More

    ಆಂಧ್ರ ದೇವಳ ಶೀಘ್ರ ದುರಸ್ತಿ, ಪೇಜಾವರ ಶ್ರೀಗಳಿಗೆ ಸಚಿವ ವೇಲಂಪಳ್ಳಿ ಭರವಸೆ

    ಉಡುಪಿ: ಆಂಧ್ರಪ್ರದೇಶದಲ್ಲಿ ದೇವಾಲಯಗಳ ಮೇಲೆ ದಾಳಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹಾನಿಯಾದ ದೇವಾಲಯಗಳನ್ನು 3 ಕೋಟಿ ರೂ.ವೆಚ್ಚದಲ್ಲಿ ಸರ್ಕಾರ ದುರಸ್ತಿ ಮಾಡಲಿದೆ ಎಂದು ಆಂಧ್ರಪ್ರದೇಶ ಧಾರ್ಮಿಕ ದತ್ತಿ ಇಲಾಖೆ ಸಚಿವ ವೇಲಂಪಳ್ಳಿ ಶ್ರೀನಿವಾಸ ರಾವ್ ಹೇಳಿದರು.

    ಸೋಮವಾರ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಅವರು ಭರವಸೆ ನೀಡಿದರು. ದೇವಾಲಯಗಳ ಮೇಲೆ ದಾಳಿ ನಡೆಯಬಾರದು. ದಾಳಿಯಾದರೆ ತಕ್ಷಣ ಆರೋಪಿಗಳ ಪತ್ತೆಗೆ ನೆರವಾಗುವ ಅತ್ಯಾಧುನಿಕ ತಂತ್ರಜ್ಞಾನದ ವ್ಯವಸ್ಥೆ ಅಳವಡಿಸಲಾಗುವುದು ಎಂದರು.

    ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಹಿಂದುಗಳ ಭಾವನೆಗೆ ಧಕ್ಕೆ ಆಗದಂತೆ ಎಚ್ಚರವಹಿಸಬೇಕು. ದೇವಾಲಯಗಳಲ್ಲಿ ಹಿಂದೂ ವಿರೋಧಿ ಕೃತ್ಯಗಳಿಗೆ ಆಸ್ಪದ ನೀಡಬಾರದು. ದೇವಾಲಯಗಳಿಗೆ ಸಂಬಂಧಿಸಿದ ಸ್ಥಿರಾಸ್ತಿಗಳ ದಾಖಲೆ ಮಾಡಿಸಿ, ಸಂರಕ್ಷಿಸಬೇಕು. ಸಾಧ್ಯವಾದಷ್ಟು ಆಯಾ ದೇಗುಲಗಳ ವ್ಯಾಪ್ತಿಯ ಸ್ಥಳೀಯರಿಗೇ ನಿರ್ವಹಣೆ ಜವಾಬ್ದಾರಿ ಕೊಡಬೇಕು ಎಂದು ಸಲಹೆ ನೀಡಿದರು.
    ತಿರುಮಲ ತಿರುಪತಿ ದೇವಸ್ಥಾನದ ವಿಶ್ವಸ್ಥ ಡಿ.ಪಿ ಅನಂತ್, ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣ ಮೂರ್ತಿ ಭಟ್ ಇದ್ದರು.

    ಸಿಎಂ ರೆಡ್ಡಿ ಸೂಚನೆ ಹಿನ್ನೆಲೆಯಲ್ಲಿ ಭೇಟಿ: ಆಂಧ್ರದಲ್ಲಿ ಇತ್ತೀಚೆಗೆ ದೇವಾಲಯಗಳ ಮೇಲೆ ಸರಣಿ ದಾಳಿ ಹಾಗೂ ಹಿಂದು ದೇವತೆಗಳ ವಿಗ್ರಹ ಭಗ್ನ ಮೊದಲಾದ ಪ್ರಕರಣಗಳ ಹಿನ್ನೆಲೆಯಲ್ಲಿ ಶ್ರೀಗಳು ಕಳೆದ ವಾರ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ, ಘಟನೆಗಳ ಕುರಿತು ಕಳವಳ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಆಂಧ್ರ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಸೂಚನೆಯಂತೆ ದತ್ತಿ ಇಲಾಖೆ ಸಚಿವರು ಶ್ರೀಗಳನ್ನು ಭೇಟಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts