More

  ಮನೆಮನೆಗೂ ಬರ್ತಾರೆ ಅಮ್ನೋರು: ನಾಳೆಯಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ

  ಬೆಂಗಳೂರು: ಸೋಮವಾರದಿಂದ ಮನೆಮನೆಗೂ ‘ಅಮ್ನೋರು’ ಬರಲಿದ್ದಾರೆ. ಉದಯ ಟಿವಿಯವರು ಅಂಥದ್ದೊಂದು ಅಮ್ನೋರನ್ನು ಮನೆಮನೆಗೂ ಬಿಡಲಿದ್ದಾರೆ. ಅಂದರೆ, ಅವರು ಜ. 20ರಂದು ಪ್ರಸಾರ ಆರಂಭಿಸುವ ಹೊಸ ಧಾರಾವಾಹಿಯ ಹೆಸರೇ ‘ಅಮ್ನೋರು’.

  ದೈವ ಹಾಗೂ ದುಷ್ಟಶಕ್ತಿ ಆಧಾರಿತ ಸೂಪರ್ ನ್ಯಾಚುರಲ್ ಕಥೆ ಇರುವ ಈ ಧಾರಾವಾಹಿಯಲ್ಲಿ ವಿನಯಾಪ್ರಸಾದ್ ಅವರ ಪುತ್ರಿ ಪ್ರಥಮಾ ಪ್ರಸಾದ್ ‘ಅಮ್ನೋರು’ ಆಗಿ ಕಾಣಿಸಿಕೊಳ್ಳಲಿದ್ದಾರೆ. ‘ಅಮ್ನೋರು ಆಗಿ ನಾನು ಈ ಧಾರಾವಾಹಿಯಲ್ಲಿ ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂಬುದಾಗಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಹಿಂದಿನ ಜನ್ಮದಲ್ಲಿ ಅಮ್ನೋರ ಪರಮಭಕ್ತರಾದ ಶಂಕರ-ದಾಕ್ಷಾಯಿಣಿ ದಂಪತಿ ಅಮ್ನೋರ ವಿಗ್ರಹ ಹಾಗೂ ರುದ್ರಾಕ್ಷಿಯನ್ನು ದುಷ್ಟರಿಂದ ಕಾಪಾಡಲು ಹೋಗಿ ಮಾಟಗಾತಿ ಧನಶೇಖರಿ ಹಾಗೂ ಶಂಕರನ ಸಹೋದರ ವರದಪ್ಪನಿಂದ ಹತ್ಯೆ ಆಗಿರುತ್ತಾರೆ. ರುದ್ರ ಎನ್ನುವ ಆತ್ಮ 27 ವರ್ಷಗಳಿಂದ ಕೊಳದಲ್ಲಿರುವ ರುದ್ರಾಕ್ಷಿ ಮಾಲೆ ಮತ್ತು ಅಮ್ನೋರ ವಿಗ್ರಹವನ್ನು ಕಾಪಾಡುತ್ತ ಪುನರ್ಜನ್ಮ ಪಡೆದು ಬರುವ ಜೋಡಿಗಾಗಿ ಕಾಯುತ್ತಿರುವುದು ಧಾರಾವಾಹಿಯ ಕಥಾಹಂದರ.

  ದೇವಿ ಮಹಾತ್ಮೆ ಸಾರುವ ಧಾರಾವಾಹಿಗಳನ್ನು ನೀಡಿರುವ ರಮೇಶ್ ಇಂದ್ರ ಈ ಧಾರಾವಾಹಿಯ ನಿರ್ಮಾಣ ಮತ್ತು ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ, ದಯಾಕರ್ ಛಾಯಾಗ್ರಹಣ ಜತೆ ಸಿಜಿ ತಂತ್ರಜ್ಞಾನವೂ ಈ ಧಾರಾವಾಹಿಗಿದೆ. ನಾಯಕ-ನಾಯಕಿ ಆಗಿ ಶಶಿ ಮತ್ತು ಸುಕೀರ್ತಿ ಅಭಿನಯಿಸುತ್ತಿದ್ದಾರೆ. ಕೀರ್ತಿರಾಜ್, ರೇಖಾ ರಾವ್, ಹರ್ಷಿತಾ, ಅನಂತವೇಲು, ಸಂಗೀತಾ ಭಟ್, ಶರ್ವಿುಳಾ, ಮಧು ಹೆಗಡೆ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ. ಜ. 20ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿರಾತ್ರಿ 7ಕ್ಕೆ ‘ಅಮ್ನೋರು’ ಪ್ರಸಾರವಾಗಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts