

‘ಭಾರತ ಕೃಷಿಪ್ರಧಾನ ದೇಶ, ರೈತನೇ ದೇಶದ ಬೆನ್ನೆಲುಬು’ ಎಂಬ ಗಾಂಧಿಯವರ ಮಾತನ್ನು ಇಂದಿಗೂ ಹೇಳುತ್ತಲೇ ಇರುತ್ತೇವೆ.
‘ಅನ್ನದಾತ’ ಎಂದು ಸ್ಮರಿಸುವ ರೈತರ ವಿಚಾರ ಬಂದಾಗ ಸಾಲ, ಬಡ್ಡಿಮನ್ನಾ, ಬೆಳೆನಾಶ, ಆತ್ಮಹತ್ಯೆ ಇಂಥ ವಿಚಾರಗಳೇ ಹೆಚ್ಚಾಗಿ ವಿಜೃಂಭಿಸುತ್ತವೆಯೇ ಹೊರತು, ‘ಕೃಷಿ’ ಕ್ಷೇತ್ರದಲ್ಲಿ ಇತರ ಉದ್ಯಮಗಳಂತೆ ‘ಸಾಧನೆಗಳ ಸರಮಾಲೆ’ ಎಲ್ಲಿ ಕಾಣುತ್ತಿದ್ದೇವೆ? ವಾಣಿಜ್ಯ ಬೆಳೆಗಳೂ ಸೇರಿ ಕೆಲವು ಕೃಷಿ ಚಟುವಟಿಕೆಗಳ ಒಂದಷ್ಟು ಪ್ರಗತಿಯನ್ನು ಇಲ್ಲ ಎನ್ನಲಾಗದು. ಆದರೆ, ಕೃಷಿಪ್ರಧಾನ ದೇಶ ಎನ್ನುವ ಭಾರತದಲ್ಲಿ ಕೃಷಿಗೆ ಸಿಕ್ಕಿರುವ ಪ್ರಾಧಾನ್ಯ ಎಷ್ಟು, ರಕ್ಷಣೆ ಎಷ್ಟು, ಉತ್ತೇಜನ ಎಷ್ಟು? ಎಂದು ಅವಲೋಕಿಸ ಹೊರಟರೆ ಉತ್ತರ ನಿರಾಸೆಯನ್ನೇ ಮೂಡಿಸುತ್ತದೆ.
ವಿಶ್ವದ ಮುಂಚೂಣಿ ರಾಷ್ಟ್ರವಾಗಿ ಭಾರತ ಹೊರಹೊಮ್ಮಬೇಕು. ಅದಕ್ಕಾಗಿ ದೇಶ ಬಲಿಷ್ಠವಾಗಬೇಕು. ಚೀನಾದಂಥ ರಾಷ್ಟ್ರಗಳ ಔದ್ಯೋಗಿಕ ದಾಳಿ ಎದುರಿಸಿ ನಿಲ್ಲಲು ಸ್ವಾಭಿಮಾನಿ ಸಂಕೇತದ ‘ಸ್ವಾವಲಂಬಿ ಭಾರತ’ ನಿರ್ವಣವಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ. ಮೋದಿಯವರ ಈ ಕಾಳಜಿ, ಪ್ರತಿಜ್ಞೆ, ಪ್ರಾಮಾಣಿಕತೆ, ಬದ್ಧತೆಗಳಲ್ಲಿ ಲೋಪ ಹುಡುಕಲು ಯಾರಿಗೂ ಸಾಧ್ಯವಿಲ್ಲ.
ಜನರ ನಿರೀಕ್ಷೆ, ಆಶಯಗಳಿಗೆ ಪೂರಕವಾಗಿ ಹಲವು ಹೆಜ್ಜೆಗಳನ್ನು ಇರಿಸುತ್ತಿರುವ ಪ್ರಧಾನಿ ಕೃಷಿಕ್ಷೇತ್ರಕ್ಕೆ ಮಹತ್ವದ ಸ್ಥಾನ ಕಲ್ಪಿಸಲು ಹೊರಟಿದ್ದಾರೆ. ಈ ಮಹದುದ್ದೇಶದಿಂದಲೇ ಕೃಷಿ ಮಸೂದೆಗಳನ್ನು ಜಾರಿಗೆ ತರಲು ಹೊರಟಿದ್ದಾರೆ. ಸಂಸತ್ತಿನ ಅನುಮೋದನೆಯ ಬಳಿಕ, ರಾಷ್ಟ್ರಪತಿಗಳ ಅಂಕಿತವೂ ಬಿದ್ದಿದೆ. ಆದರೆ, ಇದನ್ನು ರೈತರಿಗೆ ಅರ್ಥೈಸಿಕೊಡಬೇಕಾದ ಜವಾಬ್ದಾರಿಯುತ ವಿರೋಧ ಪಕ್ಷಗಳು ಹಾಗೂ ಕೆಲ ಸಂಘಟನೆಗಳು ಇದನ್ನು ರಾಜಕೀಯಕರಣಗೊಳಿಸಲು ಹೊರಟು ರೈತ ಸಮುದಾಯದ ದಿಕ್ಕು ತಪ್ಪಿಸುತ್ತಿದ್ದಾರೆ.
ರೈತರ ಹಿತವೇ ಮುಖ್ಯ: ರಾಜ್ಯದಲ್ಲಿ ಮಂಡಿಸಲಾದ ಎರಡೂ ಮಸೂದೆಗಳು ರೈತರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿವೆ. ಕೆಲವರು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದು, ಕೃಷಿಕರಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ. ರೈತರು ಹಾಗೂ ಅವರ ಬೆಳೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದ ‘ಶೋಷಕರ’ ಬಿಗಿಮುಷ್ಠಿಯಿಂದ ಈ ಕಾಯ್ದೆ ಕೃಷಿಕರನ್ನು ಮುಕ್ತಗೊಳಿಸಲಿದೆ ಎಂಬ ಸತ್ಯ ಅನ್ನದಾತನಿಗೆ ತಿಳಿಸುತ್ತಿಲ್ಲ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನರ ನಡುವೆ ಹೊರಹೊಮ್ಮಿದ ಅಪ್ಪಟ ಹೋರಾಟಗಾರ. ರೈತರಿಗಾಗಿ ದಶಕಗಳಿಂದ ದನಿಯಾಗಿ ನಿಂತ ರೈತನಾಯಕ. ರೈತರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಕೃಷಿ ಬಜೆಟ್ ಮಂಡಿಸಿದ, ರೈತಗೀತೆಗೆ ರಾಜ್ಯ ಮಾನ್ಯತೆ ದೊರಕಿಸಿ ರೈತರ ಪರವಾದ ಹಲವು ಪ್ರಥಮಗಳಿಗೆ ಮುನ್ನುಡಿ ಬರೆದ ಏಕೈಕ ಮುಖ್ಯಮಂತ್ರಿ. ಇಂಥ ನೈಜ ಕಾಳಜಿ ಇರುವುದರಿಂದಲೇ, ‘ಈ ಮಸೂದೆಗಳಿಂದ ರೈತರಿಗೆ ಕನಿಷ್ಠ ಮಟ್ಟದ ತೊಂದರೆಯಾದರೂ ಒಂದು ಕ್ಷಣವೂ ಅಧಿಕಾರದಲ್ಲಿ ಇರುವುದಿಲ್ಲ’ ಎಂಬ ದೃಢಚಿತ್ತದ ಮಾತುಗಳನ್ನಾಡಿದ್ದಾರೆ. ಎಪಿಎಂಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಯಡಿಯೂರಪ್ಪ ಅವರಿಗೆ ಕಾಯ್ದೆಯ ಪರಿಣಾಮದ ಪರಿಪೂರ್ಣ ಅರಿವಿದೆ. ಪ್ರಸ್ತುತ ಕಾಯ್ದೆ ತರಲು ಕಾಂಗ್ರೆಸ್ ಸಹ ತನ್ನ ಆಡಳಿತಾವಧಿಯಲ್ಲಿ ಮುಂದಾಗಿತ್ತು ಎಂಬ ಅಂಶ ಮರೆತಂತೆ ವರ್ತಿಸುತ್ತ ಇಂದು ರೈತರ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿರುವುದು ವಿಪರ್ಯಾಸಕರ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ತಂದಿರುವ ಮಸೂದೆಗಳಲ್ಲಿ ದೇಶದ ಯಾವೊಬ್ಬ ರೈತನಿಗೂ ಎಳ್ಳಷ್ಟೂ ಅನಾನಕೂಲವಾಗುವ ಅಂಶಗಳು ಕಂಡುಬರುತ್ತಿಲ್ಲ. ಎಪಿಎಂಸಿ ಕಾಯ್ದೆಯಲ್ಲಿ ತರಲಾಗಿರುವ ಸುಧಾರಣೆಗಳಿಂದ ತಾನು ಬೆಳೆದ ಬೆಳೆಗೆ ಸೂಕ್ತ ಬೆಲೆ ಕಂಡುಕೊಳ್ಳುವ ಮುಕ್ತ ಸ್ವಾತಂತ್ರ್ಯ ರೈತನಿಗೆ ಕೊಡಲಾಗಿದೆ. ‘ತನ್ನ ಬೆಳೆಗೆ ತಾನೇ ಸರದಾರ’ ಎಂಬ ಭಾವನೆ ಅವನಲ್ಲಿ ಮೂಡಿ ಆತ್ಮವಿಶ್ವಾಸ ಹೆಚ್ಚಲಿದೆ. ಎಪಿಎಂಸಿ ಮಾರುಕಟ್ಟೆಗಳಲ್ಲದೆ ಹೊರರಾಜ್ಯ, ಹೊರಜಿಲ್ಲೆ ಸೇರಿ ಎಲ್ಲಿ ಬೇಕಾದರೂ, ಯಾರಿಗೆ ಬೇಕಾದರೂ ಅರ್ಹ ಬೆಲೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಬೆಳೆಗೆ ಸೂಕ್ತ ಬೆಲೆ ದೊರಕದ ಪರಿಸ್ಥಿತಿ ಉಂಟಾದರೆ ಸರ್ಕಾರ ಈ ಹಿಂದಿಗಿಂತಲೂ ಹೆಚ್ಚಿನ ರೀತಿಯಲ್ಲಿಯೇ ರೈತನ ಬೆನ್ನಿಗೆ ನಿಂತು ಬೆಂಬಲ ಬೆಲೆ ದೊರಕಿಸಿಕೊಡಲಿದೆ ಎಂದು ಪ್ರಧಾನಿಯವರೇ ಹೇಳಿದ್ದಾರೆ. ಮುಖ್ಯಮಂತ್ರಿಗಳೂ ಅಭಯ ನೀಡಿದ್ದಾರೆ. ಇದು ಕಾಯ್ದೆಯಲ್ಲಿಯೂ ಸ್ಪಷ್ಟವಾಗಿದೆ. ಒಟ್ಟಾರೆ, ಎಪಿಎಂಸಿ ಕಾಯ್ದೆಯ ಉದ್ದೇಶ ರೈತರ ಬದುಕಲ್ಲಿ ಸ್ವಾಭಿಮಾನದ ಬೆಳಕು ಹೊಮ್ಮಿಸಿ ಅವನನ್ನು ‘ಸ್ವಾವಲಂಬಿ’ ಮಾಡುವುದೇ ಆಗಿದೆ.
ಭೂಸುಧಾರಣೆ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ಹೇಳುವುದಾದರೆ, ಅಂದು ‘ಉಳುವವನೇ ಭೂಮಿ ಒಡೆಯ’ ಎಂಬ ಕ್ರಾಂತಿಕಾರಿ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದವರು ದಿ.ಮುಖ್ಯಮಂತ್ರಿ ಡಿ.ದೇವರಾಜ ಅರಸರು. ಅರಸರ ದೂರದೃಷ್ಟಿತ್ವ ಕಲ್ಪನೆಯ ಅಡಿಯಲ್ಲಿ ಪ್ರಸ್ತುತ ತಿದ್ದುಪಡಿ ಮಸೂದೆ ಜಾರಿಗೆ ತರಲಾಗಿದೆ ಎಂದು ಎದೆತಟ್ಟಿ ಹೇಳಬಹುದಾಗಿದೆ. ಉಳುವವನೇ ನೆಲದೊಡೆಯನಾದ ಮೇಲೆ ನೆಲದೊಡೆಯನಿಗೇಕೆ ತನ್ನ ಭೂಮಿಯ ಮೇಲಿನ ಹಕ್ಕಿನಲ್ಲಿ ಉಸಿರುಗಟ್ಟಿಸುವ ನಿಯಮಗಳು? ಇದನ್ನು ವಿರೋಧಿಸುವವರು ಪ್ರಾಮಾಣಿಕವಾಗಿ ಹೇಳಲಿ. ಕೃಷಿಭೂಮಿಯನ್ನು ಅನಿವಾರ್ಯ ಪರಿಸ್ಥಿತಿಯಲ್ಲಿ ಮಾರಿಕೊಳ್ಳಲೇಬೇಕಾದ ಸಂದರ್ಭ ಬಂದಾಗ ಸದ್ಯ ಇರುವ ಕಾನೂನಿನಿಂದ ರೈತರು ಎಂಥ ಶೋಷಣೆ, ತೊಂದರೆ, ಕಷ್ಟಗಳನ್ನು ಅನುಭವಿಸುವ ಪರಿಸ್ಥಿತಿ ಇದೆ? ತಕ್ಕ ಬೆಲೆಗೆ ಯಾರಾದರೂ ಕೊಳ್ಳಲು ಬಂದರೂ ಇಂತಹ ತೊಂದರೆಗಳಿಂದ ಮಾರಲಾಗದೆ ಭೂಮಿಯನ್ನು ನೆಲಬಾಕರಿಗೆ ಅಡಮಾನ ಇಟ್ಟು, ಮೀಟರ್ ಬಡ್ಡಿಯ ಸುಳಿಗೆ ಸಿಲುಕಿ ಈ ನೆಲದ ಲಕ್ಷಾಂತರ ರೈತರು ಭೂಮಿ ಕಳೆದುಕೊಂಡ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ.
ಅದೇ ರೀತಿ ಯಾರಾದಾರೂ ನಿರುದ್ಯೋಗಿ ಯುವಜನರು ಅಥವಾ ಕೃಷಿಕ್ಷೇತ್ರ ಅರಸಿ ಬರುವವರು ಭೂಮಿ ಕೊಳ್ಳಲು ಅಡೆತಡೆಯ ಕಾನೂನು ನಿಯಮಗಳಿದ್ದರೆ ಅವರು ಆ ಕ್ಷೇತ್ರ ಪ್ರವೇಶಿಸಲು ಹೇಗೆ ಸಾಧ್ಯ? ಇರುವ ನಿಯಮಗಳನ್ನೆಲ್ಲ ಪಾಲಿಸಿ ಭೂಮಿ ಕೊಂಡರೂ ಅದನ್ನು ನಿಯಮಾನುಸಾರ ದಕ್ಕಿಸಿಕೊಳ್ಳಲು ಪಡಬೇಕಾದ ಪಾಡು, ಕಂದಾಯ ಇಲಾಖೆಯ ‘ವ್ಯೂಹ’ ಹಾದು ಹೋಗಬೇಕಾದಾಗ ಅನುಭವಿಸುವ ಕಷ್ಟ-ನಷ್ಟ, ಶೋಷಣೆಗಳು ಎಷ್ಟೆಂಬ ಬಗ್ಗೆ ಇದನ್ನು ವಿರೋಧಿಸುವವರಿಗೆ ತಿಳಿಯದ ವಿಷಯವೇನಲ್ಲ.
ತನ್ನ ಪಾಲಿನ ಭೂಮಿಯಲ್ಲಿ ಕೃಷಿ ಜತೆಗೆ ಕೃಷಿಯೇತರ ಚಟುವಟಿಕೆಗಳನ್ನು ಆರಂಭಿಸಲು ರೈತನಿಗೆ ಅವಕಾಶ ದೊರೆತರೆ, ಆತ ಹಾಗೂ ಅವನ ಕುಟುಂಬ ಆರ್ಥಿಕವಾಗಿ ಮೇಲೆ ಬರಲು ಪೂರಕ ವಾತಾವರಣ ನಿರ್ವಣವಾಗುತ್ತದೆ. ಇತರ ಕ್ಷೇತ್ರದ ಜನರೂ ಕೃಷಿಯನ್ನು ಉದ್ಯಮವಾಗಿ ಸ್ವೀಕರಿಸಲು ಅವಕಾಶ ನೀಡುವ ಈ ಕಾಯ್ದೆಯನ್ನು ವಿರೋಧಿಸುತ್ತಿರುವುದರ ನೈಜ ಉದ್ದೇಶವೇನು? ಈ ವಿರೋಧವನ್ನು ರೈತಕಾಳಜಿ ಎನ್ನಲು ಹೇಗೆ ಸಾಧ್ಯ? ವಿರೋಧಕ್ಕಾಗಿ ವಿರೋಧ ಎಂಬಂತೆ ಈಗಿನ ಹೋರಾಟ ನಡೆದಿದೆ.
‘ಉಳುವವನೇ ನೆಲದೊಡೆಯ’ ಎಂದ ದೇವರಾಜ ಅರಸರು ತಂದ ಕಾನೂನಿಗೆ ‘ಹಂಗಿಲ್ಲದ ನೆಲದೊಡೆಯನನ್ನಾಗಿಸಲು’ ಕಾನೂನು ರಕ್ಷಣೆಯ ಕವಚವನ್ನು ಮೋದಿ ಹಾಗೂ ಯಡಿಯೂರಪ್ಪ ರೈತಸಮುದಾಯಕ್ಕೆ ಸಮರ್ಪಿಸಿದ್ದಾರೆ. ಬಡವರು, ಕೃಷಿಕಾರ್ವಿುಕರು, ಅಸಹಾಯಕರು, ಶೋಷಿತರು, ಹಿಂದುಳಿದವರಿಗಾಗಿ ತಮ್ಮ ಆಡಳಿತಾವಧಿಯ ಅನೇಕ ಯೋಜನೆಗಳನ್ನು ಕೊಟ್ಟ ದೇವರಾಜ ಅರಸರ ಯಾವ ಯೋಜನೆ, ಕನಸುಗಳನ್ನು ಸಾಕಾರಗೊಳಿಸಿ ಎಷ್ಟೆಷ್ಟು ವಿಸ್ತರಿಸಲಾಯಿತು ಎಂಬ ಪ್ರಶ್ನೆಯನ್ನು ಸಿದ್ದರಾಮಯ್ಯ ಅವರನ್ನೂ ಸೇರಿ ಕಾಂಗ್ರೆಸ್ ಹುರಿಯಾಳುಗಳಿಗೆ ಕೇಳಿದರೆ ಅವರಿಂದ ಸಮಾಧಾನಕರ ಉತ್ತರ ಸಿಗದು. ಏಕೆಂದರೆ, ಅರಸರನ್ನು ವ್ಯವಸ್ಥಿತವಾಗಿ ಮುಗಿಸಿ ಅವರ ಅವನತಿಗೆ ಕಾಂಗ್ರೆಸ್ ಕಾರಣವಾಗಿದ್ದು, ಐತಿಹಾಸಿಕ ಸತ್ಯ. ಅವರ ಕಾಲಾನಂತರ ಮತಬೇಟೆಗಾಗಿ ಮಾತ್ರ ಅರಸರ ಹೆಸರನ್ನು ಬಳಸಿಕೊಂಡು ಅರಸರ ಕನಸುಗಳನ್ನು ಮಸುಕಾಗಿಸಿದ್ದೇ, ಕಾಂಗ್ರೆಸ್ ಅರಸರಿಗೆ ಕೊಟ್ಟ ಕಾಣಿಕೆ. ಆದರೆ, ಅರಸರ ಚಿಂತನೆ, ಕಾರ್ಯಕ್ರಮಗಳು, ಯೋಜನೆಗಳನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಜಾರಿಗೆ ತಂದಿರುವ ಹೆಗ್ಗಳಿಕೆ ಮೋದಿ ಹಾಗೂ ಯಡಿಯೂರಪ್ಪನವರದ್ದು.
ಮಾತುಕತೆಯ ಮಾರ್ಗ: ಸದ್ಯ ಜಾರಿಗೆ ಬರುತ್ತಿರುವ ಎರಡೂ ಮಸೂದೆಗಳಲ್ಲಿ ರೈತ ಸಮುದಾಯಕ್ಕೆ ಯಾವುದೇ ಆತಂಕ, ಸಂಶಯ, ಗೊಂದಲವಿದ್ದರೆ ಅವುಗಳ ನಿವಾರಣೆಗೆ ಈಗಲೂ ಅವಕಾಶ ಇದೆ. ಈ ಕುರಿತು ಮುಕ್ತವಾಗಿ ಮಾತನಾಡಲು ಮುಖ್ಯಮಂತ್ರಿಗಳು ಈಗಾಗಲೇ ರೈತಕಾಳಜಿಯ ಪ್ರಮುಖರನ್ನು ಆಹ್ವಾನಿಸಿದ್ದಾರೆ. ಅಪ್ಪಿತಪ್ಪಿ ಇರಬಹುದಾದ ಸಣ್ಣಪುಟ್ಟ ಲೋಪದೋಷಗಳು ಅಥವಾ ಸರಿಪಡಿಸಿಕೊಳ್ಳಲು ಸಾಧ್ಯವಾಗಬಹುದಾದ ಅಂಶಗಳನ್ನು ಕಾಯ್ದೆ ಅಡಿಯಲ್ಲಿ ರೂಪಿಸಲಾಗುವ ನಿಯಮಗಳಲ್ಲಿ ಅಳವಡಿಸಿಕೊಳ್ಳಲು ಅವಕಾಶ ಇದ್ದೇ ಇದೆ. ಆದ್ದರಿಂದ ಯಾವುದೇ ಅನಗತ್ಯ ಆತಂಕಕ್ಕೆ ರೈತ ಸಮುದಾಯ ಒಳಗಾಗುವ ಪ್ರಮೇಯವೇ ಇಲ್ಲ. ಒಬ್ಬ ರೈತ ನಾಯಕನೇ ಮುಖ್ಯಮಂತ್ರಿಯಾಗಿರುವಾಗ ಅನ್ನದಾತನಿಗೆ ಅನ್ಯಾಯವಾಗಲು ಸಾಧ್ಯವೇ ಇಲ್ಲ ಎಂಬ ಅಚಲ ವಿಶ್ವಾಸ ಕೃಷಿಕರಲ್ಲಿ ಇರಲಿ.
ಸದರಿ ಕಾಯ್ದೆಗಳ ಪ್ರಯೋಜನ, ಫಲಿತಾಂಶ ಬೆರಳೆಣಿಕೆಯ ತಿಂಗಳಲ್ಲೇ ರೈತರ ಅನುಭವಕ್ಕೆ ಬರಲಿದೆ. ಆಗ ತಮ್ಮನ್ನು ದಿಕ್ಕು ತಪ್ಪಿಸಲು ಯತ್ನಿಸಿದವರಿಗೆ ರೈತರೇ ತಕ್ಕ ಉತ್ತರ ನೀಡಲಿದ್ದಾರೆ.
(ಲೇಖಕರು ರಾಜ್ಯ ಬಿಜೆಪಿ ಉಪಾಧ್ಯಕ್ಷರು )