More

    ಎಎಂಆರ್ ನೀರು ಕೃಷಿ ಹಾಗೂ ಕೈಗಾರಿಕಾ ಬಳಕೆ ನಿಷೇಧ

    ಮಂಗಳೂರು: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಎಂಆರ್ ಅಣೆಕಟ್ಟಿನಿಂದ ಜಿಲ್ಲೆಯ ಕೈಗಾರಿಕೆಗಳು ಮತ್ತು ಕೃಷಿಗೆ ನೀರು ಬಳಕೆ ಮಾಡುವುದನ್ನು ಸಂಪೂರ್ಣ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

    ಜಿಲ್ಲೆಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ನದಿಗಳ ಅಣೆಕಟ್ಟುಗಳಲ್ಲಿ ನೀರು ಆವಿಯಾಗಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗಬಹುದಾದ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ನಿರ್ಣಯವನ್ನು ಜಿಲ್ಲಾಧಿಕಾರಿ ಕೈಗೊಂಡಿದ್ದಾರೆ. ಮಳೆಗಾಲ ಆರಂಭವಾಗುವವರೆಗೆ ಈ ನಿಷೇಧ ಮುಂದುವರಿಯಲಿದೆ.

    *ಬಿಳಿಯೂರು ಡ್ಯಾಂನಿಂದ ಎಎಂಆರ್‌ಗೆ ನೀರು

    ಗ್ರಾಮೀಣ ನೀರು ಸರಬರಾಜು ಯೋಜನೆಗಳಿಗೆ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಬಿಳಿಯೂರು ಅಣೆಕಟ್ಟಿನಿಂದ ಎಎಂಆರ್ ಅಣೆಕಟ್ಟಿಗೆ ಗುರುವಾರ ನೀರು ಹರಿಯಬಿಡಲಾಗಿದೆ. ಇದರಿಂದ 4.ಮೀ. ಇದ್ದ ಬಿಳಿಯೂರು ಅಣೆಕಟ್ಟಿನಲ್ಲಿ 1.6 ಮೀಟರ್‌ಗೆ ನೀರಿನ ಮಟ್ಟ ತಲುಪಿದೆ. ನೀರಿನ ಸಮಸ್ಯೆ ಎದುರಾಗದಂತೆ ಜಿಲ್ಲೆಯ ಎಲ್ಲ ನಾಗರಿಕರು ನೀರನ್ನು ಮಿತವಾಗಿ ಬಳಸಬೇಕು ಮತ್ತು ಅನಗತ್ಯ ಪೋಲು ಮಾಡದಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಮನವಿ ಮಾಡಿದ್ದಾರೆ.

    *ತುಂಬೆಯಲ್ಲಿ 5.24 ಮೀ. ನೀರು

    ಮಂಗಳೂರು ಮಹಾನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂನ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು, ಗುರುವಾರ ಸಂಜೆಯ ವೇಳೆ 5.24 ನೀರಿನ ಮಟ್ಟ ತಲುಪಿದೆ., ಬೇಸಿಗೆ ಮಳೆ ಬರುವವರೆಗೆ ನೀರಿನ ಮಿತಬಳಕೆಯೇ ಸದ್ಯದ ಆಯ್ಕೆಯಾಗಿದೆ. ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ ಗರಿಷ್ಠ 6 ಮೀ. ಸಂಗ್ರಹ ಸಾಮರ್ಥ್ಯ ಇರುವಲ್ಲಿ ಗುರುವಾರ 0.17ಮೀ ಇಳಿಕೆಯಾಗಿ 5.24 ಎತ್ತರಕ್ಕೆ ನೀರಿನ ಸಂಗ್ರಹವಿದೆ. ತುಂಬೆ ಡ್ಯಾಂ ಕೆಳಭಾಗದ ಹರೆಕಳ ಡ್ಯಾಂ ನೀರನ್ನು 4 ಪಂಪ್‌ಗಳ ಮೂಲಕ ತುಂಬೆ ಡ್ಯಾಂಗೆ ತುಂಬಿಸಲಾಗುತ್ತಿದೆ. ಕರಾವಳಿ ತೀರದಲ್ಲಿ ದಿನದಿಂದ ದಿನಕ್ಕೆ ಬೇಸಿಗೆಯ ಬೇಗೆ ಹೆಚ್ಚಾಗುತ್ತಿದೆ. ಇದರಿಂದ ನದಿ, ಬಾವಿ, ಕೆರೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ, ಎಲ್ಲೆಡೆ ನೀರಿನ ಹಾಹಾಕಾರ ಆರಂಭವಾಗಿದೆ. ಇದೇ ರೀತಿ ಮಂಗಳೂರಿಗೆ ನೀರು ಪೂರೈಕೆ ಮಾಡುತ್ತಿರುವ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಗಣನೀಯ ಇಳಿಕೆ ಕಾಣುತ್ತಿದ್ದು, ಪರ್ಯಾಯ ನೀರಿನ ವ್ಯವಸ್ಥೆ ಮಾಡಲೇಬೇಕಾಗಿದೆ.

    ———————

    ರೇಷನಿಂಗ್ ಅನಿವಾರ್ಯ

    ನಗರವಾಸಿಗಳು ಮಿತವಾಗಿ ನೀರು ಬಳಕೆ ಮಾಡಲೇಬೇಕಾಗಿದೆ. ಬೇಸಿಗೆ ಮಳೆ ಬಾರದಿದ್ದರೆ ಶೀಘ್ರದಲ್ಲೇ ನೀರು ರೇಷನಿಂಗ್ ಮಾಡುವುದು ಆಡಳಿತಕ್ಕೆ ಅನಿವಾರ್ಯವಾಗಿದೆ. ಸರಳೀಕಟ್ಟೆ, ಎಎಂಆರ್, ತುಂಬೆ, ಹರೇಕಳ ಡ್ಯಾಂನಲ್ಲಿ ದಾಸ್ತಾನಿರುವ ನೀರು ಖಾಲಿಯಾದರೆ ನೀರು ಸಮಸ್ಯೆ ಬಿಗಡಾಯಿಸುವ ಸಾಧ್ಯತೆಯಿದೆ. ಅದಕ್ಕಿಂತ ಮೊದಲು ಬೇಸಿಗೆ ಮಳೆ ಬರಲೆಂದು ಆಡಳಿತ, ನಗರವಾಸಿಗಳ ಪ್ರಾರ್ಥನೆಯಾಗಿದೆ.

    ———————

    ಯಾವ ಡ್ಯಾಂನಲ್ಲಿ ಎಷ್ಟು ನೀರು ?

    * ತುಂಬೆ ವೆಂಟೆಡ್ ಡ್ಯಾಂ 5.24ಮೀ.

    * ಎಎಂಆರ್ ಡ್ಯಾಂ 15.35ಮೀ.

    * ಸರಳೀಕಟ್ಟೆ ಡ್ಯಾಂ 3.00 ಮೀ.

    * ಹರೇಕಳ ಡ್ಯಾಂ 4.00ಮೀ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts