

‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’. ‘ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ’- ಇದು ನಮ್ಮ ಸನಾತನ ಧರ್ಮದ ತತ್ವ, ಸಿದ್ಧಾಂತ. ಸೃಷ್ಟಿಯ ಶಕ್ತಿಯಾಗಿ, ಸಂಸ್ಕೃತಿಯ ವಾಹಕಳಾಗಿ, ಜ್ಞಾನದ ಪ್ರತಿರೂಪವಾಗಿ ಹಾಗೂ ಧರ್ಮದ ರಕ್ಷಕಳಾಗಿಯೂ ಸ್ತ್ರೀಶಕ್ತಿಯನ್ನು ನಾವು ಕಾಣುತ್ತೇವೆ. ತ್ರಿಮೂರ್ತಿಗಳ ತ್ರಿಕಾರ್ಯಗಳನ್ನು ಸ್ತ್ರೀ ಮಾಡಬಲ್ಲವಳಾಗಿದ್ದಾಳೆ ಅಂದರೆ ಸ್ತ್ರೀಶಕ್ತಿ ಸೃಷ್ಟಿಯನ್ನೂ ಮಾಡಬಲ್ಲದು, ಪೋಷಣೆಯನ್ನೂ ಮಾಡಬಲ್ಲದು, ಅಗತ್ಯ ಬಿದ್ದಾಗ ಅಧರ್ಮವನ್ನು ನಾಶಮಾಡಬಲ್ಲವಳಾಗಿದ್ದಾಳೆ.
ಇಂತಹ ಸ್ತ್ರೀಶಕ್ತಿಯ ಆರಾಧನೆಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿರುವ ಹಬ್ಬವೇ ನವರಾತ್ರಿ. ಒಂಬತ್ತು ರಾತ್ರಿಗಳ ಕಾಲ ದೇವಿಯ ಒಂಬತ್ತು ರೂಪಗಳನ್ನು ಆರಾಧಿಸುವ ಈ ಉತ್ಸವವು ಕೇವಲ ಧಾರ್ವಿುಕ ಆಚರಣೆಯಲ್ಲ. ನಾರಿಶಕ್ತಿಯ ಉದ್ದೀಪನ. ನವರಾತ್ರಿ ಎಂದ ಕೂಡಲೇ ದೇವಸ್ಥಾನಗಳಲ್ಲಿ ಅದರಲ್ಲೂ ದೇವಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಚಂಡಿಕಾ ಹೋಮ, ದುರ್ಗಾ ಪೂಜೆ ಇನ್ನಿತರ ಧಾರ್ವಿುಕ ವಿಧಿವಿಧಾನಗಳ ಜೊತೆಗೆ ಕರಾವಳಿ ಭಾಗದಲ್ಲಿ ಪ್ರಸಿದ್ಧವಾಗಿರುವ ಹುಲಿ ಕುಣಿತ ಹಾಗೂ ನವರಾತ್ರಿಯ ವೇಷಗಳು ನೆನಪಾಗುತ್ತವೆ. ಒಂಬತ್ತು ರಾತ್ರಿಗಳ ಕಾಲ ದೇವಿಯ ಒಂಬತ್ತು ರೂಪಗಳನ್ನು ಆರಾಧಿಸುವ ಈ ಉತ್ಸವವು ಕೇವಲ ಧಾರ್ವಿುಕ ಆಚರಣೆಯಲ್ಲ. ಅದು ನಮ್ಮ ಅಂತರಂಗದಲ್ಲಿರುವ ಶಕ್ತಿಯನ್ನು ಕಂಡುಕೊಳ್ಳುವ, ಅನ್ಯಾಯದ ವಿರುದ್ಧ ಹೋರಾಡುವ, ಧೈರ್ಯವನ್ನು ಬೆಳೆಸುವ ಮತ್ತು ಸತ್ಯ, ವಿಜಯ ಸಾಧಿಸುವ, ಬದುಕನ್ನು ಸಂಭ್ರಮಿಸುವ ಹಾಗೂ ನಮ್ಮ ನೆಲದ ಸಂಸ್ಕೃತಿಯ ಸಂಕೇತವೂ ಆಗಿದೆ.
ಸ್ತ್ರೀಯನ್ನು ತಾಯಿ ದುರ್ಗಾದೇವಿಗೆ ಹೋಲಿಕೆ ಮಾಡುತ್ತೇವೆ. ಆದರೆ ಅನೇಕ ಜನರು ತಮ್ಮ ಮನೆ, ಕುಟುಂಬ ಅಥವಾ ಸಮಾಜದ ಹೆಣ್ಣುಮಗಳಲ್ಲಿ ದೈವಿಸ್ವರೂಪವನ್ನು ಕಾಣುವ, ಅವರ ಜೊತೆ ಗೌರವಯುತವಾಗಿ ವರ್ತಿಸುವ ಮನೋಭಾವವನ್ನು ಹೊಂದಿರುವುದಿಲ್ಲ ಎಂಬ ಮಾತು ಅಂದಿಗೂ-ಇಂದಿಗೂ ಕೇಳಿಬರುತ್ತಲೇ ಇದೆ. ಜೊತೆಗೆ ಸೃಷ್ಟಿಗೆ ಸ್ತ್ರೀ-ಪುರುಷರಿಬ್ಬರೂ ಬೇಕು, ಸ್ತ್ರೀಗೆ ಮಾತ್ರ ಏಕೆ ಕಟ್ಟುಪಾಡುಗಳು ಎಂಬ ಪ್ರಶ್ನೆಯೂ ಅನೇಕರಲ್ಲಿದೆ. ‘ನಮ್ಮ ಎರಡು ಕಣ್ಣುಗಳಲ್ಲಿ ಯಾವುದು ಮುಖ್ಯ’ ಎಂಬ ಪ್ರಶ್ನೆ ಮುಂದಿಟ್ಟರೆ ‘ಎರಡೂ ಕಣ್ಣುಗಳು ಮುಖ್ಯ’ ಎಂದೇ ಹೇಳುತ್ತೇವೆ. ಹಾಗೆಯೇ ಸ್ತ್ರೀ-ಪುರುಷರಲ್ಲಿ ಇಬ್ಬರೂ ಮುಖ್ಯ. ಯಾರೂ ಕೂಡ ಮೇಲಲ್ಲ, ಕೀಳಲ್ಲ. ಅದನ್ನೇ ಇಡೀ ಜಗತ್ತಿಗೆ ತಿಳಿಸುವ ಕಾರಣಕ್ಕಾಗಿ ಮಹಾಶಿವ ತನ್ನ ದೇಹದ ಅರ್ಧಭಾಗದಲ್ಲಿ ಪಾರ್ವತಿಯನ್ನು ಧರಿಸಿಕೊಂಡು ಅರ್ಧನಾರೀಶ್ವರನಾಗಿದ್ದಾನೆ.
ಇಬ್ಬರೂ ಒಬ್ಬರಿಗೊಬ್ಬರು ಪೂರಕ. ಪುರುಷನಿಗೆ ಸ್ತ್ರೀ ಜೊತೆಯಾದಾಗ ಮಾತ್ರ ಸೃಷ್ಟಿ ಸಾಧ್ಯ. ಶಿವನಿಗೆ ಶಕ್ತಿ(ಪಾರ್ವತಿ)ಯು, ಚೈತನ್ಯಕ್ಕೆ ಪ್ರಕೃತಿಯು ಜೊತೆಯಾಗುವುದು ಸೃಷ್ಟಿಕಾರ್ಯಕ್ಕಾಗಿಯೇ. ಆದರೆ ಸ್ತ್ರೀ ಇನ್ನೂ ವಿಶೇಷವಾಗಿ ಗೌರವಿಸಲ್ಪಡುತ್ತಾಳೆ. ಯಾಕೆಂದರೆ ಮಗುವನ್ನು ತನ್ನ ಉದರದಲ್ಲಿ ಒಂಬತ್ತು ತಿಂಗಳು ಹೊತ್ತು, ಹೆತ್ತು ಹಾಲು ಕುಡಿಸಿ, ತುತ್ತು ಉಣಿಸಿ, ಸಂಸ್ಕಾರಗಳನ್ನು ಧಾರೆಯೆರೆಯುತ್ತಾಳೆ. ಉತ್ತಮ ಭವಿಷ್ಯ ಕೊಡಿಸುವಲ್ಲಿ ಮಹತ್ತರ ಪಾತ್ರವಹಿಸಿ, ತಾನೇ ಮಗುವಿಗೆ ಮೊದಲ ಗುರುವಾಗುತ್ತಾಳೆ. ತಂದೆಯು ಮಗುವಿನ ಬೇಕು-ಬೇಡಗಳನ್ನು ಪೂರೈಸಿದರೆ, ತಾಯಿ ಮಗುವಿನ ಮನಸ್ಸಿನ ಭಾವನೆಗಳನ್ನು ಅರಿತು, ಪ್ರೀತಿ, ಮಮತೆ, ಕಾಳಜಿಯ ಜೊತೆಗೆ ಬದುಕಿಗೆ ಅರ್ಥ ಕಲ್ಪಿಸಿಕೊಡುತ್ತಾಳೆ. ಜಗತ್ತಿನಲ್ಲಿ ಕೆಟ್ಟ ಮಕ್ಕಳಾದರೂ ಇರಬಹುದಂತೆ, ಆದರೆ ಕೆಟ್ಟ ತಾಯಿ ಖಂಡಿತ ಇರಲಾರಳು ಎಂಬುದು ಹಿರಿಯರ ಅನುಭವದ ಮಾತಾಗಿದೆ.
ಪುರಾಣಗಳಲ್ಲಿ ಕೂಡ ಹೆಣ್ಣು ಸಂಕಷ್ಟಕ್ಕೆ ತುತ್ತಾಗಿದ್ದಾಳೆ. ಮಹಿಳೆಯರ ಸಂಕಷ್ಟಗಳು ಈಗಿನ ಆಧುನಿಕ ಕಾಲದಲ್ಲೂ ಮುಂದುವರಿದಿವೆ. ಶ್ರೀಕ್ಷೇತ್ರದಿಂದ ಗ್ರಾಮಾಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ ಹಳ್ಳಿ-ಹಳ್ಳಿಗೆ ಭೇಟಿ ನೀಡಿ ಅತ್ಯಂತ ಕಷ್ಟದ ಸ್ಥಿತಿಯಲ್ಲಿ ಬದುಕುತ್ತಿದ್ದ ಮಹಿಳೆಯರ ಚಿತ್ರಣ ಇನ್ನೂ ಕಣ್ಣ ಮುಂದಿದೆ. ಹೆಂಡ ಕುಡಿದು ತೂರಾಡುತ್ತ ಮನೆ ಬರುವ ಗಂಡ, ಅಪ್ಪನಿಗಾಗಿ ಕಾದು ಕುಳಿರುವ ಮಕ್ಕಳು, ಮಾಸಲು ಸೀರೆಯನ್ನು ಉಟ್ಟ ಮಹಿಳೆಯರು ಒಂದು ಹಿಡಿ ಅಕ್ಕಿಯನ್ನು ಬೇಯಿಸಿ, ಸ್ವಲ್ಪ ಉಪ್ಪು ಹಾಕಿ ಮಕ್ಕಳಿಗೆ ಕುಡಿಯಲು ಕೊಟ್ಟು, ತಾನು ಬರೀ ನೀರು ಕುಡಿದು ದಿನದೂಡುತ್ತಿದ್ದ ಅನೇಕ ಮಹಿಳೆಯರು ಇದ್ದರು. ಕುಡುಕ ಗಂಡ ಕೊಡುವ ಹಿಂಸೆಯಿಂದ ಪಾರಾಗಲು ಮಕ್ಕಳನ್ನು ಕರೆದುಕೊಂಡು ಕಾಡಿಗೋ, ಪಕ್ಕದ ಮನೆಗೋ ಹೋಗಿ ಕೂರುತ್ತಿದ್ದವರು ಅನೇಕರಿದ್ದರು. ಮಕ್ಕಳ ಹೊಟ್ಟೆ ತುಂಬಿಸಲು ಕೂಲಿ ಮಾಡಿ ತಂದ ಹಣವನ್ನು ಗಂಡ ಕಸಿದುಕೊಂಡು ಹೋಗಿ ಹೆಂಡತಿ, ಮಕ್ಕಳು ಉಪವಾಸ ಬೀಳುವ ಪರಿಸ್ಥಿತಿಗಳೆಲ್ಲ ಕೆಲವು ದಶಕಗಳ ಹಿಂದಿತ್ತು. ಇದನ್ನೆಲ್ಲ ಕಂಡು ಅವರ ಬದುಕನ್ನು ಅವರೇ ಕಟ್ಟಿಕೊಳ್ಳಲು ನಮ್ಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಯಿತು. ಈ ನಿಟ್ಟಿನಲ್ಲಿ ಯಶಸ್ವಿಯಾಗಿ ಇಂದು ಸಮಾಜಾಭಿವೃದ್ಧಿಯ ಮಾದರಿ ಕಾರ್ಯಕ್ರಮ ಎಂದು ಜನಜನಿತವಾಗಿದೆ.
ಯೋಜನೆಯ ಕಾರ್ಯಕ್ರಮ ಅನುಷ್ಠಾನದ ಪರಿಣಾಮವಾಗಿ ಇಂದು ರಾಜ್ಯದ ಬಹುತೇಕ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಿದ್ದಾರೆ, ಕುಡುಕ ಗಂಡನನ್ನು ಮದ್ಯವರ್ಜನ ಶಿಬಿರಕ್ಕೆ ಸೇರಿಸಿ ಕುಡಿತದ ಅಭ್ಯಾಸ ಬಿಡಿಸಿದ್ದಾರೆ, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದಾರೆ, ಮನೆ ಕಟ್ಟಿದ್ದಾರೆ, ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಹೀಗೆ ಅನೇಕ ಸಾಧನಾ ನಿದರ್ಶನಗಳಿವೆ. ಇದಲ್ಲದೆ ಮಹಿಳೆಯರು ಇಂದು ಪುರುಷರಿಗೆ ಸಮನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಬಲ್ಲಳು ಎಂದು ನಿರೂಪಿತವಾಗಿದೆ. ಆದರೂ ಇಂದಿನ ದಿನಗಳಲ್ಲಿ ಮಹಿಳೆ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾಳೆ. ಶಿಕ್ಷಣದಿಂದ ವಂಚಿತ, ಉದ್ಯೋಗದಲ್ಲಿ ತಾರತಮ್ಯ, ವರದಕ್ಷಿಣೆಯ ಕಿರುಕುಳ, ಕೌಟುಂಬಿಕ ಹಿಂಸೆ, ಲೈಂಗಿಕ ಕಿರುಕುಳ, ಸಾಮಾಜಿಕ ಮಾಧ್ಯಮಗಳಲ್ಲಿ ಅವಮಾನ, ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆ ಮತ್ತು ಸಮಾನ ಅವಕಾಶಗಳ ಕೊರತೆಗಳನ್ನು ಮೆಟ್ಟಿ ನಿಲ್ಲಲು ಸ್ತ್ರೀಯು ತನ್ನಲ್ಲಿರುವ ಶಕ್ತಿಯನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ.
ಈ ನಿಟ್ಟಿನಲ್ಲಿ ನವರಾತ್ರಿಯಲ್ಲಿ ಆರಾಧನೆಗೊಳ್ಳುವ ಒಂಬತ್ತು ರೂಪಗಳು ಒಂಬತ್ತು ಬಗೆಯ ಶಕ್ತಿಯ ಅಭಿವ್ಯಕ್ತಿಗಳಾಗಿವೆ. ದೇವಿಯ ಪ್ರತಿಯೊಂದು ರೂಪವೂ ಮಹಿಳೆಯ ಬದುಕಿನ ಮೌಲ್ಯವನ್ನು ನೆನಪಿಸುತ್ತದೆ. ಶೈಲಪುತ್ರಿ ಸ್ಥಿರತೆ ಮತ್ತು ದೃಢತೆಯನ್ನು, ಬ್ರಹ್ಮಚಾರಿಣಿ ತಪಸ್ಸು ಮತ್ತು ಸಂಕಲ್ಪವನ್ನು, ಚಂದ್ರಘಂಟಾ ಧೈರ್ಯವನ್ನು, ಕಾತ್ಯಾಯನಿ ಹೋರಾಟದ ಶಕ್ತಿಯನ್ನು, ಕಾಲರಾತ್ರಿ ದುಷ್ಟಶಕ್ತಿಗಳ ವಿರುದ್ಧದ ನಿರ್ಭೀತಿಯನ್ನು ಹಾಗೂ ಸಿದ್ಧಿದಾತ್ರಿ ಸಾಧನೆಯ ಪೂರ್ಣತೆಯನ್ನು ಸಂಕೇತಿಸುತ್ತಿದ್ದು, ಇವುಗಳಿಂದ ಪ್ರೇರಣೆ ಹಾಗೂ ದೈವಿಕಶಕ್ತಿಯನ್ನು ಧಾರಣೆ ಮಾಡಿಕೊಳ್ಳುವ ಸಂದರ್ಭವೇ ನವರಾತ್ರಿ ಆಚರಣೆ. ರಾಮಾಯಣದ ಸೀತೆಗೂ ಕಷ್ಟ ತಪ್ಪಿರಲಿಲ್ಲ. ಆಕೆ ಧೈರ್ಯ, ನಿಷ್ಠೆ ಮತ್ತು ಆತ್ಮಗೌರವದ ಪ್ರತೀಕ. ಸೀತೆಯ ಸಹನೆ ಮತ್ತು ನಿಷ್ಠೆಯನ್ನು ಗೌರವಿಸುವುದೆಂದರೆ ಪ್ರತಿಯೊಬ್ಬ ಮಹಿಳೆಯೂ ಅನ್ಯಾಯವನ್ನು ಮೌನವಾಗಿ ಸಹಿಸಿಕೊಳ್ಳಬೇಕು ಅಥವಾ ಆಕೆಯ ವೈಯಕ್ತಿಕ ಘನತೆಯನ್ನು ಕಡೆಗಣಿಸಬೇಕು ಎಂದರ್ಥವಲ್ಲ. ಸೀತೆಯ ಜೀವನದಿಂದ ಉತ್ತಮ ಮೌಲ್ಯ ಕಲಿಯುವುದರ ಜೊತೆಗೆ, ಮಹಿಳೆಯರ ಮೇಲೆ ಸಮಾಜ ಹೇರುವ ಅನಗತ್ಯ ವಿಚಾರಧಾರೆಗಳನ್ನು ಎದುರಿಸಿ ನಿಲ್ಲುವುದೂ ಆಗಿದೆ.
ಒಂದು ಕಾಲದಲ್ಲಿ ಅನೇಕ ಸಮಾಜಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನಿರ್ಬಂಧಗಳಿದ್ದವು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದರೆ ಅವರು ಸಂಪ್ರದಾಯದಿಂದ ದೂರವಾಗುತ್ತಾರೆ, ಹೆಚ್ಚು ಓದಿದರೆ ವಿವಾಹಕ್ಕೆ ತೊಂದರೆಯಾಗುತ್ತದೆ ಅಥವಾ ಆಕೆ ಮನೆ ಕೆಲಸ ಮಾಡುವುದಲ್ಲವೇ, ಓದಿ ಏನಾಗಬೇಕು? ಎಂಬ ಅಭಿಪ್ರಾಯಗಳಿದ್ದವು. ಇಂದು ಪರಿಸ್ಥಿತಿ ಬಹಳಷ್ಟು ಬದಲಾಗಿದೆ. ಇನ್ನೂ ಸಾಕಷ್ಟು ಬದಲಾಗಬೇಕಿದೆ. ಅದಕ್ಕಾಗಿ ಎಲ್ಲರೂ ಶಿಕ್ಷಿತರಾಗಬೇಕು. ಶಿಕ್ಷಣ ಪಡೆದ ಮಹಿಳೆ ತನ್ನ ಬದುಕಿನ ಬಗ್ಗೆ ಸ್ವತಂತ್ರವಾಗಿ ಯೋಚಿಸಬಲ್ಲಳು. ತನ್ನ ಆರೋಗ್ಯ, ಉದ್ಯೋಗ, ವಿವಾಹ, ಕುಟುಂಬ ಮತ್ತು ಭವಿಷ್ಯದ ಕುರಿತು ತಿಳಿವಳಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲಳು. ಸಮಾಜವನ್ನು ಅಭಿವೃದ್ಧಿಯತ್ತ ಮುನ್ನಡೆಸಬಲ್ಲಳು. ಹಾಗೆಯೇ ಕೌಟುಂಬಿಕ ನಿರ್ಧಾರಗಳಲ್ಲಿ, ಸಮಾಜದ ಅಭಿವೃದ್ಧಿಯಲ್ಲಿ ಸ್ತ್ರೀ ಕೂಡ ಸಮಾನ ಪಾಲುದಾರಳು. ದಾಂಪತ್ಯದಲ್ಲಿ ಪರಸ್ಪರ ಅರಿತುಕೊಂಡು ನಡೆಯುವುದಾಗಿದೆ. ಪರಸ್ಪರ ಗೌರವ ಮತ್ತು ಜವಾಬ್ದಾರಿಯ ಮೇಲೆ ಮುಂದುವರಿಯಬೇಕು.
ಮಹಿಳೆಯ ಸಂಬಳವಿಲ್ಲದ ಗೃಹ ಹಾಗೂ ಆರೈಕೆ ಕೆಲಸಗಳು ಕುಟುಂಬ ಮತ್ತು ಆರ್ಥಿಕತೆಗೆ ಅಮೂಲ್ಯ ಕೊಡುಗೆಯಾಗಿವೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಕರುಣೆ, ಕಾಳಜಿ ಹಾಗೂ ಜವಾಬ್ದಾರಿಯಂತಹ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು, ಲಿಂಗ-ಜಾತಿ ಆಧಾರಿತ ತಾರತಮ್ಯಗಳನ್ನು ತೊರೆಯಬೇಕಿದೆ. ಸ್ವಾತಂತ್ರ್ಯ ಮತ್ತು ಜವಾಬ್ದಾರಿಗಳು ಒಂದಕ್ಕೊಂದು ಪೂರಕ. ಇಂದು ಡಿಜಿಟಲ್ ತಂತ್ರಜ್ಞಾನವು ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ಸ್ವಾವಲಂಬನೆಗೆ ಹೊಸ ದಾರಿಗಳನ್ನು ತೆರೆದಿದೆಯಾದರೂ, ಆನ್ಲೈನ್ ಕಿರುಕುಳ ಮತ್ತು ದುರುಪಯೋಗದ ಅಪಾಯಗಳನ್ನೂ ತಂದೊಡ್ಡಿದೆ. ಆದ್ದರಿಂದ ಡಿಜಿಟಲ್ ಜಗತ್ತಿನಲ್ಲೂ ಆಕೆಯ ಸುರಕ್ಷತೆ ಹಾಗೂ ಗೌಪ್ಯತೆಯ ಬಗ್ಗೆ ಎಚ್ಚರ ವಹಿಸಬೇಕಿದೆ.
ಸರಸ್ವತಿಯ ಜ್ಞಾನ, ದುರ್ಗೆಯ ಧೈರ್ಯ ಮತ್ತು ಲಕ್ಷಿ ್ಮು ಆರ್ಥಿಕ ಸ್ವಾವಲಂಬನೆಯನ್ನು ಆಧುನಿಕ ಕಾಲಕ್ಕೆ ಅನ್ವಯಿಸಿದರೆ ಅವು ಡಿಜಿಟಲ್ ಸಾಕ್ಷರತೆ, ಸುರಕ್ಷಿತ ಸಾರ್ವಜನಿಕ ಪಾಲ್ಗೊಳ್ಳುವಿಕೆ ಮತ್ತು ಆರ್ಥಿಕ ಅವಕಾಶಗಳ ರೂಪದಲ್ಲಿಯೂ ವ್ಯಕ್ತವಾಗುತ್ತವೆ. ಆಧುನಿಕ ಮಹಿಳೆಯು ದೇವಿಯಂತೆ ಅಲೌಕಿಕ ಶಕ್ತಿಯನ್ನು ಹೊಂದಿರಬೇಕೆಂದಿಲ್ಲ. ಆಕೆಗೆ ಬೇಕಾಗಿರುವುದು ಮಾನವೀಯ ಗೌರವ, ಸಮಾನ ಅವಕಾಶ, ಕಾನೂನಿನ ರಕ್ಷಣೆ ಮತ್ತು ತನ್ನ ಸಾಮರ್ಥ್ಯವನ್ನು ಬೆಳಸಿಕೊಳ್ಳುವ ಸ್ವಾತಂತ್ರ್ಯ. ನಾವೆಲ್ಲ ಸಂಭ್ರಮದಿಂದ ಆಚರಿಸುವ ನವರಾತ್ರಿಯ ನಿಜವಾದ ಅರ್ಥ ಮಹಿಳೆಯರಿಗೆ ಶಿಕ್ಷಣ, ಗೌರವ ಹಾಗೂ ಸಮಾನ ಅವಕಾಶ ನೀಡುವುದರಲ್ಲಿದೆ.