More

    7 ತಿಂಗಳ ಬಳಿಕ ಕೊಲೆ ರಹಸ್ಯ ಬಯಲು

    ಮುಂಡಗೋಡ: ತಾಲೂಕಿನ ಕಾತೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಳೆದ 7 ತಿಂಗಳ ಹಿಂದೆ ನಡೆದಿದ್ದ ವ್ಯಕ್ತಿಯ ಕೊಲೆಯ ರಹಸ್ಯವನ್ನು ಇಲ್ಲಿನ ಪೊಲೀಸರು ಭೇದಿಸಿ ನಾಲ್ವರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.

    ಅರಣ್ಯ ಪ್ರದೇಶದಲ್ಲಿ ಏ. 19ರಂದು ಕೊಲೆಯಾಗಿದ್ದ ವ್ಯಕ್ತಿಯ ದೇಹದ ಭಾಗಗಳನ್ನು ಪ್ರಾಣಿಗಳು ತಿಂದು ಅಸ್ತಿಪಂಜರ ಮಾತ್ರ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರು ವಿಶೇಷ ಕಾರ್ಯಪಡೆ ರಚಿಸಿದ್ದರು. ಸಿಪಿಐ ಪ್ರಭುಗೌಡ ಡಿ.ಕೆ. ಹಾಗೂ ಸಿಬ್ಬಂದಿ ತನಿಖೆ ನಡೆಸಿ ಕೊಲೆಯಾದ ವ್ಯಕ್ತಿ ಹುಬ್ಬಳ್ಳಿ ನವನಗರದ ನಿವಾಸಿ ವರದರಾಜ ಶ್ರೀನಿವಾಸ ನಾಯಕ ಎಂದು ಪತ್ತೆ ಹಚ್ಚಿದರು.

    ಕೊಲೆ ಮಾಡಿದ ಪ್ರಮುಖ ಆರೋಪಿ ಉಣಕಲ್​ನ ಅಭಿಷೇಕ ಶೇಟ್. ಈತ ಮೃತ ವರದರಾಜನ ತಾಯಿಯ ತಂಗಿಯ ಮಗನಾಗಿದ್ದು, ತನ್ನೊಂದಿಗೆ ತನ್ನ ಸ್ನೇಹಿತರಾದ ಉಣಕಲ್ ತಾಜ್​ನಗರನ ಸುರೇಶ ಲಮಾಣಿ ಹಾಗೂ ರಾಮಕುಮಾರ ತಾಟಿಸಮ್ಲಾ ಜತೆಗೆ ಸೇರಿಕೊಂಡು ವರದರಾಜನನ್ನು ಕೊಲೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.

    ಆರೋಪಿ ಅಭಿಷೇಕ ಕೊಲೆಯಾದ ವ್ಯಕ್ತಿಯ ಎಲ್ಲ ಆಸ್ತಿ ತನಗೆ ಸಿಗುತ್ತದೆ ಎಂದು ಉಳಿದ ಆರೋಪಿಗಳ ಸಹಾಯ ಪಡೆದು ಶಿರಸಿ ಕಡೆಗೆ ಪ್ರವಾಸಕ್ಕೆ ಹೋಗೋಣ ಅಂತಾ ನಂಬಿಸಿ ವರದರಾಜನನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಮದ್ಯ ಕುಡಿಸಿ ವರದರಾಜನ ಜತೆಗೆ ಜಗಳ ಮಾಡಿ ಬೆಲ್ಟ್​ನಿಂದ ಕುತ್ತಿಗೆಗೆ ಸುತ್ತಿ ಕೊಲೆ ಮಾಡಿದ್ದಾರೆ. ಸ್ಥಳೀಯ ಆರೋಪಿ ಬಸವರಾಜ ಅಜ್ಜಮ್ಮನವರ ಎಂಬಾತನ ಸಹಾಯದಿಂದ ಬೈಕ್​ನಲ್ಲಿ ಶವವನ್ನು ಕಾಡಿಗೆ ಸಾಗಿಸಿ ಕಾಡಿನಲ್ಲಿ ಪ್ರಾಣಿಗಳಿಗೆ ನೀರು ಕುಡಿಯಲು ನಿರ್ವಿುಸಿದ ಹೊಂಡದಲ್ಲಿ ಶವವನ್ನು ಮುಚ್ಚಿದ್ದರು.

    ಬಳಿಕ ವರದರಾಜನು ತನ್ನ ಸಂಬಂಧಿಕರ ಊರಲ್ಲಿ ಇದ್ದಾನೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಅವನು ಕಾಣೆಯಾದ ಬಗ್ಗೆ ಯಾವ ಠಾಣೆಯಲ್ಲಿಯೂ ಪ್ರಕರಣ ದಾಖಲಾಗದಂತೆ ಆರೋಪಿಗಳು ನೋಡಿಕೊಂಡಿದ್ದರು. ಸಾಕ್ಷಿ ಸಿಗಬಾರದೆಂದು ಮೃತನು ಉಪಯೋಗಿಸುತ್ತಿದ್ದ ಮೊಬೈಲ್ ಅನ್ನು ಗೋವಾದ ಸಮುದ್ರದಲ್ಲಿ ಎಸೆದು ಬಂದಿದ್ದರು. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರು ಜಪ್ತಿ ಮಾಡಲಾಗಿದೆ.

    ಕಾರವಾರ ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಬದರಿನಾಥ ಮತ್ತು ಶಿರಸಿ ಡಿಎಸ್​ಪಿ ಜಿ.ಟಿ. ನಾಯಕ ಮಾರ್ಗದರ್ಶನದಲ್ಲಿ ಇಲ್ಲಿನ ಸಿಪಿಐ ಪ್ರಭುಗೌಡ ಡಿ.ಕೆ., ಪಿಎಸ್​ಐ ಬಸವರಾಜ ಮಬನೂರ, ಮೋಹಿನಿ ಶೆಟ್ಟಿ, ಎಎಸ್​ಐ ಅಶೋಕ ರಾಠೋಡ, ಸಿಬ್ಬಂದಿ ಶರತ ದೇವಳ್ಳಿ, ಭಗವಾನ ಗಾಂವಕರ, ವಿನೋದಕುಮಾರ ಜಿ.ಬಿ., ರಾಘವೇಂದ್ರ ನಾಯ್ಕ, ಅರುಣ ಬಾಗೇವಾಡಿ, ಕುಮಾರ ಬಣಕಾರ, ವಿವೇಕ ಪಟಗಾರ, ತಿರುಪತಿ ಚೌಡಣ್ಣನವರ, ರಾಘವೇಂದ್ರ ಪಟಗಾರ, ಸುಧೀರ ಮಡಿವಾಳ, ಅಣ್ಣಪ್ಪ ಬಡಗೇರಿ, ರಮೇಶ ನಾಯ್ಕ, ನಾಗರಾಜ ಬೇಗಾರ ತನಿಖೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ಬಹುಮಾನ ಘೊಷಣೆ: ಹಿಂದೆ ಟಿಬೆಟಿಯನ್ ಕ್ಯಾಂಪ್​ನಲ್ಲಿ ನಡೆದ ದರೋಡೆ, ಬೈಕ್ ಕಳ್ಳತನ ಪ್ರಕರಣ ಹಾಗೂ ಮನೆ ಕಳ್ಳತನ ಮತ್ತು ಕೊಲೆ ಪ್ರಕರಣ ಬೇಧಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಶಿರಸಿ ಡಿಎಸ್​ಪಿ ವಿಶೇಷ ಬಹುಮಾನ ಘೊಷಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts