More

    ಸರ್ಕಾರಿ ಕಲಾ ಕಾಲೇಜಿನಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಉದ್ಘಾಟನೆ

    ಹಾಸನ: ಭಾವನೆಗಳು ಸಹಜವಾಗಿ ಬರುತ್ತಲೇ ಇರುತ್ತದೆ. ಮನಸ್ಸಿನ ಮೇಲೆ ಹಿಡಿತ ಇರಬೇಕು. ಮಾತು, ನೋಟ, ಕೇಳುವಿಕೆ ಎಲ್ಲರದಲ್ಲೂ ಶಿಸ್ತು ಇರಬೇಕು ಎಂದು ಹಾಸನ ಸರ್ಕಾರಿ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ನಿರ್ದೇಶಕ ಡಾ. ಎಸ್.ವಿ. ಸಂತೋಷ್ ಅಭಿಪ್ರಾಯಪಟ್ಟರು.
    ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಸ್ವಾಯತ್ತ ಕಾಲೇಜಿನ ಯುವರೆಡ್ ಕ್ರಾಸ್ ಘಟಕದ ವತಿಯಿಂದ ಆಯೋಜಿಸಿದ್ದ ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರಸೆಂಟ್ ದಿನಾಚರಣೆಯ ಅಂಗವಾಗಿ ಆರೋಗ್ಯ ಅರಿವು ಮತ್ತು ರಕ್ತ ಗುಂಪು ಪರೀಕ್ಷಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಪ್ರಕೃತಿ ವಿಕೋಪಗಳಾದರೆ, ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾದರೆ ಸರಿಯಾದ ವ್ಯವಸ್ಥೆ ಇರಬೇಕು. ಫಿಡ್ಸ್, ಹೃದಯಾಘಾತವಾದಾಗ ತುರ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.
    ಮಾನವ ಜನ್ಮ ದೊಡ್ಡದು ಇದನ್ನು ಹಾಳು ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ. ಎಂಬಂತೆ ಆತ್ಮಹತ್ಯೆ ಒಳ್ಳೆಯದಲ್ಲ. ಹುಟ್ಟು ಸಹಜ, ಸಾವು ಖಚಿತ. ಖಿನ್ನತೆ, ಒತ್ತಡ ಒಳ್ಳೆಯದಲ್ಲ. ಗುರಿ-ಗುರು ಇರಬೇಕು. ಸಮಸ್ಯೆಯನ್ನು ಮೀರಿ ಬೆಳೆಯಬೇಕು. ಆರೋಗ್ಯದಲ್ಲಿ ಸಮತೋಲನ ಇರಬೇಕು ಎಂದು ಕಿವಿ ಮಾತು ಹೇಳಿದರು.
    ಜಿಲ್ಲಾ ಸರ್ಕಾರಿ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಎಚ್.ಸಿಲೋಕೇಶ್ ಮಾತನಾಡಿ, ಸ್ಪರ್ಧಾ ಜಗತ್ತು ಇದಾಗಿದ್ದು, ಇಲ್ಲಿ ಪ್ರತಿನಿತ್ಯ ಓದಬೇಕು. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಿನದ 24 ಗಂಟೆಯು ಸೇವೆಗೆ ಸದಾ ಸಿದ್ದ. ಎಲ್ಲಾ ವ್ಯವಸ್ಥೆಯೂ ಸುಸಜ್ಜಿತವಾಗಿದೆ. ವಿದ್ಯಾರ್ಥಿಗಳಿಗೆ ಒತ್ತಡದ ಜೀವನ ಬೇಡ. ಚಿಂತೆ ಚಿತೆಯನ್ನ ಏರಿಸುತ್ತದೆ. ಆತ್ಮ ವಿಶ್ವಾಸ, ಜೀವನೋತ್ಸಾಹವಿರಬೇಕು. ನಗು ನಗುತ್ತಲೇ ದಿನಗಳೆಯಬೇಕು. ಉಪಕಾರ ಮಾಡದಿದ್ದರೂ ಉಪದ್ರವ ಮಾಡಬಾರದು. ಒಳ್ಳೆಯ ಗುಣ ನಡತೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
    ಆಲೂರು ಸರ್ಕಾರಿ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ಡಾ. ಲಿಖಿತಾ ಎಸ್. ಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ಯುದ್ಧ ಕಾಲೇ ಶಸ್ತ್ರಾಭ್ಯಾಸ ಒಳ್ಳೆಯದಲ್ಲ. ಒತ್ತಡ ಮುಕ್ತರಾಗಿ ಪರೀಕ್ಷೆಗೆ ಸಿದ್ಧರಾಗಬೇಕು. ಒತ್ತಡ ರಹಿತ ಜೀವನ ಮುಖ್ಯ. ಯಾರೂ ಬುದ್ಧಿವಂತರಲ್ಲ, ಯಾರೂ ದಡ್ಡರಲ್ಲ. ಎಲ್ಲದಕ್ಕೂ ಶ್ರಮ ಅಗತ್ಯವಾಗಿದೆ. ನಮ್ಮ ಶಕ್ತಿ ಸಾಮರ್ಥ್ಯದಿಂದ ಸಾಧನೆ ಸಾಧ್ಯ ಎಂದು ಹೇಳಿದರು.
    ಪ್ರಾಂಶುಪಾಲ ಡಾ.ಎಂ.ಬಿ.ಇರ್ಷಾದ್ ಮಾತನಾಡಿ, ಕಾಲೇಜಿನಲ್ಲಿ ಪ್ರತಿಯೊಂದು ವಿಭಾಗವೂ ಅದರದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ವಿದ್ಯಾರ್ಥಿಗಳು ಪ್ರತಿಯೊಂದು ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಘಟಕದ ಸಂಚಾಲಕ ಪ್ರೊ. ಎಚ್.ಡಿ.ದೇವರಾಜು,ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ. ಸತ್ಯಮೂರ್ತಿ, ರೆಡ್‌ಕ್ರಾಸ್ ಘಟಕದ ಸದಸ್ಯ ಪಿ.ಆರ್.ಶಾಂತಾ, ಅನುರಾಧಾ, ಹಿಂದಿ ವಿಭಾಗದ ಉಪನ್ಯಾಸಕ ಮಾಲತಿ, ಬಿ.ಎಚ್.ಶ್ರೀನಿವಾಸ್, ಡಾ. ಲಿಂಗಮೂರ್ತಿ, ರಾಜಶೇಖರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts