More

    ಜಗತ್ತಿನಾದ್ಯಂತ ಏರುಗತಿಯಲ್ಲಿದೆ ಚೀನಾ ವಿರೋಧಿ ಭಾವನೆ!

    ಬೀಜಿಂಗ್: ಕರೊನಾ ವೈರಸ್‌ನಿಂದಾಗಿ ಜಗತ್ತಿನಾದ್ಯಂತ ಚೀನಾದ ವರ್ಚಸ್ಸು ಕಡಿಮೆಯಾಗಿದೆ ಎಂದು ಚೀನಾ ಸರ್ಕಾರವೇ ನೇಮಿಸಿದ್ದ ಆಂತರಿಕ ತನಿಖಾ ಸಮಿತಿಯೊಂದು ವರದಿ ನೀಡಿದೆ.

    ಅದರಲ್ಲೂ ವಿಶೇಷವಾಗಿ ಅಮೆರಿಕದ ಜತೆ ಚೀನಾದ ಸಂಬಂಧ ಸಂಪೂರ್ಣ ಹಳಸಲಿದೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಆರ್ಥಿಕತೆಯೂ ಸೇರಿದಂತೆ ವಿವಿಧ ವಿಷಯಗಳಲ್ಲಿ ಅಮೆರಿಕ-ಚೀನಾ ಸಂಘರ್ಷಗಳು ಹೆಚ್ಚಾಗಲಿವೆ ಎಂದೂ ವರದಿಯಲ್ಲಿ ಎಚ್ಚರಿಸಲಾಗಿದೆ.

    ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಚೀನಾದ ಅತ್ಯುನ್ನತ ನಾಯಕರಿಗೆ ಇತ್ತೀಚೆಗೆ ಸಲ್ಲಿಸಲಾದ ಈ ವರದಿಯಲ್ಲಿ, ‘‘ಜಾಗತಿಕ ಮಟ್ಟದಲ್ಲಿ ಚೀನಾ ವಿರೋಧಿ ಭಾವನೆ ತೀವ್ರಗೊಳ್ಳುತ್ತಿದ್ದು, 1989ರ ತಿಯಾನೆನ್ಮನ್ ಚೌಕದ ಘಟನೆಯ ವೇಳೆ ಇದ್ದುದಕ್ಕಿಂತ ಹೆಚ್ಚಾಗಿದೆ’’ ಎಂದು ತಿಳಿಸಲಾಗಿದೆ.

    ಇದನ್ನೂ ಓದಿ: ಚೀನಾ ಕೋವಿಡ್​ 19ರ ತೀವ್ರತೆಯನ್ನು ಬೇಕೆಂದೇ ಬಚ್ಚಿಟ್ಟಿತ್ತು: ಅಮೆರಿಕದ ವರದಿ

    ಚೀನಾದಲ್ಲಿ ಪ್ರಜಾಪ್ರಭುತ್ವಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಯುವಜನರ ಮೇಲೆ ಅಲ್ಲಿನ ಆಡಳಿತ ಸೇನಾ ಕಾರ್ಯಾಚರಣೆ ನಡೆಸಿತು. 1989ರ ಜೂನ್ 3 ಮತ್ತು 4ರಂದು ತಿಯಾನನ್ಮೆನ್ ಚೌಕದಲ್ಲಿ ನಡೆದ ಈ ನರಮೇಧದಲ್ಲಿ ಸಾವಿರಾರು ವಿದ್ಯಾರ್ಥಿ-ಯುವಜನರು ಮೃತಪಟ್ಟಿದ್ದರು. ಇದು ಇಡೀ ವಿಶ್ವದಲ್ಲಿ ಚೀನಾ ಆಡಳಿತದ ಬಗ್ಗೆ ತೀವ್ರ ಅಸಹನೆ ಉಂಟಾಗಲು ಕಾರಣವಾಗಿತ್ತು.

    ಇದನ್ನು ತನ್ನ ವರದಿಯಲ್ಲಿ ಪ್ರಸ್ತಾಪಿಸಿರುವ ಆಂತರಿಕ ಸಮಿತಿ, ‘‘ಕರೊನಾ ಲಾಕ್‌ಡೌನ್ ಎಲ್ಲೆಡೆ ಅಂತ್ಯವಾದ ಬಳಿಕ ಬಹುತೇಕ ದೇಶಗಳು ಅಮೆರಿಕದ ನೇತೃತ್ವದಲ್ಲಿ ಒಂದಾಗಿ ಚೀನಾ ವಿರುದ್ಧ ಸಶಸ್ತ್ರ ಸಂಘರ್ಷಕ್ಕೆ ಮುಂದಾಗುವ ಸಾಧ್ಯತೆ ಇದೆ. ಅದಕ್ಕೆ ಈಗಿನಿಂದಲೇ ಚೀನಾ ಆಡಳಿತ ಸಿದ್ಧವಾಗಿರಬೇಕು’’ ಎಂದು ಸೂಚಿಸಿದೆ.

    ಚೀನಾ ಇನ್ಸ್‌ಟಿಟ್ಯೂಟ್ ಆಫ್ ಕಂಟೆಂಪರರಿ ಇಂಟರ್‌ನ್ಯಾಷನಲ್ ರಿಲೇಷನ್ಸ್ (ಸಿಐಸಿಐಆರ್) ಈ ವರದಿಯನ್ನು ಸಿದ್ಧಪಡಿಸಿದೆ. ಚೀನಾದ ಗೃಹ ಇಲಾಖೆಯ ಅತ್ಯುನ್ನತ ಗುಪ್ತಚರ ಸಂಸ್ಥೆಯ ಸುಪರ್ದಿಯಲ್ಲಿ ಸಿಐಸಿಐಆರ್ ಕೆಲಸ ಮಾಡುತ್ತದೆ.

    ಇದನ್ನೂ ಓದಿ: ಕರೊನಾ ಹಿನ್ನೆಲೆಯಲ್ಲಿ ಚೀನಾದಿಂದ ಕಾಲ್ತೆಗೆಯುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತ ಗಾಳ

    ಈ ವರದಿಯನ ಆಧಾರದ ಮೇಲೆ ಚೀನಾ ಸರ್ಕಾರ ಯಾವ ಕ್ರಮಕ್ಕೆ ಮುಂದಾಗುತ್ತದೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಚೀನಾ ಸರ್ಕಾರದ ನೀತಿ ನಿರ್ಧಾರಗಳ ಮೇಲೆ ಈ ವರದಿ ಎಷ್ಟರಮಟ್ಟಿಗೆ ಪರಿಣಾಮ ಉಂಟು ಮಾಡುತ್ತದೆ ಎಂಬುದು ಕೂಡ ಖಚಿತವಾಗಿಲ್ಲ. ಆದರೆ ಹೊರಜಗತ್ತಿನ ಭಾವನೆಗಳನ್ನು ಚೀನಾದ ಉನ್ನತ ಮಟ್ಟದ ಸಂಸ್ಥೆಗಳು ಎಷ್ಟು ಗಂಭೀರವಾಗಿ ಪರಿಗಣಿಸುತ್ತವೆ ಎಂಬುದಕ್ಕೆ ಈ ವರದಿಯೇ ಸಾಕ್ಷಿಯಾಗಿದೆ.

    ಈಗಾಗಲೇ ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧ ಹಲವು ದಶಕಗಳಿಂದ ಹಳಸಿದೆ. ಗಡಿ ವಿವಾದ, ತಂತ್ರಜ್ಞಾನ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವೆ ಅಪನಂಬಿಕೆ ಅಪಾರವಾಗಿದೆ. ವಾಗ್ವಾದದ ಘಟನೆಗಳಂತೂ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ.

    ಇದನ್ನೂ ಓದಿ: VIDEO: ಕುಡುಕರೇನೂ ಕರೊನಾ ವಾರಿಯರ್ಸ್​ ಅಲ್ಲ; ಆದರೂ ಅಂಗಡಿ ಮಾಲೀಕರಿಗೆ ದೇವರು..!

    ಇದಲ್ಲದೆ, ಅಮೆರಿಕದಲ್ಲೀಗ ಅಧ್ಯಕ್ಷೀಯ ಚುನಾವಣೆ ಸಮೀಪಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರಾಯ್ಕೆ ಬಯಸಿದ್ದಾರೆ. ಹಾಗಾಗಿ ಚೀನಾ ವಿರೋಧಿ ಭಾವನೆಯನ್ನು ಬಡಿದೆಬ್ಬಿಸುವ ಸಣ್ಣ ಅವಕಾಶವನ್ನೂ ಅವರು ಬಿಡುತ್ತಿಲ್ಲ. ಅಮೆರಿಕದಲ್ಲಿ ಸಾವಿರಾರು ಜನರು ಕರೊನಾದಿಂದ ಸಾವಿಗೀಡಾಗಿದ್ದು, ಅಲ್ಲಿನ ಆರ್ಥಿಕತೆಯ ಮೇಲೂ ಭಾರಿ ದುಷ್ಪರಿಣಾಮ ಆಗಿರುವ ಕಾರಣ, ಜನರಲ್ಲಿ ಚೀನಾ ವಿರೋಧಿ ಭಾವನೆ ಬಿತ್ತುವುದು ಕಷ್ಟದ ಕೆಲಸವೇನಲ್ಲ ಎಂದು ಅಭಿಪ್ರಾಯಪಡಲಾಗುತ್ತಿದೆ. ಅಷ್ಟಕ್ಕೇ ತೃಪ್ತರಾಗದ ಟ್ರಂಪ್, ಮುಂದಿನ ದಿನಗಳಲ್ಲಿ ಜಾಗತಿಕ ಸಮುದಾಯವನ್ನು ಬಳಸಿಕೊಂಡು ಚೀನಾ ವಿರುದ್ಧ ಕೆಲವು ಸೇಡಿನ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯೂ ದಟ್ಟವಾಗಿದೆ.
    ಒಟ್ಟಾರೆ ಚೀನಾ ಕೂಡ ಒಂದು ಜಾಗತಿಕ ಶಕ್ತಿಯಾಗಿ ಅಸ್ತಿತ್ವದಲ್ಲಿ ಇರಬಾರದು ಎಂಬ ಭಾವನೆ ಅಮೆರಿಕದ ನಾಗರಿಕರಲ್ಲಿ ಆಳವಾಗಿ ಬೇರೂರುತ್ತಿದೆ ಎಂದು ಚೀನಾ ನಾಯಕರು ನಂಬಿದ್ದಾರೆ.

    ಏಷ್ಯಾದಲ್ಲಿರುವ ತನ್ನ ಮಿತ್ರದೇಶಗಳಿಗೆ ಅಮೆರಿಕ ಆರ್ಥಿಕ ಮತ್ತು ಮಿಲಿಟರಿ ಬೆಂಬಲ ನೀಡುವ ಮೂಲಕ ವಿವಿಧೆಡೆ ನಡೆಯುತ್ತಿರುವ ಚೀನಾದ ರಸ್ತೆ- ಮೂಲಸೌಕರ್ಯ ಯೋಜನೆಗಳಿಗೆ ಬ್ರೇಕ್ ಹಾಕಬಹುದು. ಇದರಿಂದ ಏಷ್ಯಾದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಬಹುದು. ಚೀನಾ ಮೇಲೆ ವಿವಿಧ ರಾಷ್ಟ್ರಗಳು ದಿಗ್ಬಂಧನ ಹೇರಬಹುದು. ತಂತ್ರಜ್ಞಾನ ವರ್ಗಾವಣೆ ಮತ್ತು ಶಸ್ತ್ರಾಸ್ತ್ರಗಳ ಮಾರಾಟವನ್ನು ನಿಲ್ಲಿಸಬಹುದು ಎಂದೂ ವರದಿಯಲ್ಲಿ ಎಚ್ಚರಿಸಲಾಗಿದೆ.
    ಅಮೆರಿಕ ಮಾತ್ರವಲ್ಲದೆ, ಫ್ರಾನ್ಸ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿಯೂ ಚೀನಾ ವಿರೋಧಿ ಭಾವನೆ ಈಗಾಗಲೇ ಬೇರೂರಿದೆ. ಕರೊನಾ ವೈರಸ್‌ನ ಮೂಲ ಮತ್ತು ಅದು ಹೇಗೆ ಹರಡಿತು ಎಂಬುದರ ಕುರಿತು ಅಂತಾರಾಷ್ಟ್ರೀಯ ಮಟ್ಟದ ತನಿಖೆಗೆ ಆಸ್ಟ್ರೇಲಿಯಾ ಈಗಾಗಲೇ ಆಗ್ರಹಪಡಿಸಿದೆ.

    ‘ಕರೊನಾ ವೈರಸ್ ಹಾವಳಿಯನ್ನು ಐರೋಪ್ಯ ರಾಷ್ಟ್ರಗಳು ಸರಿಯಾಗಿ ನಿರ್ವಹಿಸಲಿಲ್ಲ’ ಎಂಬುದಾಗಿ ಚೀನಾದ ವೆಬ್‌ಸೈಟೊಂದರಲ್ಲಿ ಇತ್ತೀಚೆಗೆ ಟೀಕಿಸಲಾಗಿತ್ತು. ಅದನ್ನು ಗಮನಿಸಿದ ಫ್ರಾನ್ಸ್ ಆಡಳಿತ, ಕಳೆದ ತಿಂಗಳು ಚೀನಾದ ರಾಯಭಾರಿಯನ್ನು ಕರೆಸಿಕೊಂಡು ತನ್ನ ಪ್ರತಿಭಟನೆಯನ್ನು ದಾಖಲಿಸಿದೆ.

    ಇದನ್ನೂ ಓದಿ: ಪ್ರೀತಿಯ ಕರೊನಾ… ಇದು ಹತ್ತನೇ ತರಗತಿ ವಿದ್ಯಾರ್ಥಿನಿಯ ಪತ್ರ…

    ಪಾಕಿಸ್ತಾನಕ್ಕೆ ನೀಡುತ್ತಿರುವ ಬೆಂಬಲದ ಕಾರಣಕ್ಕಾಗಿ, ಭಾರತದಲ್ಲಂತೂ ಮೊದಲಿನಿಂದಲೂ ಚೀನಾ ವಿರೋಧಿ ಭಾವನೆ ಇದ್ದೇ ಇದೆ. ಎಲ್ಲ ರಾಷ್ಟ್ರಗಳೂ ಒಂದಾಗಿ ಚೀನಾವನ್ನು ಮಣಿಸಲು ಮುಂದಾದರೆ ಭಾರತ ಯಾವ ನಿಲುವು ತಾಳುತ್ತದೆ ಎಂಬುದು ಊಹಿಸಲು ಅಸಾಧ್ಯವಾದ ಸಂಗತೀಯೇನಲ್ಲ.

    ದನ್ನೂ ಓದಿ: VIDEO| ಕರೊನಾ ಸೋಂಕು ತಡೆಗೆ ನೇಮಕವಾಗಿರುವ ವಾರಿಯರ್ಸ್​ ವಾಹನ ತಳ್ಳುತ್ತಿರುವುದು ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts