ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ತಗ್ಗಿದೆ. ಆದರೆ, ಕೊಯ್ನ ಜಲಾಶಯದಿಂದ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟ ಒಂದು ಅಡಿ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಮಳೆ ಕಡಿಮೆಯಾದರೂ ಕೃಷ್ಣೆ, ಅಬ್ಬರ ಮುಂದುವರಿಸಿದ್ದಾಳೆ.
ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳು ತಮ್ಮ ಒಡಲು ಬಿಟ್ಟು ಹರಿಯುತ್ತಿವೆ. ಕೃಷ್ಣಾ ನದಿ ಒಳ ಹರಿವು 2,29,500 ಕ್ಯೂಸೆಕ್‌ಗಿಂತ ಹೆಚ್ಚಾಗಿದೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1,95,750 ಕ್ಯೂಸೆಕ್, ದೂಧಗಂಗಾ ನದಿಯಿಂದ 33,792 ಕ್ಯೂಸೆಕ್ ಸೇರಿ ಒಟ್ಟು 2,29,500 ಕ್ಯೂಸೆಕ್‌ಗೂ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಕೊಯ್ನ ಜಲಾಶಯದಿಂದ ಗುರುವಾರ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿಲ್ಲ. ಕೇವಲ 2,100 ಕ್ಯೂಸೆಕ್ ನೀರು ಸ್ಥಳೀಯವಾಗಿ ವಿದ್ಯುತ್ ಉತ್ಪಾದನೆಗೆ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಪ್ಪರಗಿ ಬ್ಯಾರೇಜ್‌ನಿಂದ 2,22,000 ಹಾಗೂ ಆಲಮಟ್ಟಿ ಜಲಾಶಯದಿಂದ 2,50,000 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುವುದನ್ನು ನಿಲ್ಲಿಸಲಾಗಿದೆ. ಶುಕ್ರವಾರ ಕೃಷ್ಣಾ ನದಿ ನೀರಿನ ಹರಿವಿನಲ್ಲಿ ಇಳಿಕೆಯಾಗುವ ಲಕ್ಷಣಗಳಿವೆ ಎಂದು ಚಿಕ್ಕೋಡಿ ತಹಸೀಲ್ದಾರ್ ಸುಭಾಷ ಸಂಪಗಾವಿ ಮಾಹಿತಿ ನೀಡಿದ್ದಾರೆ.
ಕಾಳಜಿ ಕೇಂದ್ರದಲ್ಲಿದ್ದ ಹಂಪಿಹೊಳಿ ಗ್ರಾಮದ ವೃದ್ಧೆ ಸಾವು
ರಾಮದುರ್ಗ: ಮಲಪ್ರಭಾ ನದಿ ಪ್ರವಾಹದಿಂದ ಸುರೇಬಾನ ಎಂಕೆಬಿಎಸ್ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಹಂಪಿಹೊಳಿ ಗ್ರಾಮದ ವೃದ್ಧೆಯೋರ್ವಳು ಗುರುವಾರ ಮೃತಪಟ್ಟಿದ್ದಾಳೆ. ಗಂಗಮ್ಮ ಬಸಯ್ಯ ಮುಳಗುಂದಮಠ (88) ಮೃತ ವೃದ್ಧೆ. ಪ್ರವಾಹ ಹಾಗೂ ಮಳೆಯಿಂದಾಗಿ ಶೀತಮಯ ವಾತಾವರಣದಲ್ಲಿ ವೃದ್ಧೆ ಅನಾರೋಗ್ಯದಿಂದ ಬಳಲುತ್ತಿದ್ದಳು. ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ವೃದ್ಧೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಗಿರೀಶ ಸ್ವಾಧಿ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.