More

    ಧರೆಗುರುಳಿದ ಸುಂದರ ವೃಕ್ಷದ ಕುರಿತು…

    ಧರೆಗುರುಳಿದ ಸುಂದರ ವೃಕ್ಷದ ಕುರಿತು...ಬ್ರಿಟಿಷರ ಆಡಳಿತದಿಂದ ದೇಶಕ್ಕೆ ಕೆಲವು ವಿಷಯಗಳಲ್ಲಿ ಒಳ್ಳೆಯದಾಯಿತು ಎಂದು ಹಲವರು ಭಾವಿಸುತ್ತಾರೆ. ಈ ಕುರಿತಂತೆ ಪರ, ವಿರೋಧದ ಅಭಿಪ್ರಾಯಗಳಿವೆ. ವ್ಯಾಪಾರದ ನಿಮಿತ್ತ 1608ರಲ್ಲಿ ದೇಶದ ಸೂರತ್ ನಗರಕ್ಕೆ ಮೊದಲು ಆಗಮಿಸಿದ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯ ಮೂಲಕ ವ್ಯಾಪಾರ, ಉದ್ದಿಮೆ ನಡೆಸುತ್ತ, ಇಲ್ಲಿಯ ರಾಜರುಗಳು, ಸ್ಥಳೀಯ ಆಡಳಿತಗಾರರ ಸಹಕಾರದಿಂದ ದೇಶವನ್ನು ನಿಧಾನವಾಗಿ ಆಕ್ರಮಿಸಿಕೊಂಡರು. 20 ಸಾವಿರ ಸಂಖ್ಯೆಯ ಬ್ರಿಟಿಷರು 30 ಕೋಟಿ ಭಾರತೀಯರನ್ನು ತಮ್ಮ ಒಡೆದು ಆಳುವ ನೀತಿಯ ಆಧಾರದ ಮೇಲೆ ಹಿಡಿತ ಸಾಧಿಸಿ, ಆಳ್ವಿಕೆ ನಡೆಸಿದರು. ನಮ್ಮ ದೇಶದಲ್ಲಿದ್ದ ಅಪಾರ ಸಂಪತ್ತನ್ನು ತಮ್ಮ ದೇಶಕ್ಕೆ ಸಾಗಿಸಿದರು.

    ದೇಶದ ಕಾನೂನು, ಆಡಳಿತ ವ್ಯವಸ್ಥೆಯ ಸುಧಾರಣೆಗೆ ಬ್ರಿಟಿಷರ ಆಳ್ವಿಕೆ ಸಹಕಾರಿ ಆಯಿತು ಎಂದೆನಿಸಿದರೂ, ಅವರ ಆಡಳಿತ ನಮ್ಮ ದೇಸಿ ಸಂಸ್ಕೃತಿ, ಜ್ಞಾನ, ಭಾಷೆಗಳ ಅವನತಿಗೆ ಕಾರಣವಾಯಿತು. ಅವರು ನಮ್ಮ ದೇಶದ ಶೇಕಡ 40ರಷ್ಟು ಆದಾಯವನ್ನು ಭಾರತೀಯ ಸೈನ್ಯವನ್ನು ಕಟ್ಟಲು ಉಪಯೋಗಿಸಿದರು ಹಾಗೂ ನಮ್ಮ ಸೇನೆಯ ನೆರವಿನಿಂದಲೇ ಅನೇಕ ಯುದ್ಧಗಳನ್ನು ಮಾಡಿದರು. ಭಾರತೀಯ ಸೇನೆ ಬ್ರಿಟಿಷರ ಹಿಡಿತದಲ್ಲಿ ಇರುವವರೆಗೆ ಇಂಗ್ಲೆಂಡ್ ವಿಶ್ವದಲ್ಲಿ ಒಂದು ದೊಡ್ಡ ಶಕ್ತಿಯಾಗಿತ್ತು.

    ಬ್ರಿಟಿಷರು ಭಾರತದ ಸಂಪತ್ತಿನ ಮೇಲೆ ನಡೆಸಿದ ಆಕ್ರಮಣ ಹಾಗೂ ಭಾರತೀಯ ಸೇನೆ ಕಟ್ಟಲು ಬಳಸಿದ ಆರ್ಥಿಕ ಸಂಪನ್ಮೂಲದಿಂದ ದೇಶದ ಆರ್ಥಿಕ ಬೆಳವಣಿಗೆ ಕುಸಿತ ಕಂಡಿತು. ಬ್ರಿಟಿಷರು ತಮ್ಮ ದೇಶಕ್ಕೆ ಅಗತ್ಯವಾದ ಹತ್ತಿ, ಚಹಾ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಿದ ಕಾರಣ ದೇಶದಲ್ಲಿ ಆಹಾರಧಾನ್ಯ ಉತ್ಪಾದನೆಗೆ ಹಿನ್ನಡೆಯಾಗಿ ಆಹಾರವನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಅಷ್ಟೇ ಅಲ್ಲ, ಬ್ರಿಟಿಷರ ಕಾಲದಲ್ಲಿ ಭಾರತದ ಸಾಕ್ಷರತೆ ಪ್ರಮಾಣ ಕುಸಿತವಾಗಿದ್ದರ ಕುರಿತು ಅನೇಕ ಮೂಲಗಳಿಂದ ನಮಗೆ ತಿಳಿಯುತ್ತದೆ. ಆದರೆ ಮೇಲ್ನೋಟಕ್ಕೆ ನೋಡಿದರೆ ಅವರ ಆಳ್ವಿಕೆಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ಸಿಕ್ಕಿತ್ತು ಹಾಗೂ ಸಾಕ್ಷರತೆ ಪ್ರಮಾಣ ಹೆಚ್ಚಾಗಿತ್ತು ಎನಿಸುತ್ತದೆ. 1872ರಲ್ಲಿ ಶೇ.3.2 ರಷ್ಟಿದ್ದ ಭಾರತದ ಸಾಕ್ಷರತೆ ಪ್ರಮಾಣ 1947ರ ಹೊತ್ತಿಗೆ ಶೇ.16ಕ್ಕೆ ತಲುಪಿದ್ದ ಕಾರಣ ಬ್ರಿಟಿಷರು ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಬೆಳವಣಿಗೆಗೆ ಕಾರಣರಾಗಿದ್ದರು ಎಂಬ ಭಾವನೆ ಮೂಡಿತು. ವಾಸ್ತವವೆಂದರೆ, ನಮ್ಮ ದೇಶದ ಸಾಂಸ್ಕೃತಿಕ ಹಾಗೂ ಭಾಷಾ ವೈವಿಧ್ಯತೆಯ ಮಹತ್ವ ತಿಳಿಯದ ಆಂಗ್ಲರು ನಮ್ಮ ದೇಸಿತನದ ಎಲ್ಲ ಅಂಶಗಳನ್ನು ನಾಶ ಮಾಡಿದರು.

    ಈ ಕುರಿತು ಗಾಂಧೀಜಿಯವರು ಸಾಕಷ್ಟು ಪುರಾವೆಗಳ ಸಹಿತ ಬ್ರಿಟಿಷರ ಎದುರಿಗೇ ವಿಚಾರಗಳನ್ನು ಮಂಡಿಸಿದರು. ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು 1931ರಲ್ಲಿ ಲಂಡನ್​ಗೆ ತೆರಳಿದ್ದ ಗಾಂಧೀಜಿ ಅಲ್ಲಿನ ರಾಯಲ್ ಇನ್ಸ್ ಟಿಟ್ಯೂಟ್​ನಲ್ಲಿ ಮಾಡಿದ ಭಾಷಣದಲ್ಲಿ, ಬ್ರಿಟಿಷರ ಆಳ್ವಿಕೆಯಿಂದ ಭಾರತಕ್ಕಾದ ಅನೇಕ ನಷ್ಟಗಳ ಕುರಿತು ವಿವರಿಸಿದ್ದರು. ಬ್ರಿಟಿಷರ ಕಾಲದಲ್ಲಿ ದೇಶದಲ್ಲಿ ಅನಕ್ಷರತೆ ಹೆಚ್ಚಾಯಿತು. ಅವರು ದೇಶಕ್ಕೆ ಬಂದು, ಆಡಳಿತ ನಡೆಸುವ ವೇಳೆಯಲ್ಲಿ ಇಲ್ಲಿದ್ದ ಸಂಗತಿಗಳನ್ನು ಇರುವ ಹಾಗೇ ಬಿಡದೇ ಅವುಗಳನ್ನು ಬುಡಮೇಲು ಮಾಡಿದರು. ಈ ನೆಲದ ಮಣ್ಣನ್ನು ಬಗೆದು, ಮರದ ಬೇರುಗಳನ್ನು ನೋಡಲು ಪ್ರಯತ್ನಿಸಿದರು. ಸುಂದರ ವೃಕ್ಷವು ಧರೆಗುರುಳಿ ಪತನಕ್ಕೆ ಕಾರಣವಾದ ಬಗೆಯನ್ನು ಬ್ರಿಟಿಷರ ನೆಲದಲ್ಲಿಯೇ ಅವರ ಮುಂದೆಯೇ ಗಾಂಧೀಜಿ ವಿವರಿಸುತ್ತ ಹೋದರು. ಗಾಂಧೀಜಿ ಮಾತಿಗೆ ಫಿಲಿಪ್ ಹಾರ್ಟಾಗ್ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತ, ‘ನಿಮ್ಮ ವಾದಕ್ಕೆ ತಕ್ಕ ಪುರಾವೆಗಳನ್ನು ಕೊಡಬೇಕು’ ಎಂದು ಪಟ್ಟುಹಿಡಿದರು. ಈ ಬಗ್ಗೆ ಗಾಂಧಿ ಮತ್ತು ಹಾರ್ಟಾಗ್ ನಡುವೆ ಪತ್ರಸಮರವೇ ನಡೆಯಿತು. ಬ್ರಿಟಿಷ್ ಆಳ್ವಿಕೆಯಲ್ಲಿ ಮಾಡಿದ ಸಮೀಕ್ಷೆಗಳಲ್ಲಿನ ಅಂಕಿಸಂಖ್ಯೆ ಮತ್ತು ಮಾಹಿತಿಗಳನ್ನು ಗಾಂಧೀಜಿಯವರು ಆಧಾರವಾಗಿ ನೀಡುತ್ತ ತಮ್ಮ ವಾದವನ್ನು ಸಮರ್ಥಿಸಿಕೊಂಡರು. ಈ ಎಲ್ಲ ಕುತೂಹಲಕಾರಿ ವಿವರಗಳನ್ನು 1983ರಲ್ಲಿ ಪ್ರಕಟವಾದ ಧರ್ಮಪಾಲ್ ಅವರು ಬರೆದ ‘ದಿ ಬ್ಯೂಟಿಫಲ್ ಟ್ರಿ’ ಪುಸ್ತಕದಲ್ಲಿ ಕಾಣಬಹುದು.

    ಹದಿನೆಂಟನೇ ಶತಮಾನದಲ್ಲಿ ದೇಶದಲ್ಲಿದ್ದ ದೇಸಿ ಶಿಕ್ಷಣ ಪದ್ಧತಿಯನ್ನು ಆಂಗ್ಲರು ಯಾವ ರೀತಿಯಲ್ಲಿ ಹಾಳು ಮಾಡಿದರು ಎಂಬ ವಿವರಗಳನ್ನು ಈ ಪುಸ್ತಕದಲ್ಲಿ ಗಮನಿಸಬಹುದು. ಗಾಂಂಧೀಜಿ ಅಭಿಪ್ರಾಯಿಸುವಂತೆ ಆಂಗ್ಲರು ದೇಶದ ಆಳ್ವಿಕೆ ನಡೆಸುತ್ತಿದ್ದಾಗ ಬ್ರಿಟನ್​ನಲ್ಲಿದ್ದ ಶಿಕ್ಷಣ ವ್ಯವಸ್ಥೆಗಿಂತಲೂ ಉತ್ತಮವಾದ ಸಶಕ್ತವಾದ ದೇಸಿ ಶಿಕ್ಷಣ ಪದ್ಧತಿ ನಮ್ಮಲ್ಲಿತ್ತು. ಬ್ರಿಟಿಷರು ಕಟ್ಟಡ, ಪರಿಕರಗಳಿರುವ ಶಾಲೆಗಳಿಗೆ ಮಾತ್ರ ಮಾನ್ಯತೆ ನೀಡುವ ಕಾನೂನು ತಂದರು. ಮೆಕಾಲೆಯು ಆಂಗ್ಲಭಾಷೆ, ವಿಚಾರಗಳು ಮಾತ್ರ ಸರ್ವಶ್ರೇಷ್ಠ ಮತ್ತು ಭಾರತದ ಭಾಷೆ, ಜ್ಞಾನ ಮತ್ತು ವಿಚಾರಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ. ಅದಕ್ಕೆ ಪೂರಕವಾದ ಶಿಕ್ಷಣ ಪದ್ಧತಿಯ ಅನುಷ್ಠಾನಕ್ಕಾಗಿ ಕಾನೂನುಗಳನ್ನು ರೂಪಿಸಿ, ಜಾರಿಗೆ ತಂದ. ಬ್ರಿಟಿಷರು ಪ್ರಾರಂಭಿಸಿದ ಶಾಲೆಗಳಲ್ಲಿ ಮಾತ್ರ ಶಿಕ್ಷಣ ಪಡೆಯಬೇಕು ಎಂಬ ನೀತಿಯ ಪರಿಣಾಮ ದೇಶದ ಹಳ್ಳಿ-ಹಳ್ಳಿಗಳಲ್ಲಿ ಸರಳ ವೆಚ್ಚದಲ್ಲಿ ನಡೆಯುತ್ತಿದ್ದ ಗುರುಕುಲ, ಪಾಠಶಾಲೆ, ಮದರಾಸಾಗಳು ಸದ್ದಿಲ್ಲದೇ ಮುಚ್ಚಿದವು. ಇದು ದೇಶದ ಶಿಕ್ಷಣ ವ್ಯವಸ್ಥೆಯ ಪತನಕ್ಕೆ ಕಾರಣವಾಯಿತು. ಬ್ರಿಟಿಷರು ಪ್ರಾರಂಭಿಸಿದ ಶಾಲೆಗಳಲ್ಲಿ ಓದಿ, ಶಿಕ್ಷಣ ಪೂರೈಸಿ, ಪ್ರಮಾಣಪತ್ರ ಪಡೆದವರಿಗೆ ಬ್ರಿಟಿಷ್ ಸರ್ಕಾರದಲ್ಲಿ ಹುದ್ದೆಗಳು ದೊರೆಯಲು ಪ್ರಾರಂಭವಾದ ಮೇಲೆ ನಿಧಾನವಾಗಿ ಆಂಗ್ಲಭಾಷಾ ಶಿಕ್ಷಣ ಪಡೆಯುವ ವ್ಯಾಮೋಹ ಬೆಳೆಯಿತು. ಜತೆಗೆ, ನಮ್ಮ ನೆಲದ ಭಾಷೆ, ಸಂಸ್ಕೃತಿ, ಜ್ಞಾನಗಳು ನಿಧಾನವಾಗಿ ಅನಾದರಕ್ಕೆ ಒಳಗಾದವು.

    19ನೇ ಶತಮಾನದ ಮಧ್ಯಭಾಗದಿಂದ ದೇಶ ಸ್ವಾತಂತ್ರ್ಯ ಹೊಂದುವವರೆಗೆ ದೇಶದ ಶಿಕ್ಷಣ ಕ್ಷೇತ್ರಕ್ಕೆ ಹಿನ್ನಡೆಯಾದ ಬಗ್ಗೆ ಗಾಂಧೀಜಿ ವಿವರಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 1820ರಿಂದ 1830ರ ಅವಧಿಯೊಳಗೆ ದೇಶದ ಜಿಲ್ಲಾ ಕಲೆಕ್ಟರ್​ಗಳು ಮದ್ರಾಸ್, ಬಾಂಬೆ, ಬಂಗಾಳ, ಬಿಹಾರ ಪ್ರಾಂತ್ಯಗಳಲ್ಲಿ ನಡೆಸಿದ್ದ ಸಮೀಕ್ಷೆಯ ಅಧಿಕೃತ ವಿವರಗಳು ನಮ್ಮ ದೇಶದಲ್ಲಿದ್ದ ಶಿಕ್ಷಣ ವ್ಯವಸ್ಥೆಯ ಚಿತ್ರಣವನ್ನು ಕಟ್ಟಿಕೊಡುತ್ತವೆ. 1835ರ ಮೆಕಾಲೆ ವರದಿ ನಂತರ ದೇಶದ ಶಿಕ್ಷಣ ಪದ್ಧತಿ ಬಗ್ಗೆ ಬ್ರಿಟಿಷ್ ಸರ್ಕಾರ ತೆಗೆದುಕೊಂಡ ಕ್ರಮಗಳು ಇಂಗ್ಲಿಷ್ ಭಾಷಾ ಶಿಕ್ಷಣದ ವ್ಯಾಮೋಹ ಬೆಳೆಯಲು ಕಾರಣವಾಗುವ ಜೊತೆಗೆ ದೇಶದಲ್ಲಿ ನಡೆಯುತ್ತಿದ್ದ ಅಪಾರ ಸಂಖ್ಯೆಯ ಶಾಲೆಗಳು ನಶಿಸುವಂತೆ ಮಾಡುತ್ತವೆ.

    ಬಂಗಾಳ, ಬಿಹಾರ ಪ್ರಾಂತ್ಯದಲ್ಲಿ 1 ಲಕ್ಷ ಹಾಗೂ ಮದ್ರಾಸ್ ಪ್ರಾಂತ್ಯದಲ್ಲಿ 1.5 ಲಕ್ಷ ಶಾಲೆಗಳಿದ್ದವು. ಸಮುದಾಯದ ಬೆಂಬಲದಿಂದ ಈ ಶಾಲೆಗಳು ನಡೆಯುತ್ತಿದ್ದ ಬಗ್ಗೆ ಹಾಗೂ ಈ ಶಾಲೆಗಳಲ್ಲಿ ನೀಡುತ್ತಿದ್ದ ಪಠ್ಯಕ್ರಮದ ಬಗ್ಗೆ ಕುತೂಹಲಕಾರಿ ಮಾಹಿತಿಗಳು ದೊರೆಯುತ್ತವೆ. ಅಂದಿನ ಶಾಲೆಗಳಲ್ಲಿ ಬಾಲಕಿಯರ ಸಂಖ್ಯೆ ಕಡಿಮೆ ಇದ್ದರೂ ಬಾಲಕಿಯರು ತಮ್ಮ ಶಿಕ್ಷಣವನ್ನು ಮನೆಯಲ್ಲಿಯೇ ಪಡೆಯುತ್ತಿದ್ದರು. ಎ.ಡಿ.ಕ್ಯಾಂಪ್​ಬೆಲ್ ಎಂಬ ಬಳ್ಳಾರಿಯ ಕಲೆಕ್ಟರ್ 17-08-1823ರಲ್ಲಿ ಬಳ್ಳಾರಿ ಜಿಲ್ಲೆಯ ಶಿಕ್ಷಣದ ವ್ಯವಸ್ಥೆ ಬಗ್ಗೆ ನೀಡಿದ ವರದಿಯಂತೆ- ಬಳ್ಳಾರಿ ಜಿಲ್ಲೆಯ ಜನಸಂಖ್ಯೆ 9,27,877 ಇದ್ದು, ಅಲ್ಲಿ ಇದ್ದ ಒಟ್ಟು 533 ಶಾಲೆಗಳ ಪೈಕಿ 235 ಶಾಲೆ ಕರ್ನಾಟಕ ಶಾಲೆ (ಕನ್ನಡ ಶಾಲೆಗೆ ಕರ್ನಾಟಕ ಶಾಲೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ), 226 ತೆಲುಗು ಶಾಲೆ ಹಾಗೂ ಉಳಿದ ಶಾಲೆಗಳು ತಮಿಳು, ಪರ್ಷಿಯನ್ ಇದ್ದರೆ ಒಂದು ಶಾಲೆ ಮಾತ್ರ ಆಂಗ್ಲ ಮಾಧ್ಯಮ ಶಾಲೆಯಾಗಿತ್ತು. ಆಂಗ್ಲರ ನಂತರದ ಭಾರತದಲ್ಲಿ ಅವರು ಬಿಟ್ಟು ಹೋದ ಆಂಗ್ಲ ಭಾಷೆಯನ್ನು ನಾವು ಬಿಗಿಯಾಗಿ ಅಪ್ಪಿಕೊಂಡಿದ್ದೇಕೆ ಎಂಬ ಪ್ರಶ್ನೆಯ ಜೊತೆ ನಮ್ಮ ನೆಲ, ಸಂಸ್ಕೃತಿ, ವೈವಿಧ್ಯಕ್ಕೆ ಸರಿಹೊಂದುವ ದೇಸಿ ಶಿಕ್ಷಣ ವ್ಯವಸ್ಥೆಯನ್ನು ಹೊಂದಲು ನಮಗೆ ಸಾಧ್ಯವಾಗಲಿಲ್ಲವೇಕೆ ಎಂಬ ಪ್ರಶ್ನೆಯೂ ಕಾಡುತ್ತದೆ.

    (ಲೇಖಕರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts