

ಇಂದಿನ ಆಧುನಿಕ ಮಾರುಕಟ್ಟೆ ಮತ್ತು ವಾಣಿಜ್ಯಮಯ ಜಗತ್ತಿನಲ್ಲಿ ‘ಕೂಪನ್ಗಳು’ ಗ್ರಾಹಕರನ್ನು ಆಕರ್ಷಿಸುವ ಒಂದು ಪ್ರಮುಖ ಸಾಧನವಾಗಿವೆ. ಕೂಪನ್ ಎಂದರೆ ನಿರ್ದಿಷ್ಟ ವಸ್ತುವಿನ ಮೇಲೆ ರಿಯಾಯಿತಿ ಅಥವಾ ವಿಶೇಷ ಕೊಡುಗೆಯನ್ನು ನೀಡುವ ಒಂದು ಚೀಟಿಯಾಗಿರಬಹುದು; ಅಥವಾ ಹಿಂದೆಲ್ಲ ಕಾಗದದ ರೂಪದಲ್ಲಿದ್ದಂಥವು ಇಂದು ಮೊಬೈಲ್ ಆಪ್ಗಳು, ಜಾಲತಾಣಗಳು ಮತ್ತು ಮಿಂಚಂಚೆಯ ಮೂಲಕ ಡಿಜಿಟಲ್ ರೂಪದವೂ ಇರಬಹುದು. ಆನ್ಲೈನ್ನಲ್ಲಿ ಖರೀದಿ, ಹೋಟೆಲ್ಗಳು, ಸಿನಿಮಾ ಟಿಕೆಟ್ಗಳು ಮತ್ತು ದಿನಸಿ ಪದಾರ್ಥಗಳ ಕೊಳ್ಳುವಿಕೆಯಲ್ಲೂ ಕೂಪನ್ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದರಿಂದ ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಇಬ್ಬರಿಗೂ ಲಾಭವಿದೆ. ಗ್ರಾಹಕರಿಗೆ ಹಣವನ್ನು ಉಳಿಸಲು ಮತ್ತು ಕಡಿಮೆ ಬೆಲೆಗೆ ಉತ್ತಮ ವಸ್ತುಗಳನ್ನು ಕೊಳ್ಳಲು ಸಹಾಯವಾಗುತ್ತದೆ. ಮತ್ತೊಂದೆಡೆ ವ್ಯಾಪಾರಿಗಳಿಗೆ ತಮ್ಮ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ಸೆಳೆಯಲು ಇದೊಂದು ಉತ್ತಮ ಮಾರ್ಗವಾಗಿದೆ. ಒಟ್ಟಿನಲ್ಲಿ ಕೂಪನ್ಗಳು ಜಾಣ ಖರೀದಿಗೆ, ಸ್ವಲ್ಪಮಟ್ಟಿಗೆ ಕೊಳ್ಳುಬಾಕತನಕ್ಕೂ ದಾರಿ ಮಾಡಿಕೊಡುತ್ತವೆ. ಆದರೆ ಸರಿಯಾದ ಸಮಯದಲ್ಲಿ ಕೂಪನ್ಗಳನ್ನು ಬಳಸುವುದರಿಂದ ನಮ್ಮ ತಿಂಗಳ ಆಯವ್ಯಯವನ್ನೂ ಸುಲಭವಾಗಿ ನಿಯಂತ್ರಿಸಬಹುದಾಗಿದೆ.
ಇಂತಿರುವ ಕೂಪನ್ಗಳ ಆರಂಭ ಮತ್ತು ಇಂಗ್ಲಿಷ್ನಲ್ಲಿ Coupon ಪದದ ವ್ಯುತ್ಪತ್ತಿ ಆದದ್ದು ಹೇಗೆ? ಸುಮಾರು 1820ರ ಆಸುಪಾಸಿನಲ್ಲಿ Coupon ಎಂದರೆ ‘ಒಡಂಬಡಿಕೆಯ ಮೇಲೆ ಬರಬೇಕಾದ ಬಡ್ಡಿಯ ಪ್ರಮಾಣಪತ್ರ’ ಎಂಬರ್ಥ ಇದ್ದದ್ದು. ಮುಚ್ಚಳಿಕೆ ಪತ್ರದಿಂದ ಕತ್ತರಿಸಿ ತೆಗೆದು ಪಾವತಿಗಾಗಿ ಸಲ್ಲಿಸಬಹುದಾದ ಒಂದು ಕಾಗದದ ತುಂಡು ಅದು. ಫ್ರೆಂಚ್ ಭಾಷೆಯ Coupon ಪದದಿಂದ ಬಂದ ಪದ, ಅಕ್ಷರಶಃ ‘ಕತ್ತರಿಸಿದ ತುಂಡು’ ಎಂದರ್ಥ. ಇದರ ಮೂಲ ‘ಕತ್ತರಿಸು’ ಎಂಬರ್ಥದ Couper ಪದ, ಇನ್ನಷ್ಟು ಹಿಂದಕ್ಕೆ ಹೋದರೆ ‘ಒಂದು ಏಟು’ ಎಂಬರ್ಥದ Coup ಪದ! ಬ್ರಿಟಿಷ್ ಪ್ರವಾಸೋದ್ಯಮ ಸಂಸ್ಥೆ ಥಾಮಸ್ ಕುಕ್ 1860ರಲ್ಲಿ ಇದರ ಅರ್ಥವನ್ನು ‘ರಿಯಾಯಿತಿ ಟಿಕೆಟ್’ ಎಂದು ವಿಸ್ತಾರಗೊಳಿಸಿತು. ‘ಒಂದು ಉತ್ಪನ್ನವನ್ನು ಖರೀದಿಸುವಾಗ ಆರ್ಥಿಕ ರಿಯಾಯಿತಿ ಅಥವಾ ಮರುಪಾವತಿಗಾಗಿ ಬಳಸಬಹುದಾದ ಟಿಕೆಟ್ ಅಥವಾ ದಾಖಲೆ’ ಎಂಬ ನಿರ್ದಿಷ್ಟ ಅರ್ಥವು 1910ರ ವೇಳೆಗೆ ಬಳಕೆಗೆ ಬಂದಿತು. ಅಮೆರಿಕದಲ್ಲಿ ಬಡ್ಡಿ ಗಳಿಸುವ ರಾಜಸ್ವ ಬಂಡವಾಳ ಪಾಲುಗಳ ಪ್ರಮಾಣಪತ್ರಗಳೊಂದಿಗೆ ಕೂಪನ್ಗಳನ್ನು ನೀಡಲಾಗುತ್ತದೆ; ಅವು ಪ್ರಮಾಣಪತ್ರಗಳಿಗೆ ಲಗತ್ತಿಸಲಾದ ಸಣ್ಣಸಣ್ಣ ಚೀಟಿಗಳು. ಬಡ್ಡಿ ಪಾವತಿಸಬೇಕಾದ ಪ್ರತಿ ಅವಧಿಯಲ್ಲಿ, ಚೀಟಿಗಳಲ್ಲಿ ಒಂದನ್ನು ಕತ್ತರಿಸಲಾಗುತ್ತದೆ. ರಾಜ್ಯದ ಖಜಾಂಚಿಗೆ ಅಥವಾ ಅವರು ನಿಯೋಜಿಸಿದ ಬ್ಯಾಂಕ್ಗೆ ಸಲ್ಲಿಸಿದರೆ ಚೀಟಿ ಹೊಂದಿರುವವರು ಬಡ್ಡಿಯನ್ನು ಪಡೆಯಲು ಅರ್ಹರಾಗುತ್ತಾರೆ.
ಈ ಹಿನ್ನೆಲೆ ಮತ್ತು ಈಗಿನ ಬಳಕೆಯನ್ನು ಗಮನಿಸಿದರೆ ಇಟ್ಠಟಟ್ಞ ಎನ್ನುವುದಕ್ಕೆ ಕನ್ನಡದಲ್ಲಿ ‘ಪಡೆವೋಲೆ’ (ವಸ್ತುರೂಪದಲ್ಲಿರಲಿ ಮೌಲ್ಯರೂಪದಲ್ಲಿರಲಿ ಲಾಭವನ್ನು ಪಡೆವ ಓಲೆ) ಸೂಕ್ತವೆನಿಸಬಹುದು. ಸೂಚಿಸಿದವರು: ಸುರೇಂದ್ರ ಪೈ. ಗ್ರಾಹಕರನ್ನು ಸೆಳೆಯುತ್ತದಾದ್ದರಿಂದ ‘ಸೆಳೆಚೀಟಿ’ (ಸತ್ಯನಾರಾಯಣ ಹೆಚ್.ಎನ್) ಇನ್ನಷ್ಟು ಸಮಂಜಸವೆನಿಸಬಹುದು. ‘ಕೊಡುಗೆಚೀಟಿ’ (ಮಮತಾ ಕುಂದಾಪುರ, ಗಿರೀಶ ಫಡ್ಕೆ, ಜಿ.ಹೆಚ್ ಸಂಕಪ್ಪ ಮುಂತಾದವರು), ‘ಸೋಡಿಚೀಟಿ’ (ಶಿವಕುಮಾರ ಜೆ.ಸಿ, ಸೂರಿ ಲಿಂಗದಹಳ್ಳಿ, ಡಾ.ಎಸ್.ಎಸ್ ಚೋರಗಿ, ಸಂಜೀವ ಜೋಶಿ, ಮಂಜುನಾಥ ಡಿ.ಎಸ್, ಜಯಲಕ್ಷ್ಮಿ ಅಡಿಗ ಮತ್ತಿತರರು), ‘ರಿಯಾಯಿತಿಚೀಟಿ’ (ಎನ್.ವಿ ಶಂಕರ್, ರೂಪಕಲ ಸದಾನಂದ, ಶಕುಂತಲಾ ಹೊನ್ನಾಳಿ, ಜಿ.ನಾರಾಯಣ ರಾವ್, ಜಯರಾಮ್ ಪಾರೆ, ಯು.ಪರಮೇಶ್ವರ ಭಟ್, ರಾಜೇಂದ್ರ ಕೆ.ಎಸ್, ಭಾರತಿ ಆರ್.ಭಟ್, ಭವಾನಿ ಜೋಶಿ, ಶಶಿಕಲಾ ನರೇಂದ್ರನಾಥ್, ಕೆ.ಅಮರ್ ಮುಂತಾದವರು) ಸಹ ಸಂದರ್ಭಾನುಸಾರ ಅರ್ಥಪೂರ್ಣವೇ ಆಗಬಹುದು. ಇನ್ನು, ‘ಗುರುತಿನ ಚೀಟಿ’ ಎಂದು ಬಹಳಷ್ಟು ಪ್ರವೇಶಿಕೆಗಳು ಬಂದಿವೆ. ಆದರೆ ಇದು ಈಗಾಗಲೇ identity card ಎಂಬುದಕ್ಕೆ ಪರ್ಯಾಯ ರೂಪದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವುದರಿಂದ ಹೊಸ ಅರ್ಥ ಹೇರುವುದು ಸರಿಯಾಗದು.
ಅದಕ್ಕಿಂತ, ಸಂಪೂರ್ಣ ಭಿನ್ನವಾದೊಂದು ಚಿಂತನೆಯನ್ನು ಮಂಡಿಸಿದ್ದಾರೆ ಮೈಸೂರಿನಿಂದ ಜಿ.ಕೆ ಲಕ್ಷ್ಮೀನರಸಿಂಹಯ್ಯ. ಅವರ ತರ್ಕದ ಪ್ರಕಾರ ‘ಕೂ’ ಎಂಬ ಅನುಕರಣ ಶಬ್ದವನ್ನು ಕರೆ ಅಥವಾ ಕೂಗು ಎಂದು ಅರ್ಥೈಸಿ, ‘ಪಾನು’ ಎಂದರೆ ಹಿಂದಿ ಭಾಷೆಯಲ್ಲಿದ್ದಂತೆ ಪತ್ರ ಅಥವಾ ಪುಟ ಎಂದು ಅರ್ಥೈಸಿದರೆ ಕೂಪಾನು ಎಂಬುದೂ ಸರಿಯಾಗುತ್ತದೆ! ಈ ಆಲೋಚನಾ ಕ್ರಮವೇನೋ ಚೆನ್ನಾಗಿಯೇ ಇದೆಯಾದರೂ ಭಾಷಾತಜ್ಞರು ಇಂತಹ ಕಸರತ್ತುಗಳಿಗೆ ಒಪ್ಪಿಗೆಯ ಮುದ್ರೆ ಒತ್ತಲಿಕ್ಕಿಲ್ಲ.
ಕಳೆದ ಸಲ ಕೇಳಿದ್ದ ಎರಡನೆಯ ಪದ Rigging. ಇಂಗ್ಲಿಷ್ನಲ್ಲಿ Rig ಎಂಬ ಕ್ರಿಯಾಪದಕ್ಕೆ ಎರಡು ಅರ್ಥಸಾಧ್ಯತೆಗಳಿವೆ. ‘ಹಡಗಿಗೆ ಕೂವೆಮರ ಅಡ್ಡದಿಮ್ಮಿ ಹಗ್ಗ ಮೊದಲಾದುವನ್ನು ಹವಣಿಸಿ ಹಡಗನ್ನು ಪ್ರಯಾಣಕ್ಕೆ ಸಜ್ಜುಗೊಳಿಸು’ ಎಂದು ಮೊದಲನೆಯ ಅರ್ಥ. ಎರಡನೆಯದಾಗಿ ‘ಮೋಸದಿಂದ ವ್ಯವಹರಿಸು, ವಂಚನೆಯ ದಾರಿ ಹಿಡಿ’ ಎಂಬ ಇನ್ನೊಂದು ಅರ್ಥ. ಚುನಾವಣೆ ಪ್ರಕ್ರಿಯೆಯಲ್ಲಿ ಬಲಪ್ರಯೋಗದಿಂದ ನಡೆಸಲಾಗುವ ಮತಪತ್ರ ವಶೀಕರಣವೇ ಮುಂತಾದ ಮೋಸ, ವಂಚನೆ, ಕಾನೂನು ವಿರೋಧಿಕಾರ್ಯಗಳು ಈ ಎರಡನೆಯ ಅರ್ಥಕ್ಕೆ ಹೊಂದುವಂಥವು. ಆದ್ದರಿಂದ ಚುನಾವಣೆಗಳ ಸಂದರ್ಭವನ್ನಷ್ಟೇ ಗಮನದಲ್ಲಿಡುವುದಾದರೆ Rigging ಎಂದರೆ ಕನ್ನಡದಲ್ಲಿ ‘ಮತಗಳ್ಳತನ’ ಎನ್ನಬಹುದಾಗಿದೆ. ಸೂಚಿಸಿದವರು: ಸಂಧ್ಯಾ ಅಡಿಗ, ಶೈಲಶ್ರೀ ರಾವ್ ಮತ್ತು ಗಂಗಾ ಹೆಗಡೆ. ‘ಮತಗಳವು’ (ಸಣ್ಣಪ್ಪ ನಾಯಕ, ಸುಧಾಕರ ನಾಯಕ್) ಅಥವಾ ‘ಮತಚೌರ್ಯ’ (ನರೇಂದ್ರನಾಥ್ ಹೆಚ್.ಎಂ, ಗಿರೀಶ ಕೆ.ಎಸ್, ಎನ್.ಆರ್ ರಮೇಶ್) ಸಹ ಸೂಕ್ತವೇ.
ಚುನಾವಣೆ ಪ್ರಕ್ರಿಯೆ ಮಾತ್ರವಲ್ಲದೆ ಸ್ವಾರ್ಥಕ್ಕೋಸ್ಕರ ಹಠಾತ್ತನೆ ಬೆಲೆ ಏರಿಕೆ ಅಥವಾ ಇಳಿಕೆ ಮಾಡುವ ರೀತಿಯ ವ್ಯಾಪಾರತಂತ್ರ ಮತ್ತು ಮೋಸಗಳನ್ನೂ ಪರಿಗಣಿಸಿದರೆ- ‘ಕಳ್ಳಾಟ’ (ಧೀರೇಂದ್ರ ಬೀಳಗಿ, ಸಿದ್ದನಗೌಡ ಮುದಿಗೌಡ್ರ, ಪಂಪಣ್ಣ ಗೌಡ, ವಿಜಯಕಲ ಬೆಂಗಳೂರು ಮುಂತಾದವರು) ಮತ್ತು ಇನ್ನಷ್ಟು ವಿಸ್ತಾರಗೊಳಿಸಿ ‘ಕೃತ್ರಿಮ’ (ನಳಿನಿ ಜಿ.ಭಟ್, ಡಾ.ಎನ್.ಎಂ ತುಳುಪುಳೆ), ‘ಕಪಟತನ’ (ಕಡೂರು ದೇವೇಂದ್ರ), ‘ಮೋಸ’ (ಶೋಭಾ ಎಂ.ಚಿಕ್ಕೋಡಿ), ‘ಕುತಂತ್ರ’ (ನಾಗಮಣಿ ಶಾಂಪೂರ್), ಅಥವಾ ‘ಅಕ್ರಮ’ (ಶಿವಕುಮಾರ ಸಿಂಗಟಗೆರೆ, ವಿಜಯಾ ಪರ್ವತಿಕರ, ಯಮನಪ್ಪ ಕೊಟ್ನಿಕಲ್, ಮಂಜುಳ ಆರ್.ಸುಲಾಖೆ, ನಾಗೇಶ ಫಾಟಕ್, ಆನಂದರಾಮ ಮಡಿ, ಡಾ.ದಯಾನಂದ ಭಟ್ಟ, ಸುಜಯ ಬಿ.ಜಿ, ಸುಜನಾ ನಿಟ್ಟೂರು ಮುಂತಾದವರು) ಕೂಡ ಸೂಕ್ತ ಸಂವಾದಿಪದ ಎನಿಸುತ್ತವೆ. Rigging ಎಂದಾಗ ನಮ್ಮ ಮನದಲ್ಲಿ ಮೂಡುವ ಚಿತ್ರಣವನ್ನೇ ಮೂಡಿಸುವಲ್ಲಿ ಇವು ಸಮರ್ಥವಾಗುತ್ತವೆ ಎನ್ನಲಾಗದು ಅಷ್ಟೇ.
ಕೊನೆಯದಾಗಿ Smoothie. ಇದು ಇಂಗ್ಲಿಷ್ ಭಾಷೆಯಲ್ಲೂ ಇತ್ತೀಚಿನ ಶಬ್ದವೇ. ಅದರಲ್ಲೂ 1920ರಿಂದ ಸುಮಾರು ಮೂರು-ನಾಲ್ಕು ದಶಕಗಳವರೆಗೆ ಇದಕ್ಕಿದ್ದ ಅರ್ಥ ‘ಬೇರೆಯವರೊಡನೆ, ವಿಶೇಷವಾಗಿ ವಿರುದ್ಧ ಲಿಂಗದವರ ಒಡನಾಟದಲ್ಲಿ, ಸಂಪೂರ್ಣ ಆತ್ಮವಿಶ್ವಾಸ ಮತ್ತು ಸಂಯಮದಿಂದ ಇರುವ ನಯವಂತ ಸಜ್ಜನ ವ್ಯಕ್ತಿ’ ಎಂದು. ಅಮೆರಿಕದ ಕಾಲೇಜುಗಳಲ್ಲಿ ‘ತಾನಾಯಿತು ತನ್ನ ಓದಾಯಿತು’ ಎಂಬಂತೆ ವರ್ತಿಸುವ ಕುಡುಮಿ ವಿದ್ಯಾರ್ಥಿಗಳನ್ನು ವ್ಯಂಗ್ಯವಾಡಲು ಈ ಪದ ಬಳಕೆಯಾಗುತ್ತಿತ್ತು. ಸುಮಾರು 1960ರ ಹೊತ್ತಿಗೆ ‘ಒಂದು ಬಗೆಯ ಸಿಹಿ ಪಾನೀಯ’ ಎಂಬ ಅರ್ಥ ಬಂದಿತು. ಆಮೇಲೆ 1980ರಿಂದ ಈಚೆಗೆ ‘ವಿವಿಧ ಹಣ್ಣುಗಳು, ತರಕಾರಿಗಳು ಮತ್ತು ಹಾಲು, ನೀರು ಅಥವಾ ಮೊಸರಿನಂತಹ ದ್ರವ ಪದಾರ್ಥ ಬಳಸಿ ತಯಾರಿಸಲಾಗುವ ಆರೋಗ್ಯಪೇಯ’ ಎಂಬ ಅರ್ಥವೇ ಹೆಚ್ಚು ಜನಪ್ರಿಯವಾಯಿತು. ಜನರ ಆರೋಗ್ಯವನ್ನು ವ್ಯಾಪಾರಿ ದೃಷ್ಟಿಯಿಂದ ನೋಡುವವರು ಈ ಅರ್ಥವನ್ನೇ ಮತ್ತಷ್ಟು ಗಟ್ಟಿಗೊಳಿಸಿದರು. ಸಂಸ್ಕೃತವನ್ನು ಆಧರಿಸಿ ಕನ್ನಡದಲ್ಲಿ ಕೆಲವು ಸಾಧ್ಯತೆಗಳು: ‘ಹಿತರಸ’ (ಧೀರೇಂದ್ರ ಬೀಳಗಿ), ‘ಪುಷ್ಟಿರಸ’ (ಪುಷ್ಪಲತಾ ಕೆ.ಎನ್), ‘ಪುಷ್ಟಿಪೇಯ’ (ಸಣ್ಣಪ್ಪ ನಾಯಕ), ‘ನಯಪೇಯ’ (ಪ್ರಭುಪ್ರಸಾದ್ ನಡುತೋಟ, ಎಂ.ಕೆ ರಮೇಶ್, ಸುಜಾತ ಕುರ್ಪಾಡ್), ‘ನಯಪಾನೀಯ’ (ಶೋಭಾ ತಿಪಟೂರು, ಗೋಪಿನಾಥ್ ಭರಮಸಾಗರ, ಗುರುರಾಜ್ ಗಲಗಲಿ), ‘ಮೃದುಪೇಯ’ (ನಿಹಾರಿಕಾ ನಯನಾ, ಕುಶಲ್ ಭಾರದ್ವಾಜ್, ಸುನೀತಾ ನಿರಂಜನ, ಮಿಸ್ಕಿನ್ ಕುಟುಂಬ ಸದಸ್ಯರು ಮುಂತಾದವರು), ‘ಮೃದುಪಾನ’ (ವಿಶ್ವರಾಜ್ ಕೋಲಾರ), ಮತ್ತು ‘ಸುಪಾನ’ (ಶೇಷಗಿರಿ ಎಚ್.ಎಸ್). ಇನ್ನೆರಡು ಆಕರ್ಷಕ ಪ್ರವೇಶಿಕೆಗಳು ‘ಫಲಶಾಕರಸ’ (ಕೆ.ಎಂ ಮಧ್ವರಾಯ), ಮತ್ತು ‘ಫಲಸಾರ’ (ರಂಗನಾಥ ಟಿ.ಕೆ). ಅಂದಹಾಗೆ ‘ಕಪಿತ್ಥ ಜಂಬೂ ಫಲಸಾರ ಭಕ್ಷಿತಂ...’ ಶ್ಲೋಕ ರಚಿಸಿದವರು ಡೊಳ್ಳುಹೊಟ್ಟೆ ಲಂಬೋದರನಿಗೂ ಸ್ಮೂತೀ ಇಷ್ಟ ಎಂದುಕೊಂಡಿರಬಹುದೇ?
ಆದರೆ ನೀವೇ ಗಮನಿಸಬಹುದಾದಂತೆ ಇವೆಲ್ಲ ತೀರ ಸಂಸ್ಕೃತಭೂಯಿಷ್ಠ ಪದಗಳು. ಬರೆವಣಿಗೆಯಲ್ಲಿ ಚಂದವೇ. ದೈನಂದಿನ ಬಳಕೆಯಲ್ಲಿ, ಆಡುಮಾತಿನಲ್ಲಿ ಕೊಂಚ ಕೃತಕ ಎನಿಸಬಹುದು. ಅದಕ್ಕಿಂತ, ಕನ್ನಡದ ಮಣ್ಣಿನ ಸೊಗಡನ್ನು ಸೂಸುವ ಒಂದು ಪದ ಕಟ್ಟಿದ್ದಾರೆ ಅನಂತರಾಮಯ್ಯ ಅಮೃತಹಳ್ಳಿ. ಅವರೆನ್ನುತ್ತಾರೆ Smoothie ಎಂಬ ಪಾನೀಯವು ನುಣ್ಣಗೆ ಮೇಣದಂತೆ ಇರುವುದರಿಂದ ಅದನ್ನು ‘ನುಣ್ಣಿ’ ಎನ್ನಬಹುದು! ಈ ತರ್ಕ ಮೆಚ್ಚುವಂತೆಯೇ ಇದೆ. ಏಕೆಂದರೆ ಅಕ್ಕಿ ಅಥವಾ ರಾಗಿಯಿಂದ ತಯಾರಿಸುವ, ಹಾಲುಬಾಯಿ ಎಂಬ ಹೆಸರೂ ಇರುವ, ಸಿಹಿತಿಂಡಿಯೊಂದಕ್ಕೆ ‘ಮಣ್ಣಿ’ ಎಂಬ ಹೆಸರಿದೆ. ಅದಕ್ಕಿಂತಲೂ ತುಸು ಹೆಚ್ಚು ದ್ರವರೂಪದಲ್ಲಿರುವ ಸ್ಮೂತೀ ‘ನುಣ್ಣಿ’ ಎಂದು ಕರೆಸಿಕೊಳ್ಳಲಿಕ್ಕೆ ಅರ್ಹವೇ ಆಗಿದೆ.
ಈ ವಾರದ ಮೂರು ಪದಗಳು:
1. Hairpin : ಕೂದಲನ್ನು ಹಿಡಿದಿಡುವ ಪಿನ್ನು, ಅದನ್ನು ಕನ್ನಡದಲ್ಲಿ ಹೀಗೆನ್ನು - ಎನ್ನುವುದಕ್ಕಾದರೂ ಕನ್ನಡದ ಒಂದು ಒಳ್ಳೆಯ ಪದ ಬೇಕಾಗಿದೆ!
2. Nail cutter : ಉಗುರುಗಳನ್ನು ಕತ್ತರಿಸಲಿಕ್ಕೆ ಉಪಯೋಗಿಸುವ ಸಾಧನವನ್ನು ಕನ್ನಡದಲ್ಲೂ ನೇಲ್ ಕಟ್ಟರ್ ಎನ್ನಬೇಕೇ, ಬೇರೆ ಕನ್ನಡ ಪದ ಸಾಧ್ಯವೇ?
3. Toothpick : ಹಲ್ಲನ್ನು ಕೀಳುವುದಕ್ಕಲ್ಲ ಹಲ್ಲುಗಳ ನಡುವೆ ಸಿಕ್ಕಿಕೊಂಡ ಆಹಾರಕಣಗಳನ್ನು ತೆಗೆಯಲಿಕ್ಕೆ ಬಳಸುವ ಕಡ್ಡಿ. ಕನ್ನಡದಲ್ಲಿ ಏನೆನ್ನಬಹುದು?
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945
-(ಲೇಖಕರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)