More

    ನಮ್ಮ ಶಕ್ತಿ ಅರಿತುಕೊಂಡು ಗುರಿಯ ಮಾರ್ಗದಲ್ಲಿ ಕ್ರಮಿಸಬೇಕು

    ನಮ್ಮ ಶಕ್ತಿ ಅರಿತುಕೊಂಡು ಗುರಿಯ ಮಾರ್ಗದಲ್ಲಿ ಕ್ರಮಿಸಬೇಕುಸಾಮಾನ್ಯವಾಗಿ ಎಲ್ಲರಿಗೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಕನಸಿರುತ್ತದೆ. ಕನಸೆಂದರೆ ರಾತ್ರಿ ಮಲಗಿದಾಗ ಕಾಣುವುದಲ್ಲ, ಎಚ್ಚರವಾಗಿದ್ದಾಗ ಕನಸು ಕಾಣುವುದು ಮುಖ್ಯ. ಕನಸು ಕಾಣುವುದಷ್ಟೇ ಅಲ್ಲ, ಆ ಕನಸನ್ನು ಹೇಗೆ ನನಸು ಮಾಡಬೇಕು ಎನ್ನುವುದು ಸಹ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಮೊದಲು ನಮ್ಮ ಶಕ್ತಿ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

    ಯಾವುದೇ ಕೆಲಸ ಮಾಡಬೇಕಾದರೂ ಒಂದಿಷ್ಟು ನಿಯಮ, ನಿಬಂಧನೆಗಳು ಇದ್ದೇ ಇರುತ್ತವೆ. ನಮ್ಮ ಅಭ್ಯಾಸಗಳೇ ನಮ್ಮ ವ್ಯಕ್ತಿತ್ವವಾಗುತ್ತದೆ. ದಿನವೊಂದಕ್ಕೆ ಹಲವು ಬಾರಿ ಕಾಫಿ ಕುಡಿಯುವುದೂ ಒಂದು ಅಭ್ಯಾಸ. ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅದನ್ನು ರೂಢಿಸಿಕೊಂಡಿರುತ್ತೇವೆ. ಏನೇ ಅಭ್ಯಾಸಗಳಿದ್ದರೂ ಅದು ನಮ್ಮ ಇತಿಮಿತಿಯಲ್ಲಿರಬೇಕು. ಯಾವುದನ್ನೂ ಹೆಚ್ಚಾಗಿ ಮಾಡಬಾರದು. ಅದು ಊಟ ಇರಬಹುದು, ನಿದ್ದೆ, ಮಾತು, ನಗು ಇರಬಹುದು. ನಗು ಅಗತ್ಯ, ನಕ್ಕರೆ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳುವುದನ್ನು ಕೇಳುತ್ತಿರುತ್ತೇವೆ. ಅದು ಅಕ್ಷರಶಃ ನಿಜ. ನಗು ಬೇಕು. ಆದರೆ, ಹೇಗೆ ನಗುತ್ತೇವೆ ಎನ್ನುವುದು ಮುಖ್ಯ. ಒಂದು ಜೋಕ್​ನ ಆಳಕ್ಕೆ ನಾವು ನಗಬೇಕು. ಅದರ ಬದಲು, ಮಿತಿಮೀರಿ ನಕ್ಕರೆ, ವ್ಯಂಗ್ಯ ಮಾಡಿದಂತಾಗುತ್ತದೆ. ಹಾಗಾಗಿ, ನಮ್ಮ ಭಾವನೆಗಳು ಯಾವತ್ತಿಗೂ ಇತಿಮಿತಿಯಲ್ಲಿರಬೇಕು. ಆಗ ಜೀವನದಲ್ಲಿ ಒಂದು ಶಿಸ್ತು ಇರುತ್ತದೆ. ಅದರಿಂದ ವ್ಯಕ್ತಿತ್ವ ಸಹ ವಿಕಸನವಾಗುತ್ತದೆ. ಆಗ ಗುರಿಸಾಧನೆ ಸುಲಭವಾಗುತ್ತದೆ.

    ಗುರಿ ಎಂದರೆ ಕೆಲಸದ ವಿಷಯ ಮಾತ್ರ ಅಲ್ಲ. ವಿಶ್ವವಿದ್ಯಾಲಯಕ್ಕೆ ಹೋಗೋದು, ಪಿಎಚ್​ಡಿ ಮಾಡೋದು, ಪೈಲಟ್ ಆಗಬೇಕು, ವೈದ್ಯರಾಗಬೇಕು… ಹೀಗೆ ಒಬ್ಬೊಬ್ಬರಿಗೆ ಒಂದೊಂದು ಆಸೆ ಇರುತ್ತದೆ ಮತ್ತು ಅದಕ್ಕೆ ಅವರು ತಕ್ಕ ತಯಾರಿ ಮಾಡಿಕೊಂಡಿರುತ್ತಾರೆ. ಇದರ ಹೊರತಾಗಿ ಜ್ಞಾನಸಂಪಾದನೆಗೆ ಯಾವ ಅಡೆತಡೆಗಳೂ ಇಲ್ಲ. ನಮ್ಮ ಮಿದುಳು ಎಷ್ಟು ಅದ್ಭುತವೆಂದರೆ, ಎಷ್ಟು ತೆಗೆದುಕೊಂಡರೂ, ಎಷ್ಟು ಓದಿದರೂ ಅದನ್ನು ಸ್ಟೋರ್ ಮಾಡುವ ಶಕ್ತಿ ಅದಕ್ಕಿದೆ. ಅದು ಹಾಳಾಗೋದೂ ಇಲ್ಲ, ಕೊಳೆತು ಹೋಗೋದೂ ಇಲ್ಲ. ಯಾವಾಗ ಬೇಕಾದರೂ ನಾವು ಅದನ್ನು ಉಪಯೋಗಿಸಿಕೊಳ್ಳಬಹುದು. ನಾವು ಶಕ್ತಿಶಾಲಿಗಳಾಗುವುದು ನಮ್ಮ ಬೈಸೆಪ್ಸ್ ಅಥವಾ ಸಿಕ್ಸ್​ಪ್ಯಾಕ್​ನಿಂದಲ್ಲ. ಬುದ್ಧಿಶಕ್ತಿಯಿಂದ ಮಾತ್ರ ಸಾಧ್ಯ. ಒಬ್ಬ ಮನುಷ್ಯ ತನ್ನ ಬುದ್ಧಿಶಕ್ತಿಯಿಂದ ಎಲ್ಲಿಂದ ಎಲ್ಲಿಗೆ ಬೇಕಾದರೂ ತಲುಪಬಹುದು. ಎಪಿಜೆ ಅಬ್ದುಲ್ ಕಲಾಂ, ಲಾಲ್ ಬಹಾದ್ದೂರ್ ಶಾಸ್ತ್ರಿ… ಇವರೆಲ್ಲ ನೋಡೋಕೆ ಸಣ್ಣಗಿದ್ದರು. ಆದರೆ, ಅತ್ಯಂತ ಗಟ್ಟಿಗರಾಗಿದ್ದರು. ಅವರೆದುರು ನಿಂತು ಮಾತನಾಡುವುದಕ್ಕೆ ಜನ ಹೆದರುತ್ತಿದ್ದರು. ಅದು ನಿಜವಾದ ಶಕ್ತಿ. ಆ ಶಕ್ತಿ ಅವರಿಗೆ ಬಂದಿದ್ದು ಜ್ಞಾನದಿಂದ. ಹಾಗಾಗಿ, ಪ್ರಮುಖವಾಗಿ ಜ್ಞಾನಸಂಪಾದಿಸುವತ್ತ ಹೆಜ್ಜೆ ಇಡಬೇಕು.

    ಜ್ಞಾನಸಂಪಾದನೆ ಎಷ್ಟು ಮುಖ್ಯವೋ, ಇನ್ನೊಬ್ಬರ ಜತೆಗೆ ಹೋಲಿಸಿಕೊಳ್ಳದಿರುವುದು ಸಹ ಅಷ್ಟೇ ಮುಖ್ಯ. ಮೊದಲು ಅಕ್ಕ-ಪಕ್ಕದವರೊಂದಿಗೆ ಹೋಲಿಸಿಕೊಳ್ಳುವುದು ಬಿಡಬೇಕು. ಅವರು ಏನು ಮಾಡುತ್ತಿದ್ದಾರೆ, ನಾವೇನು ಮಾಡುತ್ತಿದ್ದೇವೆ ಎನ್ನುವುದು ಪ್ರಮುಖವಲ್ಲ. ನಮ್ಮ ಕೈಯಲ್ಲಿ ಏನು ಸಾಧ್ಯ ಎನ್ನುವುದನ್ನು ಅವಲೋಕಿಸಬೇಕು. ಅದು ಬೇರೆಯವರಿಂದ ತಿಳಿಯುವಂಥದ್ದಲ್ಲ. ಅದನ್ನು ನಾವೇ ಅರ್ಥಮಾಡಿಕೊಳ್ಳಬೇಕು. ನಮ್ಮ ಕೈಯಲ್ಲಿ ಏನು ಸಾಧ್ಯ ಎಂದು ನಮಗೇ ಗೊತ್ತಾಗುತ್ತದೆ. ಆ ಶಕ್ತಿ ನಮ್ಮಲ್ಲಿರುತ್ತದೆ ಮತ್ತು ಅದನ್ನು ನಾವು ಬೆಳೆಸಿಕೊಳ್ಳಬೇಕು. ಅದರಲ್ಲೊಂದು ಗುರಿ ನಿಗದಿ ಮಾಡಿಕೊಂಡು, ಎಷ್ಟು ದೂರ ಪ್ರಯಾಣ ಮಾಡುವುದಕ್ಕೆ ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕು.

    ನನ್ನ ಜೀವನದಲ್ಲೇ ಒಮ್ಮೆ ಹೀಗಾಗಿತ್ತು. 90ರ ದಶಕದಲ್ಲಿ ನಾನು ಹೀರೋ ಆಗಿ ಬಿಜಿಯಾಗಿದ್ದೆ. ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದೆ. ನನ್ನ ಕೆಲವು ಚಿತ್ರಗಳು ಯಶಸ್ವಿಯಾಗಿದ್ದವು. ಸಮಕಾಲೀನ ನಟರೊಬ್ಬರು ನನ್ನ ಯಶಸ್ಸಿನ ಬಗ್ಗೆ, ನಾನು ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ಬಗ್ಗೆ ಬಹಳ ತಲೆಕೆಡಿಸಿಕೊಂಡಿದ್ದರು. ಅವರು ಸಹ ಕಡಿಮೆ ಏನಲ್ಲ. ಬಹಳ ಪ್ರತಿಭಾವಂತರು. ಆದರೆ, ನನಗೆ ಒಂದಿಷ್ಟು ಯಶಸ್ಸು ಸಿಕ್ಕಿತ್ತು. ಅವರಿಗೆ ಆ ರೇಂಜ್​ಗೆ ಹೋಗುವುದಕ್ಕೆ ಆಗಿರಲಿಲ್ಲ. ಆಗ ಅವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರಂತೆ. ಅದನ್ನು ಕೇಳಿದವರು ನನ್ನ ಬಳಿ ಬಂದು ದೂರುತ್ತಿದ್ದರು. ನಾನು ಬಹಳಷ್ಟು ಬಾರಿ ಅದರ ಬಗ್ಗೆ ಗಮನಕೊಡುವುದಕ್ಕೆ ಹೋಗಿರಲಿಲ್ಲ. ದೂರುಗಳು ಹೆಚ್ಚಾದಾಗ, ಅವರ ಜತೆಗೇ ಒಮ್ಮೆ ಮಾತನಾಡಬೇಕೆಂದು ಯೋಚಿಸಿದೆ. ಒಮ್ಮೆ ಅವರನ್ನು ಭೇಟಿಯಾಗುವ ಸಂದರ್ಭ ಸಿಕ್ಕಾಗ, ನೇರವಾಗಿ ಈ ವಿಷಯ ಪ್ರಸ್ತಾಪಿಸಿದೆ. ‘ನೀವು ನನಗಿಂತ ಚೆನ್ನಾಗಿದ್ದೀರಿ. ನೀವು ಪ್ರತಿಭಾವಂತರು. ನೀವು ನಿಮ್ಮ ಕೆಲಸದ ಬಗ್ಗೆ ಯೋಚನೆ ಮಾಡದೆ, ನನ್ನ ಕೆಲಸದ ಬಗ್ಗೆ ಏಕೆ ಯೋಚಿಸುತ್ತಿದ್ದೀರಿ? ನೀವು ನಿಮ್ಮ ಕೆಲಸದ ಬಗ್ಗೆ ಗಮನಹರಿಸಿ. ನಾನು ನಿಮಗೆ ಸ್ಪರ್ಧಿಯಲ್ಲ’ ಎಂದು ಮನವರಿಕೆ ಮಾಡಿಕೊಟ್ಟೆ. ಆ ನಂತರ ಅವರು ನನ್ನ ಬಗ್ಗೆ ಮಾತನಾಡಿದ್ದು ಎಲ್ಲೂ ಕೇಳಲಿಲ್ಲ. ನಿಜ ಹೇಳಬೇಕೆಂದರೆ, ನಮಗೆ ಯಾರ ಜತೆಗೂ ಸ್ಪರ್ಧೆ ಮಾಡುವ ಅವಶ್ಯಕತೆ ಇರುವುದಿಲ್ಲ. ನಾವು ನಮ್ಮ ಕೆಲಸ ಮಾಡುತ್ತ ಹೋಗಬೇಕು. ಯಾರದೋ ಜತೆಗೆ ಹೋಲಿಕೆ ಮಾಡದೆ, ಯಾರನ್ನೋ ಅನುಕರಣೆ ಮಾಡದೆ, ನಮಗೆ ಗೊತ್ತಿದ್ದನ್ನು ಮಾಡುತ್ತ ಹೋಗಬೇಕು. ಮೊದಲು ನಾವು ನಾವಾಗಿರಬೇಕು. ಯಾರನ್ನೋ ಅನುಕರಣೆ ಮಾಡಿದರೆ, ನಾವು ನಾವಾಗಿ ಉಳಿಯುವುದಿಲ್ಲ. ಅನುಕರಣೆ ಮಾಡಿದಾಗ ಆ ಕ್ಷಣದಲ್ಲಿ ಹೆಸರು, ಯಶಸ್ಸು ಸಿಗಬಹುದೇನೋ. ಆದರೆ, ಅದು ಹೆಚ್ಚು ಕಾಲ ಉಳಿಯುವುದಿಲ್ಲ. ನಾವು ನಾವಾಗದಿದ್ದಾಗ, ತೃಪ್ತಿಯೂ ಸಿಗುವುದಿಲ್ಲ. ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿರಬಹುದು. ಆದರೆ, ಒಳಗೆ ಸಂತೋಷವಾಗಿರುವುದಿಲ್ಲ. ಹಾಗಾಗಿ, ಇನ್ನೊಬ್ಬರ ಜತೆಗೆ ಹೋಲಿಕೆ ಮಾಡಿಕೊಳ್ಳುವುದು ಅಥವಾ ಅನುಕರಣೆ ಮಾಡುವ ಬದಲು, ನಮ್ಮಲ್ಲಿ ಏನಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಾವೇನು ಮಾಡಬಹುದು, ನಮ್ಮ ದಾರಿಯೇನು ಎಂದು ಅರ್ಥ ಮಾಡಿಕೊಂಡರೆ, ಯಾರದೋ ಬಗ್ಗೆ ಯೋಚಿಸುವ ಅವಶ್ಯಕತೆ ಇರುವುದಿಲ್ಲ. ಹಾಗೆ ನೋಡಿದರೆ, ಯಾರಿಗೆ ಯಾರೂ ಹೋಲಿಕೆಯಲ್ಲ. ಈ ಸೃಷ್ಟಿಯಲ್ಲಿ ಪ್ರತಿಯೊಬ್ಬರೂ ಅನನ್ಯರೇ. ಒಬ್ಬರ ತರಹ ಇನ್ನೊಬ್ಬರ ಧ್ವನಿ ಇರುವುದಿಲ್ಲ, ಬೆರಳಿಚ್ಚಿರುವುದಿಲ್ಲ, ಆಲೋಚನೆ, ಬಣ್ಣ… ಎಲ್ಲವೂ ವಿಭಿನ್ನ. ಎಲ್ಲವೂ ಬೇರೆಯಾಗಿರುವಾಗ, ನಾವು ಇನ್ನೊಬ್ಬರ ಜತೆಗೆ ಯಾಕೆ ಹೋಲಿಸಿಕೊಳ್ಳಬೇಕು. ತುಲನೆ ಯಾಕೆ ಬೇಕು? ನಾವೇನು ಎಂಬುದನ್ನು ಮೊದಲಿಗೆ ಕಂಡುಕೊಳ್ಳಬೇಕು. ನಮ್ಮಲ್ಲಿ ಇಲ್ಲದಿರುವುದು ಬೇರೆಯವರಲ್ಲೇನೋ ಇರುತ್ತದೆ, ಅವರಲ್ಲಿಲ್ಲದಿರುವುದು ನಮ್ಮಲ್ಲಿ ಇರುತ್ತದೆ. ನಮ್ಮಲ್ಲಿ ಏನಿಲ್ಲ ಎಂದು ಹುಡುಕುವ ಬದಲು, ನಮ್ಮಲ್ಲಿ ಏನಿದೆ ಎಂಬುದನ್ನು ಮೊದಲು ಹುಡುಕಬೇಕು. ಆ ನಿಟ್ಟಿನಲ್ಲಿ ನಮ್ಮನ್ನು ನಾವು ರೂಢಿಸಿಕೊಂಡಾಗ, ಏನು ಬೇಕಾದರೂ ಸಾಧಿಸಬಹುದು.

    (ಲೇಖಕರು ಖ್ಯಾತ ನಟ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts