More

    ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮವಹಿಸಿ: ವೆಂಕಟ್ ರಾಜಾ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದರು.


    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡೆಂಗ್ಯೂ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಬುಧವಾರ ನಡೆದ ಜಿಲ್ಲಾ ಸರ್ವೇಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


    ಪೂರ್ವ ಮುಂಗಾರು ಸಂದರ್ಭದಲ್ಲಿ ಸೊಳ್ಳೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.


    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸತೀಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ೪೨ ಡೆಂಗ್ಯೂ ಪ್ರಕರಣಗಳು ವರದಿಯಾಗಿದೆ. ಡೆಂಗ್ಯೂ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ನಾಯಿ ಕಡಿತಕ್ಕೆ ೩,೧೪೪, ಹಾವು ಕಡಿತಕ್ಕೆ ೮೯ ಜನ, ಬೇಧಿ(ಡಯೇರಿಯಾ) ಪ್ರಕರಣಗಳು ೧,೪೮೬, ಕಾಲರಾ ೨ ಪ್ರಕರಣ, ಮಲೇರಿಯಾ ೨ ಪ್ರಕರಣಗಳು ವರದಿಯಾಗಿದ್ದು, ಎಲ್ಲರೂ ಸಕಾಲದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು.


    ಡೆಂಗ್ಯೂ ಜ್ವರವು ವೈರಸ್‌ನಿಂದ ಉಂಟಾಗುವ ಖಾಯಿಲೆಯಾಗಿದ್ದು, ಈಡಿಸ್ ಈಜಿಪ್ಟೈ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಈಡಿಸ್ ಸೊಳ್ಳೆಯು ಸ್ವಚ್ಚ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ. ಅವು ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ತೀವ್ರ ಜ್ವರ ಮತ್ತು ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸ ಖಂಡ/ ಕೀಲುಗಳಲ್ಲಿ ವಿಪರೀತ ನೋವು ಡೆಂಗ್ಯೂ ಜ್ವರದ ಲಕ್ಷಣವಾಗಿದೆ. ತೀವ್ರ ಸ್ಥಿತಿಯ ಹಂತದಲ್ಲಿ ಬಾಯಿ, ಮೂಗು, ವಸಡುಗಳಲ್ಲಿ ರಕ್ತಸ್ರಾವ, ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತು ಕಂಡು ಬರುತ್ತದೆ ಎಂದು ಡಾ.ಸತೀಶ್ ಕುಮಾರ್ ಮಾಹಿತಿ ನೀಡಿದರು.


    ಆಶಾ ಕಾರ್ಯಕರ್ತರು ಪ್ರತೀ ೧೫ ದಿನಗಳಿಗೊಮ್ಮೆ ತಮ್ಮ ವ್ಯಾಪ್ತಿಯ ಮನೆ ಮನೆಗೆ ಭೇಟಿ ನೀಡಿ ಈಡಿಸ್ ಸೊಳ್ಳೆ ಲಾರ್ವಾ ಸೋರ್ಸ್ ರಿಡಕ್ಷನ್ ಕೈಗೊಳ್ಳುತ್ತಿದ್ದಾರೆ. ನಗರ ಪಟ್ಟಣ ವ್ಯಾಪ್ತಿಯಲ್ಲಿ ಪ್ರತೀ ಮಾಹೆಯ ಮೊದಲ ಮತ್ತು ಮೂರನೇ ವಾರ ಆಯಾಯ ತಾಲೂಕಿನ ಎಲ್ಲಾ ಆರೋಗ್ಯ ಸಹಾಯಕರನ್ನು ನಿಯೋಜಿಸಿಕೊಂಡು ಮನೆಗಳಲ್ಲಿ ಈಡಿಸ್ ಸೊಳ್ಳೆ ಲಾರ್ವಾ ಸೋರ್ಸ್ ರಿಡಕ್ಷನ್ ಕೈಗೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.


    ವರದಿಯಾದ ಡೆಂಗ್ಯೂ ಪ್ರಕರಣಗಳ ಸಂಬಂಧಿತ ಗ್ರಾಮಗಳಲ್ಲಿ ಮನೆಗಳ ಸರ್ವೆ ಮಾಡಿ ಲಾರ್ವೆ ಪತ್ತೆ ಮಾಡಿ ನಾಶಪಡಿಸಲಾಗಿದೆ. ಖಾಸಗಿ ಆಸ್ಪತ್ರೆ, ಲ್ಯಾಬ್‌ಗಳಿಂದಲೂ ವರದಿ ಸಂಗ್ರಹಿಸಿ ಜ್ವರ ಪ್ರಕರಣ ಪತ್ತೆ ಮಾಡಲಾಗುತ್ತಿದೆ. ಸೆಂಟಿನೆಲ್ ಪ್ರಯೋಗಾಲಯದಲ್ಲಿ ಎಲೈಜಾ ವಿಧಾನದಲ್ಲಿ ಖಚಿತಪಡಿಸಲಾಗುತ್ತಿದೆ. ರ‌್ಯಾಪಿಡ್ ವಿಧಾನದಲ್ಲಿ ಪಾಸಿಟಿವ್ ಬಂದರೆ ಅದು ಶಂಕಿತ ಡೆಂಗ್ಯೂ ಮಾತ್ರವಾಗಿದ್ದು, ಆ ಗ್ರಾಮದಲ್ಲಿ ಪುನಃ ಸರ್ವೆ ಮಾಡಿ ಸೆಂಟಿನೆಲ್ ಲ್ಯಾಬ್ನಲ್ಲಿ ಖಚಿತಪಡಿಸಿಕೊಳ್ಳಲಾಗುತ್ತಿದೆ. ಶಂಕಿತ/ ಖಚಿತ ಪ್ರಕರಣಗಳು ವರದಿಯಾದ ಎಲ್ಲಾ ಗ್ರಾಮಗಳಲ್ಲಿ ಲಾರ್ವಲ್ ಸರ್ವೆ ಮತ್ತು ಜ್ವರ ಸಮೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ನುಡಿದರು.

    ಜಿ.ಪಂ.ಸಿಇಒ ವರ್ಣಿತ್ ನೇಗಿ ಮಾತನಾಡಿ, ಜಿಲ್ಲೆಯ ಎಲ್ಲೆಡೆ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮವಹಿಸಬೇಕು. ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವಂತೆ ನಿರ್ದೇಶನ ನೀಡಿದರು.


    ಸಭೆಯಲ್ಲಿ ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಸಮಗ್ರ ರೋಗಗಳ ಕಣ್ಗಾವಲು ಘಟಕದ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಬಿ.ಎಲ್.ಶ್ರೀನಿವಾಸ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ವಿವಿಧ ಇಲಾಖೆ ಅಧಿಕಾರಿಗಳು ಹಲವು ಮಾಹಿತಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts