More

    ಮಹದೇಶ್ವರ ಬೆಟ್ಟವನ್ನು ಪ್ಲಾಸ್ಟಿಕ್‌ಮುಕ್ತ ಮಾಡಲು ಕ್ರಮ

    ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟವನ್ನು ಸಂಪೂರ್ಣ ಪ್ಲಾಸ್ಟಿಕ್‌ಮುಕ್ತವಾಗಿಸುವ ಸಂಬಂಧ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಮುಂದಾಗಿದ್ದು, ಚೆಕ್‌ಪೋಸ್ಟ್ ತೆರೆಯುವ ಸಂಬಂಧ ಗುರುವಾರ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

    ಮ.ಬೆಟ್ಟ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ. ಹಾಗಾಗಿ ಇಲ್ಲಿಗೆ ದೀಪಾವಳಿ, ಮಹಾಶಿವರಾತ್ರಿ, ಯುಗಾದಿ ಜಾತ್ರೆ ಹಾಗೂ ಮಹಾಲಯ ಅಮಾವಾಸ್ಯೆ ಸೇರಿದಂತೆ ಇನ್ನಿತರ ವಿಶೇಷ ದಿನಗಳಂದು ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಜತೆಗೆ ಜಾತ್ರಾ ವೇಳೆ ಸಾವಿರಾರು ಭಕ್ತರು ಕಾಲ್ನಡಿಗೆ ಮೂಲಕ ಆಗಮಿಸುತ್ತಾರೆ. ಈಗಾಗಲೇ ಮ.ಬೆಟ್ಟವನ್ನು ಪ್ಲಾಸ್ಟಿಕ್‌ಮುಕ್ತ ವಲಯವಾಗಿ ಘೋಷಿಸಿದೆ. ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡದಂತೆ ಭಕ್ತರಿಗೆ ಪ್ರಾಧಿಕಾರದ ಆಡಳಿತ, ಅರಣ್ಯ ಇಲಾಖೆ ಹಾಗೂ ಸಂಘ- ಸಂಸ್ಥೆಗಳು ಜಾಗೃತಿ ಮೂಡಿಸುತ್ತಲೇ ಇದೆ. ಆದರೂ ಭಕ್ತರು ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುತ್ತಿದ್ದು, ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಇದರಿಂದ ಪರಿಸರದ ಅನೈರ್ಮಲ್ಯಕ್ಕೆ ಕಾರಣವಾಗುವುದರ ಜತೆಗೆ ವನ್ಯಪ್ರಾಣಿಗಳ ಜೀವಕ್ಕೆ ಕುತ್ತು ತರಲಿದೆ. ಹಾಗಾಗಿ ಪ್ಲಾಸ್ಟಿಕ್ ಬಳಕೆ ನಿಂತಿಲ್ಲ. ಇದರಿಂದ ಜಾತ್ರಾ ವೇಳೆ ರಾಶಿ ರಾಶಿ ಬೀಳುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸುವುದೇ ಅಧಿಕಾರಿಗಳಿಗೆ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು.

    ಈ ದಿಸೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಸಂತೋಷ್‌ಕುಮಾರ್, ಎಸಿಎಫ್ ಚಂದ್ರಶೇಖರ ಪಾಟೀಲ್, ಆರ್‌ಎಫ್‌ಒ ಭಾರತಿ ನಂದಿಹಳ್ಳಿ ಹಾಗೂ ಇತರ ಅಧಿಕಾರಿಗಳು ಗುರುವಾರ ತಾಳುಬೆಟ್ಟ ಹಾಗೂ ವಡಕೆಹಳ್ಳದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸುವ ಹಾಗೂ ಭಕ್ತರಲ್ಲಿ ಅರಿವು ಮೂಡಿಸುವ ಸಂಬಂಧ ಚೆಕ್‌ಪೋಸ್ಟ್ ತೆರೆಯಲು ಸ್ಥಳ ಪರಿಶೀಲನೆ ನಡೆಸಿದ್ದು, ಅಗತ್ಯ ಮುತುವರ್ಜಿ ವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts