

ಒಂದು ಭಾನುವಾರದಿಂದ ಇನ್ನೊಂದು ಭಾನುವಾರದೊಳಗೆ ಒಂದು ಪ್ರದೇಶದ ಅಂತಾರಾಷ್ಟ್ರೀಯ ಸಂಬಂಧಗಳು, ಭೂ-ರಾಜಕೀಯ ಹಾಗೂ ಭೂ-ಸಾಮರಿಕ ವಾಸ್ತವಗಳು ಮತ್ತು ಸೇನಾ ಸಮೀಕರಣಗಳು ಏಕಾಏಕಿ ಬದಲಾಗಿ ಭವಿಷ್ಯ ಎತ್ತ ಸಾಹಬಹುದೆಂದು ಊಹಿಸಲಾಗದ ಸ್ಥಿತಿಗೆ ನಮ್ಮನ್ನು ಒಗೆದುಬಿಡಬಲ್ಲವೇ? ಇದೇ ಸೆ. 27ರಿಂದ ಅ. 4ರವರೆಗೆ ಪಶ್ಚಿಮದಲ್ಲಿ ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರಗಳ ಪೂರ್ವ ತೀರಗಳಿಂದ ಹಿಡಿದು ಪೂರ್ವದಲ್ಲಿ ಪರ್ಷಿಯನ್ ಕೊಲ್ಲಿಯ ಪಶ್ಚಿಮ ತೀರದವರೆಗಿನ ಪುಟ್ಟ ಪ್ರದೇಶದಲ್ಲಿ ಘಟಿಸಿದ ಬೆಳವಣಿಗೆಗಳನ್ನು ನೋಡಿದರೆ ‘ಹೌದು ಹಾಗಾಗಬಹುದು’ ಎಂದು ನಿಶ್ಚಯವಾಗಿಯೂ ಅನಿಸುತ್ತದೆ. ಹಾಗಿದ್ದರೆ ಆ 8 ದಿನಗಳಲ್ಲಿ ಅಲ್ಲಿ ಆದದ್ದಾದರೂ ಏನು? ಅದನ್ನು ಸರಿಯಾಗಿ ಅಂದರೆ ನಡುನಡುವೆ ಪ್ರಶ್ನೆಗಳನ್ನೆದುರಿಸುತ್ತ ಗೊಂದಲಕ್ಕೊಳಗಾಗದೇ ಓದುಗರು ಅರ್ಥ ಮಾಡಿಕೊಳ್ಳಬೇಕಾದರೆ ಎರಡು ಹಿನ್ನೆಲೆ ವಿವರಗಳನ್ನು ನಾನು ಮೊದಲೇ ಕೊಟ್ಟುಬಿಡುವುದು ಅಥವಾ ಇಡಿಯಾಗಿ ನೆನಪಿಸಿಬಿಡುವುದು ಅಗತ್ಯ.
ಗಾಝಾದಲ್ಲಿ ಚುನಾವಣಾ ವಿಜಯದೊಂದಿಗೆ ಅಧಿಕಾರ ಹಿಡಿದಿದ್ದ ಪ್ಯಾಲೆಸ್ತೀನಿಯನ್ ಭಯೋತ್ಪಾದಕ ಸಂಘಟನೆ ಹಮಾಸ್ 2023ರ ಅ. 7ರಂದು ಬೆಳಗ್ಗೆ ಇಸ್ರೇಲ್ನೊಳಗೆ ಹಠಾತ್ತನೆ ದಾಳಿ ಮಾಡಿ ಸುಮಾರು 1,200 ಇಸ್ರೇಲಿ ನಾಗರಿಕರನ್ನು ಭೀಭತ್ಸ ಬಗೆಯಲ್ಲಿ ಕೊಂದಿತು. ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಯಿತು, ಗರ್ಭಿಣಿಯರ ಹೊಟ್ಟೆ ಬಗೆಯಲಾಯಿತು, ಮೂರು ಹಸುಳೆಗಳನ್ನು ಜೀವಂತವಾಗಿ ಮೈಕ್ರೋವೇವ್ ಓವೆನ್ನೊಳಗೆ ಹಾಕಿ ಬೇಯಿಸಲಾಯಿತು, ಒಂದು ತಾಸಿಗೂ ಕಡಿಮೆ ಅವಧಿಯಲ್ಲಿ ಇಸ್ರೇಲ್ನ ಮೇಲೆ 7,000ಕ್ಕೂ ಅಧಿಕ ಕ್ಷಿಪಣಿಗಳನ್ನು ಪ್ರಯೋಗಿಸಲಾಯಿತು ಮತ್ತು ಗಂಡುಹೆಣ್ಣು, ಮಕ್ಕಳುಮರಿಯೆನ್ನದೇ ಸುಮಾರು 250 ಇಸ್ರೇಲೀಯರನ್ನು ಬಂಧಿಗಳಾಗಿ ಮಾಡಿ ಗಾಝಾದೊಳಗೆ ಎಳೆದೊಯ್ಯಲಾಯಿತು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಕೈಗೊಂಡ ಪ್ರತಿಕಾರ್ಯಾಚರಣೆ ಇನ್ನೂ ಭೀಕರ. ಈ 3 ವರ್ಷಗಳಲ್ಲಿ ಗಾಝಾ ಸರಿಸುಮಾರು ನೆಲಸಮವಾಗಿದೆ.
ಕೇವಲ 352 ಚ.ಕಿ.ಮೀ. ಪ್ರದೇಶದಲ್ಲಿ ಹಮಾಸ್ ನಿರ್ವಿುಸಿದ್ದ 500 ಕಿ.ಮೀ. ಉದ್ದದ ಸುರಂಗಗಳೂ ಕುಸಿದಿವೆ, 60,000ಕ್ಕಿಂತಲೂ ಹೆಚ್ಚು ಜನ ಹತರಾಗಿದ್ದಾರೆ, ಲಕ್ಷಗಟ್ಟಲೆ ಜನ ನಿರಾಶ್ರಿತರಾಗಿದ್ದಾರೆ. ಹಸಿವು, ರೋಗರುಜಿನ ಇಂದು ಅಲ್ಲಿ ಎಲ್ಲೆಲ್ಲೂ ತಾಂಡವವಾಡುತ್ತಿದೆ. ಇದು ಮಾನವತೆಯ ಮೇಲಿನ ಕ್ರೌರ್ಯ ಎಂದು ಹಮಾಸ್ ಹೇಳಿದರೆ, ಸಾಮಾನ್ಯ ಜನರನ್ನು ಮುಂದಿಟ್ಟುಕೊಂಡು ಗುರಾಣಿಗಳಂತೆ ಬಳಸುತ್ತ ಹಿಂದೆ ನಿಂತು ನಮ್ಮ ಮೇಲೆ ನಿರಂತರವಾಗಿ ಮಿಸೈಲ್, ಡ್ರೋನ್ ದಾಳಿ ನಡೆಸುತ್ತಿದ್ದ ನಿಮ್ಮನ್ನು ನಿಗ್ರಹಿಸಲು ನಮಗೆ ಬೇರೇನು ದಾರಿಯಿತ್ತು ಎಂದು ಇಸ್ರೇಲ್ ಕೇಳುತ್ತಿದೆ. ಆ ಸಂಘರ್ಷ ಇನ್ನೂ ನಿಂತಿಲ್ಲ. ಈ ಹಿನ್ನೆಲೆಯಲ್ಲಿ ಇದೇ ತಿಂಗಳ ಅಂತ್ಯದಲ್ಲಿ ಇಸ್ರೇಲ್ನಲ್ಲಿ ಸಂಸದೀಯ ಚುನಾವಣೆಗಳು ನಡೆಯಲಿವೆ.
ಇಂಥ ಸೂಕ್ಷ್ಮ ಸನ್ನಿವೇಶದಲ್ಲಿ ಬಹಿರಂಗಗೊಂಡಿರುವ ವಿಷಯವೊಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಈಗಲೇ ಸೋಲಿನ ಭವಿಷ್ಯವನ್ನು ಕಾಣಿಸುತ್ತಿದೆ. ಅದೆಂದರೆ 3 ವರ್ಷಗಳ ಹಿಂದಿನ ಹಮಾಸ್ ದಾಳಿಯ ಸೂಚನೆಯನ್ನು ನೆತನ್ಯಾಹು ಅವರಿಗೆ ಯುಎಇ ನಾಯಕರು ವಾರಕ್ಕೂ ಮೊದಲೇ ನೀಡಿದ್ದರಂತೆ! ಅಪಾಯದ ಸುಳಿವು ಸಿಕ್ಕಿದಾಗಲೂ ನೆತನ್ಯಾಹು ಏನೂ ಮಾಡಲಿಲ್ಲ, ಅದರಿಂದಾಗಿಯೇ ಹಮಾಸ್ ಅಂತಹ ಕರಾಳ ದಾಳಿಯೆಸಗುವುದರಲ್ಲಿ ಯಶಸ್ವಿಯಾದದ್ದು, ಕೊನೆಗಾಣದ ಸಂಘರ್ಷಕ್ಕೆ ತಮ್ಮ ದೇಶವನ್ನು ದೂಡಿದ್ದು ಎಂಬ ಆಕ್ರೋಶ ಇಸ್ರೇಲಿಗರಲ್ಲಿ ಭುಗಿಲೆದ್ದಿದೆ. ಇದರರ್ಥ ತಿಂಗಳೊಳಗೆ ನೆತನ್ಯಾಹು ಅವರ ರಾಜಕೀಯ ಅಂತ್ಯಗೊಳ್ಳುವಂತಹ ಸನ್ನಿವೇಶ ನಿರ್ಮಾಣವಾಗುತ್ತಿದೆ.
2001ಕ್ಕೆ ಹಿಂದೆ ವಿಮಾನಗಳಲ್ಲಿ ನಿಯಂತ್ರಣ ವ್ಯವಸ್ಥೆ ಮತ್ತು ಪೈಲಟ್ಗಳು ಕೂರುವ ಕಾಕ್ಪಿಟ್ಗಳಿಗೆ ಒಳಗಿನಿಂದ ಲಾಕ್ ಮಾಡಿಕೊಳ್ಳಬಹುದಾದಂತಹ ಬಾಗಿಲುಗಳ ವ್ಯವಸ್ಥೆ ಇರಲಿಲ್ಲ. ಅದನ್ನು ದುರುಪಯೋಗಪಡಿಸಿಕೊಂಡ ಅಲ್-ಖಯೀದಾ ಭಯೋತ್ಪಾದಕರು 2001ರ ಸೆ. 11ರಂದು ನಿರಾಯಾಸವಾಗಿ ಕಾಕ್ಪಿಟ್ಗಳೊಳಗೆ ನುಗ್ಗಿ 4 ವಿಮಾನಗಳನ್ನು ವಶಕ್ಕೆ ತೆಗೆದುಕೊಂಡು ಪ್ರಯಾಣಿಕರನ್ನಲ್ಲದೇ ವಿಶ್ವ ವ್ಯಾಪಾರ ಕೇಂದ್ರ ಮತ್ತು ಪೆಂಟಗನ್ನ ಒಂದು ಪಾರ್ಶ್ವದಲ್ಲಿದ್ದ 3,000 ಜನರ ಸಾವಿಗೆ ಕಾರಣವಾದದ್ದು ಎಲ್ಲರಿಗೂ ಗೊತ್ತಿದೆ. ಮುಂದೆ ಅಂತಹ ಅನಾಹುತಗಳನ್ನು ತಡೆಯಲು ಕಾಕ್ಪಿಟ್ಗಳ ಬಾಗಿಲುಗಳಿಗೆ ಒಳಗಿನಿಂದ ಲಾಕ್ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಯಿತು. ಅದಕ್ಕೂ ಹಿಂದೆ ಅದೇ ಬಗೆಯಲ್ಲಿ ನೂರಾರು ವಿಮಾನಗಳು ಅಪಹರಣವಾಗಿದ್ದರೂ ಅಂತಹ ವ್ಯವಸ್ಥೆ ಮೊದಲೇ ಯಾಕಾಗಲಿಲ್ಲ, ಅಮೆರಿಕದಲ್ಲಿ ಆದ ಮಾತ್ರಕ್ಕೆ ಅದು ಮುಖ್ಯವೆನಿಸಿಬಿಟ್ಟಿತೇ ಎಂಬ ಪ್ರಶ್ನೆ ಅನಗತ್ಯ. ಯಾಕೆಂದರೆ ಹಿಂದೆ ಅಪಹರಣಕಾರರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು, ಅವು ಸ್ವೀಕೃತವಾದೊಡನೇ ಪ್ರಯಾಣಿಕರನ್ನು, ಅನೇಕ ಸಲ ವಿಮಾನಗಳನ್ನೂ ಬಿಡುಗಡೆ ಮಾಡಿಬಿಡುತ್ತಿದ್ದರು.
ಒಮ್ಮೊಮ್ಮೆ ಮಾತುಕಥೆ ಅಥವಾ ಕಮ್ಯಾಂಡೋ ಕಾರ್ಯಾಚರಣೆಯ ಮೂಲಕ ಅಪಹರಣಕಾರರನ್ನು ಬಂಧಿಸಿ ಅಥವಾ ಕೊಂದು ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗುತ್ತಿತ್ತು. ಪ್ರಸಕ್ತ ಇಸ್ರೇಲಿ ಪ್ರಧಾನಿ ನೆತನ್ಯಾಹು ಕಮ್ಯಾಂಡೋ ತಂಡದಲ್ಲಿ ಭಾಗಿಯಾಗಿ 1972ರಲ್ಲಿ ಅಪಹರಣಕಾರರನ್ನು ಕೊಂದು ಪ್ರಯಾಣಿಕರನ್ನು ಬಿಡುಗಡೆ ಮಾಡಿದ್ದಾರೆ. ಅವರ ಅಣ್ಣ ಯೊಹಾನ್ನೆಸ್ ನೆತನ್ಯಾಹು 1976ರಲ್ಲಿ ಉಗಾಂಡಾದ ಎಂಟಬೆಯಲ್ಲಿ ಅಂತಹದೇ ಕಮ್ಯಾಂಡೋ ಕಾರ್ಯಾಚರಣೆಯ ನಾಯಕತ್ವ ವಹಿಸಿ ಪ್ರಾಣ ಕಳೆದುಕೊಂಡರೂ ಅವರ ತಂಡ ಅಪಹರಣಕಾರರನ್ನು ಕೊಂದು ಪ್ರಯಾಣಿಕರನ್ನು ಬಿಡುಗಡೆಗೊಳಿಸಿದ್ದರು. ಹೀಗೆ ಹಿಂದೆಲ್ಲಾ ವಿಮಾನಾಪಹರಣಗಳಿಂದ ಹೆಚ್ಚೇನೂ ಪ್ರಾಣಹಾನಿಯಾಗುತ್ತಿರಲಿಲ್ಲ ಹಾಗೂ ವಿಮಾನಕ್ಕೆ ಹೊರತಾಗಿ ಮತ್ತೇನಕ್ಕೂ ಹಾನಿಯಾಗುತ್ತಿರಲಿಲ್ಲ. ಆದರೆ 9/11 ಪ್ರಕರಣದಲ್ಲಿ ನಾಲ್ಕೂ ವಿಮಾನಗಳ ಎಲ್ಲ ಪ್ರಯಾಣಿಕರ ಜತೆ ನೆಲದ ಮೇಲಿನ ಕಟ್ಟಡಗಳಲ್ಲಿದ್ದ 3,000ಕ್ಕೂ ಅಧಿಕ ಅಮಾಯಕರು ಪ್ರಾಣ ಕಳೆದುಕೊಂಡರು ಮತ್ತು ವಿಮಾನಗಳ ಜತೆ 2 ಬೃಹತ್ ಕಟ್ಟಡಗಳೂ ನಾಶಗೊಂಡವು.
ಅಂದರೆ ಪ್ರಯಾಣಿಕರ ವಿಮಾನಗಳನ್ನು ಅಸ್ತ್ರಗಳಂತೆ ಬಳಸಿ ಯುದ್ಧದಲ್ಲಿ ಆಗುವಷ್ಟು ಹಾನಿಯನ್ನೆಸಗಬಹುದು ಎಂದು 9/11 ದುರಂತಗಳು ತೋರಿಸಿದವು. ಅಂತಹದು ಎಂದೂ ಯಾವ ದೇಶಕ್ಕೂ ಆಗಬಾರದೆಂದು ಕಾಕ್ಪಿಟ್ ಬಾಗಿಲುಗಳಿಗೆ ಒಳಗಿನಿಂದ ಲಾಕ್ ವ್ಯವಸ್ಥೆ ಆರಂಭವಾಯಿತು. ಆದರೆ ಅಷ್ಟಕ್ಕೇ ಅಪಾಯ ದೂರಾಗದು ಎನ್ನುವುದನ್ನು ಜಗತ್ತು 2015ರ ಮಾ. 24ರಂದು ಕಂಡಿತು. ಅಂದು ಸ್ಪೇನ್ನ ಬಾರ್ಸಿಲೋನಾದಿಂದ ಜರ್ಮನಿಯ ಡಸೆಲ್ಡಾರ್ಫ್ಗೆ ಹಾರುತ್ತಿದ್ದ ಜರ್ಮನ್ ವಿಂಗ್ಸ್ ಸಂಸ್ಥೆಯ ವಿಮಾನದ ಪೈಲಟ್ ವಾಷ್ರೂಂಗೆ ಹೋಗಲೆಂದು ಕಾಕ್ಪಿಟ್ನಿಂದ ಹೊರಬಂದಾಗ ಒಳಗೇ ಉಳಿದ ಕೋ-ಪೈಲಟ್ ಬಾಗಿಲು ಲಾಕ್ ಮಾಡಿಕೊಂಡು ವಿಮಾನವನ್ನು ತನ್ನ ಹತೋಟಿಗೆ ತೆಗೆದುಕೊಂಡು ಕೆಳಗಿಳಿಸಿ ಆಲ್ಪ್ಸ್ ಪರ್ವತದ ಶಿಖರವೊಂದಕ್ಕೆ ಗುದ್ದಿಸಿಬಿಟ್ಟ, 150 ಪ್ರಯಾಣಿಕರನ್ನೂ ಕೊಂದ, ತಾನೂ ಸತ್ತ. ಅವನು ಆತ್ಮಹತ್ಯಾ ಮನೋಭಾವದಿಂದ ಬಳಲುತ್ತಿದ್ದ ಎಂದು ನಂತರದ ತನಿಖೆಗಳು ಹೇಳಿದವು. ಮುಂದೆ ಅಂತಹದನ್ನು ತಪ್ಪಿಸಲು, ಕಾಕ್ಪಿಟ್ನ ಇಬ್ಬರಲ್ಲಿ ಒಬ್ಬರು ಯಾವ ಕಾರಣಕ್ಕಾದರೂ ಹೊರಹೋದರೆ ವಿಮಾನದ ಪರಿಚಾರಿಕಾ ಸಿಬ್ಬಂದಿಯವರೊಬ್ಬರು ಒಳಗಿರಬೇಕೆಂದು ಅಂದರೆ ಕಾಕ್ಪಿಟ್ನೊಳಗೆ ಯಾವಾಗಲೂ ಇಬ್ಬರು ಇರಲೇಬೇಕೆನ್ನುವ ವ್ಯವಸ್ಥೆಯನ್ನು ಆರಂಭಿಸಲಾಯಿತು.
ಈ ಎರಡು ಹಿನ್ನೆಲೆ ವಿವರಗಳೊಂದಿಗೆ ಕಳೆದ ವಾರಕ್ಕೆ ಹೋಗೋಣ. ಸೆ. 27ರಂದು ಮಧ್ಯಾಹ್ನ 3:10ರ ಹೊತ್ತಿಗೆ ಇಸ್ರೇಲಿ ಪ್ರಧಾನಿ ನೆತನ್ಯಾಹು ಪತ್ನಿ ಸಾರಾರೊಂದಿಗೆ ರಹಸ್ಯವಾಗಿ ಯುಎಇ ರಾಜಧಾನಿ ಅಬುಧಾಬಿಗೆ ಬಂದಿಳಿದರು. ಅಧ್ಯಕ್ಷ ಮಹಮದ್ ಬಿನ್ ಝಾಯೇದ್ ಅಲ್-ನಹಿಯಾನ್ (ಎಂಬಿಝೆಡ್) ಅವರೊಂದಿಗೇನೋ ತರಾತುರಿಯಲ್ಲಿ ಮಾತಾಡಿ ಸಂಜೆ 7:10ರ ಹೊತ್ತಿಗೆ ತೆಲ್ ಅವೀವ್ಗೆ ವಿಮಾನವೇರಿದರು. ಯಾರಿಗೂ ಏನೂ ಸುದ್ದಿಯಿಲ್ಲ! ಮಾರನೆಯ ದಿನ ಇಸ್ರೇಲಿ ಸುದ್ದಿವಾಹಿನಿ ಚಾನೆಲ್ 12, ಟೈಮ್ಸ್ ಆಫ್ ಇಸ್ರೇಲ್ ಹಾಗೂ ಜೆರುಸಲೇಂ ಪೋಸ್ಟ್ ಪತ್ರಿಕೆಗಳು ಹೇಳಿದಾಗಲೇ ಹೊರಜಗತ್ತಿಗೆ ವಿಷಯ ಗೊತ್ತಾದದ್ದು. ಆದರೆ ಇಸ್ರೇಲಿ ಪ್ರಧಾನಿ ಹೀಗೆ ತರಾತುರಿಯಲ್ಲಿ ಬಂದು ಮಾತಾಡಿದ್ದೇನು ಎನ್ನುವುದು ಮಾತ್ರ ರಹಸ್ಯ. ಅಷ್ಟೇ ಅಲ್ಲ, ಪ್ರಧಾನಿ ನೆತನ್ಯಾಹು ಹಿಂತಿರುಗಿದ ಕೆಲವೇ ತಾಸುಗಳಲ್ಲಿ ಮೊರಾಕ್ಕೋ, ಲಿಬಿಯಾ ಮತ್ತು ಖತರ್ಗಳ ಸವೋಚ್ಛ ರಾಜಕೀಯ ನೇತಾರರೂ ಒಬ್ಬರ ಹಿಂದೊಬ್ಬರು ಅಬುಧಾಬಿಗೆ ಬಂದುಹೋದರು! ಯಾಕಾಗಿ ಎನ್ನುವುದು ಆ ರಾತ್ರಿಯ ಕತ್ತಲಿನಷ್ಟೇ ನಿಗೂಢ.
ಸೋಮವಾರದಿಂದ ಹೀಗೊಂದು ಊಹೆ ಹರಿದಾಡುತ್ತಿದೆ- 2023ರ ಅ. 7ರ ಹಮಾಸ್ ದಾಳಿಯ ಮುನ್ಸೂಚನೆಯನ್ನು ನೆತನ್ಯಾಹು ಅವರಿಗೆ ಎಂಬಿಝೆಡ್ ನೀಡಿದ್ದರೆನ್ನಲಾದ ಸುದ್ದಿಯನ್ನು ಯುಎಇ ನಿರಾಕರಿಸುವಂತೆ, ಆ ಮೂಲಕ ತಮಗೆದುರಾಗಿರುವ ಚುನಾವಣಾ ದುಃಸ್ವಪ್ನವನ್ನು ದೂರ ಮಾಡುವಂತೆ ಇಸ್ರೇಲಿ ಪ್ರಧಾನಿ ಯುಎಇ ಅಧ್ಯಕ್ಷರಿಗೆ ಮನವಿ ಮಾಡಿಕೊಂಡಿರಬಹುದು! ಎರಡು ದಿನ ಮೌನವಾಗಿದ್ದು ನೆತನ್ಯಾಹು ರಹಸ್ಯ ಭೇಟಿಯ ಬಗ್ಗೆ ಮಂಗಳವಾರ ಹೇಳಿಕೆ ನೀಡಿದ ಯುಎಇ ಭೇಟಿಯ ಉದ್ದೇಶ ಪ್ರಾದೇಶಿಕ ಸುರಕ್ಷೆ, ಇರಾನ್ ಮತ್ತು ಹೂತಿಗಳ ಬಗ್ಗೆ ಎಂದು ಹೇಳಿತು. ಅದನ್ನು ಪ್ರಕಟಿಸಿದ ಅಬುಧಾಬಿಯ ಪತ್ರಿಕೆ ‘ದ ನ್ಯಾಷನಲ್’ ಪ್ರಕಾರ ಆ ಮಾಹಿತಿ ಬಂದದ್ದು ಹೆಸರು ಬಹಿರಂಗಪಡಿಸಲಾಗದ ಒಬ್ಬ ಅಧಿಕಾರಿಯಿಂದ.
ಈಗ ಉತ್ತರ ಹುಡುಕಲು ಪ್ರಯತ್ನಿಸೋಣ. 2020-21ರಲ್ಲಿ ಅಧ್ಯಕ್ಷ ಟ್ರಂಪ್ರ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ನೊಂದಿಗೆ ಅಬ್ರಹಾಂ ಒಪ್ಪಂದಕ್ಕೆ ಸಹಿಹಾಕಿ ಸ್ನೇಹಸಂಬಂಧ ಸ್ಥಾಪಿಸಿಕೊಂಡ 4 ಅರಬ್ ದೇಶಗಳಲ್ಲಿ ಪ್ರಮುಖವಾದ ಎರಡು ಯುಎಇ ಮತ್ತು ಮೊರಾಕ್ಕೋ. ಅವುಗಳೊಂದಿಗೆ ಇಸ್ರೇಲ್ ಜತೆ ರಹಸ್ಯವಾಗಿಯೇ ಘನಿಷ್ಟ ವ್ಯವಹಾರಗಳನ್ನು ಹೊಂದಿರುವ ಅರಬ್ ದೇಶಗಳಲ್ಲಿ ಖತಾರ್ ಮತ್ತು ಲಿಬಿಯಾ ಮುಖ್ಯವಾದುವು. ಒಟ್ಟಿಗೆ ಈ ನಾಲ್ಕೂ ದೇಶಗಳು ಸೌದಿ ಅರೇಬಿಯಾದೊಂದಿಗೆ ತಮ್ಮದೇ ಆದ ತಕರಾರುಗಳನ್ನು ಹೊಂದಿವೆ. ಸದಾ ಇಸ್ರೇಲ್ನ ಬೆನ್ನಿಗೆ ನಿಲ್ಲುವ ಅಮೆರಿಕದ ಮಾತನ್ನು ಗೌರವಿಸುತ್ತವೆ. ಅದೇನು ಅಮೆರಿಕಾದ ಮಾತು?
ಅಬ್ರಹಾಂ ಒಪ್ಪಂದಕ್ಕೆ ಸೌದಿಯೂ ಸಹಿ ಹಾಕಬೇಕೆನ್ನುವುದು ಟ್ರಂಪ್ರ ಒತ್ತಾಯ. ಇತ್ತೀಚೆಗೆ ಯೆಮೆನ್ನ ಹೂತಿಗಳ ಕೋಟಲೆಗೆ ಸಿಲುಕಿರುವ ಸೌದಿ ಸಹಾಯಕ್ಕೆ ಮೊರೆಯಿಟ್ಟಾಗ ಅದನ್ನು ಟ್ರಂಪ್ ಕಳಿಸಿದ್ದು ನೆತನ್ಯಾಹು ಬಾಗಿಲಿಗೆ. ಇಸ್ರೇಲಿ ಪ್ರಧಾನಿಯೇನೋ ವಾಯುಸುರಕ್ಷೆಯ ತಾಂತ್ರಿಕ ಸಹಾಯ ಒದಗಿಸಿದರು. ಹೆಚ್ಚಿನ ಸಹಾಯಕ್ಕಾಗಿ ಅಬ್ರಹಾಂ ಒಪ್ಪಂದಗಳಿಗೆ ಸಹಿ ಹಾಕಿ ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿಕೊಳ್ಳಬೇಕೆಂದು ಹೇಳಿದರು ಎಂದು ಸುದ್ದಿ. ಹಾಗೇ ಇದ್ದರೆ ಅದರ ಹಿಂದೆ ಇರುವುದು ಅಬ್ರಹಾಂ ಒಪ್ಪಂದದ ಪಿತೃ ಟ್ರಂಪ್! ಅಂದರೆ ಸೌದಿಯ ಇಂದಿನ ಇಕ್ಕಟ್ಟನ್ನು ಉಪಯೋಗಿಸಿಕೊಂಡು ಆ ಮುಸ್ಲಿಂ ದೇಶಗಳ ನಾಯಕನನ್ನು ಇಸ್ರೇಲ್ಗೆ ಹತ್ತಿರಾಗಿಸುವುದು ಅಮೆರಿಕ ಮತ್ತು ಇಸ್ರೇಲ್ನ ಲೆಕ್ಕಾಚಾರ! ಅದಕ್ಕೆ ಒಳಗೊಳಗೇ ಸಹಕರಿಸುತ್ತಿರುವುದು ಯುಎಇ, ಖತಾರ್, ಮೊರಾಕ್ಕೋ ಮತ್ತು ಲಿಬಿಯಾ! ಇಷ್ಟೂ ಅರಬ್ ದೇಶಗಳಿಗೆ ನೆತನ್ಯಾಹು ಇಸ್ರೇಲಿ ಪ್ರಧಾನಿಯಾಗಿಯೇ ಮುಂದುವರೆಯುವ ಅಗತ್ಯ ದೊಡ್ಡದಾಗಿದೆ.
ಯಾಕೆಂದರೆ ತಮ್ಮ ಸುರಕ್ಷೆಯ ಹಲವು ಆಯಾಮಗಳಿಗೆ ನೆತನ್ಯಾಹು ನೀಡಿರುವಷ್ಟು ಸಹಕಾರ ಬೇರೊಬ್ಬ ಇಸ್ರೇಲಿ ಪ್ರಧಾನಿಯಿಂದ ಸಿಗಲಾರದು ಎಂದೂ ಅವು ತಿಳಿದಿದ್ದರೆ ಅದಕ್ಕೆ ಸಕಾರಣಗಳಿವೆ. ಹೀಗಾಗಿ ಆ ಎಲ್ಲ ದೇಶಗಳ ಪ್ರಯತ್ನ ಈ ತಿಂಗಳ ಇಸ್ರೇಲಿ ಚುನಾವಣೆಗಳಲ್ಲಿ ನೆತನ್ಯಾಹು ಗೆಲುವಿಗೆ ಅನುಕೂಲಕರವಾಗಿರಲೇಬೇಕು. ಇ ಸ್ರೇಲಿ ರಾಜಕಾರಣ ಹಲವು ಅರಬ್ ದೇಶಗಳಿಗೆ ಮುಖ್ಯವೆನಿಸುವ ಅಪರೂಪದ ಗಳಿಗೆ ಈಗ ನಮ್ಮ ಮುಂದೆ ಅನಾವರಣಗೊಳ್ಳುತ್ತಿದೆ. ಸೆ. 27ರ ರಾತ್ರಿ ರಾಜಕಾರಣವಾದ 72 ತಾಸುಗಳೊಳಗೆ ಒಮಾನಿ-ಸಿರಿಯನ್ ಮೂಲದ, ಪಾಕಿಸ್ತಾನ್-ಅಫ್ಘನ್ ಗಡಿಯ ಲಷ್ಕರ್-ಎ-ತೋಯ್ಬಾ ಭಯೋತ್ಪಾದಕ ಕೇಂದ್ರದಲ್ಲಿ ತರಬೇತಿ ಹೊಂದಿದನೆನ್ನಲಾದ, ತುರ್ಕಿ ಗೆಳತಿಯನ್ನು ಹೊಂದಿರುವ ಕಾರಣ ಆ ದೇಶಕ್ಕೂ ಹೋಗಿ ಬಂದಿರುವ ಹಮಾಮ್ ಅಲ್-ಹಮಾಮಿ ಇಸ್ರೇಲಿ ಪ್ರಯಾಣಿಕರಿದ್ದ ಫ್ಲೈ ದುಬೈ ಎಫ್ರೆೆಡ್-1073 ವಿಮಾನವನ್ನು ರಕ್ತಪಾತದ ಮೂಲಕ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾನೆ.
ಯುಎಇ ತನಿಖಾಧಿಕಾರಿಗಳನ್ನು ಉಲ್ಲೇಖಿಸಿ ಇಟ್ಯಾಲಿಯನ್ ದೈನಿಕ ಕೊರಿಯೆರೇ ದೆ ಲಾ ಸೆರಾ ಹಾಗೂ ಇಸ್ರೇಲಿ ದೈನಿಕ ಜೆರುಸಲೇಂ ಪೋಸ್ಟ್ ಹೇಳುವ ಪ್ರಕಾರ ಹಮಾಮಿಯ ಉದ್ದೇಶ 9/11 ಮಾದರಿಯಲ್ಲಿ ವಿಮಾನವನ್ನು ಟೆಲ್ ಅವೀವ್ನ ಬೆನ್ ಗುರಿಯೆನ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಅಪ್ಪಳಿಸುವ, ಅದಾಗದಿದ್ದರೆ ಸೌದಿ ಮರುಭೂಮಿಯಲ್ಲಿ ಅಪಘಾತಕ್ಕೀಡಾಗಿಸುವುದಾಗಿತ್ತು. ಅವೆರಡರಲ್ಲೂ ಅವನು ವಿಫಲನಾದ. ಆದರೆ ಹಲವು ಗಂಭೀರ ಪ್ರಶ್ನೆಗಳನ್ನು ಸೃಷ್ಟಿಸುವುದರಲ್ಲಿ ಮಾತ್ರ ಅವನು ಯಶಸ್ವಿಯಾಗಿದ್ದಾನೆ. ಆ ಪ್ರಶ್ನೆಗಳು ಯಾವುವು, ಇಸ್ರೇಲಿ ಸಂಸದೀಯ ಚುನಾವಣೆಗಳಿಗೆ ಮತ್ತು ಅಬ್ರಹಾಂ ಒಪ್ಪಂದಗಳಿಗಾಗಿ ಸೌದಿ ಎದುರಿಸುತ್ತಿರಬಹುದಾದ ಒತ್ತಡಗಳಿಗೆ ಅವು ಹೇಗೆ ಸಂಬಂಧಿಸಿವೆ; ಆ ವಾರಾಂತ್ಯದ ಹೊತ್ತಿಗೆ ಸೌದಿ-ಹೂತಿ ಹಣಾಹಣಿಯಲ್ಲಿ ಪಾಕಿಸ್ತಾನ ಏಕಾಏಕಿ ನುಸುಳಿದ್ದೇಕೆ, ಇದೆಲ್ಲದರಿಂದಾಗಿ ಮುಂದೇನಾಗಬಹುದು ಎನ್ನುವುದನ್ನು ಮುಂದಿನವಾರ ವಿಶ್ಲೇಷಿಸೋಣ.