More

    ಮಳೆಗೆ 2000 ಕೋಳಿ ಮರಿಗಳು ಸಾವು: ನಷ್ಟದಲ್ಲಿ ರೈತ

    ಆನೇಕಲ್: ತಾಲೂಕಿನಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಜಲಾವೃತಗೊಂಡು ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಾಜಕಾಲುವೆಯ ನೀರೆಲ್ಲ ಕೋಳಿ ಫಾರ್ಮ್‌ಗೆ ನುಗ್ಗಿದ್ದರಿಂದ ಸಾವಿರಾರು ಕೋಳಿ ಮರಿಗಳ ಮಾರಣ ಹೋಮವಾಗಿದೆ.

    ತಾಲೂಕಿನ ಹಾಲ್ದೇನಹಳ್ಳಿಯ ರೈತ ಮುನಿರಾಜು ಎಂಬುವವರಿಗೆ ಸೇರಿದ ಕೋಳಿ ಫಾರ್ಮ್ ಶೆಡ್‌ಗೆ ಮಳೆ ನೀರು ನುಗ್ಗಿದ ಪರಿಣಾಮ ಸುಮಾರು 2ಸಾವಿರ ಕೋಳಿ ಮರಿಗಳು ಸಾವನ್ನಪ್ಪಿವೆ. ಕೆಲ ದಿನಗಳ ಹಿಂದೆ ಕಂದಾಯ ಇಲಾಖೆ ಅಧಿಕಾರಿಗಳು ರಾಜಕಾಲುವೆ ತೆರವುಗೊಳಿಸುವ ನೆಪದಲ್ಲಿ ಬಂದು ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಹೋಗಿದ್ದು, ಮಳೆನೀರು ರಾಜಕಾಲುವೆಯಿಂದ ಹೊರಹೋಗಲು ಸಾಧ್ಯವಾಗದೆ ಶೆಡ್ ಒಳಗೆ ನುಗ್ಗಿದೆ.

    ಕೋಳಿ ಮರಿಗಳನ್ನು ಕಂಪನಿಯಿಂದ ತಂದು ರೈತರು ಅವುಗಳನ್ನ ಸಾಕಿ ದೊಡ್ಡದಾಗಿ ಮಾಡಿ ಮತ್ತೆ ಕಂಪನಿಗೆ ಹಿಂದಿರುಗಿಸಬೇಕು. ಆದರೆ ಕಂಪನಿಯಿಂದ ನೀಡಿದ್ದ ಒಂದು ಲಕ್ಷ ರೂ. ಮೌಲ್ಯದ ಕೋಳಿ ಮರಿಗಳು ಸಾವನ್ನಪ್ಪಿದ್ದು, ರೈತರನ್ನು ಕಂಗಾಲಾಗುವಂತೆ ಮಾಡಿದೆ.

    ರಸ್ತೆಗಳು ಜಲಾವೃತ: ತಾಲೂಕಿನ ಚಂದಾಪುರ, ಹೆನ್ನಾಗರ, ಮುತ್ತಾನಲ್ಲೂರು ಸೇರಿ ಹಲವು ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ಸೋಮವಾರ ಮುಂಜಾನೆ ನಾಲ್ಕು ಗಂಟೆಯಿಂದ ಆರಂಭವಾದ ಮಳೆಯಿಂದ ಹೆಬ್ಬಗೋಡಿ, ಚಂದಾಪುರ, ಬನ್ನೇರುಘಟ್ಟ, ದೊಮ್ಮಸಂದ್ರ ರಸ್ತೆಗಳೆಲ್ಲವೂ ಸಂಪೂರ್ಣ ಜಲಾವೃತಗೊಂಡು ಕೆರೆಗಳಾಗಿ ಮಾರ್ಪಾಡಾಗಿವೆ. ಇದರಿಂದಾಗಿ ಬೆಳಗ್ಗೆ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ಪರದಾಡುವಂತಾಯಿತು.
    ಪಟ್ಟಣದ ನಾರಾಯಣಪುರದ ಕೆಲ ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಸಮಸ್ಯೆ ಎದುರಿಸಿದರು.

    ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಅಧಿಕಾರಿಗಳು ಮುಂದೆ ಬರುವುದಿಲ್ಲ. ಮಳೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಹೊಂದಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಬೇಜವಾಬ್ದಾರಿ ತೋರಿದ್ದಾರೆ.
    | ಮುರುಳಿ ರೈತ


    ರಾಜಕಾಲುವೆಯನ್ನು ಅವೈಜ್ಞಾನಿಕವಾಗಿ ತೆರವು ಮಾಡಿ ಹಾಗೆ ಬಿಟ್ಟು ಹೋಗಿದ್ದರಿಂದ ಮಳೆ ನೀರು ಹೊರ ಹೋಗಲಾಗದೆ ಜಮೀನುಗಳಿಗೆ ಹಾಗೂ ಕೋಳಿ ಫಾರ್ಮ್ ಶೆಡ್‌ಗೆ ನುಗ್ಗಿದ್ದರಿಂದ ಸಾಕಷ್ಟು ಪ್ರಮಾಣದ ನಷ್ಟವಾಗಿದೆ. ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದು, ವೈಯಕ್ತಿಕ ನೆಲೆಯಲ್ಲಿ 10,000 ರೂಪಾಯಿ ಪರಿಹಾರ ನೀಡಲಾಗುವುದು.
    | ತಿಮ್ಮರಾಜು ಗ್ರಾಮ ಪಂಚಾಯಿತಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts