ಟಿವಿ ವಾಹಿನಿಗಳು ಟ್ರಂಪ್ ಕಾರ್ಯಕ್ರಮಗಳ ನೇರ ಪ್ರಸಾರವನ್ನು ಸ್ಥಗಿತಗೊಳಿಸಿವೆ. ಸಿಎನ್​ಎನ್, ಎಂಎಸ್ ನೌ ಮತ್ತು ಪೊಲಿಟಿಕೊ ಸಂಸ್ಥೆಯ ಪತ್ರಕರ್ತರ ಮೇಲೆ ಶ್ವೇತಭವನವು ನಿಷೇಧ ಹೇರಿದ ಬೆನ್ನಲ್ಲೇ ಈ ತೀರ್ಮಾನ ಕೈಗೊಳ್ಳಲಾಗಿದೆ. ಮಾಧ್ಯಮಗಳು ಮತ್ತು ಟ್ರಂಪ್ ನಡುವೆ ಈ ವಿವಾದ ಉದ್ಭವಿಸಿರುವುದೇಕೆ? ಮಾಧ್ಯಮಗಳನ್ನು ಹೀಗೆ ನಿರ್ಬಂಧಿಸುವ ಅಧಿಕಾರ ಅಧ್ಯಕ್ಷರಿಗಿದೆಯೇ? ಇದರ ಪರಿಣಾಮಗಳೇನು? ಈ ಕುರಿತಾದ ವಿವರ ಇಲ್ಲಿದೆ.

ಹಿಂದೊಮ್ಮೆ ಸಾಮಾಜಿಕ ಮಾಧ್ಯಮಗಳ ವಿರುದ್ಧ ‘ಸಮರ’ ಸಾರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಮುಖ್ಯವಾಹಿನಿ ಮಾಧ್ಯಮಗಳ ವಿರುದ್ಧವೂ ಸಿಡಿಮಿಡಿಗೊಂಡಿದ್ದಾರೆ. ಟೀಕೆ, ವಿರೋಧ ಅಥವಾ ವಿಮರ್ಶೆಯನ್ನು ರಚನಾತ್ಮಕವಾಗಿ ಸ್ವೀಕರಿಸದ ಟ್ರಂಪ್ ತಮ್ಮ ನೀತಿಗಳನ್ನು ವಿರೋಧಿಸುವ ಮಾಧ್ಯಮಗಳನ್ನು ‘ಸುಳ್ಳು ಮತ್ತು ಪಕ್ಷಪಾತಿ’ ಎಂದು ಜರಿಯುತ್ತಿದ್ದಾರೆ. ಈ ಹಿಂದೆಯೂ ಅವರು ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿ ನಡೆಸುವಾಗಲೇ ಮಾಧ್ಯಮಗಳನ್ನು ಟೀಕಿಸಿದ್ದರು. ಕೆಲ ಪತ್ರಕರ್ತರನ್ನು ನಿಂದಿಸಿದ್ದರು. ಆದರೆ, ಈ ಬಾರಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ಟ್ರಂಪ್ ಹಠಮಾರಿ ಧೋರಣೆಯ ವಿರುದ್ಧ ಮಾಧ್ಯಮ ಸಂಸ್ಥೆಗಳು ಕೂಡ ಒಂದಾಗಿ ಹೋರಾಟ ಆರಂಭಿಸಿವೆ. ಹಾಗಾಗಿ, ಈಗ ಅಮೆರಿಕದಲ್ಲಿ ‘ಟ್ರಂಪ್ ವರ್ಸಸ್ ಮಾಧ್ಯಮ’ ಎಂಬಂಥ ಸ್ಥಿತಿ ಸೃಷ್ಟಿಯಾಗಿದೆ.

ಅಮೆರಿಕದ ಪ್ರಮುಖ ಟಿವಿ ವಾಹಿನಿಗಳು ಟ್ರಂಪ್ ಕಾರ್ಯಕ್ರಮಗಳ ಜಂಟಿ ಲೈವ್ ವರದಿಗಾರಿಕೆಯನ್ನು ಸ್ಥಗಿತಗೊಳಿಸಿವೆ. ಫಾಕ್ಸ್ ನ್ಯೂಸ್​ನ ವಾಷಿಂಗ್ಟನ್ ಬ್ಯೂರೋ ಮುಖ್ಯಸ್ಥ ಬ್ರಿಯಾನ್ ಬಾಟನ್ ಸೋಮವಾರ ಈ ಮಾಹಿತಿ ನೀಡಿದ್ದು, ಇನ್ನು ಮುಂದೆ ಈ ವ್ಯವಸ್ಥೆಯಡಿ ಅಧ್ಯಕ್ಷರ ಕಾರ್ಯಕ್ರಮಗಳ ವಿಡಿಯೋ ಕವರೇಜ್ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶ್ವೇತಭವನದಿಂದ ಟ್ರಂಪ್ ಟಿವಿ!

ಪ್ರಮುಖ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದ ಬೆನ್ನಲ್ಲೇ ಶ್ವೇತಭವನವು ‘ಟ್ರಂಪ್ ಟಿವಿ’ ಎಂಬ ಹೆಸರಿನ ತನ್ನದೇ ಆದ ಆನ್​ಲೈನ್ ವಿಡಿಯೋ ಫೀಡ್ ಪ್ರಾರಂಭಿಸಿದೆ. ಇದರಲ್ಲಿ ಟ್ರಂಪ್ ಅವರ ಹಳೆಯ ವಿಡಿಯೋಗಳು, ಸರ್ಕಾರದ ಪ್ರಮುಖ ಪ್ರಕಟಣೆಗಳು ಹಾಗೂ ಇತ್ತೀಚಿನ ವಿದ್ಯಮಾನಗಳನ್ನು ಪ್ರಸಾರ ಮಾಡಲಾಗುತ್ತದೆ. ಜನರು ಶ್ವೇತಭವನದ ನೇರ ಕಾರ್ಯಕ್ರಮಗಳನ್ನು ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸೌಲಭ್ಯವಿರುವ ಇತರ ಸಾಧನಗಳ ಮೂಲಕವೂ ವೀಕ್ಷಿಸಬಹುದಾಗಿದೆ. ಸೋಮವಾರ ಶ್ವೇತಭವನದಲ್ಲಿ ಹೊಸ ಹೆಲಿಪ್ಯಾಡ್​ನ ಉದ್ಘಾಟನೆ ನಡೆಯಿತು. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳ ವಿಡಿಯೋ ವರದಿಗಾರಿಕೆಯನ್ನು ಟಿವಿ ವಾಹಿನಿಗಳು ಮಾಡುತ್ತವೆ, ಆದರೆ ಈ ಬಾರಿ ಅವು ಜಂಟಿ ವರದಿಗಾರಿಕೆಯನ್ನು ಸ್ಥಗಿತಗೊಳಿಸಿದ್ದವು. ಆದ್ದರಿಂದ ಶ್ವೇತಭವನವೇ ಸ್ವತಃ ಕಾರ್ಯಕ್ರಮದ ವಿಡಿಯೋವನ್ನು ಬಿಡುಗಡೆ ಮಾಡಿತು. ಕಾರ್ಯಕ್ರಮದಲ್ಲಿ ಟಿವಿ ವಾಹಿನಿಗಳ ಕ್ಯಾಮೆರಾಗಳು ಮತ್ತು ಮೈಕ್ರೋಫೋನ್​ಗಳು ಇರಲಿಲ್ಲ. ಇದರಿಂದಾಗಿ ಟ್ರಂಪ್ ಧ್ವನಿ ಸ್ಪಷ್ಟವಾಗಿ ಕೇಳಿಸಲಿಲ್ಲ. ಮರೀನ್ ಒನ್​ನ ಶಬ್ದದಿಂದಾಗಿಯೂ ತೊಂದರೆಯುಂಟಾಯಿತು. ಈಗ ಇಂತಹ ಕಾರ್ಯಕ್ರಮಗಳನ್ನು ಶ್ವೇತಭವನ ತನ್ನದೇ ಆದ ಡಿಜಿಟಲ್ ಪ್ಲಾಟ್​ಫಾಮ್ರ್ ಆದ ‘ಟ್ರಂಪ್ ಟಿವಿ’ಯಲ್ಲಿ ಪ್ರಸಾರ ಮಾಡುತ್ತಿದೆ.

1 ಮಾಧ್ಯಮಗಳ ಮೇಲೆ ಏಕಪಕ್ಷೀಯ ನಿಷೇಧ ಕಾನೂನುಬಾಹಿರವಾಗಿದೆ. ಹೌದು, ಅಮೆರಿಕದ ಅಧ್ಯಕ್ಷರು ತಮ್ಮ ಸ್ವಂತ ಇಷ್ಟದಂತೆ ಯಾವುದೇ ಮಾಧ್ಯಮ ಸಂಸ್ಥೆಯನ್ನು ಶ್ವೇತಭವನದಿಂದ (ವೈಟ್​ಹೌಸ್) ನಿಷೇಧಿಸುವಂತಿಲ್ಲ.

2 ಟ್ರಂಪ್ ಕ್ರಮ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ. ಏಕೆಂದರೆ, ಅಮೆರಿಕದ ಸಂವಿಧಾನದ ಮೊದಲ ತಿದ್ದುಪಡಿಯು ಪತ್ರಿಕಾ ಸ್ವಾತಂತ್ರ್ಯವನ್ನು ನೀಡುತ್ತದೆ; ವರದಿಗಾರಿಕೆ ಇಷ್ಟವಾಗದ ಕಾರಣಕ್ಕಾಗಿ ನಿಷೇಧ ಹೇರುವುದು ಅಸಾಂವಿಧಾನಿಕ.

3 ಪತ್ರಕರ್ತ ಅಥವಾ ಮಾಧ್ಯಮ ಸಂಸ್ಥೆಯಿಂದ ಅಧ್ಯಕ್ಷರ ಭದ್ರತೆಗೆ ಯಾವುದೇ ಗಂಭೀರ ಬೆದರಿಕೆ ಇದ್ದಾಗ ಮಾತ್ರ ಅವರನ್ನು ತಡೆಯಬಹುದು ಎಂದು 1977ರಲ್ಲಿ ನ್ಯಾಯಾಲಯ ತೀರ್ಪು ನೀಡಿದೆ.

ಇದೇ ಮೊದಲಲ್ಲ

ಟ್ರಂಪ್ ಅವರನ್ನು 2021ರ ಜನವರಿಯಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್​ಫಾಮ್ರ್ ‘ಎಕ್ಸ್’ (ಹಿಂದಿನ ಟ್ವಿಟರ್) ನಿಂದ ನಿಷೇಧಿಸಲಾಯಿತು. ಇದರ ಬೆನ್ನಲ್ಲೇ ಟ್ರಂಪ್ 2022ರ ಫೆಬ್ರವರಿ 21ರಂದು ‘ಟ್ರೂತ್ ಸೋಷಿಯಲ್’ ಎಂಬ ತಮ್ಮದೇ ಆದ ಸಾಮಾಜಿಕ ಮಾಧ್ಯಮ ಪ್ಲಾಟ್​ಫಾಮ್ರ್ ಪ್ರಾರಂಭಿಸಿದರು. ಪ್ರಸ್ತುತ ಇದು 60 ಲಕ್ಷ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಟ್ರಂಪ್ ಅವರೊಬ್ಬರಿಗೇ ಈ ಪ್ಲಾಟ್​ಫಾಮರ್್​ನಲ್ಲಿ 1.29 ಕೋಟಿ ಫಾಲೋವರ್ಸ್​ಗಳಿದ್ದಾರೆ.

ಪಕ್ಷಪಾತದ ಆರೋಪ

ಟ್ರಂಪ್ 2016ರಿಂದಲೂ ಸಿಎನ್​ಎನ್​ನ ಸುದ್ದಿಗಳನ್ನು ಫೇಕ್ ನ್ಯೂಸ್ (ನಕಲಿ ಸುದ್ದಿ) ಎಂದು ಕರೆಯುತ್ತಿದ್ದಾರೆ. ಟ್ರಂಪ್ ಮೊದಲ ಅವಧಿಯಲ್ಲೂ ಸಿಎನ್​ಎನ್ ಪತ್ರಕರ್ತರ ಶ್ವೇತಭವನದ ಪ್ರವೇಶ ಪಾಸ್​ಗೆ ಸಂಬಂಧಿಸಿದಂತೆ ವಿವಾದ ಉಂಟಾಗಿತ್ತು. ಟ್ರಂಪ್ ನ್ಯೂಯಾರ್ಕ್ ಟೈಮ್ಸ್ ಮತ್ತು ವಾಲ್ ಸ್ಟ್ರೀಟ್ ಜರ್ನಲ್​ನಂತಹ ದೊಡ್ಡ ಪತ್ರಿಕೆಗಳ ಮೇಲೂ ತಮ್ಮ ವಿರುದ್ಧ ಪಕ್ಷಪಾತದ ಸುದ್ದಿಗಳನ್ನು ಪ್ರಕಟಿಸುತ್ತಿರುವ ಆರೋಪ ಮಾಡಿದ್ದಾರೆ. ಅವರು ಈ ಮಾಧ್ಯಮ ಸಂಸ್ಥೆಗಳ ವರದಿಗಾರಿಕೆಯನ್ನು ಹಲವು ಬಾರಿ ಪ್ರಶ್ನಿಸಿದ್ದಾರೆ ಮತ್ತು ಕೆಲವು ಪ್ರಕರಣಗಳಲ್ಲಿ ಮಾನನಷ್ಟ ಮೊಕದ್ದಮೆಗಳನ್ನೂ ಹೂಡಿದ್ದಾರೆ. ಈ ಮಾಧ್ಯಮ ಸಂಸ್ಥೆಗಳು ತಮ್ಮ ವರ್ಚಸ್ಸಿಗೆ ಕಳಂಕ ತರುವ ಉದ್ದೇಶದಿಂದಲೇ ಇಂತಹ ಸುದ್ದಿಗಳನ್ನು ಪ್ರಕಟಿಸುತ್ತವೆ ಎಂಬುದು ಟ್ರಂಪ್ ಆರೋಪವಾಗಿದೆ. ಆದರೆ, ಮಾಧ್ಯಮ ಸಂಸ್ಥೆಗಳು ಈ ಆರೋಪವನ್ನು ನಿರಾಕರಿಸಿವೆ.

ಪ್ರಸಾರ ವ್ಯವಸ್ಥೆ ಹೇಗಿದೆ?

ಅಮೆರಿಕದಲ್ಲಿ ಅಧ್ಯಕ್ಷರ ಪ್ರತಿಯೊಂದು ಕಾರ್ಯಕ್ರಮಕ್ಕೂ ಎಲ್ಲ ಟಿವಿ ವಾಹಿನಿಗಳ ಕ್ಯಾಮೆರಾಗಳು ತಲುಪಲು ಸಾಧ್ಯವಿಲ್ಲ. ಆದ್ದರಿಂದ ಎಬಿಸಿ, ಸಿಬಿಎಸ್, ಸಿಎನ್​ಎನ್, ಫಾಕ್ಸ್ ನ್ಯೂಸ್ ಮತ್ತು ಎನ್​ಬಿಸಿ ಒಟ್ಟಾಗಿ ಜಂಟಿ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, ಇದನ್ನು ‘ಪ್ರೆಸಿಡೆನ್ಶಿಯಲ್ ಟೆಲಿವಿಜನ್ ಪೂಲ್’ ಎಂದು ಕರೆಯಲಾಗುತ್ತದೆ. ಇದರಲ್ಲಿ ವಾಹಿನಿಗಳು ಸರದಿಯ ಪ್ರಕಾರ ಅಧ್ಯಕ್ಷರ ಕಾರ್ಯಕ್ರಮದ ವಿಡಿಯೋ ರೆಕಾರ್ಡಿಂಗ್ ಮಾಡಿ, ಆ ದೃಶ್ಯಾವಳಿಗಳನ್ನು ಇತರ ಮಾಧ್ಯಮ ಸಂಸ್ಥೆಗಳಿಗೂ ಹಂಚಿಕೊಳ್ಳುತ್ತವೆ. ಈ ಬಾರಿ ಸಿಎನ್​ಎನ್ ವಾಹಿನಿಯ ಸರದಿ ಇತ್ತು, ಆದರೆ ಶ್ವೇತಭವನವು ಸಿಎನ್​ಎನ್ ಸಂಸ್ಥೆಯ ಪತ್ರಕರ್ತರನ್ನು ನಿಷೇಧಿಸಿತು. ಇದರ ನಂತರ, ಉಳಿದ ವಾಹಿನಿಗಳು ಸಿಎನ್​ಎನ್ ಬದಲಿಗೆ ವರದಿಗಾರಿಕೆ ಮಾಡುವ ಬದಲು ಜಂಟಿ ಟಿವಿ ಪೂಲ್ ವ್ಯವಸ್ಥೆಯನ್ನೇ ಸ್ಥಗಿತಗೊಳಿಸಿದ್ದು, ಟ್ರಂಪ್ ಮತ್ತು ಶ್ವೇತಭವನಕ್ಕೆ ಮುಖಭಂಗವಾದಂತಾಗಿದೆ.

ಫೋಟೋ ವರದಿಗಾರಿಕೆ ಸ್ಥಗಿತ: ಅಮೆರಿಕದ ಪ್ರಸಿದ್ಧ ದಿನಪತ್ರಿಕೆ ‘ನ್ಯೂಯಾರ್ಕ್ ಟೈಮ್ಸ್’ ಕೂಡ ಶ್ವೇತಭವನದ ಫೋಟೋ ಪೂಲ್​ನಿಂದ ಪಡೆದ ಛಾಯಾಚಿತ್ರಗಳನ್ನು ಪ್ರಕಟಿಸದಿರಲು ಮತ್ತು ಹಂಚಿಕೊಳ್ಳದಿರಲು ನಿರ್ಧರಿಸಿದೆ. ಯಾವ ಮಾಧ್ಯಮ ಸಂಸ್ಥೆಗಳ ಪತ್ರಕರ್ತರನ್ನು ಶ್ವೇತಭವನದಿಂದ ಹೊರಗಿಡಲಾಗಿದೆಯೋ, ಅವರ ಬೆಂಬಲಾರ್ಥವಾಗಿ ತಾನು ಈ ನಿರ್ಧಾರ ಕೈಗೊಂಡಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ತಿಳಿಸಿದೆ.

ಮಾಧ್ಯಮ ಸಂಸ್ಥೆಗಳಿಂದ ಕೋರ್ಟ್​ಗೆ ಮೊರೆ

ಸಿಎನ್​ಎನ್, ಎಂಎಸ್ ನೌ ಮತ್ತು ಪಾಲಿಟಿಕೊ ಮಾಧ್ಯಮ ಸಂಸ್ಥೆಗಳು ಟ್ರಂಪ್ ಆಡಳಿತದ ವಿರುದ್ಧ ಅಮೆರಿಕದ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿವೆ. ಈ ಮೂರೂ ಮಾಧ್ಯಮ ಸಂಸ್ಥೆಗಳು ಶ್ವೇತಭವನದಲ್ಲಿ ಪ್ರವೇಶಕ್ಕೆ ಮರುಅವಕಾಶ ಕಲ್ಪಿಸುವಂತೆ ಮನವಿ ಮಾಡಿವೆ. ಅಸೋಸಿಯೇಟೆಡ್ ಪ್ರೆಸ್ (ಎಪಿ) ಪ್ರಕಾರ, ಮೊದಲ ಮತ್ತು ಐದನೇ ತಿದ್ದುಪಡಿಗಳ ಅಡಿಯಲ್ಲಿ ತಮಗೆ ನೀಡಲಾದ ಹಕ್ಕುಗಳನ್ನು ಆಡಳಿತವು ಉಲ್ಲಂಘಿಸಿದೆ ಎಂದು ಮೂರೂ ಮಾಧ್ಯಮ ಸಂಸ್ಥೆಗಳು ಆರೋಪಿಸಿವೆ. ಜೊತೆಗೆ, ಈ ಪ್ರಕರಣದ ತುರ್ತು ವಿಚಾರಣೆ ನಡೆಸಬೇಕೆಂದೂ ಕೋರಿವೆ.

ಹಿಂದೆಯೂ ನಡೆದಿತ್ತು

ಜಾನ್ ಆಡಮ್ಸ್ (1798): ಫ್ರಾನ್ಸ್ ಜತೆ ಯುದ್ಧದ ಭೀತಿ ಇದ್ದಾಗ ಜಾನ್ ಆಡಮ್ಸ್ ಆಡಳಿತ ‘ಸೆಡಿಶನ್ ಆಕ್ಟ್-1798’ ಜಾರಿಗೆ ತಂದಿತು. ಸರ್ಕಾರದ ವಿರುದ್ಧ ಸುಳ್ಳು, ದ್ವೇಷಪೂರಿತ ಅಥವಾ ನಿಂದನೀಯ ಲೇಖನಗಳನ್ನು ಪ್ರಕಟಿಸುವುದು ಅಪರಾಧವೆಂದು ಘೊಷಿಸಲಾಯಿತು. ಸರ್ಕಾರವನ್ನು ಟೀಕಿಸಿದ ಹಲವು ಪತ್ರಿಕಾ ಸಂಪಾದಕರು ಮತ್ತು ಪತ್ರಕರ್ತರನ್ನು ಜೈಲಿಗೆ ಕಳುಹಿಸಲಾಯಿತು. ಸರ್ಕಾರದ ಈ ಕ್ರಮ ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. 1800ರ ಚುನಾವಣೆಯಲ್ಲಿ ಆಡಮ್ಸ್ ಸೋಲಲು ಇದು ಮುಖ್ಯ ಕಾರಣವಾಯಿತು. ಥಾಮಸ್ ಜೆಫರ್ಸನ್ ಅಧ್ಯಕ್ಷರಾದ ನಂತರ ಈ ಕಾಯ್ದೆಯನ್ನು ರದ್ದುಗೊಳಿಸಿ, ಜೈಲಿನಲ್ಲಿದ್ದ ಪತ್ರಕರ್ತರಿಗೆ ಕ್ಷಮಾದಾನ ನೀಡಿದರು.

ಅಬ್ರಹಾಂ ಲಿಂಕನ್(1861-1865): ಅಮೆರಿಕದ ಅಂತರ್ಯುದ್ಧದ ಸಂದರ್ಭದಲ್ಲಿ ಲಿಂಕನ್ ಆಡಳಿತವು ರಾಷ್ಟ್ರೀಯ ಭದ್ರತೆ ಮತ್ತು ಒಕ್ಕೂಟವನ್ನು ಉಳಿಸುವ ನೆಪದಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿತು. ಒಕ್ಕೂಟ ವಿರೋಧಿ ನಿಲುವು ತಳೆದಿದ್ದ 300ಕ್ಕೂ ಹೆಚ್ಚು ಪತ್ರಿಕೆ ಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಯಿತು ಅಥವಾ ಅವುಗಳ ಅಂಚೆ ವಿತರಣೆಯನ್ನು ತಡೆಯಲಾಯಿತು. ಟೆಲಿಗ್ರಾಫ್ ಲೈನ್​ಗಳ ಮೇಲೆ ಕಣ್ಗಾವಲು ಇಡಲಾಯಿತು ಮತ್ತು ಕೆಲ ಸಂಪಾದಕರನ್ನು ಬಂಧಿಸಲಾಯಿತು.

ವುಡ್ರೋ ವಿಲ್ಸನ್ (1917-1918): ಮೊದಲ ಮಹಾಯುದ್ಧದ ಸಮಯದಲ್ಲಿ ‘ಎಸ್ಪಿಯನೇಜ್ ಆಕ್ಟ್-1917’ ಮತ್ತು ‘ಸೆಡಿಶನ್ ಆಕ್ಟ್ (1918) ಜಾರಿಗೆ ತರಲಾಯಿತು. ಯುದ್ಧ ವಿರೋಧಿ, ಸಮಾಜವಾದಿ ಮತ್ತು ಎಡಪಂಥೀಯ ಪತ್ರಿಕೆಗಳ ಅಂಚೆ ಪರವಾನಗಿಯನ್ನು ಅಮಾನತುಗೊಳಿಸಲಾಯಿತು. ಯುದ್ಧ ನೀತಿಯನ್ನು ಟೀಕಿಸಿದ ಬರಹಗಾರರು ಮತ್ತು ಪತ್ರಕರ್ತರನ್ನು ವಿಚಾರಣೆಗೆ ಒಳಪಡಿಸಿ ಜೈಲಿಗೆ ಹಾಕಲಾಯಿತು. ಇದು ಅಮೆರಿಕದಲ್ಲಿ ಭಿನ್ನಾಭಿಪ್ರಾಯ ಹತ್ತಿಕ್ಕುವ ಕರಾಳ ಅಧ್ಯಾಯವಾಯಿತು.

ರಿಚರ್ಡ್ ನಿಕ್ಸನ್ (1969-1974): ವಿಯೆಟ್ನಾಂ ಯುದ್ಧದ ರಹಸ್ಯ ದಾಖಲೆಗಳಾದ ‘ಪೆಂಟಗನ್ ಪೇಪರ್ಸ್’ ಪ್ರಕಟಣೆಯನ್ನು ತಡೆಯಲು ನಿಕ್ಸನ್ ಆಡಳಿತ ಪ್ರಯತ್ನಿಸಿತು. ದಿ ನ್ಯೂಯಾರ್ಕ್ ಟೈಮ್ಸ್ ಮತ್ತು ದಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗಳು ಈ ದಾಖಲೆಗಳನ್ನು ಪ್ರಕಟಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಯತ್ನಿಸಿತು. ಸುಪ್ರೀಂ ಕೋರ್ಟ್ ಸರ್ಕಾರದ ವಾದವನ್ನು ತಿರಸ್ಕರಿಸಿ, ಪತ್ರಿಕೆಗಳಿಗೆ ಪ್ರಕಟಿಸುವ ಹಕ್ಕಿದೆ ಎಂದು ತೀರ್ಪು ನೀಡಿತು. ಇದು ಮಾಧ್ಯಮ ಸ್ವಾತಂತ್ರ್ಯಕ್ಕೆ ಸಿಕ್ಕ ಐತಿಹಾಸಿಕ ಜಯವಾಯಿತು. ನಂತರ ವಾಟರ್​ಗೇಟ್ ಹಗರಣವನ್ನು ಮಾಧ್ಯಮಗಳೇ ಬಯಲಿಗೆಳೆದು ನಿಕ್ಸನ್ ರಾಜೀನಾಮೆ ನೀಡಬೇಕಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net