More

    ನಗರಸಭೆ ಸಾಮಾನ್ಯ ಸಭೆಯನ್ನು ಅಮಾನತಿನಲ್ಲಿಡಿ

    ಚಿಕ್ಕಮಗಳೂರು: ಕಳೆದ ತಿಂಗಳು ನಡೆದ ನಗರಸಭೆ ಸಾಮಾನ್ಯಸಭೆ ಊರ್ಜಿತವಲ್ಲ. ಹೀಗಾಗಿ ಸಭೆಯ ಎಲ್ಲ ವಿಷಯಗಳ ಅನುಮೋದನೆಗೆ ತಡೆಯಾಜ್ಞೆ ನೀಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ವಕೀಲರ ಮೂಲಕ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಅಪೀಲು ಸಲ್ಲಿಸಿದರು.

    ಸಾಮಾನ್ಯ ಸಭೆಯ ಯಾವುದೇ ವಿಷಯಕ್ಕೂ ಅನುಮೋದನೆ ನೀಡದಂತೆ ತಡೆಯಬೇಕು ಎಂದು ಸದಸ್ಯರು ಆಗ್ರಹಿಸಿದರು. ವಕೀಲ ದಯಾನಂದ್ ಅವರ ಮೂಲಕ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
    ವಕೀಲ ದಯಾನಂದ್ ಮಾತನಾಡಿ, ತಡೆಯಾಜ್ಞೆ ಅರ್ಜಿ ಸಂಬಂಧ ಜ.9ರಂದು ವಿಚಾರಣೆ ನಡೆಯಲಿದೆ. ಸಭೆಯು ಸಂಪೂರ್ಣ ಕಾನೂನು ಬಾಹಿರವಾಗಿರುವ ಹಿನ್ನೆಲೆಯಲ್ಲಿ ಕಾನೂನು ಹೋರಾಟಕ್ಕೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಿದ್ಧವಾಗಿದ್ದಾರೆ. ಹೀಗಾಗಿ ಅನುಮೋದನೆ ಕಾರ್ಯರೂಪಕ್ಕೆ ಅವಕಾಶ ನೀಡಬಾರದು ಎಂದು ಡಿಸಿ ಅವರಿಗೆ ಅಪೀಲು ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು.
    ನಗರಸಭೆ ಸದಸ್ಯ ಎ.ಸಿ.ಕುಮಾರ್ ಮಾತನಾಡಿ, ನಗರಸಭೆ ನಡಾವಳಿ ಪಾಸ್ ಮಾಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ತೆರಿಗೆ ಹಣ ಲೂಟಿ ಹೊಡೆಯುವ ಮೊದಲು ಸಭೆಯನ್ನು ಅಮಾನತಿನಲ್ಲಿಡಬೇಕು ಎಂದು ಮನವಿ ಮಾಡಲಾಗಿದೆ. ನಗರಸಭೆಯಲ್ಲಿ ಬಹುಮತ ಇಲ್ಲವೆಂದು ಈ ಮೊದಲೇ ಜಿಲ್ಲಾಧಿಕಾರಿಗೆ ತಿಳಿಸಲಾಗಿತ್ತು. ಜನರ ತೆರಿಗೆ ಹಣ ಲೂಟಿ ಮಾಡುವ ಹುನ್ನಾರ ಮಾಡಲಾಗುತ್ತಿದೆ. ಹೀಗಾಗಿ ನ್ಯಾಯಬದ್ಧ ಹೋರಾಟಕ್ಕೆ ನಗರಸಭೆ ಸದಸ್ಯರು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.
    ಅಪೀಲು ಸ್ವೀಕರಿಸಿ ಮಾತನಾಡಿದ ಡಿಸಿ ಮೀನಾ ನಾಗರಾಜ್, ತಕ್ಷಣವೇ ಅನುಮೋದನೆಗೆ ತಡೆಯಾಜ್ಞೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿದರು. ನಗರಸಭೆ ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ, ಸದಸ್ಯರಾದ ಟಿ.ರಾಜಶೇಖರ್, ಮಧುಕುಮಾರ್‌ರಾಜ್ ಅರಸ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts