More

    ಆದಿಚುಂಚನಗಿರಿ ಕ್ಷೇತ್ರದಲ್ಲಿ ಸಂಭ್ರಮದ ರಥೋತ್ಸವ

    ನಾಗಮಂಗಲ : ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಸೋಮವಾರ ಮುಂಜಾನೆ ವಿಜೃಂಭಣೆಯಿಂದ ಶ್ರೀ ಗಂಗಾಧರೇಶ್ವರಸ್ವಾಮಿಯ ರಥೋತ್ಸವ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಈ ಹಿನ್ನೆಲೆಯಲ್ಲಿ ಭಾನುವಾರ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ರಾತ್ರಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ನಾಡಿನ ಅನೇಕ ಮಠಾಧೀಶರು, ಧಾರ್ಮಿಕ ಮುಖಂಡರು, ಗಣ್ಯರು ಭಾಗವಹಿಸಿದ್ದರು. ಸಮ್ಮೇಳನದ ನಂತರ ಕಾಲಭೈರವೇಶ್ವರ ಪುಷ್ಕರಣಿಯಲ್ಲಿ ಏರ್ಪಡಿಸಿದ್ದ ತೆಪ್ಪೋತ್ಸವವನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು. ತೆಪ್ಪೋತ್ಸವ ಆರಂಭಗೊಳ್ಳುತ್ತಿದ್ದಂತೆ ಬಣ್ಣ ಬಣ್ಣದ ಪಟಾಕಿಗಳು ಸಿಡಿದು ಬಾನಂಗಳದಲ್ಲಿ ಚಿತ್ತಾರಗಳು ಬಿಡಿಸಿದವು. ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ಆದಿಚುಂಚನಗಿರಿ ಮಠ ಗಮನ ಸೆಳೆಯಿತು.
    ಹೋಳಿ ಹುಣ್ಣಿಮೆ ದಿನವಾದ ಸೋಮವಾರ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಗಂಗಾಧರೇಶ್ವರ ಸ್ವಾಮಿಯ ಸರ್ವಾಲಂಕೃತ ರಥಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಹಣ್ಣು, ದವನ ಮತ್ತು ಹೂವನ್ನು ಸಹಸ್ರಾರು ಸಂಖ್ಯೆಯ ಭಕ್ತರು ರಥದ ಮೇಲೆಸೆದು ಭಕ್ತಿ ಸಮರ್ಪಿಸಿದರು. ರಥದ ಮುಂಭಾಗದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಚೌಡೇಶ್ವರಿ ದೇವಿಯ ಉತ್ಸವ ಸಾಗಿತು.

    ಭಾನುವಾರ ಇಡೀ ರಾತ್ರಿ ಕ್ಷೇತ್ರದ ವಿವಿಧೆಡೆಗಳಿಂದ ಆಗಮಿಸಿದ್ದ ಕಲಾವಿದರು ಜಾನಪದ ಗೀತ ಗಾಯನ, ಪೌರಾಣಿಕ ನಾಟಕ, ಡೊಳ್ಳು ಕುಣಿತ, ಪಟದ ಕುಣಿತ, ಸೋಮನಕುಣಿತ, ಪೂಜಾ ಕುಣಿತ, ತಮಟೆ ಮೇಳ ಸೇರಿದಂತೆ ಹತ್ತಾರು ಕಲೆಗಳನ್ನು ಪ್ರದರ್ಶಿಸಿದರು.
    ಭಕ್ತರಿಗೆ ಮಠದ ಆವರಣದಲ್ಲಿ ಹತ್ತಾರು ಕಡೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ರಾತ್ರಿಯಿಡೀ ಭಕ್ತರು ಆದಿಚುಂಚನಗಿರಿ ಬೆಟ್ಟ ಹತ್ತಿ ಪೂಜೆ ಸಲ್ಲಿಸುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.

    ಹರಿದುಬಂದ ಜನಸಾಗರ:
    ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಅಂಗವಾಗಿ ರಾಜ್ಯ ಮಾತ್ರವಲ್ಲದೆ ಹೊರರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಾಗರೋಪಾದಿಯಲ್ಲಿ ನೆರೆದಿದ್ದರು. ಕ್ಷೇತ್ರದ ಮುಖ್ಯದ್ವಾರದಿಂದ ತುಮಕೂರು ಹಾಗೂ ಮೈಸೂರು ಮಾರ್ಗಗಳ ಎರಡೂ ಬದಿಯಲ್ಲಿ ಕಿಲೋಮೀಟರ್‌ವರೆಗೆ ವಾಹನಗಳು ಭಕ್ತರನ್ನು ಹೊತ್ತುತಂದು ನಿಂತಿದ್ದವು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಪಾಲ್ಗೊಂಡಿದ್ದರು.

    ಮೊಳಗಿದ ಜೈ ಶ್ರೀ ರಾಮ್ ಘೋಷಣೆ
    ಹಗ್ಗದ ಮೂಲಕ ರಥ ಎಳೆಯುವ ಸಂದರ್ಭದಲ್ಲಿ ಭಕ್ತರು ಜೈ ಶ್ರೀ ರಾಮ್, ಜೈ ಕಾಲಭೈರವ ಎಂಬ ಘೋಷಣೆ ಮೊಳಗಿಸಿದರು.
    ಬಿಗಿ ಬಂದೋಬಸ್ತ್ : ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಮುಂಜಾಗ್ರತಾ ಕ್ರಮವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ತಾಲೂಕಿನ ಬೆಂಗಳೂರು-ಮಂಗಳೂರು ರಾ.ಹೆದ್ದಾರಿಯಿಂದ ಆದಿಚುಂಚನಗಿರಿಗೆ ಹೋಗಲು ನೆಲ್ಲಿಗೆರೆ ಕ್ರಾಸ್ ಬಳಿಯಿರುವ ಮುಖ್ಯದ್ವಾರದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

    ಈ ಸಂದರ್ಭ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಪುರುಷೋತ್ತಮನಂದ ನಾಥ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಧರ್ಮಪಾಲನಾಥ ಸ್ವಾಮೀಜಿ, ಮಂಗಳನಾಥ ಸ್ವಾಮೀಜಿ, ಸೋಮನಾಥ ಸ್ವಾಮೀಜಿ, ಶೇಖರನಾಥ ಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts