More

    ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಸಕಲ ಸಿದ್ಧತೆ, ಚುನಾವಣಾಧಿಕಾರಿ ವಿನೋದ ಹೆಗ್ಗಳಗಿ ಹೇಳಿಕೆ

    ಹುಬ್ಬಳ್ಳಿ; ಹುಬ್ಬಳ್ಳಿ- ಧಾರವಾಡ ಪೂರ್ವ (ಮೀಸಲು) ವಿಧಾನಸಭಾ ಕ್ಷೇತ್ರ-72ರಲ್ಲಿ ಒಟ್ಟು 211 ಮತಗಟ್ಟೆಗಳ ಪೈಕಿ 30 ಸೂಕ್ಷ್ಮ ಎಂದು ಗುರುತಿಸಲಾಗಿದೆ. ಒಟ್ಟು 2,07,577 ಜನರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ವಿನೋದ ಹೆಗ್ಗಳಗಿ ತಿಳಿಸಿದರು.

    ನಗರದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದೆಂದು ಜಿಲ್ಲಾ ಸ್ವೀಪ್ ಯೋಜನೆಯಡಿ ಮತದಾನ ಜಾಗೃತಿ ಹಮ್ಮಿಕೊಳ್ಳಲಾಗುತ್ತಿದೆ. 18 ವರ್ಷ ತುಂಬಿದ ಎಲ್ಲರೂ ಮತದಾನ ಮಾಡಬಹುದು. ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಮತದಾನಕ್ಕೆ 10 ದಿನ ಮುಂಚಿತವಾಗಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದರು.

    ಮಹಿಳೆಯರು ಹೆಚ್ಚು: ಪೂರ್ವ ಕ್ಷೇತ್ರದಲ್ಲಿ ಮಹಿಳಾ ಮತದಾರರ ಪ್ರಾಬಲ್ಯ ಹೆಚ್ಚಾಗಿದೆ. 1,03,295 ಪುರುಷ ಮತದಾರರಿದ್ದರೆ 1,04,268 ಮಹಿಳಾ ಮತದಾರರಿದ್ದಾರೆ. 14 ಇತರೆ ಜನರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. 80 ವರ್ಷ ಮೇಲ್ಪಟ್ಟವರು 4080 ಜನರಿದ್ದು, ಅವರಿಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಇದೆ.

    80 ವರ್ಷ ಮೇಲ್ಪಟ್ಟ ಹಿರಿಯರಿಗೆ 12ಡಿ ಒಪ್ಪಿಗೆ ಪತ್ರ ನೀಡಲಾಗುವುದು. ಒಪ್ಪಿಗೆ ನೀಡಿದರೆ ಮನೆಯಿಂದಲೇ ಅವರಿಂದ ಗೌಪ್ಯ ಮತದಾನ ಮಾಡಿಸಲಾಗುವುದು. ಬೇಡವೆಂದರೆ ಮತಗಟ್ಟೆಗೂ ಅವರು ಬರಬಹುದು. 1,621 ಅಂಗವಿಕಲರು ಹಾಗೂ 16 ಸರ್ಕಾರಿ ಸೇವೆಯಲ್ಲಿರುವ ಮತದಾರರಿದ್ದಾರೆ ಎಂದರು.

    ಅಕ್ರಮ ತಡೆಗೆ ಚೆಕ್ ಪೋಸ್ಟ್: ಚುನಾವಣೆ ಅಕ್ರಮಗಳನ್ನು ತಡೆಯಲು ಪೂರ್ವ ಕ್ಷೇತ್ರದ ಗಬ್ಬೂರು, ಕಾರವಾರ ರಸ್ತೆ ಮತ್ತು ಕುಂದಗೋಳ ರಸ್ತೆಯ ಸೋನಿಯಾಗಾಂಧಿ ನಗರದಲ್ಲಿ ಮೂರು ಕಡೆ ಚೆಕ್ ಪೋಸ್ಟ್ ತೆರೆಯಲಾಗಿದೆ. ದಿನದ 24 ಗಂಟೆ ಇವು ಕಾರ್ಯನಿರ್ವಹಿಸಲಿವೆ. ಇಲ್ಲಿನ ಸಿಬ್ಬಂದಿ ವಾಹನಗಳನ್ನು ತಪಾಸಣೆ ಮಾಡಲಿದ್ದಾರೆ ಎಂದು ಹೇಳಿದರು.

    ಶಾಂತಿಯುತ ಚುನಾವಣೆಗಾಗಿ ವಿವಿಧ ತಂಡಗಳನ್ನು ರಚಿಸಲಾಗಿದೆ. ನೀತಿ ಸಂಹಿತೆ ಜಾರಿಗೆ ಒಬ್ಬರನ್ನು ನೋಡಲ್ ಅಧಿಕಾರಿಯಾಗಿ, 18 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ಇಡಲು ತಂಡ ರಚನೆ ಮಾಡಲಾಗಿದೆ ಎಂದರು.

    ಅನುಮತಿ ಕಡ್ಡಾಯ: ಸಹಾಯಕ ಚುನಾವಣಾಧಿಕಾರಿಯೂ ಆದ ಹುಬ್ಬಳ್ಳಿ ಶಹರ ತಹಸೀಲ್ದಾರ್ ಕಲಗೌಡ ಪಾಟೀಲ ಮಾತನಾಡಿ, ಮದುವೆ, ಮುಂಜಿವೆ, ಸಭೆ, ಸಮಾರಂಭ, ರ‍್ಯಾಲಿ ಏನೇ ಇದ್ದರೂ ಪೂರ್ವಾನುಮತಿ ಕಡ್ಡಾಯವಾಗಿದೆ. ಸಾರ್ವಜನಿಕರು ಸá-ವಿಧಾ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬಹುದು. ಇದಕ್ಕಾಗಿ ವಿಧಾನಸಭೆ ಕ್ಷೇತ್ರವಾರು ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗಿದೆ. ವಾಟ್ಸಪ್ ಗ್ರುಪ್ ಸೇರಿ ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ಇಡಲಾಗುವುದು ಎಂದರು.

    ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 1950 ಅಥವಾ ಪೂರ್ವ ಕ್ಷೇತ್ರದ ಕಂಟ್ರೋಲ್ ರೂಂ. ಸಂಖ್ಯೆ 0836-2358035ಗೆ ಸಾರ್ವಜನಿಕರು ಸಂಪರ್ಕಿಸಬಹುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts