More

    ಆಂಬುಲೆನ್ಸ‌ಗೆ ಬೆಂಕಿ, ಜಿಲ್ಲಾಸ್ಪತ್ರೆಗೆ ಕಲ್ಲು

    ಬೆಳಗಾವಿ: ಐಸಿಯುನಲ್ಲಿ ಕರೊನಾ ರೋಗಿಯೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ರೋಗಿ ಸಂಬಂಧಿಕರು ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿ, ಕಾರಾಗೃಹ ಇಲಾಖೆ ವಾಹನಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ ಘಟನೆ ಜಿಲ್ಲಾಸ್ಪತ್ರೆ (ಬಿಮ್ಸ್) ಎದುರು ಬುಧವಾರ ರಾತ್ರಿ 8.30ರ ಹೊತ್ತಿಗೆ ನಡೆದಿದೆ.
    ಕೋಪೋದ್ರಿಕ್ತರು ಜಿಲ್ಲಾಸ್ಪತ್ರೆಯ ವಿವಿಧ ವಾರ್ಡ್‌ಗಳಲ್ಲಿಯೂ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವ್ಯಾಬ್ ಟೆಸ್ಟಿಂಗ್ ಬೂತ್ ಹಾಗೂ ಆವರಣದಲ್ಲಿದ್ದ ಪೊಲೀಸ್, ಸರ್ಕಾರಿ ವಾಹನಗಳಿಗೆ ಕಲ್ಲು ತೂರಿ ಜಖಂಗೊಳಿಸಿದ್ದಾರೆ.

    ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಪಂ ಸಿಇಒ ಡಾ. ಕೆ.ವಿ.ರಾಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ತಹಬದಿಗೆ ತರಲು ಶ್ರಮಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆಂಬುಲೆನ್ಸ್‌ಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದ್ದಾರೆ.

    ಆಸ್ಪತ್ರೆ ವಿರುದ್ಧ ಆಕ್ರೋಶ: ಕಳೆದ ಒಂದು ವಾರದಿಂದ ಜಿಲ್ಲಾಸ್ಪತ್ರೆಯಲ್ಲಿ ಕರೊನಾ ಸೋಂಕಿತರಿಗೆ ಮತ್ತು ಇತರ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಅಸಮಾಧಾನ ಬುಧವಾರ ಸಂಜೆ ಭುಗಿಲೆದ್ದಿದೆ. ರೋಗಿಯೊಬ್ಬ ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಮೃತಪಟ್ಟಿದ್ದಾನೆಂಬ ಸುದ್ದಿ ಹಬ್ಬುತ್ತಿದ್ದಂತೆ ಆಕ್ರೋಶಗೊಂಡ ದುಷ್ಕರ್ಮಿಗಳು ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ, ವಿವಿಧೆಡೆ ಕಲ್ಲು ತೂರಾಟ ನಡೆಸಿ, ಕಾರಾಗೃಹ ಇಲಾಖೆ ಟೆಂಪೋ ಟ್ರಾೃಕ್ಸ್‌ನ ಗಾಜುಗಳನ್ನು ಪುಡಿ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ, ವೈದ್ಯರ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾರೆ. ಜತೆಗೆ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಕಲ್ಲು ತೂರಾಟ ನಡೆಸಿದ್ದರಿಂದ ಆಸ್ಪತ್ರೆ ಗಾಜುಗಳೂ ಹಾನಿಗೊಂಡಿವೆ.

    ಪ್ರಕರಣದ ಹಿನ್ನೆಲೆ: ಬೆಳಗಾವಿ ನಗರದ ಕರೊನಾ ಸೋಂಕಿತ ಮೃತಪಟ್ಟಿದ್ದರಿಂದ ಸಂಬಂಧಿಕರು ಆಕ್ರೋಶಗೊಂಡಿದ್ದರು. ಅದೇ ವೇಳೆ ಅಥಣಿಯಿಂದ ಆಂಬುಲೆನ್ಸ್‌ನಲ್ಲಿ ಸೋಂಕಿತರನ್ನು ಕರೆತರಲಾಗಿತ್ತು. ಈ ವೇಳೆ 10 ಜನರ ಗುಂಪು ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿದರು. ಆಂಬುಲೆನ್ಸ್‌ಗೆ ಬೆಂಕಿ ಹೊತ್ತುತ್ತಿದ್ದಂತೆ ಒಳಗಿದ್ದ ಚಾಲಕ, ನರ್ಸ್ ಆಸ್ಪತ್ರೆ ಒಳಗೆ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ.
    ಪೊಲೀಸರ ವೈಫಲ್ಯ?: ಘಟನೆ ನಡೆಯುವುದಕ್ಕೆ ಪೊಲೀಸರ ವೈಫಲ್ಯವೂ ಕಾರಣ ಎನ್ನಲಾಗುತ್ತಿದೆ.

    ಆಸ್ಪತ್ರೆ ಆವರಣದಲ್ಲಿ ಸಮರ್ಪಕ ಸಿಬ್ಬಂದಿ ನೇಮಿಸಿದ್ದರೆ ಈ ಘಟನೆ ನಡೆಯುವುದನ್ನು ತಪ್ಪಿಸಬಹುದಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಈ ಘಟನೆ ನಡೆಯುತ್ತಿದ್ದಂತೆ ಜಿಲ್ಲಾಸ್ಪತ್ರೆ ಸುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವಾರಣ ಸೃಷ್ಟಿಯಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಗಲ್ಲಿಯ ಸುಮಾರು 35 ಜನರು ಈ ಗಲಭೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

    ಆಂಬುಲೆನ್ಸ್ ಚಾಲಕ, ವಾರ್ಡ್ ಬಾಯ್ ಹಾಗೂ ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ದುಷ್ಕೃತ್ಯ ನಡೆಸಿದವರನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
    | ಕೆ.ತ್ಯಾಗರಾಜನ್, ನಗರ ಪೊಲೀಸ್ ಆಯುಕ್ತ

    ರೋಗಿಯ ಸಂಬಂಧಿಕರು ಉದ್ವೇಗಕ್ಕೊಳಗಾಗಿ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಈ ವಿಚಾರವಾಗಿ ಪೊಲೀಸರು ತನಿಖೆ ಕೈಗೊಂಡಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಸಮರ್ಪಕವಾಗಿಯೇ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಾರೂ ಉದ್ವೇಗಕ್ಕೆ ಒಳಗಾಗದೆ ಆಡಳಿತ ವ್ಯವಸ್ಥೆಯೊಂದಿಗೆ ಕೈಜೋಡಿಸಬೇಕು. ಜಿಲ್ಲಾ ಆಸ್ಪತ್ರೆ ಸುತ್ತಮುತ್ತ 144ನೇ ಕಲಂ ಜಾರಿಗೊಳಿಸಲಾಗಿದೆ.
    |ಎಂ.ಜಿ.ಹಿರೇಮಠ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts