More

    ಮೈತ್ರಿ ಬಿಕ್ಕಟ್ಟು, ಜೆಡಿಎಸ್‌ಗೆ ಇಕ್ಕಟ್ಟು

    ಬೆಂಗಳೂರು: ಹಾಸನ ಸೇರಿದಂತೆ ಅನೇಕ ಕಡೆ ಮೈತ್ರಿ ಬಿಕ್ಕಟ್ಟು ಉಭಯ ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

    ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮೈತ್ರಿ ಸಮನ್ವಯ ಸಭೆ ನಡೆದು ಇನ್ನೇನು ಸರಿ ಹೋಗುವ ವಿಶ್ವಾಸದಲ್ಲಿದ್ದ ನಾಯಕರಿಗೆ ಸ್ಥಳೀಯ ಮಟ್ಟದಲ್ಲಿ ಉಲ್ಬಣಗೊಂಡ ಸಮಸ್ಯೆಗಳನ್ನು ಪರಿಹರಿಸಲಾಗದೆ ಕೈಚೆಲ್ಲಬೇಕಾದ ಪರಿಸ್ಥಿತಿ ತಲೆದೋರಿದೆ.

    ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಚಿತ್ರದುರ್ಗ ಚುನಾವಣಾ ಜವಾಬ್ದಾರಿ ನೀಡಲಾಗಿದೆ. ಅದೇ ರೀತಿ ಹಾಸನದಲ್ಲಿ ಜೆಡಿಎಸ್ ವಿರುದ್ಧ ಸಮರ ಸಾರಿರುವ ಪ್ರೀತಂ ಗೌಡ ಅವರಿಗೆ ಮೈಸೂರು, ಚಾಮರಾಜನಗರ ಉಸ್ತುವಾರಿ ನೀಡಿ ಕ್ಷೇತ್ರದಿಂದ ದೂರ ಉಳಿಯುವಂತೆ ಮಾಡಲಾಗಿದೆ. ಇದು ಅವರವರ ಕ್ಷೇತ್ರದಲ್ಲಿ ಬೆಂಬಲಿಗರನ್ನು ಗೊಂದಲದ ಗೂಡಿಗೆ ತಳ್ಳಿದೆ. ಮಾಧುಸ್ವಾಮಿ, ಪ್ರೀತಂ ಗೌಡ ಬೆಂಬಲಿಗರು ಯಾರ ಪರವಾಗಿ ಕೆಲಸ ಮಾಡಬೇಕು ಎಂದು ದಿಕ್ಕು ತೋಚದಂತಾಗಿದ್ದಾರೆ. ಇದು ಮೈತ್ರಿ ಅಭ್ಯರ್ಥಿ ಗೆಲುವಿಗೆ ಅಡ್ಡಿಯಾಗಿದೆ.

    ಸ್ಥಳೀಯ ನಾಯಕರ ವೈಮನಸ್ಸು, ಟಿಕೆಟ್ ವಂಚಿತರ ಆಕ್ರೋಶ, ಆಪರೇಷನ್ ಆಟಗಳಿಂದ ಮೈತ್ರಿ ಅಭ್ಯರ್ಥಿಗಳು ಬಸವಳಿದಿದ್ದಾರೆ. ಅದರಲ್ಲೂ ಮುಖ್ಯವಾಗಿ ಹಾಸದನಲ್ಲಿ ಎಷ್ಟೇ ಸಂಧಾನ ಮಾಡಿದರೂ ಪ್ರಯೋಜನವಾಗಿಲ್ಲ.

    ದಳಪತಿಗಳ ಭದ್ರಕೋಟೆ ಹಾಸನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಒಳಜಗಳ ಮುಗಿಯದ ಕತೆಯಾಗಿದೆ. ಹಾಸನದಲ್ಲಿ ಬಿಜೆಪಿ ನಾಯುಕರು ಏನಿಲ್ಲ ಏನಿಲ್ಲ ಬಿಜೆಪಿ-ಜೆಡಿಎಸ್ ಮೈತ್ರಿ ಸಮಸ್ಯೆ ಇಲ್ಲ ಎಂದು ನಾಯಕರು ಹೇಳುತ್ತಿದ್ದಾರೆ. ಆದರೆ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಮಾತ್ರ ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರಕ್ಕೆ ಹೋಗುತ್ತಿಲ್ಲ.

    ಪ್ರೀತಂಗೌಡ ಹಾಸನದ ಶಾಸಕರಾಗಿದ್ದವರು. ಕ್ಷೇತ್ರದಲ್ಲಿ ಅವರದ್ದೇ ಆದ ವರ್ಚಸ್ಸು ಇರುತ್ತದೆ. ಹಾಗಾಗಿ ಕ್ಷೇತ್ರದಲ್ಲಿ ಪ್ರೀತಂಗ ಗೌಡ ಪ್ರಚಾರ ಹೋಗುವುದರಿಂದ ಮೈತ್ರಿ ಅಭ್ಯರ್ಥಿ ಗೆಲುವು ಸುಲಭವಾಗಬಹುದು. ಆದರೆ ಬಿಜೆಪಿ ಉಸ್ತುವಾರಿ ರಾಧಮೋಹನ್ ದಾಸ್ ಅಗರ್ವಾಲ್ , ಪ್ರೀತಂಗೌಡ ಅವರಿಗೆ ಮೈಸೂರು, ಚಾಮರಾನಗರ ಉಸ್ತುವಾರಿ ನೀಡಿದ್ದೇವೆ. ಕಾರಣ ಅವರು ಹಾಸನಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ಒಂದು ರೀತಿ ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ, ಈ ಬೆಳವಣಿಗೆ ಜೆಡಿಎಸ್ ಅಭ್ಯರ್ಥಿಗೆ ಬಿಗ್ ಶಾಕ್ ನೀಡಿದೆ.

    ಹಾಸನ ದಳಪತಿಗಳ ಭದ್ರಕೋಟೆ. ಈ ಕೋಟೆಯನ್ನು ಕಬ್ಜ ಮಾಡಲು ಕಾಂಗ್ರೆಸ್ ಕಾಯುತ್ತಿದೆ. ಮತ್ತೊಂದೆಡೆ ಮೈತ್ರಿ ನಾಯಕರ ಮಧ್ಯೆ ಮುನಿಸು ಭುಗಿಲೆದ್ದಿದೆ. ಅಸಮಾಧಾನಿತ ನಾಯಕರಿಗೆ ಸಮಾಧಾನಕ್ಕೆ ಮುಲಾಮು ಹಚ್ಚಲು ಮುಂದಾಗಿದ್ದ ಬಿಜೆಪಿ ನಾಯಕರಿಗೆ ಹಾಸನ, ತುಮಕೂರು ಸವಾಲಾಗಿ ಪರಿಣಮಿಸಿವೆ. ಲೋಕಸಭಾ ಚುನಾವಣೆಗೆ ದಿನಗಣನೇ ಆರಂಭವಾದರೂ ಹಾಸನ, ತುಮಕೂರಿನಲ್ಲಿ ಮೈತ್ರಿ ಮುನಿಸಿನ ಪ್ರಹಸನ ಮಾತ್ರ ಮುಗಿಯುತ್ತಿಲ್ಲ. ಈ ಸೂಕ್ಷ್ಮ ಅರಿತ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಜೆಡಿಎಸ್ ಮತ್ತು ಬಿಜೆಪಿ ನಾಯಕರ ನಡುವೆ ಸಮನ್ವಯ ಸಾಧಿಸಲು ಒಂದೆರಡು ದಿನಗಳಲ್ಲಿ ಮತ್ತೊಮ್ಮೆ ಅಖಾಡಕ್ಕೆ ಇಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts