

Trinamool Congress: ದೇಶದಲ್ಲಿ ಬಂಗಾಳಿ ಎಂಬ ಭಾಷೆಯೇ ಇಲ್ಲ, ಅದು ಒಂದು ಜನಾಂಗ ಎಂಬ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿಕೆಗೆ ತೃಣಮೂಲ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ವಿರುದ್ಧ ಸೋಮವಾರ (ಆಗಸ್ಟ್ 4) ತೀವ್ರ ವಾಗ್ದಾಳಿ ನಡೆಸಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿ ಕಿಡಿಕಾರಿರುವ ಟಿಎಂಸಿ, "ಬೆಂಗಾಳಿ ಎಂಬ ಭಾಷೆಯೇ ಇಲ್ಲ ಎಂದು ಬಂಗಾಳಿ ವಲಸೆ ಕಾರ್ಮಿಕರನ್ನು ಗುರುತಿಸುವಾಗ ಬಿಜೆಪಿ ನಡೆಸುವ ಸಂಸ್ಥೆಗಳು ಸಮರ್ಥಿಸುವುದು ನೋಡಿದ್ರೆ, ಬೆಂಗಾಳಿಗಳ ಗುರುತಿನ ಬಗ್ಗೆ ಇರುವ ಆಳವಾದ ದ್ವೇಷವನ್ನು ಪ್ರತಿಬಿಂಬಿಸುತ್ತದೆ. ಸಂವಿಧಾನಿಕವಾಗಿ ಗುರುತಿಸಲ್ಪಟ್ಟ ಭಾಷೆಯ ಅಸ್ತಿತ್ವವನ್ನು ನಿರಾಕರಿಸುವುದು ಭಾಷ ವರ್ಣಭೇದ ನೀತಿಗಿಂತ ಕಡಿಮೆ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ ಅನ್ಯಧರ್ಮೀಯರ ಬಗ್ಗೆ ಭಯ ಹುಟ್ಟಿಸುವ, ಇತರೆ ಜನರನ್ನು ಎತ್ತಿಕಟ್ಟುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡ್ತಿದೆ. ಹಲವು ರಾಜ್ಯಗಳಲ್ಲಿ ಬಂಗಾಳಿಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತಿದೆ. ಇಂತಹ ಅಪಾಯಕಾರಿ ನಿರೂಪಣೆಯನ್ನು ಪ್ರತಿಯೊಂದು ಹಂತದಲ್ಲಿ ಖಂಡಿಸಬೇಕು ಮತ್ತು ವಿರೋಧಿಸಬೇಕು ಎಂದು ಹೇಳಿದೆ.
ಅಮಿತ್ ಮಾಳವೀಯ ಹೇಳಿದ್ದೇನು?
ಆಗಸ್ಟ್ 3 ರಂದು ದೆಹಲಿ ಪೊಲೀಸರು ತಮ್ಮ ನೋಟಿಸ್ನಲ್ಲಿ ಬಂಗಾಳಿಯನ್ನು ಬಾಂಗ್ಲಾದೇಶಿ ಭಾಷೆ ಎಂದು ಬಳಸಿದ್ದರು. ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಶ ಆಕ್ರೋಶ ವ್ಯಕ್ತಪಡಿಸಿದ್ದರು.
"ಭಾರತ ಸರ್ಕಾರದ ಗೃಹ ಸಚಿವಾಲಯದ ನೇರ ನಿಯಂತ್ರಣದಲ್ಲಿರುವ ದೆಹಲಿ ಪೊಲೀಸರು ಬಂಗಾಳಿಯನ್ನು ‘ಬಾಂಗ್ಲಾದೇಶಿ’ ಭಾಷೆ ಎಂದು ಹೇಗೆ ವಿವರಿಸುತ್ತಿದ್ದಾರೆ ಎಂಬುದನ್ನು ಈಗ ನೋಡಿ! ಬಂಗಾಳಿ, ನಮ್ಮ ಮಾತೃಭಾಷೆ. ರವೀಂದ್ರನಾಥ ಟ್ಯಾಗೋರ್ ಮತ್ತು ಸ್ವಾಮಿ ವಿವೇಕಾನಂದರ ಭಾಷೆ. ನಮ್ಮ ರಾಷ್ಟ್ರಗೀತೆಯೂ ಬರೆಯಲ್ಪಟ್ಟ ಭಾಷೆ, ಕೋಟ್ಯಂತರ ಭಾರತೀಯರು ಮಾತನಾಡುವ ಮತ್ತು ಬರೆಯುವ ಭಾಷೆ. ಭಾರತದ ಸಂವಿಧಾನದಿಂದ ಗುರುತಿಸಲ್ಪಟ್ಟ ಭಾಷೆಯನ್ನು ಈಗ ಬಾಂಗ್ಲಾದೇಶಿ ಭಾಷೆ ಎಂದು ವಿವರಿಸಲಾಗಿದೆ!!” ನೋಡಿ ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಮಾಳವೀಯ, "ದೆಹಲಿ ಪೊಲೀಸರು ಒಳನುಸುಳುಕೋರರು ಬಳಸುವ ಭಾಷೆಯನ್ನು 'ಬಾಂಗ್ಲಾದೇಶಿ' ಎಂದು ಉಲ್ಲೇಖಿಸಿದ್ದಕ್ಕೆ ಬ್ಯಾನರ್ಜಿಯವರ ಪ್ರತಿಕ್ರಿಯೆ ತಪ್ಪು, ಮತ್ತು ಅದು ಅಪಾಯಕಾರಿ. ದೆಹಲಿ ಪೊಲೀಸರ ಪತ್ರದಲ್ಲಿ ಎಲ್ಲಿಯೂ ಬಾಂಗ್ಲಾ ಅಥವಾ ಬಂಗಾಳಿ ಭಾಷೆಯನ್ನು 'ಬಾಂಗ್ಲಾದೇಶಿ' ಭಾಷೆ ಎಂದು ವಿವರಿಸಲಾಗಿಲ್ಲ. ಬ್ಯಾನರ್ಜಿಯವರು ಭಾಷಾ ಸಂಘರ್ಷವನ್ನು ಪ್ರಚೋದಿಸುತ್ತಿದ್ದಾರೆ" ಎಂದಿದ್ದರು.
"ದೆಹಲಿ ಪೊಲೀಸರು ನುಸುಳುಕೋರರನ್ನು ಗುರುತಿಸುವ ಸಂದರ್ಭದಲ್ಲಿ ಬಾಂಗ್ಲಾದೇಶಿ ಭಾಷೆಯನ್ನು ಬಾಂಗ್ಲಾದೇಶಿ ಎಂದು ಉಲ್ಲೇಖಿಸುವುದು ಸರಿಯಿದೆ. ಭಾರತದಲ್ಲಿ ಮಾತನಾಡುವ ಬಾಂಗ್ಲಾ ಭಾಷೆಗಿಂತ ಸ್ಪಷ್ಟವಾಗಿ ಭಿನ್ನವಾಗಿರುವ ಉಪಭಾಷೆಗಳು, ವಾಕ್ಯರಚನೆ ಮತ್ತು ಮಾತಿನ ಮಾದರಿಗಳನ್ನು ವಿವರಿಸಲು ಈ ಪದವನ್ನು ಬಳಸಲಾಗುತ್ತಿದೆ" ಎಂದು ವಿವರಣೆ ನೀಡಿದ್ದರು.
ತಮ್ಮ ವಾದವನ್ನು ಮತ್ತಷ್ಟು ಸಮರ್ಥಿಸಿಕೊಳ್ಳುವ ಭರದಲ್ಲಿ, ಬಾಂಗ್ಲಾದೇಶದ ಅಧಿಕೃತ ಭಾಷೆ ಧ್ವನಿ ವಿಜ್ಞಾನದಲ್ಲಿ ಭಿನ್ನವಾಗಿರುವುದಲ್ಲದೆ, ಭಾರತೀಯ ಬಂಗಾಳಿಗಳಿಗೆ ಬಹುತೇಕ ಗ್ರಹಿಸಲಾಗದ ಉಪಭಾಷೆಗಳನ್ನು ಸಹ ಒಳಗೊಂಡಿದೆ. ವಾಸ್ತವವಾಗಿ, ಈ ಎಲ್ಲಾ ರೂಪಾಂತರಗಳನ್ನು ಅಚ್ಚುಕಟ್ಟಾಗಿ ಒಳಗೊಂಡಿರುವ "ಬಂಗಾಳಿ" ಎಂಬ ಯಾವುದೇ ಭಾಷೆ ಇಲ್ಲ. "ಬಂಗಾಳಿ" ಎಂಬುದು ಜನಾಂಗೀಯತೆಯನ್ನು ಸೂಚಿಸುತ್ತದೆ, ಭಾಷಾ ಏಕರೂಪತೆಯನ್ನು ಅಲ್ಲ. ಆದ್ದರಿಂದ, ದೆಹಲಿ ಪೊಲೀಸರು "ಬಾಂಗ್ಲಾದೇಶಿ ಭಾಷೆ" ಯನ್ನು ಬಳಸುವಾಗ, ಅದು ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರನ್ನು ವಿವರಿಸಲು ಬಳಸುವ ಭಾಷಾ ಗುರುತುಗಳಿಗೆ ಸಂಕ್ಷಿಪ್ತ ರೂಪವಾಗಿದೆ ಎಂದು ಹೇಳಿದ್ದರು.
ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಬೆಂಬಲ
ಏತನ್ಮಧ್ಯೆ, ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಈ ವಿವಾದದ ಬಗ್ಗೆ ಬ್ಯಾನರ್ಜಿಗೆ ಬೆಂಬಲ ನೀಡಿದ್ದಾರೆ. ಸೋಮವಾರ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ದೆಹಲಿ ಪೊಲೀಸರು ಬಂಗಾಳಿಯನ್ನು "ಬಾಂಗ್ಲಾದೇಶಿ ಭಾಷೆ" ಎಂದು ಬಣ್ಣಿಸಿದ್ದಾರೆ, ಇದು ಭಾರತದ ರಾಷ್ಟ್ರಗೀತೆಯನ್ನು ಬರೆಯಲಾದ ಭಾಷೆಗೆ ಮಾಡಲಾದ ನೇರ ಅವಮಾನ ಎಂದು ಕಿಡಿಕಾರಿದ್ದಾರೆ.
"ಇಂತಹ ಹೇಳಿಕೆಗಳು, ಆಕಸ್ಮಿಕ ದೋಷಗಳು ಅಥವಾ ಜಾರುವಿಕೆಗಳಲ್ಲ. ವೈವಿಧ್ಯತೆಯನ್ನು ನಿರಂತರವಾಗಿ ದುರ್ಬಲಗೊಳಿಸುವ ಮತ್ತು ಗುರುತನ್ನು ಶಸ್ತ್ರಸಜ್ಜಿತಗೊಳಿಸುವ ಆಡಳಿತದ ಕರಾಳ ಮನಸ್ಥಿತಿಯನ್ನು ಅವು ಬಹಿರಂಗಪಡಿಸುತ್ತವೆ" ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಹಿಂದಿಯೇತರ ಭಾಷೆಗಳ ಮೇಲಿನ ಈ ದಾಳಿಯನ್ನು ಎದುರಿಸುವಾಗ, ಗೌರವಾನ್ವಿತ ಮಮತಾ ದೀದಿ ಪಶ್ಚಿಮ ಬಂಗಾಳದ ಭಾಷೆ ಮತ್ತು ಜನರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಸೂಕ್ತ ಪ್ರತಿಕ್ರಿಯೆ ನೀಡದೆ ಅವರು ಈ ದಾಳಿಯನ್ನು ಹಾದು ಹೋಗಲು ಬಿಡುವುದಿಲ್ಲ" ಎಂದು ಸ್ಟಾಲಿನ್ ಹೇಳಿದ್ದಾರೆ. (ಏಜೆನ್ಸೀಸ್)